ಬಿಜೆಪಿ ಶಕ್ತಿ ಕೇಂದ್ರದಲ್ಲಿ ಮನೆಯೊಂದು ನಾಲ್ಕು ಬಾಗಿಲು; ಸಿಎಂ ಬೊಮ್ಮಾಯಿಗೆ ತವರಲ್ಲಿ ತಲೆನೋವು

ಬಿಜೆಪಿಯ ಶಕ್ತಿ ಕೇಂದ್ರ ಎನಿಸಿಕೊಂಡಿರೋ ಹುಬ್ಬಳ್ಳಿ - ಧಾರವಾಡದಲ್ಲಿ ಮನೆಯೊಂದು ನಾಲ್ಕು ಬಾಗಿಲು ಅನ್ನೋ ಸ್ಥಿತಿ ನಿರ್ಮಾಣವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಹುಬ್ಬಳ್ಳಿ (ಆ. 17):  ಸಿಎಂ ಬಸವರಾಜ ಬೊಮ್ಮಾಯಿ ತವರಾಗಿರುವ ಹುಬ್ಬಳ್ಳಿ – ಧಾರವಾಡ ಬಿಜೆಪಿಯ ಶಕ್ತಿ ಕೇಂದ್ರ. ಆದ್ರೆ ಇದೀಗ ಪ್ರಬಲ ಶಕ್ತಿ ಕೇಂದ್ರ ನಾಲ್ಕು ಶಕ್ತಿ ಕೇಂದ್ರಗಳಾಗಿ ರೂಪುಗೊಂಡಿದೆ. ಸಿಎಂ ಬೊಮ್ಮಾಯಿ ತವರಲ್ಲಿ ಪ್ರತ್ಯೇಕ ಶಕ್ತಿ ಕೇಂದ್ರಗಳು ರೂಪುಗೊಂಡಿದ್ದು, ಮನೆಯೊಂದು ನಾಲ್ಕು ಬಾಗಿಲು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ನಡೆಯುತ್ತಿರುವ ಅವಳಿ ನಗರ ಪಾಲಿಕೆ ಚುನಾವಣೆ ಸಿಎಂ ಬೊಮ್ಮಾಯಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ನಾಯಕರು ಅವರವರ ಪ್ರತಿಷ್ಟೆಯನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತವರೂರೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಧಾರವಾಡ ಜಿಲ್ಲೆಯ ವಿಷಯಕ್ಕೆ ಬಂದರೆ, ಹಿಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಕ್ತಿ ಕೇಂದ್ರದ ರೂಪದಲ್ಲಿದ್ದರು. ಈಗ ಶೆಟ್ಟರ್, ಜೋಶಿ ಜೊತೆಗೆ ಶಾಸಕ ಅರವಿಂದ್ ಬೆಲ್ಲದ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿಯೂ ಪರ್ಯಾಯ ಶಕ್ತಿ ಕೇಂದ್ರಗಳಾಗಿ ಮಾರ್ಪಾಟಾಗಿದ್ದಾರೆ.
ಹೀಗಾಗಿ ಪಾಲಿಕೆ ಟಿಕೆಟ್ ಆಕಾಂಕ್ಷಿಗಳಿಗೆ ಗೊಂದಲವೋ ಗೊಂದಲ. ಯಾರೇ ಬಿಜೆಪಿ ಟಿಕೇಟ್ ಪಡೀಬೇಕೆಂದರೂ ಈ ನಾಯಕರ ಸುತ್ತ ಪ್ರದಕ್ಷಿಣೆ ಹಾಕಲೇಬೇಕು ಅನ್ನೋ ಸ್ಥಿತಿ. ಇವರ ಜೊತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮತ್ತು ಪ್ರದೀಪ್ ಶೆಟ್ಟರ್ ರನ್ನೂ ಭೇಟಿಯಾಗೋ ಅನಿವಾರ್ಯತೆ. ಅರ್ಜಿ ಹಿಡಿದು ನಾಯಕರ ಗಳ ಮನೆ ಮನೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಪುನರ್ವಿಂಗಡಣೆ ನಂತರ ಅವಳಿ ನಗರದಲ್ಲಿ ಒಟ್ಟು 82 ವಾರ್ಡ್ ಗಳನ್ನು ಸ್ಥಾಪಿಸಲಾಗಿದೆ.

ಕಳೆದ ಅವಧಿಯಲ್ಲಿ 67 ವಾರ್ಡ್ ಗಳಿದ್ದವು. ಈ ಪೈಕಿ 34 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿ, ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲ ಸೇರಿ ಬಿಜೆಪಿ ಸಂಖ್ಯೆ 37 ಕ್ಕೇರಿಕೆಯಾಗಿದೆ. ಜಗದೀಶ್ ಸೆಟ್ಟರ್ ಕೇಂದ್ರ ಕ್ಷೇತ್ರದಲ್ಲಿ 22 ವಾರ್ಡ್ ಗಳ ಪೈಕಿ 17 ವಾರ್ಡ್ ಗಳ ಪೈಕಿ ಬಿಜೆಪಿ ಗೆಲುವು ಸಾಧಿಸಿತ್ತು. ಬೆಲ್ಲದ್ ರ ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ 22 ವಾರ್ಡ್ ಗಳ ಪೈಕಿ 14 ವಾರ್ಡ್ ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನಾಯಕರ ಸಂಖ್ಯೆ ಹೆಚ್ಚಳವಾಗಿದೆ.

ಅವರವರ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಉತ್ಸಾಹದಲ್ಲಿರುವ ನಾಯಕರಿದ್ದಾರೆ. ಹೀಗಾಗಿ ನಾಯಕರು ತಮ್ಮ ತಮ್ಮ ಬೆಂಬಲಿಗರ ಟಿಕೇಟ್ ಗಾಗಿ ತಾವೇ ಮುಂದಾಳತ್ವ ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿದ್ದರೂ ಅವಳಿ ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಇದೀಗ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಸಿಎಂ ಬೊಮ್ಮಾಯಿ ಇದೇ ಹುಬ್ಬಳ್ಳಿಯವರಾಗಿದ್ದಾರೆ. ಹೀಗಾಗಿ ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸೋ ಅನಿವಾರ್ಯತೆಯಲ್ಲಿರೋ ಬಿಜೆಪಿ ಪಕ್ಷವಿದೆ. ಆದರೆ ಮುಖಂಡರು ಮಾತ್ರ ಕವಲು ಹಾದಿಯಲ್ಲಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿತೆಂದು ಅರವಿಂದ್ ಬೆಲ್ಲದ್ ಅತೃಪ್ತಿಯ ಬೇಗುದಿಯಲ್ಲಿದ್ದಾರೆ. ಬೊಮ್ಮಾಯಿಯನ್ನು ಸಿಎಂ ಮಾಡಿದ್ದಾರೆಂಬ ಅಸಮಾಧಾನದಿಂದ  ಜಗದೀಶ್ ಶೆಟ್ಟರ್ ಸಚಿವ ಸ್ಥಾನ ಬಿಟ್ಟಿದ್ದಾರೆ.

ಇದನ್ನು ಓದಿ: ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ: ಕರ್ನಾಟಕದ ಉದ್ಯೋಗಿಗಳಿಗೆ ಶೇಕಡ ಎಷ್ಟು ಏರಿಕೆ?

ಬಿಜೆಪಿ ನಾಯಕರಲ್ಲಿ ಒಳಗೊಳಗೆ ಅತೃಪ್ತಿಯ ಹೊಗೆಯಾಡುತ್ತಿದೆ. ಬಿಜೆಪಿ ನಾಯಕರು ತೆರೆ ಮರೆಯಲ್ಲಿ ಪರಸ್ಪರ ಕತ್ತಿ ಮಸೆದುಕೊಳ್ತಿದ್ದಾರೆ. ನಾಯಕರ ಒಳ ಬೇಗುದಿ ಟಿಕೇಟ್ ಆಕಾಂಕ್ಷಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಲಿಕೆ ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರೋ ಆತಂಕ ಸೃಷ್ಟಿಯಾಗಿದೆ. ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ ಕಟೀಲ್ ನೇತೃತ್ವದಲ್ಲಿ ಇಂದು ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ.

ಒಳ ವೈಮನಸ್ಸುಗಳನ್ನು ಮರೆತು ಸಂಘಟಿತರಾಗಿ ಚುನಾವಣೆ ಎದುರಿಸುವಂತೆ ನಾಯಕರಿಗೆ ನಳಿನಕುಮಾರ್ ಕಟೀಲ್ ಸಲಹೆ ನೀಡಿದ್ದಾರೆ. ಶಕ್ತಿ ಕೇಂದ್ರಗಳ ಸಂಖ್ಯೆ ಹೆಚ್ಚಾಗಿರೋದ್ರಿಂದ ಟಿಕೇಟ್ ಆಕಾಂಕ್ಷಿಗಳು ಮಾತ್ರ ನಾಯಕರ ಮನೆ ಮನೆ ಸುತ್ತಿ ತಮಗೆ ಟಿಕೇಟ್ ಕೊಡಿ ಅಂತ ಕೇಳುತ್ತಿದ್ದಾರೆ. ಇದೆಲ್ಲವನ್ನು ತಪ್ಪಿಸಿ ಸಂಘಟಿತರಾಗಿ ಚುನಾವಣೆ ಎದುರಿಸೋ ಅನಿವಾರ್ಯತೆ ಎದುರಾಗಿದ್ದು, ಕಟೀಲ್ ಮೂಲಕ ಎಲ್ಲವನ್ನೂ ಸರಿಪಡಿಸೋ ಪ್ರಯತ್ನದಲ್ಲಿದ್ದಾರೆ ಬಸವರಾಜ ಬೊಮ್ಮಾಯಿ.
Published by:Seema R
First published: