ಹುಬ್ಬಳ್ಳಿ: (Hubballi) ಕಗ್ಗತ್ತಲಾಗುತ್ತಿದ್ದಂತೆಯೇ ಪ್ರತ್ಯಕ್ಷವಾಗುತ್ತೆ, ಬೆಳಕು ಹರಿಯುತ್ತಿದ್ದಂತೆಯೇ ಮಂಗಮಾಯವಾಗುತ್ತೆ. ಕೆಲವೊಬ್ಬರ ಕಣ್ಣಿಗೆ ಬಿದ್ದು, ಕೆಲವೊಬ್ಬರಿಗೆ ಮಂಕುಬೂದಿ ಎರಚಿ ಗಿಡದ ಮರೆಯಲ್ಲಿ ಮಾಯವಾಗುತ್ತಿದೆ. ಹೀಗೆ ಮಾಯವಾಗ್ತಿರೋ ಮಾಯಾಂಗನೆ ಬೇರಾವುದೋ ಪ್ರಾಣಿಯಲ್ಲ. ಚಿರತೆಯೊಂದು (cheetah) ಜನರ ಕಣ್ತಪ್ಪಿಸಿ ಅಡ್ಡಾಡುತ್ತಿದ್ದು, ವಾಣಿಜ್ಯ ನಗರಿ ಜನ ಹೈರಾಣಾಗುವಂತೆ ಮಾಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಿರತೆ ಆತಂಕ ಸೃಷ್ಟಿಸಿದೆ. ಕಳೆದ ರಾತ್ರಿ ಹುಬ್ಬಳ್ಳಿಯ ರಾಜ್ ನಗರದಲ್ಲಿರೋ ಕೇಂದ್ರೀಯ ವಿದ್ಯಾಲಯದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕೇಂದ್ರೀಯ ವಿದ್ಯಾಲಯದ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಯೋರ್ವ ಮಬ್ಬುಗತ್ತಲಿನಲ್ಲಿ ಮೊಬೈಲಲ್ಲಿ ಚಿರತೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಚಿರತೆ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇಂದ್ರೀಯ ವಿದ್ಯಾಲಯದಿಂದ ಹೊರಟ ಚಿರತೆ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ ಮತ್ತಿತರ ಕಡೆ ಪ್ರತ್ಯಕ್ಷಗೊಂಡಿದೆ ಎನ್ನಲಾಗಿದೆ. ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೃಪತುಂಗ ಬೆಟ್ಟ, ಕೇಂದ್ರೀಯ ವಿದ್ಯಾಲಯ ಸೇರಿ ನಾಲ್ಕು ಕಡೆ ಚಿರತೆ ಸೆರೆಗಾಗಿ ಬೋನ್ ಇಟ್ಟಿದೆ. ವಲಯ ಅರಣ್ಯಾಧಿಕಾರಿ ಎಸ್ ಎಂ ತೆಗ್ಗಿನಮನಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಕಂಡಂತೆ ಕಂಡು ಚಿರತೆ ಮಾಯವಾಗುತ್ತಿದ್ದು, ಚಿರತೆ ಪ್ರತ್ಯಕ್ಷಗೊಂಡಿರೋದ್ರಿಂದ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಕಾಲೋನಿಗಳ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ನಿನ್ನೆ ರಾತ್ರಿ ಪಾರ್ಟಿಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಶಾಲಾ ಮೈದಾನದಲ್ಲಿ ಚಿರತೆ ಕಂಡೆ. ಚಿರತೆ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದೆ. ಸ್ವಲ್ಪ ಹೊತ್ತಿನಲ್ಲಿಯೇ ಚಿರತೆ ಅಲ್ಲಿಂದ ಮಾಯವಾಯಿತು ಎಂದಿರೋ ಪ್ರತ್ಯಕ್ಷದರ್ಶಿ ವಿದ್ಯಾರ್ಥಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾನೆ.
ಅರಣ್ಯ ಇಲಾಖೆ ಕಾರ್ಯಾಚರಣೆ...
ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಪ್ರಯತ್ನ ಮುಂದುವರಿಸಿದ್ದಾರೆ. ಮೂರು ದಿನಗಳ ಹಿಂದೆ ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಚಿರತೆ, ನಿನ್ನೆ ರಾತ್ರಿ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಪ್ರತ್ಯಕ್ಷಗೊಂಡಿತ್ತು. ಕಳೆದ ರಾತ್ರಿಯಿಂದಲೂ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿಗೆ ಪೊಲೀಸರೂ ಸಾಥ್ ನೀಡಿದ್ದಾರೆ. ಚಿರತೆ ಕಾಣಿಸಿಕೊಂಡ ರಾಜ್ ನಗರಕ್ಕೆ ಡಿಸಿಪಿ ಬಸರಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ ಮೂರು ದಿನಗಳಿಂದಲೂ ಚಿರತೆ ಹುಬ್ಬಳ್ಳಿ ಜನರ ನಿದ್ದೆಗೆಡಿಸಿದೆ. ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರೋ ಚಿರತೆ ಹಗಲು ಹೊತ್ತಿನಲ್ಲಿ ಅವಿತುಕೊಂಡು ಮಾಯವಾಗುತ್ತಿದೆ. ಚಿರತೆ ಪತ್ತೆಗೆ ಡ್ರೋನ್ ಅನ್ನೂ ಸಹ ಬಳಕೆ ಮಾಡಲಾಗುತ್ತಿದೆ. ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಒಂಟಿಯಾಗಿ ಅಡ್ಡಾಡದಿರುವಂತೆ ಅರಣ್ಯಾಧಿಕಾರಿಗಳು, ಪೊಲೀಸರು ಧ್ವನಿವರ್ಧಕದ ಮೂಲಕ ಜನತೆಗೆ ಸಂದೇಶ ರವಾನಿಸುತ್ತಿದ್ದಾರೆ.
ಕೇಂದ್ರೀಯ ವಿದ್ಯಾಲಯದ ಬಳಿ ಚಿರತೆ ಕಾಣಿಸಿಕೊಂಡಿರೋದನ್ನು ಆರ್.ಎಫ್.ಒ. ಎಸ್.ಎಂ. ತೆಗ್ಗಿನಮನಿ ಖಾತ್ರಿಪಡಿಸಿದ್ದಾರೆ. 12 ರಿಂದ 14 ಸಿಬ್ಬಂದಿ ಮೂಲಕ ಚಿರತೆ ಪತ್ತೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ರಾತ್ರಿ 9.30 ರಿಂದ 1 ಗಂಟೆವರೆಗೂ ಚಿರತೆ ಅಲ್ಲಲ್ಲಿ ಸಂಚರಿಸುತ್ತಿದೆ. ಹಗಲು ಹೊತ್ತಿನಲ್ಲಿ ರೆಸ್ಟ್ ಮಾಡುತ್ತಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ನಿನ್ನೆ ರಾತ್ರಿ ಚಿರತೆ ಕಾಣಿಸಿಕೊಂಡಿರೋದ್ರಿಂದ ಬೋನ್ ಇಟ್ಟಿದ್ದೇವೆ. ಕ್ಯಾಮರಾ ಸಹ ಅಳವಡಿಸಲಾಗಿದೆ.
10 ವರ್ಷಗಳ ನಂತ್ರ ಎಂಟ್ರಿಕೊಟ್ಟ ಚಿರತೆ...
10 ವರ್ಷಗಳ ಹಿಂದೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಂತರ ಇದೇ ತಾನೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ಜನನಿಬಿಡ ಪ್ರದೇಶದಲ್ಲಿಯೇ ಹೆಚ್ಚಾಗಿ ಸಂಚರಿಸಲಾರಂಭಿಸಿದೆ. ಸ್ವಲ್ಪ ಯಾಮಾರಿದರೂ ಚಿರತೆ ಜನರಿಗೆ ತೊಂದರೆ ಕೊಡೋ ಸಾಧ್ಯತೆಗಳಿವೆ. ಹೀಗಾಗಿ ತುಂಬಾ ಸೂಕ್ಷ್ಮವಾದ ರೀತಿಯಲ್ಲಿ ಅದರ ಪತ್ತೆ ಕಾರ್ಯ ಮಾಡುತ್ತಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಎಸ್.ಎಂ.ತೆಗ್ಗಿನಮನಿ ತಿಳಿಸಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿಯೂ ಚಿರತೆ ಕಾಣಿಸಿಕೊಂಡಿತ್ತು. ಆದರೆ ಅದರ ಹೆಜ್ಜೆ ಗುರುತು, ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡಿರೋ ಚಿರತೆಯ ಹೆಜ್ಜೆ ಗುರುತುಗಳು ಬೇರೆಯೇ ಆಗಿವೆ.
ಇದನ್ನು ಓದಿ: Explained: ಯಾರು ಈ ಸುಖಜಿಂದರ್ ಸಿಂಗ್ ರಾಂಧವ?; ಪಂಜಾಬ್ ಮುಂದಿನ ಸಿಎಂ ಬಗ್ಗೆ ನೀವು ತಿಳಿಯಬೇಕಾದ ವಿಷಯ?
ಒಟ್ಟಾರೆ ಚಿರತೆ ವಾಣಿಜ್ಯ ನಗರಿ ಜನತೆಯನ್ನು ಬೆಚ್ಚಿಬೀಳಿಸಿದೆ. ರಾತ್ರಿ ಹೊತ್ತಿನಲ್ಲಿ ಅಡ್ಡಾಡೋದು ದುಸ್ಥರ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗೆ ಚಿರತೆಯನ್ನು ಹಿಡಿದು ಕಾಡಿಗೆ ರವಾನಿಸಲಿ ಎಂದು ಜನತೆ ಒತ್ತಾಯಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ವರದಿ - ಶಿವರಾಮ ಅಸುಂಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ