ಇವತ್ತು ಮೊಟ್ಟೆ ಕೊಡ್ತಾರೆ... ನಾಳೆ ಮಾಂಸಾನೂ ಮಾಡ್ತಾರೆ; ಚನ್ನಬಸವಾನಂದ ಶ್ರೀಗಳ ಕಿಡಿನುಡಿ

ಸರ್ಕಾರ ಇವತ್ತು ಮೊಟ್ಟೆ (Egg in Mid day Meal) ಕೊಡುತ್ತೆ, ನಾಳೆ ಶಾಲೆಯಲ್ಲಿ ಮಾಂಸಾನು ಕೊಟ್ಟರೆ ನಾವೇನು ಮಾಡಬೇಕು. ಅಪೌಷ್ಠಿಕತೆ ನೆಪದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಮೊಟ್ಟೆ ಕೊಡಬಾರದು. ಇದನ್ನು ಕೂಡಲೇ ನಿಲ್ಲಿಸದಿದ್ದಲ್ಲಿ ಹೋರಾಟ ತೀವ್ರಗೊಳ್ಳುತ್ತೆ ಎಂದು ಸರ್ಕಾರಕ್ಕೆ ಚನ್ನಬಸವಾನಂದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

 ಚನ್ನಬಸವಾನಂದ ಶ್ರೀ

ಚನ್ನಬಸವಾನಂದ ಶ್ರೀ

  • Share this:
ಹುಬ್ಬಳ್ಳಿ (ಡಿ. 3):   ರಾಜ್ಯ ಸರ್ಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋಳಿ ಮೊಟ್ಟೆ (Egg in Mid day Meal) ಕೊಡೋಕೆ ಮುಂದಾಗಿರೋದು ಜೇನುಗೂಡಿಗೆ ಕೈ ಹಾಕಿದಂತಾಗಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರೋ ಪ್ರದೇಶದಲ್ಲಿ ಸರ್ಕಾರ ಕೋಳಿ ಮಟ್ಟೆ ಅಥವಾ ಬಾಳೆ ಹಣ್ಣು ಕೊಡಲು ಆರಂಭಿಸಿದೆ. ಅದರಲ್ಲಿಯೂ ಪೌಷ್ಠಿಕತೆ ವಿಚಾರದಲ್ಲಿ ತೀರಾ ಹಿಂದುಳಿದಿರೋ ಕಲ್ಯಾಣ ಕರ್ನಾಟಕದ (Kalyana Karnataka) ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲಿಯೇ ಅಪಸ್ವರ ಕೇಳಿ ಬಂದಿದೆ. ಕೆಲ ಸಂಘಟನೆಗಳು ಮೊಟ್ಟೆ ಯೋಜನೆ (Egg Plan) ವಾಪಸ್ ಪಡೆಯಿರಿ ಎಂದು ಆಗ್ರಹಿಸಿದ್ದರೆ, ಮತ್ತೆ ಕೆಲ ಸಂಘಟನೆಗಳು ಮೊಟ್ಟೆ ಯೋಜನೆ ಇತರೆ ಜಿಲ್ಲೆಗಳಿಗೂ ವಿಸ್ತರಿಸುವಂತೆ ಆಗ್ರಹಿಸಿವೆ.

ಮೊಟ್ಟೆಗೆ ತೀವ್ರ ವಿರೋಧ
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ರಾಷ್ಟ್ರೀಯ ಬಸವ ದಳದ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡಬಾರದೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೊಟ್ಟೆ ವಿತರಿಸುವ ಮೂಲಕ ಸರ್ಕಾರದಿಂದಲೇ ವಿದ್ಯಾರ್ಥಿಗಳಲ್ಲಿ ಪಂಕ್ತಿ ಬೇಧ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಶಾಲೆಗಳಲ್ಲಿ ಸಮವಸ್ತ್ರ ಇಟ್ಟಿರೋದು ಯಾಕೆ ಎಂದು ಪ್ರಶ್ನಿಸಿರೋ ಶ್ರೀಗಳು, ಎಲ್ಲರೂ ಸಮಾನವಾಗಿ ಇರಲೆಂದು ಸಮವಸ್ತ್ರ ಇಟ್ಟಿರುವಾಗ ಆಹಾರದಲ್ಲಿ ತಾರತಮ್ಯವೇಕೆ ಎಂದು ಕಿಡಿಕಾರಿದ್ದಾರೆ.

ಶಾಲೆಗಳಲ್ಲಿ ಮೊಟ್ಟೆ ಬೇಯಿಸಿ ಕೊಡಬೇಡಿ

ಒಂದೇ ಪಂಕ್ತಿಯಲ್ಲಿ ಒಂದ್ಕಡೆ ಮೊಟ್ಟೆ, ಮತ್ತೊಂದು ಕಡೆ ಬಾಳೆ ಹಣ್ಣು ವಿತರಿಸುವುದು ಸರಿಯಲ್ಲ. ಮೊಟ್ಟೆ ತಿನ್ನುವವರ ಪಕ್ಕದಲ್ಲಿಯೇ ಕುಳಿತು ಊಟ ಮಾಡೋಕೆ ಸಸ್ಯಾಹಾರಿಗಳಿಗೆ ಮುಜುಗರವಾಗುತ್ತದೆ. ಅವರವರ ಆಹಾರ ಪದ್ಧತಿ ವರವರಿಗೆ ಇರುತ್ತೆ. ಆದರೆ ಈ ಆಹಾರ ಪದ್ಧತಿ ಶಾಲೆಯ ಹೊರಗಿರಲಿ. ಮೊಟ್ಟೆ ಬೇಕಿದ್ದರೆ ಕೊಡಲಿ. ಆದರೆ ಯಾವುದೇ ಕಾರಣಕ್ಕೂ ಶಾಲೆಯಲ್ಲಿ ವಿತರಿಸಬಾರದು. ಅವರವರ ಮನೆಗಳಿಗೆ ಮೊಟ್ಟೆಯನ್ನು ಕೊಟ್ಟು ಬರಲಿ. ಶಾಲೆಗಳಲ್ಲಿಯೇ ಬೇಯಿಸಿ ಮಕ್ಕಳಿಗೆ ಮೊಟ್ಟೆ ಕೊಡೋದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ 16 ಓಮಿಕ್ರಾನ್ ಪ್ರಕರಣಗಳಿವೆ: ಎಚ್ ಕೆ ಪಾಟೀಲ್ ಸ್ಫೋಟಕ ಹೇಳಿಕೆ

ನಾಳೆ ಮಾಂಸ ಕೊಟ್ಟರೇನು ಮಾಡೋದು

ಈಗ ಮೊಟ್ಟೆ ಕೊಡ್ತಾರೆ, ನಾಳೆ ಮಾಂಸವನ್ನೂ ಕೊಟ್ಟರೆ ನಾವೇನು ಮಾಡೋದು. ಅಪೌಷ್ಠಿಕತೆ ನಿವಾರಣೆಗೆ ಸಾಕಷ್ಟು ಮಾರ್ಗಗಳಿವೆ. ದ್ವಿದಳ ಧಾನ್ಯ ಮತ್ತಿತರ ಪೌಷ್ಠಿಕ ಆಹಾರವನ್ನು ಕೊಡಬಹುದಾಗಿದೆ. ಹೆಸರು ಕಾಳು, ಮೊಳಕೆ ಕಾಳು ಕೊಡೋದ್ರಿಂದ, ಬೆಲ್ಲದಿಂದ ಮಾಡಿದ ಖಾದ್ಯ ನೀಡೋದ್ರಿಂದಲೂ ಅಪೌಷ್ಠಿಕತೆ ನಿವಾರಿಸಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಕಾಪಾಡಬೇಕೆಂದರೆ ಮೊದಲು ಮೊಟ್ಟೆ ಕೊಡುವುದನ್ನು ನಿಲ್ಲಿಸಲಿ. ವಿದ್ಯಾದೇಗುಲವನ್ನು ಪವಿತ್ರವಾಗಿ ಇಡಬೇಕು, ಅದನ್ನು ಬಿಟ್ಟು ಸರ್ಕಾರ ಈ ರೀತಿ ಮಾಡೋದು ಸರಿಯಲ್ಲ.

ಇದನ್ನು ಓದಿ: ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ; ಸಿಬ್ಬಂದಿಯೊಬ್ಬರಿಗೆ ತೀವ್ರ ಗಾಯ

ಯೋಜನೆ ವಾಪಸ್​ ಪಡೆಯುವವರೆಗೂ ಹೋರಾಟ
ಈಗಾಗಲೇ ಹೋರಾಟ ಮಾಡಿದ್ದೇವೆ, ಸಿಎಂ ಅವರಿಗೂ ಮನವಿ ಕೊಟ್ಟಿದ್ದೇವೆ. ಮೊಟ್ಟೆ ಕೊಡೋದಕ್ಕೆ ಕೆಲ ಸಂಘಟನೆಗಳು ಬೆಂಬಲಿಸಿವೆ. ಮೊಟ್ಟೆ ಪರವಾಗಿ ಹೋರಾಟ ಮಾಡ್ತೀವಿ ಅಂತ ಅವರು ಹೇಳಿದ್ದಾರೆ. ಬೇರೆ ಬೇರೆ ಸಂಘಟನೆಗಳು ಹೋರಾಟ ಮಾಡಲಿ. ಹೋರಾಟ ಮಾಡೋದು ಅವರ ಹಕ್ಕು. ಆದರೆ ಮೊಟ್ಟೆ ವಿತರಣೆ ವಿರೋಧಿಸಿ ನಾವು ಹೋರಾಟ ಮಾಡ್ತೇವೆ. ರಾಷ್ಟ್ರೀಯ ಬಸವದಳ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮುಂದುವರಿಸುತ್ತೇವೆ. ಕೋವಿಡ್ ಇರೋದ್ರಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲ್ಲ. ಆದರೆ ಸರ್ಕಾರದ ಯೋಜನೆ ವಾಪಸ್ ಪಡೆಯೋವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ.

ಅಡ್ಡಕತ್ತರಿಯಲ್ಲಿ ಸರ್ಕಾರ
ಒಟ್ಟಾರೆ ಒಂದು ಮೊಟ್ಟೆಯ ಕಥೆ ರಾಜ್ಯದಲ್ಲಿ ಇದೀಗ ತೀವ್ರ ಚರ್ಚೆ ಹುಟ್ಟು ಹಾಕಿದೆ. ಮೊಟ್ಟೆ ವಿರೋಧಿಸಿ ಈಗಾಗಲೇ ಪ್ರತಿಭಟನೆಗಳು ನಡೆದಿದ್ದರೆ, ಮೊಟ್ಟೆ ಕೊಟ್ಟರೆ ತಪ್ಪೇನು ಎಂದು ಕೆಲವರು ವಾದಿಸುತ್ತಿದ್ದಾರೆ. ಮೊಟ್ಟೆಯ ಜೊತೆಗೆ ಮಾಂಸವನ್ನೂ ಕೊಟ್ಟಿಲ್ಲಿ ಅಪೌಷ್ಠಿಕತೆ ನಿವಾರಣೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದೂ ಕೆಲವರು ವಾದಿಸಿದ್ದಾರೆ. ಹೀಗಾಗಿ ಮೊಟ್ಟೆ ಯೋಜನೆ ಆರಂಭಿಸಿರೋ ರಾಜ್ಯ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ.
Published by:Seema R
First published: