ಹುಬ್ಬಳ್ಳಿ: ಸಾವಿನ ಹೆದ್ದಾರಿ ಎಂದೇ ಅಪಖ್ಯಾತಿಗೆ ಗುರಿಯಾಗಿದ್ದ ಹುಬ್ಬಳ್ಳಿ - ಧಾರವಾಡ ಬೈ ಪಾಸ್ ರಸ್ತೆಗೆ (Hubli-Dharwad Bypass Road) ಕೊನೆಗೂ ಮೋಕ್ಷ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Department) ಟೆಂಡರ್ ಕರೆದಿದೆ. ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Central Minister Pralhad Joshi) ಪತ್ರಿಕಾ ಪ್ರಕಟಣೆ ಮೂಲಕ ಅವಳಿ ನಗರದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಷಟ್ಪಥ ಎಕ್ಸ್ಪ್ರೆಸ್ ಹೈವೇ ಜೊತೆಗೆ ನಾಲ್ಕು ಪಥ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಜೋಶಿ ಮಾಹಿತಿ ನೀಡಿದ್ದಾರೆ. ಒಟ್ಟು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ.
ಪ್ರವಾಸಕ್ಕೆ ಹೊರಟ್ಟಿದ್ದ ಗೆಳತಿಯರು ಬಲಿಯಾಗಿದ್ದರು..
ಹುಬ್ಬಳ್ಳಿ- ಧಾರವಾಡ ನಡುವೆ ಇರೋ ರಾಷ್ಟ್ರೀಯ ಹೆದ್ದಾರಿ 4 ಪುಣೆ - ಬೆಂಗಳೂರು ಸಂರ್ಪಕ ಕಲ್ಪಿಸುತ್ತಿದೆ. ಆದ್ರೆ ಅವಳಿ ನಗರದ ಮಧ್ಯೆ ಕೇವಲ ದ್ವಿ - ಪಥವಿತ್ತು. ರಸ್ತೆ ಕಿರಿದಾಗಿದ್ದರಿಂದ ಬೈಪಾಸ್ ನಲ್ಲಿ ಭೀಕರ ರಸ್ತೆ ಅಪಘಾತಗಳು ಹೆಚ್ಚಾಗಿದ್ದವು. ಸುಗಮ ರಸ್ತೆ ಸಂಚಾರಕ್ಕೂ ತೊಂದರೆಯಾಗಿತ್ತು. ಕೇವಲ 30 ಕಿಲೋ ಮೀಟರ್ ಅಂತರವನ್ನು ದಾಟಲು ಗಂಟೆಗಟ್ಟಲೆ ಸಮಯ ಹಿಡಿಯುತ್ತಿತ್ತು. ಇದಲ್ಲದೆ ಒಂದೇ ದಿನ 11 ಜನರನ್ನು ಬಲಿ ಪಡೆದಿತ್ತು. ಆ ದುರಂತಕ್ಕೆ ಪ್ರಧಾನಿಯೂ ಕಂಬನಿ ಮಿಡಿದಿದ್ದರು. 2018 ರಿಂದ ಇಲ್ಲಿಯವರೆಗೆ ಹುಬ್ಬಳ್ಳಿ - ಧಾರವಾಡ ಬೈಪಾಸ್ ರಸ್ತೆಯಲ್ಲಿ 528 ಅಪಘಾತಗಳು ಸಂಭವಿಸಿ, 89 ಜನ ಸಾವನ್ನಪ್ಪಿ, 542 ಜನ ಗಾಯಗೊಂಡಿದ್ದಾರೆ. ಬಹುತೇಕ ಅಪಘಾತಗಳು ರಾತ್ರಿ ವೇಳೆಯಲ್ಲಿಯೇ ಸಂಭವಿಸಿದ್ದವು. ಓವರ್ ಟೇಕ್ ಮಾಡಲು ಹೋದ ಸಂದರ್ಭದ ಅಪಘಾತಗಳಿಂದ ಹೆಚ್ಚಿನ ಅನಾಹುತಗಲು ಸಂಭವಿಸಿದ್ದವು. ಒಂದರ್ಥದಲ್ಲಿ ಸಾವಿನ ಹೆದ್ದಾರಿ ಅಂತಲೇ ಇದು ಕುಖ್ಯಾತಿ ಪಡೆದಿತ್ತು.
![]()
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ
31 ಕಿಮೀ ಹುಬ್ಬಳ್ಳಿ-ಧಾರವಾಡ ಬೈಪಾಸ್
ದ್ವಿಪಥ ರಸ್ತೆಯನ್ನು ಷಟ್ಪಥ ಮಾಡುವಂತೆ ವಿವಿಧ ಸಂಘಟನೆಗಳು ಹಲವಾರು ಬಾರಿ ಹೋರಾಟ ಮಾಡಿದ್ದವು. ಕೊನೆಗೂ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು, ಟೆಂಡರ್ ಸಹ ಕರೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ 31 ಕಿಮೀ ರಸ್ತೆಯನ್ನು ಷಟ್ಪಥ ಎಕ್ಸ್ ಪ್ರೆಸ್ ಹೈವೇ ಆಗಿ ಮಾರ್ಪಡಿಸಲು ಹಾಗೂ ನಾಲ್ಕು ಪಥದ ಸರ್ವಿಸ್ ರಸ್ತೆ ನಿರ್ಮಿಸಲು (Engineering, procurement and Construction) ಮಾದರಿಯಲ್ಲಿ ಟೆಂಡರ್ ಕರೆಯಲಾಗಿದ್ದು, ಆರು ಪಥದ ಎಕ್ ಪ್ರೆಸ್ ರಸ್ತೆ ಹಾಗೂ ಸಮರ್ಪಕವಾಗಿ ಎರಡೂ ಬದಿಯಲ್ಲಿ ದ್ವಿಪಥದ ಸರ್ವೀಸ್ ರಸ್ತೆಯನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಪ್ರಲ್ಲಾದ್ ಜೋಶಿಯವರು ತಿಳಿಸಿದ್ದಾರೆ.
ಟೋಲ್ ನಿಂದ ವಿನಾಯಿತಿ
ಮುಖ್ಯವಾಗಿ ಈಗಿರುವ ಬೈಪಾಸ್ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಟೋಲ್ ಕೆಲಗೇರಿ ಮತ್ತು ನರೇಂದ್ರ ಮದ್ಯೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಹುಬ್ಬಳ್ಳಿ ಧಾರವಾಡ ಮಧ್ಯ ಸಂಚರಿಸುವ ಪ್ರಯಾಣಿಕರು ಟೋಲ್ ನಿಂದ ವಿನಾಯಿತಿ ಸಿಕ್ಕಂತಾಗುತ್ತದೆ. ಈ ಬೈಪಾಸ್ ನಿರ್ಮಾಣದಿಂದ ನಗರ ಮದ್ಯದೊಳಗಿನ ಸಂಚರಿಸುವ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.
ಇದನ್ನೂ ಓದಿ: Flyover: ಜೂನ್ಗೆ ಬೆಂಗಳೂರಿನ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ರೆಡಿಯಾಗುತ್ತಂತೆ, ಇಲ್ಲಿದೆ ವಿವರ
1200 ಕೋಟಿ ವೆಚ್ಚದಲ್ಲಿ ಕಾಮಗಾತಿ
ಈ ಯೋಜನೆ ಒಟ್ಟು 1200 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಹುಬ್ಬಳಿಯ ಗಟ್ಟೂರು ಎನ್.ಹೆಚ್. 4 ರಸ್ತೆಯ 402.6 ಕಿಮಿ ಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ 433.2 ಕಿಮಿ ವರೆಗಿನ ಒಟ್ಟು 31 ಕಿಮಿ 6 ಪಥದ ಎಕ್ಸ್ ಪ್ರೆಸ್ ವೇ ಹಾಗೂ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂಪಾಯಿ ನಿಗದಿಗೊಳಿಸಲಾಗಿದೆ. ಭೂ ಸ್ವಾಧೀನ ಡಿಪಿಆರ್ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ.
ಒಟ್ಟಾರೆ ಹುಬ್ಬಳ್ಳಿ - ಧಾರವಾಡ ಅವಳಿ ನಗರದ ನಡುವೆ 31 ಕಿಲೋ ಮೀಟರ್ ಷಟ್ಪಥ ಮಾಡಲು ನಿರ್ಧರಿಸಲಾಗಿದೆ. ಗೊಬ್ಬೂರು ಕ್ರಾಸ್ ನಿಂದ ನರೇಂದ್ರ ವರೆಗಿನ ದ್ವಿಪಥ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೈಪಾಸ್ ರಸ್ತೆಗೆ ಕಾಯಕಲ್ಪ ನೀಡೋಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಅವಳಿ ನಗರದ ಜನತೆಯ ಬಹುದಿನಗಳ ಕನಸು ನನಸಾಗಲಾರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ