ಹುಬ್ಬಳ್ಳಿ (ಏ. 27): ಹಳೇ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣದ ತನಿಖೆ ಮುಂದುವರೆದಿದೆ. ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಸೀಂ ಪಠಾಣ್ ಮತ್ತಿತರರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇದೇ ವೇಳೆ ಸಿದ್ಧರಾಮಯ್ಯರನ್ನು (Siddaramaiah) ತೇಜೋವಧೆ ಮಾಡುತ್ತಿರುವ ನಳೀನ್ ಕುಮಾರ್ ಕಟೀಲ್ (Nalin Kumar Kateel) ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ನ್ಯಾಯಾಂಗದ ಮುಂದೆ ಆರೋಪಿ ಹಾಜರು
ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ವಸೀಂ ಪಠಾಣ್ ಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಏಪ್ರಿಲ್ 30 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ. ಕಳೆದ ಐದು ದಿನದಿಂದ ಪೊಲೀಸ್ ವಶದಲ್ಲಿದ್ದ ವಸೀಮ್ ಪಠಾಣ್, ತುಫೀಲ್ ಮುಲ್ಲಾನನ್ನು ಇಂದು ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಪೊಲೀಸರು, ಗಲಭೆ ಪಿತೂರಿ ಕುರಿತು ತೀವ್ರ ವಿಚಾರಣೆ ನಡೆಸಿದ್ದರು. ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಹುಬ್ಬಳ್ಳಿ ನಾಲ್ಕನೇ ಜೆಎಂಎಫ್ಸಿ ಕೋರ್ಟ್ ಹಾಜರುಪಡಿಸಲಾಗಿತ್ತು. ಈ ವೇಳೆ ಇಬ್ಬರು ಆರೋಪಿಗಳಿಗೂ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹುಬ್ಬಳ್ಳಿ ಉಪ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಇದನ್ನು ಓದಿ: ಬೆಂಗಳೂರಿನ ಮನೆಯಲ್ಲೇ ಕುರಿ ಸಾಕಾಣೆ ಮಾಡುತ್ತಿರುವ ಟೆಕ್ಕಿ; ಈತನ ಸಾಹಸಕ್ಕೆ ಮೆಚ್ಚಬೇಕು
ಕಠಿಣ ಕ್ರಮಕ್ಕೆ ಜನರ ಆಗ್ರಹ
ಇನ್ನೊಂದೆಡೆ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಲ್ಲು ತೂರಾಟ ನಡೆಸಿದ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮಾದರಿ ಬುಲ್ಡೋಜರ್ ನೀತಿ ಜಾರಿಗೆ ಆಗ್ರಹಿಸಲಾಗುತ್ತಿದೆ. ಗಲಭೆಕೋರರಿಗೆ ದಂಡಿಸಲು ಕರ್ನಾಟಕವೇ ಮಾದರಿ ಎಂದು ಸಿಎಂ ಬಸವರಾಜ ಬೊಮ್ಮಯಿ ಈಗಾಗಲೇ ತಿಳಿಸಿದ್ದಾರೆ. ಆಗಿದ್ರೆ ಕರ್ನಾಟಕ ಮಾದರಿ ಅಂದ್ರೆ ಯಾವುದು..? ಎನ್ನೋ ಪ್ರಶ್ನೆ ಎದುರಾಗಿದೆ. ಇದುವರೆಗೆ 146 ಜನರನ್ ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಗಲಭೆಕೋರರರಿಗೆ ವಿರುದ್ಧ ಕಠಿಣ ಕ್ರಮಕ್ಕೆ ಖಾಕಿ ಪಡೆ ಮುಂದಾಗಿದೆ. ಮತ್ತೆ ಈ ರೀತಿಯ ಗಲಭೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಕಟೀಲ್ ವಿರುದ್ಧ ದೂರು
ಹುಬ್ಬಳ್ಳಿ ಗಲಭೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾರಣ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಜಲಗಿ ಅವರು ದೂರು ದಾಖಲಿಸಿದ್ದಾರೆ. ಹಳೆ ಹುಬ್ಬಳ್ಳಿ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ನಳಿನ ಕುಮಾರ್ ಕಟೀಲ್ ಆಧಾರ ರಹಿತ ಆರೋಪ ಮಾಡಿದ್ದಾರೆ. ಆ ಮೂಲಕ ಸಿದ್ಧರಾಮಯ್ಯ ಅವರ ಕುರಿತು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿ: ಬೆಲೆ ಏರಿಕೆ ಬಿಸಿ ಸಂಕಷ್ಟದಲ್ಲಿ ಮುದ್ರಣ ಮಾಧ್ಯಮ; ಪ್ರಧಾನಿಗೆ ಸಿದ್ದರಾಮಯ್ಯ ಪತ್ರ
ಏಪ್ರಿಲ್ 26 ರಂದು ಹಳೆ ಹುಬ್ಬಳ್ಳಿಗೆ ಭೇಟಿ ನೀಡ ವೇಳೆ ಹೇಳಿಕೆ ನೀಡಿದ್ದ ಕಟೀಲ್, ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ಗಲಭೆಗಳು ಆಗಿದ್ದವು. ಹುಬ್ಬಳ್ಳಿ ಗಲಭೆಗೂ ಅವರೇ ಪ್ರೇರಣೆ ಎಂದು ಕಟೀಲ್ ಆರೋಪಿಸಿದ್ದರು. ತಮ್ಮ ಆರೋಪಕ್ಕೆ ಸಾಕ್ಷಿ ಪುರಾವೆ ಒದಗಿಸಬೇಕು. ಇಲ್ಲದಿದ್ದಲ್ಲಿ ಕೂಡಲೇ ನಳೀನ್ ಕುಮಾರ್ ಕಟೀಲ್ ಗೆ ನೋಟೀಸ್ ನೀಡಬೇಕು. ವಿಪಕ್ಷ ನಾಯಕ ಸಿದ್ಧರಾಮಯ್ಯರ ತೇಜೋವಧೆ ಮಾಡಿದ ನಳೀನ್ ಕುಮಾರ್ ಕಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ರೀತಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಕೌಜಲಗಿ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ