Nex Coin- ನೆಕ್ಸ್ ಕಾಯಿನ್ ಹೆಸರಲ್ಲಿ ಭಾರೀ ವಂಚನೆ; ಚಿನ್ನ ಎಂದು ಕಲ್ಲು ಮಾರಲು ಯತ್ನಿಸಿದವನ ಬಂಧನ

ನೆಕ್ಸ್ ಕಾಯಿನ್ ಟ್ರೇಡಿಂಗ್ ಹೆಸರಲ್ಲಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವನಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಲಾಗಿದೆ. ಮತ್ತೊಂದೆಡೆ ಚಿನ್ನ ಎಂದು ಕಲ್ಲನ್ನು ಮಾರಲು ಯತ್ನಿಸಿದವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ

  • Share this:
ಹುಬ್ಬಳ್ಳಿ: ದಿನೇ ದಿನೇ ಆನ್ ಲೈನ್ ದೋಖಾಗಳು (Online cheating) ಹೆಚ್ಚಾಗುತ್ತಲೇ ಇವೆ. ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Bitcoin cheating) ತೀವ್ರ ಚರ್ಚೆಯಲ್ಲಿರುವಾಗಲೇ ಹುಬ್ಬಳ್ಳಿಯಲ್ಲಿ ನೆಕ್ಸ್ ಕಾಯಿನ್ ವಂಚನೆ (Nex Coin cheating case) ಬೆಳಕಿಗೆ ಬಂದಿದೆ. ನೆಕ್ಸ್ ಕಾಯಿನ್ ಟ್ರೇಡಿಂಗ್ ಹೆಸರಲ್ಲಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವನಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಲಾಗಿದೆ. ಇದೇ ವೇಳೆ ಹೊಳೆಯುವ ಕಲ್ಲನ್ನು ಅಸಲಿ ಚಿನ್ನವೆಂದು ನಂಬಿಸಿ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಬಂಗಾರದ ಬಣ್ಣವಿರುವ ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ನೆಕ್ಸ್ ಕಾಯಿನ್ ಟ್ರೇಡಿಂಗ್ ಹೆಸರಲ್ಲಿ ಹುಬ್ಬಳ್ಳಿಯ ಪ್ರಕಾಶ್ ಲಕಮನಹಳ್ಳಿ (Prakash Lakamanahalli) ಎಂಬಾತನಿಗೆ 8.13 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಪ್ರಕಾಶ್ ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಯಾಗಿದ್ದು, ವಾಟ್ಸ್ ಆಪ್ ಗ್ರೂಪ್‌ಗೆ ಸೇರ್ಪಡೆ ಮಾಡಿಕೊಂಡು ಬಳಿಕ ತಮ್ಮ ವೆಬ್‌ಸೈಟ್ ಲಿಂಕ್ ಕಳಿಸಿ ಹೂಡಿಕೆ ಮಾಡುವಂತೆ ವಂಚಕರು ಅಮಿಷವೊಡ್ಡಿದ್ದರು. ಖಾಸಗಿ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 8.13 ಲಕ್ಷ ರೂಪಾಯಿ ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿಸಿಕೊಂಡು, ಡಾಲರ್ ರೂಪದಲ್ಲಿ ಪರಿವರ್ತಿಸಿ ನಿಮ್ಮ ಹೆಸರಲ್ಲಿ ಹೂಡಿಕೆ ಮಾಡ್ತೇವೆ ಎಂದಿದ್ದರು. ಬಂದ ಲಾಭವನ್ನು ನಿಮ್ಮ ಖಾತೆಗೆ ಜಮಾ ಮಾಡೋದಾಗಿ ಹೇಳಿದ್ದ ವಂಚಕರು, ಬಳಿಕ ಲಾಭ - ನಷ್ಟದ ಲೆಕ್ಕಾಚಾರ ತೋರಿಸಿದ್ದರು.

ಇದೆಲ್ಲದರ ಬಳಿಕ ಲಕಮನಹಳ್ಳಿ ಅವರ ನೆಕ್ಸ್ ಖಾತೆಯನ್ನು ಫ್ರೀಜ್ ಮಾಡಿದಂತೆ ತೋರಿಸಿದ್ದರು. ಇದೆಲ್ಲ ಬೆಳವಣಿಗೆ ನಂತರ ತಾನು ಮೋಸ ಹೋಗಿರೋದು ಖಾತ್ರಿಯಾಗಿದ್ದು, ವ್ಯಕ್ತಿ ಸೈಬರ್ ಕ್ರೈಂ ಠಾಣೆಗೆ ಮೊರೆ ಹೋಗಿದ್ದಾನೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೈಬರ್ ಠಾಣೆ ಪೊಲೀಸರಿಂದ ತನಿಖೆ ಆರಂಭಗೊಂಡಿದೆ.

ನಕಲಿ ಚಿನ್ನ ಮಾರಾಟಕ್ಕೆ ಯತ್ನಿಸಿದವನ ಬಂಧನ:

ಹೊಳೆಯುವ ಕಲ್ಲನ್ನು ತೋರಿಸಿ ಚಿನ್ನ ಎಂದು ಮಾರಾಟಕ್ಕೆ ಯತ್ನಿಸಿರೋ ಘಟನೆ ಕೂಡ ಹುಬ್ಬಳ್ಳಿಯಲ್ಲಿ ನಡೆದಿದ್ದು, ಈ ಸಂಬಂಧ ಶಹರ ಠಾಣೆ ಪೊಲೀಸರು ಕೊಪ್ಪಳ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯಿಂದ ಚಿನ್ನದ ಮಾದರಿಯಲ್ಲಿ ಹೊಳೆಯುವ ಕಲ್ಲುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಪ್ಪಳದ ವಿದ್ಯಾನಗರ ನಿವಾಸಿ ಮೌನೇಶ ಶಿವಪ್ಪ ಅರ್ಕಾಚಾರಿ ಬಂಧಿತ ಆರೋಪಿಯಾಗಿದ್ದಾನೆ. ಮೌನೇಶನಿಂದ 1039 ಗ್ರಾಂ ತೂಕದ 9 ಕಲ್ಲುಗಳು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Puneeth Rajkumar- ಪುನೀತ್ ಪ್ರೇರಣೆ: ಮದುವೆ ಮಂಟಪದಲ್ಲೇ ನವದಂಪತಿ, ಪೋಷಕರಿಂದ ನೇತ್ರದಾನ

ಚಿನ್ನದಂತೆ ಹೊಳೆಯೋ ಕಲ್ಲುಗಳನ್ನು ಚೀಲದಲ್ಲಿ ತುಂಬಿಕೊಂಡು ತಂದಿದ್ದ ಮೌನೇಶ, ಹುಬ್ಬಳ್ಳಿಯ ದುರ್ಗದ ಬೈಲ್‌ ಪ್ರದೇಶದಲ್ಲಿ ಓಡಾಡಿ ಮಾರಾಟಕ್ಕೆ ಯತ್ನಿಸಿದ್ದ. ಇದು ಕ್ಯಾಲಿಫೋರ್ನಿಯಂ ಕಲ್ಲು, ಕ್ವಾರಿಯಲ್ಲಿ ಸಿಕ್ಕಿದ್ದು, ಇದರಲ್ಲಿ ಚಿನ್ನ ಇದೆ ಎಂದು ನಂಬಿಸಲು ಯತ್ನಿಸಿದ್ದ. ಇದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ವ್ಯಕ್ತಿಯನ್ನು ವಶಕ್ಕೆ ಪಡೆದು, ಕಲ್ಲುಗಳನ್ನು ವಶಪಡಿಸಿಕೊಂಡಿದ್ದರು. ವ್ಯಕ್ತಿಯಿಂದ ವಶಪಡಿಸಿಕೊಂಡಿದ್ದ ವಸ್ತು ಕ್ಯಾಲಿಫೋರ್ನಿಯಂ ಹೌದೋ, ಅಲ್ಲವೋ ಎನ್ನೋದು ಗೊತ್ತಾಗಿಲ್ಲ.

ಏನಿದು ಕ್ಯಾಲಿಫೋರ್ನಿಯಂ ಕಲ್ಲು?:

ಕ್ಯಾಲಿಫೋರ್ನಿಯಂ ಎಂಬುದು ರೇಡಿಯೋ ಆ್ಯಕ್ಟಿವ್ ಮೆಟೀರಿಯಲ್ (Californium is a Radio Active Chemical Element) ಆಗಿದೆ. ವಿಕಿರಣ ಸೂಸುವ ವಸ್ತು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹವಾಗಿದೆ.

ಇದನ್ನೂ ಓದಿ: BJP Tweet: ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ?: ಬಿಜೆಪಿ ಸಾಲು ಸಾಲು ಟ್ವೀಟ್

ಕ್ಯಾಲಿಫೋರ್ನಿಯಂ ಕಲ್ಲಿಗೆ ಬಂಗಾರಕ್ಕಿಂತಲೂ ಹೆಚ್ಚು ಬೆಲೆ:

ಇದು ಯುರೇನಿಯಂ ನಂತರ ಅತಿ ಹೆಚ್ಚು ಪರಮಾಣು ಸಂಖ್ಯೆಯನ್ನು ಹೊಂದಿದ ವಸ್ತವಾಗಿದ್ದು, ಇದೇ ಕಾರಣಕ್ಕೆ ಇದರ ಮಾರುಕಟ್ಟೆಯ ಮೌಲ್ಯ ಹೆಚ್ಚು. ಇದನ್ನು ಬರಿಗೈಲಿ ಮುಟ್ಟಿದರೆ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಹೀನತೆ ಆಗುವ ಸಾಧ್ಯತೆಯೂ ಇದೆ. 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂ ಎನ್ನಲಾಗುತ್ತಿದೆ. ಅದರ ಹೆಸರನ್ನೇ ಬಂಡವಾಳ ಮಾಡಿಕೊಂಡು ಮೌನೇಶ್ ನಕಲಿ ಕಲ್ಲನ್ನು ಮಾರಾಟಕ್ಕೆ ಯತ್ನಿಸಿರೋ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಶಹರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: