HOME » NEWS » State » HUBLI BUS DRIVER WHO RETURNED THE PASSENGERS GOLD WAS PRAISED FOR HIS WORK SESR

ಪ್ರಯಾಣಿಕರ ಚಿನ್ನದ ಸರ ಮರಳಿಸಿದ ಹುಬ್ಬಳ್ಳಿ ಬಸ್ ಚಾಲಕ, ನಿರ್ವಾಹಕನ ಕಾರ್ಯಕ್ಕೆ ಮೆಚ್ಚುಗೆ

ಪ್ರಯಾಣಿಕರು ಕಳೆದುಕೊಂಡಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು

news18-kannada
Updated:January 19, 2021, 10:12 PM IST
ಪ್ರಯಾಣಿಕರ ಚಿನ್ನದ ಸರ ಮರಳಿಸಿದ ಹುಬ್ಬಳ್ಳಿ ಬಸ್ ಚಾಲಕ, ನಿರ್ವಾಹಕನ ಕಾರ್ಯಕ್ಕೆ ಮೆಚ್ಚುಗೆ
ಪ್ರಯಾಣಿಕರಿಗೆ ಸರ ಹಿಂದಿರುಗಿಸಿದ ಸಿಬ್ಬಂದಿ
  • Share this:
ಹುಬ್ಬಳ್ಳಿ (ಜ. 19): ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ  ಚಾಲಕ ಮತ್ತು ನಿರ್ವಾಹಕರು ಪ್ರಮಾಣಿಕತೆ ಮರೆದಿದ್ದಾರೆ. ಸಾರಿಗೆ ಸಿಬ್ಬಂದಿಯ ಈ ಕಾರ್ಯ ಮೆಚ್ಚಿ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಗೌರವಿಸಿ ಸನ್ಮಾನಿಸಿದರು. ಅಥಣಿ ಮೂಲದ ನಗರದ ಗೋಕುಲರಸ್ತೆಯ ಡಾಲರ್ಸ್ ಕಾಲನಿ ನಿವಾಸಿ ಮನೋಜ  ಚಿನ್ನದ ಸರ ಮರಳಿ ಪಡೆದವರು. ಭಾನುವಾರ ಕಾರ್ಯ ನಿಮಿತ್ತ  ಬೆಳಗಾವಿಗೆ ಹೋಗಿದ್ದ ಮನೋಜ್​  ಅಲ್ಲಿಂದ ರಾತ್ರಿ  ಹುಬ್ಬಳ್ಳಿಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ತೆರಳಿದ್ದಾರೆ. ಮರುದಿನ ಬೆಳಿಗ್ಗೆ ಕತ್ತಿನಲ್ಲಿದ್ದ ಚಿನ್ನದ ಸರ ಕಾಣದಿರುವ ಬಗ್ಗೆ ಅವರ ಹೆಂಡತಿ ಪ್ರಶ್ನಿಸಿದಾಗಲೇ ಸರ ಕಳೆದಿರುವುದು ಅರಿವಿಗೆ ಬಂದಿದೆ. ಕಳೆದುಕೊಂಡದ್ದು  ಸಣ್ಣಪುಟ್ಟ ವಸ್ತುವಲ್ಲ. ಬರೋಬ್ಬರಿ 12ಗ್ರಾಂ ಚಿನ್ನದ ಸರ.  ಗಾಬರಿಗೊಂಡು ಕೂಡಲೇ ತಮ್ಮ ಬಸ್ ಟಿಕೆಟ್ ಹಿಡಿದುಕೊಂಡು ಬಸ್ ಡಿಪೋಗೆ ಧಾವಿಸಿದ್ದಾರೆ.

ಇತ್ತ ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗದ ಗ್ರಾಮಾಂತರ  3ನೇ ಘಟಕದ  ಕೆ. ಎ. 25 ಎಫ್ 3200 ಸಂಖ್ಯೆಯ ತಡೆರಹಿತ  ಸಾರಿಗೆ ಬಸ್ಸಿನಲ್ಲಿ ಚಾಲಕರಾಗಿ ಕೆ. ಎಂ. ಹವಾಲ್ದಾರ  ಹಾಗೂ ನಿರ್ವಾಹಕರಾಗಿ ಪಿ. ಎಚ್. ಚವ್ಹಾಣ ಬೆಳಿಗ್ಗೆಯಿಂದ ಹುಬ್ಬಳ್ಳಿ - ಬೆಳಗಾವಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ರಾತ್ರಿ 8ಕ್ಕೆ ಕೊನೆಯ ಟ್ರಿಪ್ಪಿನಲ್ಲಿ ಬೆಳಗಾವಿಯಿಂದ ಹೊರಟು ರಾತ್ರಿ 10ಕ್ಕೆ ಹುಬ್ಬಳ್ಳಿಗೆ ಬಂದಿದ್ದಾರೆ. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲರನ್ನು ಇಳಿಸಿದ್ದಾರೆ. ಬಸ್ಸನ್ನು ಡಿಪೋಗೆ ತೆಗೆದುಕೊಂಡು ಹೋಗುವುದಕ್ಕೆ ಮುನ್ನ ನಿರ್ವಾಹಕ ತನ್ನ ಪಕ್ಕದ ಆಸನದ ಕೆಳಗೆ ಚಿನ್ನದ ಸರ ಇರುವುದನ್ನು ಗಮನಿಸಿದ್ದಾರೆ. ಕೂಡಲೆ ಸಹೋದ್ಯೋಗಿ ಚಾಲಕರಿಗೆ ತಿಳಿಸಿದ್ದಾರೆ. ಇಬ್ಬರೂ ಸೇರಿ ಚಿನ್ನದ ಸರವನ್ನು ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹೀಗಾಗಿ ಕಳೆದುಕೊಂಡಿದ್ದ ಚಿನ್ನದ ಸರ ಮತ್ತೆ ವಾರಸುದಾರರಿಗೆ ಸಿಗಲು ಸಾಧ್ಯವಾಗಿದೆ.

ಇದನ್ನು ಓದಿ: ವಿಸಿಟಿಂಗ್​ ಕಾರ್ಡ್​ಗಾಗಿ ಪಕ್ಷದ ಹುದ್ದೆ ಕೊಡುವುದಿಲ್ಲ; ಜಿಟಿ ದೇವೇಗೌಡಗೆ ಎಚ್​ಡಿಕೆ ಟಾಂಗ್

ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಚಿನ್ನದ ಸರವನ್ನು ಚಾಲಕ - ನಿರ್ವಾಹಕರ ಮೂಲಕ ವಾರಸುದಾರರಿಗೆ ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕರನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ.  ಸಾರ್ವಜನಿಕರ ವಲಯದಲ್ಲಿ ಸಂಸ್ಥೆಯ  ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದ್ದಾರೆ.

ಪ್ರಯಾಣಿಕರು ಕಳೆದುಕೊಂಡಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಆಡಳಿತಾಧಿಕಾರಿ‌ ನಾಗಮಣಿ, ನಿಲ್ದಾಣಾಧಿಕಾರಿ ಪಿ.ಎಸ್. ಶೆಟ್ಟರ ಮತ್ತಿತರರು ಇದ್ದರು
Published by: Seema R
First published: January 19, 2021, 10:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories