• Home
  • »
  • News
  • »
  • state
  • »
  • ಹುಬ್ಬಳ್ಳಿಯಲ್ಲಿ ಬಾಲಕನ ಕೈ ಕಸಿದುಕೊಂಡ ಅಪಾಯಕಾರಿ ಕಟ್ಟಡ

ಹುಬ್ಬಳ್ಳಿಯಲ್ಲಿ ಬಾಲಕನ ಕೈ ಕಸಿದುಕೊಂಡ ಅಪಾಯಕಾರಿ ಕಟ್ಟಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2018ರ ಸೆಪ್ಟೆಂಬರ್ 25ರಂದು ಸ್ನೇಹಿತರ ಜೊತೆ ಆಟವಾಡುತ್ತಿದ್ದ ಸಿದ್ದಾರ್ಥ ನೀರು ಕುಡಿಯಲು ಸ್ನೇಹಿತನ ಮನೆಗೆ ಹೋಗಿದ್ದ. ಕಟ್ಟಡದ ಮೆಟ್ಟಿಲುಗಳ ಸಮೀಪ ಹಾದು ಹೋಗುತ್ತಿದ್ದಾಗ ಕೈಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ.

  • Share this:

ಹುಬ್ಬಳ್ಳಿ (ಆ. 30): ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗೆ ಅಂಟಿಕೊಂಡೇ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ನಿಯಮ ಬಾಹಿರವಾಗಿ ಕಟ್ಟಿರುವ ಡೆಡ್ಲಿ ಕಟ್ಟಡವನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಮೀನಾಮೇಷ ಎಣಿಸುತ್ತಿದೆ. ಈ ಡೇಂಜರಸ್ ಕಟ್ಟಡದಿಂದಾಗಿ ಅಮಾಯಕ ಬಾಲಕನೊಬ್ಬ ಈಗಾಗಲೇ ತನ್ನ ಕೈ ಕಳೆದುಕೊಂಡಿದ್ದಾನೆ.


ಸಿದ್ದಾರ್ಥ ಬಳ್ಳಾರಿ ಎಂಬಾತ‌ನ ಬದುಕನ್ನೇ ಈ ಕಟ್ಟಡ ದುಸ್ತರವಾಗಿಸಿದೆ. ಕೇಶ್ವಾಪುರದಲ್ಲಿ ಬಾಲಕನ ಕುಟುಂಬ ವಾಸವಾಗಿದ್ದು, ಎಲ್ಲ ಮಕ್ಕಳಂತೆ ಸಿದ್ದಾರ್ಥ ಸಹ ಸ್ನೇಹಿತರೊಂದಿಗೆ ಆಟವಾಡಿಕೊಂಡು ಚೆನ್ನಾಗಿದ್ದ. ಕೇಶ್ವಾಪುರದ ಚೇತನಾ ಕಾಲೋನಿಯಲ್ಲಿರುವ ಈ ಕಟ್ಟಡ ಬಾಲಕನ ಬದುಕಿಗೆ ಕೊಳ್ಳಿ ಇಟ್ಟಿದೆ. 2018ರ ಸೆಪ್ಟೆಂಬರ್ 25ರಂದು ಸ್ನೇಹಿತರ ಜೊತೆ ಆಟವಾಡುತ್ತಿದ್ದ ಸಿದ್ದಾರ್ಥ ನೀರು ಕುಡಿಯಲು ಸ್ನೇಹಿತನ ಮನೆಗೆ ಹೋಗಿದ್ದ. ಕಟ್ಟಡದ ಮೆಟ್ಟಿಲುಗಳ ಸಮೀಪ ಹಾದು ಹೋಗುತ್ತಿದ್ದಾಗ ಕೈಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ. ಎಡಗೈ ಸಂಪೂರ್ಣ ಸುಟ್ಟುಹೋದರೆ ಬಲಗೈ ಸ್ವಾಧೀನ ಕಳೆದುಕೊಂಡಿದೆ. ದೇಹದ ಬಹುತೇಕ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬಾಲಕನಿಗೆ ಇದುವರೆಗೆ 20 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.


ಇದನ್ನೂ ಓದಿ: ಕೋಲಾರದ ಚಿನ್ನದ ಗಣಿಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲು ನಿರ್ಧಾರ; ಸಚಿವ ಜಗದೀಶ್ ಶೆಟ್ಟರ್ ಮಾಹಿತಿ


ನಿಯಮ ಬಾಹಿರವಾಗಿ ನಿರ್ಮಾಣವಾದ ಕಟ್ಟಡದಿಂದ ಬಾಲಕನ ಬದುಕು ಸುಟ್ಟು ಹೋಗಿದೆ. ಮತ್ಯಾವ ಮಕ್ಕಳಿಗೂ ಇಂತಹ ದುಸ್ಥಿತಿ ಬರಬಾರದೆಂದು ಬಾಲಕನ ತಂದೆ ಮಂಜುನಾಥ ಹಾಗೂ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಕಟ್ಟಡ ತೆರವಿಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ.‌ ಮಹಾನಗರ ಪಾಲಿಕೆಯ ನಗರಾಭಿವೃದ್ಧಿ ವಿಭಾಗದವರು ಸರ್ವೆ ನಡೆಸಿದ್ದಾಗ ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅತಿಕ್ರಮ ಗೊತ್ತಾಗಿದೆ. ಪರವಾನಗಿಗೆ ವ್ಯತಿರಿಕ್ತವಾಗಿ ಕಟ್ಟಡ ಕಟ್ಟಿರುವುದು ಬೆಳಕಿಗೆ ಬಂದಿದೆ. ಪಾರ್ಕಿಂಗ್ ಜಾಗ ಮತ್ತು ಸೆಟ್‌ಬ್ಯಾಕ್ ಬಿಡದೆ ಬೃಹತ್ ಕಟ್ಟಡ ಕಟ್ಟಿದ್ದಾರೆ.‌ ಇದರ ಪರಿಣಾಮ ವಿದ್ಯುತ್ ಲೈನ್‌ಗೆ ಅಂಟಿಕೊಂಡೇ ಕಟ್ಟಡ ನಿರ್ಮಾಣವಾಗಿದೆ.‌


ಕಟ್ಟಡದ ಹೆಚ್ಚುವರಿ ಭಾಗವನ್ನು ತೆರವು ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ. ಆದರೆ, ಆದೇಶ ಮಾಡಿ ವರ್ಷವಾಗುತ್ತಾ ಬಂದರೂ ಮಹಾನಗರ ಪಾಲಿಕೆಯ ನಗರ ಯೋಜನೆ ಅಧಿಕಾರಿಗಳು ಕಟ್ಟಡ ತೆರವುಗೊಳಿಸಿಲ್ಲ. ಕೊರೋನಾ, ಗಣೇಶ ಚತುರ್ಥಿ ಸೇರಿದಂತೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇವತ್ತು ಮಾಡುತ್ತೇವೆ, ನಾಳೆ ಮಾಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ.


ಒಂದೆಡೆ ಬಾಡಿಗೆದಾರರ ಹಣದಾಸೆಗೆ ಬಾಲಕ ಅಂಗವಿಕಲನಾಗಿದ್ದು, ಪರಾವಲಂಬಿಯಾಗಿ ಬದುಕುತ್ತಿದ್ದಾನೆ. ಇನ್ನೊಂದೆಡೆ ಡೆಡ್ಲಿ ಕಟ್ಟಡ ಮತ್ತಷ್ಟು ಜನರ ಜೀವನವನ್ನು ಕಸಿಯಲು ಬಾಯ್ತರೆದು ನಿಂತಿದೆ. ಅತಿಕ್ರಮ ಕಟ್ಟಡದ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ಹಣದಾಸೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಎಲ್ಲರ ಆಗ್ರಹ.

Published by:Sushma Chakre
First published: