ಸಿಎಂ ಬೊಮ್ಮಾಯಿ ತವರಲ್ಲಿ ಗದ್ದುಗೆ ಹಿಡಿಯಲು ಈಗಿನಿಂದ್ಲೇ ರಣತಂತ್ರ

ಬಸವರಾಜ ಬೊಮ್ಮಾಯಿ ಸಿಎಂ ಆದ ನಂತ್ರ ತವರಿನಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿರೋದ್ರಿಂದ ಬಿಜೆಪಿ ನಾಯಕರು ನಿಟ್ಟುರಿಸಿರು ಬಿಡುವಂತಾಗಿದೆ.

ಪಾಲಿಕೆ

ಪಾಲಿಕೆ

  • Share this:
ಹುಬ್ಬಳ್ಳಿ (ಸೆ. 6):  ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎನಿಸಿಕೊಂಡ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸೋ ಮೂಲಕ ಅಧಿಕಾರಕ್ಕೆ ಸನಿಹವಾಗಿದೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಬೆಂಬಲ ಪಡೆದರೂ ಬಿಜೆಪಿಗೆ ಒಂದು ಸದಸ್ಯ ಬಲದ ಅವಶ್ಯಕತೆ ಇದ್ದು, ಅಧಿಕಾರ ಗದ್ದುಗೆ ಏರಲು ಬಿಜೆಪಿ ಈಗಿನಿಂದ್ಲೆ ರಣತಂತ್ರ ಪ್ರಾರಂಭಿಸಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದ ನಂತ್ರ ತವರಿನಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿರೋದ್ರಿಂದ ಬಿಜೆಪಿ ನಾಯಕರು ನಿಟ್ಟುರಿಸಿರು ಬಿಡುವಂತಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಬಿಜೆಪಿಗೆ 39 ಸ್ಥಾನಗಳು ದಕ್ಕಿವೆ. ಕಾಂಗ್ರೆಸ್ ಪಕ್ಷಕ್ಕೆ 33 ಸ್ಥಾನ ಬಂದಿದ್ದು, ಜೆಡಿಎಸ್ ಕೇವಲ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಎ ಐ ಎಂ ಎಂ 03, ಪಕ್ಷೇತರ 06 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂಡಾಯ ಅಭ್ಯರ್ಥಿಗಳು ಮತ್ತು ಎ ಐ ಎಂ ಎಂ ಅಭ್ಯರ್ಥಿಗಳು ಮುಳುವಾಗಿದ್ದಾರೆ. ಬಿಜೆಪಿಗೂ ಕೆಲ ಬಂಡಾಯ ಅಭ್ಯರ್ಥಿಗಳು ಮುಳವಾಗಿ ಪರಿಣಮಿಸಿದ್ದಾರೆ. ಗೆಲುವು ಸಾಧಿಸಿದ ಆರು ಪಕ್ಷೇತರ ಅಭ್ಯರ್ಥಿಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ನ ತಲಾ ಮುವ್ವರು ಅಭ್ಯರ್ಥಿಗಳಾಗಿದ್ದರೆನ್ನೋದು ವಿಶೇಷ.

ಎ.ಐ.ಎಂ.ಐ.ಎಂ. ಪಕ್ಷದ ಮೂಲಕ ಗೆಲುವು ಸಾಧಿಸಿದವರಲ್ಲಿಯೂ ಒಂದಿಬ್ಬರು ಕಾಂಗ್ರೆಸ್ ಟಿಕೇಟ್ ಸಿಗದೆ ಪಕ್ಷಾಂತರಗೊಂಡವರು. ಕಾಂಗ್ರೆಸ್ ಶಾಸಕರಿರೋ ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರಲ್ಲಿ ಮಾತ್ರ ಎ.ಐ.ಎಂ.ಐ.ಎಂ.ನ ಮುವ್ವರು ಅಭ್ಯರ್ಥಿಗಳು ಗೆದ್ದಿದ್ದು, ಉಳಿದ ಕಡೆ ಎಲ್ಲಿಯೂ ಗೆದ್ದಿಲ್ಲ. ಧಾರವಾಡ ಕೃಷಿ ವಿ.ವಿ. ಆವರಣದಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳಿಂದ ವಿಜಯೋತ್ಸವ ನಡೆಯಿತು. ಮತ ಎಣಿಕೆ ಕೇಂದ್ರದಿಂದ ತೆರಳಿದ ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡ್ ಗಳಲ್ಲಿ ವಿಜಯೋತ್ಸವ ಆಚರಿಸಿದರು .ಪಟಾಕಿ ಸಿಡಿಸಿ, ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಹುಬ್ಬಳ್ಳಿ - ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು ಬರುತ್ತಿದ್ದು, ಈ ಪೈಕಿ ಮೂರು ಬಿಜೆಪಿ ಹಾಗೂ ಒಂದು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ನಾಲ್ಕೂ ಕ್ಷೇತ್ರಗಳಲ್ಲಿಯೂ ಆಯಾ ಶಾಸಕರು ತಮ್ಮ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಅಮೃತ್ ದೇಸಾಯಿ ಶಾಸಕರಾಗಿದ್ದರು. ಇಲ್ಲಿ ಒಂಬತ್ತು ವಾರ್ಡ್ ಗಳು ಬರುತ್ತಿದ್ದು, ಬಿಜೆಪಿ - 05 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ - 04 ಸ್ಥಾನ ಪಡೆದಿದೆ. ಹುಬ್ಬಳ್ಳಿ - ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯ ಅರವಿಂದ್ ಬೆಲ್ಲದ್ ಪ್ರತಿನಿಧಿಸುತ್ತಿದ್ದು, ಇಲ್ಲಿನ 25 ವಾರ್ಡ್ ಗಳ ಪೈಕಿ ಬಿಜೆಪಿ 13 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಕಾಂಗ್ರೆಸ್ - 10, ಜೆಡಿಎಸ್ ಹಾಗೂ ಪಕ್ಷೇತರ ತಲಾ ಒಂದು ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದು, ಇಲ್ಲಿನ 25 ವಾರ್ಡ್ ಗಳಿದ್ದು, ಈ ಪೈಕಿ 14 ಕಡೆ ಬಿಜೆಪಿ ಗೆಲುವಿನ ನಗೆ ಬೀರಿದೆ. ಉಳಿದಂತೆ ಕಾಂಗ್ರೆಸ್ - 08, ಮೂರು ವಾರ್ಡ್ ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಪ್ರತಿನಿಧಿಸುತ್ತಿರೋ ಹುಬ್ಬಳ್ಳಿ - ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 25 ವರ್ಡ್ ಗಳ ಪೈಕಿ 11 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಉಳಿದಂತೆ ಬಿಜೆಪಿ 7, ಎಐಎಂಐಎಂ 03 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಇದನ್ನು ಓದಿ: ಮುಜರಾಯಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ : ಸಚಿವೆ ಶಶಿಕಲಾ ಜೊಲ್ಲೆ

ಕಳೆದ ಮೂರು ಅವಧಿಯಲ್ಲಿ ಅಧಿಕಾರ ಗದ್ದುಗೆ ಹಿಡಿದಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 60 ಸೀಟುಗಳ ಟಾರ್ಟೆಗ್ ಇಟ್ಟುಕೊಂಡಿತ್ತು. ಆದರೆ 39 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 50 ಸೀಟುಗಳ ಟಾರ್ಗೆಟ್ ಇಟ್ಟುಕೊಂಡಿದ್ದ ಕಾಂಗ್ರೆಸ್ ಗೆ 33 ಸ್ಥಾನಗಳು ದಕ್ಕಿವೆ. ಓರ್ವ ಸಂಸದ, ನಾಲ್ವರು ಶಾಸಕರು, ಮುವ್ವರು ವಿಧಾನ ಪರಿಷತ್ ಸದಸ್ಯರಿದ್ದು,  ಪಾಲಿಕೆ ಗದ್ದುಗೆ ಏರಲು 46 ಸದಸ್ಯ ಬಲ ಬೇಕಾಗಿದೆ.

ಪಾಲಿಕೆಯಲ್ಲಿ ಗೆದ್ದವರು, ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಸೇರಿ ಬಿಜೆಪಿ ಸದಸ್ಯ ಬಲ 45 ಕ್ಕೇರಲಿದೆ. ಹೀಗಾಗಿ ಬಿಜೆಪಿಗೆ ಪಾಲಿಕೆಯಲ್ಲಿ ಕಮಲ ಅರಳಿಸಲು ಒಂದು ಸ್ಥಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಬಿಜೆಪಿ ಪಕ್ಷೇತರ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಸದಸ್ಯನನ್ನು ಸೆಳೆದುಕೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ತವರಲ್ಲಿ ಅಧಿಕಾರ ಗದ್ದುಗೆಗೆ ಏರಲು ಬಿಜೆಪಿ ಈಗನಿಂದಲೇ ರಣತಂತ್ರ ರೂಪಿಸಲಾರಂಭಿಸಿದೆ.
Published by:Seema R
First published: