Bommai- ಬಾಲ್ಯದ ಗೆಳೆಯನ ಅಗಲಿಕೆಗೆ ಬಿಕ್ಕಿಬಿಕ್ಕಿ ಅತ್ತ ಸಿಎಂ; ಅಧಿವೇಶನ ಬಿಟ್ಟು ಹುಬ್ಬಳ್ಳಿಗೆ ಬೊಮ್ಮಾಯಿ ದೌಡು

Friend Raju Patil’s Death- ತನ್ನ ಜೀವನದ ಏಳುಬೀಳುಗಳಲ್ಲಿ ಜೊತೆಯಾಗಿ ಇದ್ದ ಬಾಲ್ಯದ ಗೆಳೆಯ ರಾಜು ಪಾಟೀಲ್ ಅವರ ನಿಧನದಿಂದ ಸಿಎಂ ಬಸವರಾಜ ಬೊಮ್ಮಾಯಿ ಬಹಳ ದುಃಖಿತಗೊಂಡು ಭಾವೋದ್ವೇಗಕ್ಕೊಳಗಾಗಿದ್ದಾರೆ.

ಮೃತ ರಾಜು ಪಾಟೀಲ್ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಕಣ್ಣೀರು

ಮೃತ ರಾಜು ಪಾಟೀಲ್ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಕಣ್ಣೀರು

  • Share this:
ಹುಬ್ಬಳ್ಳಿ: ಬೆಂಗಳೂರಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಬಿಸಿ ಏರಿದ ಚರ್ಚೆಗೆ ವಿಧಾನಸಭೆ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka CM Basavaraja Bommai) ದಿಢೀರಾಗಿ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷರಾದರು. ಅಧಿವೇಶನ ಬಿಟ್ಟು ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದು ಇಡೀ ದಿನ ಇಲ್ಲಿಯೇ ಕಳೆದರು. ಮಹತ್ವದ ಅಧಿವೇಶನ ಬಿಟ್ಟು ಬೊಮ್ಮಾಯಿ ಹುಬ್ಬಳ್ಳಿಗೆ ದಿಢೀರ್ ಬರೋಕೆ ಕಾರಣ ಜೀವದ ಗೆಳೆಯ ಎನಿಸಿಕೊಂಡಾತನ ಅಕಾಲಿನ ನಿಧನ. ಹುಬ್ಬಳ್ಳಿಯ ಶಕ್ತಿ ನಗರದ ನಿವಾಸಿ ರಾಜು ಪಾಟೀಲ (Raju Patil) ನಿನ್ನೆ ಹೃದಯಾಘಾತ ದಿಂದ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅಧಿವೇಶನದ ನಡುವೆಯೂ ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಗೆ ಆಗಮಿಸಿದರು. ಗೆಳೆಯ ರಾಜು ಪಾಟೀಲ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿಮಾನದ ಮೂಲಕ ಕುಟುಂಬ ಸಮೇತ ಆಗಮಿಸಿದ ಬಸವರಾಜ ಬೊಮ್ಮಾಯಿ, ವಿಮಾನ ನಿಲ್ದಾಣದಿಂದ ನೇರವಾಗಿ ಸ್ನೇಹಿತ ರಾಜು ಪಾಟೀಲ ನಿವಾಸಕ್ಕೆ ತೆರಳಿದರು.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ ಬೊಮ್ಮಾಯಿ, ಶಕ್ತಿ ನಗರದ ಗೆಳೆಯನ ನಿವಾಸಕ್ಕೆ ದೌಡಾಯಿಸಿದರು. ಪತ್ನಿ, ಪುತ್ರ, ಪುತ್ರಿ, ಸಹೋದರಿ ಹಾಗೂ ಕುಟುಂಬ ಸದಸ್ಯರು ಎಲ್ಲರೂ ಬೊಮ್ಮಾಯಿ ಜೊತೆಗೆ ಆಗಮಿಸಿ, ಮೃತ ರಾಜು ಪಾಟೀಲ ರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ರಾಜು ಪಾಟೀಲರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅಗಲಿದ ಗೆಳೆಯನ ಪಾರ್ಥೀವ ಶರೀರ ಕಂಡ ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಬಿಕ್ಕಿ ಬಿಕ್ಕಿ ಅತ್ತರು. ಹೃದಯಾಘಾತದಿಂದ ನಿಧನ ಹೊಂದಿದ ಸ್ನೇಹಿತ ರಾಜು ಪಾಟೀಲ ಅಂತಿಮ ದರ್ಶನದ ವೇಳೆ ಗದ್ಗದಿತರಾದರು. ರಾಜು ಪಾಟೀಲ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತರು. ಪಾರ್ಥಿವ ಶರೀರಕ್ಕೆ ನಮಿಸಿದ ಸಿಎಂ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕಿದರು. ಮೃತ ರಾಜು ಪಾಟೀಲ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರೂ ಹಾಗೂ ಸಂಬಂಧಿಯೂ ಆಗಿದ್ದರು.

ತಮ್ಮ ರಾಜಕೀಯ ಏಳು - ಬೀಳುಗಳ ಸಂದರ್ಭದಲ್ಲಿ ಸದಾ ಜೊತೆಯಾಗಿರುತ್ತಿದ್ದ ಗೆಳೆಯನ ಅಗಲಿಕೆ ಬೊಮ್ಮಾಯಿ ಅವರ ಮನಸ್ಸನ್ನು ಘಾಸಿಗೊಳಿಸಿದೆ. ಯಾರೊಂದಿಗೂ ಹೆಚ್ಚಾಗಿ ಮಾತನಾಡದೆ ಅಂತ್ಯಕ್ರಿಯೆಯವರೆಗೆ ರಾಜು ಪಾಟೀಲರ ಪಾರ್ಥೀವ ಶರೀರದ ಬಳಿಯೇ ಉಳಿದುಕೊಂಡರು. ಹುಬ್ಬಳ್ಳಿಯಲ್ಲಿಯೇ ನಡೆದ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿಯೂ ಭಾಗಿಯಾದರು.

ಇದನ್ನೂ ಓದಿ: ಮಾಜಿ ಶಾಸಕ ಮಾನಪ್ಪ ವಜ್ಜಲ್​ ಮಗನ ಪುಂಡಾಟಿಕೆ; ಉದ್ಯಮಿ ಮಗನ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲು

ಸಿಎಂ ಬೊಮ್ಮಾಯಿ ಸಂತಾಪ...

ಸೋದರ ಸಂಬಂಧಿ ಹಾಗೂ ಆಪ್ತ ಸ್ನೇಹಿತ ರಾಜು ಪಾಟೀಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜು ಪಾಟೀಲ್ ಒಬ್ಬ ಆಪ್ತ ಮಿತ್ರರಾಗಿದ್ದರು. ನಾವಿಬ್ಬರೂ ಬಾಲ್ಯದಿಂದ ಕೂಡಿಯೇ ಬೆಳೆದವರು. ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಅವರು ಸದಾ ನನ್ನ ಜತೆ ಇರುತ್ತಿದ್ದರು. ಅವರ ಅಗಲಿಕೆ ನನಗೆ ಅತೀವ ದುಃಖ ತರಿಸಿದೆ. ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಅಂದುಕೊಂಡಿರಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು ಭಗವಂತನಲ್ಲಿ ಕೋರತ್ತೇನೆ ಎಂದು ತಿಳಿಸಿದ್ದಾರೆ. ರಾಜು ಪಾಟೀಲ್ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಒಟ್ಟಾರೆ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ದುಃಖದಲ್ಲಿರೋ ಬಸವರಾಜ ಬೊಮ್ಮಾಯಿ ಯಾರೊಂದಿಗೂ ಹೆಚ್ಚು ಮಾತನಾಡಲಿಲ್ಲ. ಬೊಮ್ಮಾಯಿ ಕುಟುಂಬದ ಸದಸ್ಯರೂ ರಾಜು ಪಾಟೀಲರ ನಿಧನಕ್ಕೆ ಕಂಬನಿ ಮಿಡಿದು, ಪಾಟೀಲರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬೋ ಕೆಲಸ ಮಾಡಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: