ಚಿವುಟವ್ರೂ ಅವ್ರೇ ತಟ್ಟವ್ರೂ ಅವ್ರೇ; ನನಗೆ ಚಿವುಟಿದ್ರೆ ಕಪಾಳಕ್ಕೇ ಹೊಡೀತಿದ್ದೆ – ಯತ್ನಾಳ್ ಯಾರಿಗೆ ಹೇಳಿದ್ರು ಗೊತ್ತಾ?

ವಿಜಯೇಂದ್ರ ಈ ಸರ್ಕಾರದಲ್ಲೂ ಸ್ವಲ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿಯಲ್ಲಿನ ಕೆಲ ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ತಡೆದುಕೊಳ್ಳಿ, ಎಲ್ಲವನ್ನೂ ಹೇಳುವೆ ಎಂದು ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ

ಬಸನಗೌಡ ಪಾಟೀಲ್ ಯತ್ನಾಳ

  • Share this:
ಹುಬ್ಬಳ್ಳಿ: ಖಾತೆ ಕ್ಯಾತೆ, ಸಂಪುಟ ಅತೃಪ್ತಿಯ ಹಿಂದೆ ಸೂತ್ರದಾರರಿದ್ದು, ಚಿವುಟುವವರೂ ಅವರೇ, ತಟ್ಟುವವರೂ ಅವರೇ ಆಗಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರು ಲಾಬಿ ನಡೆಸಿರುವ ವಿಚಾರಕ್ಕೆ ಕಿಡಿಕಾರಿದರು. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುವುದು ಸರಿಯಲ್ಲ. ಸೂತ್ರದಾರರೊಬ್ಬರು ಮಗು ಚೂಟಿ, ಅವರೇ ತೊಟ್ಟಿಲು ತೂಗುತ್ತಿದ್ದಾರೆ. ಈಗ ಸೂತ್ರಧಾರರ ಶಿಷ್ಯರೇ ಜಗಳ ತೆಗೆಯುತ್ತಿದ್ದಾರೆ. ನನಗೇನಾದ್ರೂ ಚಿವುಟಿದ್ರೆ ಕಪಾಳಕ್ಕೇ ಹೊಡೀತಿದ್ದೆ ಎಂದಿದ್ದಾರೆ. ಪಾಪ ಸುಮ್ಮನೆ ಜಾರಕಿಹೊಳಿಯವರನ್ನ ಸಿಗಸಿ ಕಥೆ ಮುಗಿಸಿ ಬಿಟ್ಟರು ಎಂದೂ ಯತ್ನಾಳ್ ಮರುಕ ವ್ಯಕ್ತಪಡಿಸಿದ್ದಾರೆ.

ನಾನು ಜೀರೋ ಇಂದ ಹೀರೋ ಆದವನು. ಹಿಂದೆ ಜೀರೋ ಆಗಿ ಈಗ ಮತ್ತೆ ಹೀರೋ ಆಗಿದ್ದೇನೆ. ನನಗೆ ಸಮಯ ಬಂದಾಗ ಏನೇನು ಆಗಬೇಕೋ ಅದು ಆಗ್ತೇನೆ. ಜಗದೀಶ್ ಶೆಟ್ಟರ್ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ತ್ಯಾಗಕ್ಕೆ ಅಭಿನಂದನೆ ಸಲ್ಲಿಸುವೆ. ಶೆಟ್ಟರ್ ತ್ಯಾಗದಿಂದ ಮತ್ತೊಬ್ಬರು ಮಂತ್ರಿಯಾಗಿದ್ದಾರೆ. ನಮ್ಮನ್ನ ಮಂತ್ರಿನೂ ಮಾಡಲಿಲ್ಲ. ಮಂತ್ರಿ ಮಾಡದಿದ್ದರೂ ದುಃಖ ಇಲ್ಲ. ಬೆಲ್ಲದ ಸಿಎಂ‌ ಆಗುವ ಕನಸು ಕಂಡರು. ಬೆಲ್ಲದ್ ಹೆಗಲ ಮೇಲೆ ಯಾರೋ ಬಂದೂಕು ಇಟ್ಟರು ಕೆಲವರು ಬದನಿಗೂಟನೂ ಇಡ್ತಾರೆ. ನನಗೆ ಚೂಟಿದ್ರೆ ನಾನು ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ನನಗೆ ಅನ್ಯಾಯ ಆಗಿಲ್ಲ. ಬಿಎಸ್ ವೈ ವಿರುದ್ದ ನಾನು ಮಾತನಾಡಿದಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ ಅನ್ನಬೇಡಿ. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿಎಸ್​ವೈ ಸಿಎಂ ಸ್ಥಾನ ಕಳೆದುಕೊಂಡರು ಎಂದು ಹೇಳಿದ್ದಾರೆ.

ವಿಜಯೇಂದ್ರ ಈ ಸರ್ಕಾರದಲ್ಲಿ ಇನ್ನೂ ಸ್ವಲ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿಯಲ್ಲಿನ ಕೆಲ ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ತಡೆದುಕೊಳ್ಳಿ, ಎಲ್ಲವನ್ನೂ ಹೇಳುವೆ ಎಂದು ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದ್ದಾರೆ.

ಇದನ್ನೂ ಓದಿ: ವಿಶ್ವದರ್ಜೆಯ ತಾಂತ್ರಿಕ ಪಠ್ಯಕ್ರಮ; ಕ್ಲೌಡ್ ಕಂಪ್ಯೂಟಿಂಗ್ ಸೇರಿ 8 ಹೊಸ ಡಿಪ್ಲೊಮಾ ಕೋರ್ಸ್​ಗಳಿಗೆ ಚಾಲನೆ

ನಾನು ಕಾಡಿ ಬೇಡಿ ಮಂತ್ರಿ ಆಗುವುದಿಲ್ಲ. ವಿಜಯಪುರದಲ್ಲಿ ಟೈರ್ ಸುಟ್ಟು ಮಂತ್ರಿ ಆಗುವ ಅವಶ್ಯಕತೆ ನನಗಿಲ್ಲ. ಸಚಿವ ಸ್ಥಾನಕ್ಕಾಗಿ ಕೆಳ ಮಟ್ಟದ ರಾಜಕಾರಣ ನಾನು ಮಾಡುವುದಿಲ್ಲ. ನಾನು ಮಂತ್ರಿ ಏಕೆ ಆಗಲಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಮುಖ್ಯಮಂತ್ರಿ ಬದಲಾವಣೆ ಆಗಬೇಕೆಂಬೋದು ನಮ್ಮ ಬೇಡಿಕೆ ಇತ್ತು. ಹೈಕಮಾಂಡ್ ಈಗಾಗಲೇ ಬದಲಾವಣೆ ಮಾಡಿದೆ. ಬೊಮ್ಮಯಿಯವರಿಗೆ ಮೂರ್ನಾಲ್ಕು ತಿಂಗಳು ಸಮಯ ಕೋಡೋಬೇಕು. ಅವರು ಯಡಿಯೂರಪ್ಪನವರ ನೆರಳಿನಿಂದ ಹೊರಗಡೆ ಬರ್ತಾರೆ. ಸಿಎಮ್ ಬೊಮ್ಮಾಯಿ ಅವರು ಬಹಳ ಜಾಣರಿದ್ದಾರೆ, ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್ ಆಗುವುದಿಲ್ಲ ಎಂದು ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಹಿಂದೂ ವಿರೋಧಿಗಳಾದ್ರೆ, ನಾನು ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ಹೋಗಬೇಕು ಎಂಬುದು ಕಾಲ ನಿರ್ಣಯ ಮಾಡುತ್ತದೆ. ಪಕ್ಷದ ಹೈಕಮಾಂಡ್ ಯಾರ ನೇತೃತ್ವ ಕೊಡುತ್ತೆ, ಅವರ ಸಮ್ಮುಖದಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ. ಈ ಹಿಂದಿನ ಮೂರು ಉಪ ಮುಖ್ಯಮಂತ್ರಿಗಳು ಮುಂದಿನ ಚುನಾವಣೆ ನಮ್ಮ ನೇತೃತ್ವದಲ್ಲಿ ನಡೆಯುತ್ತವೆ ಎಂದು ಹೇಳಿದ್ದರು. ಅವರನ್ನ ಉಪ ಮುಖ್ಯಮಂತ್ರಿ ಸ್ಥಾನದಿಂದ ಖಾಲಿ ಮಾಡಿದ್ರು, ಏನ್ ಮಾಡಲಿಕ್ಕೆ ಆಗುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: