Baby Boy: 5 ಸಾವಿರ ರೂಗೆ ವಿಜಯಪುರದಲ್ಲಿ ಮಾರಾಟವಾಗಿದ್ದ ಮಗು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಪತ್ತೆ

ತಾಯಿಯಿಂದ ದೂರಾವಾಗಿದ್ದ ಮಗು ಅನಾರೋಗ್ಯಕ್ಕೆ ಒಳಗಾಗಿದೆ, ಈ ಹಿನ್ನಲೆ ಮಗುವಿಗೆ ಚಿಕಿತ್ಸೆಗಾಗಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಮಗು

ಮಗು

  • Share this:
    ಹುಬ್ಬಳ್ಳಿ (ಸೆ. 22): ವಿಜಯಪುರ ಜಿಲ್ಲೆಯಲ್ಲಿ ಹೆತ್ತ ತಾಯಿಯೇ  ಮಗುವನ್ನು ಸಾಕಲು ಶಕ್ತಿ ಇಲ್ಲದ ಕಾರಣಕ್ಕೆ ಐದು ಸಾವಿರಕ್ಕೆ ಮಾರಾಟವಾಗಿದ್ದ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತು. ಮಾರಾಟವಾಗಿದ್ದ  ಗಂಡು ಮಗು ಕಡೆಗೂ ಹುಬ್ಬಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ.  ತಾಯಿಯಿಂದ ದೂರಾವಾಗಿದ್ದ ಮಗು ಅನಾರೋಗ್ಯಕ್ಕೆ ಒಳಗಾಗಿದೆ, ಈ ಹಿನ್ನಲೆ ಮಗುವಿಗೆ ಚಿಕಿತ್ಸೆಗಾಗಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗು ವಿಜಯಪುರದಲ್ಲಿ ನಾಪತ್ತೆಯಾಗಿದ್ದ ಮಗು ಎಂಬ ಅಂಶ ಬೆಳಕಿಗೆ ಬಂದಿದೆ. ಮಗುವನ್ನು ಖರೀದಿಸಿದವರೇ ಕಿಮ್ಸ್ ನಲ್ಲಿ ದಾಖಲು ಮಾಡಿದ್ದಾರೆ. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿ ಖರೀದಿ ಮಾಡಿದ್ದರು.  ಮಗು ಖರೀದಿಸಿದ್ದ ಆಟೋ ಡ್ರೈವರ್ ಮೇಲೂ ಪ್ರಕರಣ ದಾಖಲಿಸಲಾಗಿದೆ. 

    ಏನಿದು ಘಟನೆ

    ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಎಂಟು ದಿನದ ಗಂಡು ಮಗುವನ್ನು ಸಾಕಲಾಗದಂತಹ ತಾಯಿಯೇ ತನ್ನ ಕರುಳ ಕುಡಿಯನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಅಗಸ್ಟ್ 19ಕ್ಕೆ ಹೆರಿಗೆಯಾಗಿದ್ದ ಮಗುವನ್ನು 26ಕ್ಕೆ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಮಾರಾಟ ಮಾಡಲಾಗಿತ್ತು. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಕಾಂಬಳೆ ಎಂಬ ಮಹಿಳೆ ತನ್ನ ಎಂಟು ದಿನದ ಗಂಡು ಮಗುವನ್ನು 5ಸಾವಿರ ರೂಗೆ ಮಾರಾಟ ಮಾಡಿದ್ದಳು. ಬಡತನದಲ್ಲಿರುವ ರೇಣುಕಾ ಕಾಂಬಳೆಯ ಪತಿ ದೂರವಾಗಿದ್ದು, ಈಗಾಗಲೇ ಒಂದು ಹೆಣ್ಣು ಮಗು ಇರುವುದರಿಂದ ಎರಡನೇ ಮಗು ಸಾಕುವುದು ಕಷ್ಟ ಎಂಬ ಕಾರಣಕ್ಕೆ ಮಗುವನ್ನೇ ತಾಯಿ ರೇಣುಕಾ ಮಾರಾಟ ಮಾಡಿದ್ದಳಂತೆ.

    ಇದನ್ನು ಓದಿ: ಕ್ಯಾಬ್​ ಚಾಲಕನ ವಿರುದ್ಧ ಅತ್ಯಾಚಾರ ಆರೋಪ; ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

    ಈ ಕುರಿತು ಸೆಪ್ಟೆಂಬರ್ 9ರಂದು ವಿಜಯಪುರ ಮಕ್ಕಳ ಸಹಾಯವಾಣಿಗೆ ಕರೆ ಬಂದ ಹಿನ್ನೆಲೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ತನಿಖೆ ನಡೆಸಿದ್ದರು. ಆಸ್ಪತ್ರೆಯ ನರ್ಸ್ ಕಸ್ತೂರಿ ಹಾಗೂ ಆಕೆಯ ಪತಿ ಮಂಜುನಾಥ ಪಡಸಲಗಿ ಎಂಬುವವರ ಮದ್ಯಸ್ಥಿಕೆಯಲ್ಲಿ ಮಗು ಮಾರಾಟ ಆಗಿರುವುದು ಖಚಿತವಾದ ಮೇಲೆ ಮಹಿಳಾ ಠಾಣೆಯಲ್ಲಿ 12ರಂದು ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಮಾರಾಟವಾಗಿದ್ದ ಮಗುವನ್ನು ಪತ್ತೆ ಹಚ್ಚಿದ್ದಾರೆ. ಅವಧಿ ಪೂರ್ವ ಜನಿಸಿದ್ದ ಮಗುವಿಗೆ ಅನಾರೋಗ್ಯ ಸಮಸ್ಯೆ ಎದುರಾದಾಗ ಅದನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ದೇವರ ಹಿಪ್ಪರಗಿಯ ಓರ್ವ ಆಟೋ ಡ್ರೈವರ್ ಕೈವಾಡ

    ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಾರಾಟವಾಗಿದ್ದ ಮಗುವೇನೋ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. ಆದರೆ ಇದೆಲ್ಲ ಯಾರಿಂದ ಆಗಿದ್ದು ಎಂಬುದರ ಬಗ್ಗೆಯೂ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ದೇವರ ಹಿಪ್ಪರಗಿಯ ಓರ್ವ ಆಟೋ ಡ್ರೈವರ್ ಕೈವಾಡ ಇರುವುದು ಗೊತ್ತಾಗಿದೆ. ದೇವರ ಹಿಪ್ಪರಗಿಯ ಆಟೋ ಡ್ರೈವರ್ ಸವದತ್ತಿಯಲ್ಲಿರುವ ತಮ್ಮ ಸಂಭಂಧಿಕ ದಂಪತಿಗಳಿಗೆ ಮಗು ಇಲ್ಲದ್ದರಿಂದ ಈ ಮಗುವನ್ನು ಮದ್ಯಸ್ಥಿಕೆ ವಹಿಸಿ ಮಾರಾಟ ಮಾಡಿಸಿದ್ದ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ನರ್ಸ್ ತಪ್ಪಿತಸ್ಥೆ ಅಂತ ಇದ್ರೂ ಸಹ ಇದರಲ್ಲಿ ಆಕೆಯ ಕೈವಾಡ ಇಲ್ಲ ಎನ್ನಲಾಗುತ್ತಿದೆ. ಈ ಕುರಿತು ಮತ್ತಷ್ಟು ತನಿಖೆ ಚುರುಕುಗೊಳಿಸಿರುವ ಪೊಲೀಸರು ಆಟೋ ಡ್ರೈವರ್ ಹಾಗೂ ಮಗುವಿನ ತಾಯಿ ಮೇಲೂ ಪ್ರಕರಣ ದಾಖಲಿಸಲಾಗಿದೆ.

    ಹುಟ್ಟಿದ ಎಂಟೇ ದಿನಕ್ಕೆ ತಾಯಿಯಿಂದ ಅಗಲಿದ್ದ ಮಗು ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದೆ. ಇತ್ತ ಸಾಕಲಾಗದೆ ಕರುಳ ಕುಡಿಯನ್ನೇ ಮಾರಿದ್ದ ತಾಯಿಯೂ ಸಹ ತಪ್ಪಿತಸ್ಥೆಯಾಗಿದ್ದಾಳೆ.

    (ವರದಿ. ಗುರುರಾಜ್ ಗದ್ದನಕೇರಿ)
    Published by:Seema R
    First published: