ಹುಬ್ಬಳ್ಳಿ; ಕರ್ನಾಟಕ ಸೇರಿ ಇಡೀ ದೇಶ ಮಾರಕ ಕೊರೋನಾ ಸೋಂಕಿನಿಂದ ತತ್ತರಿಸಿದೆ. ಕೋವಿಡ್ ಎರಡನೇ ಅಲೆ ಹೊಡೆತಕ್ಕೆ ಎಲ್ಲಾ ರಂಗಗಳು ಭಾರಿ ನಷ್ಟ ಅನುಭವಿಸುತ್ತಿವೆ. ಅದರಲ್ಲೂ ದಿನದ ಕೂಲಿ ಮಾಡಿ ಜೀವನ ಸಾಗಿಸುವ ಕೂಲಿ ಕಾರ್ಮಿಕರು, ಆಟೋ ಹಾಗೂ ಕ್ಯಾಬ್ ಚಾಲಕರ ಕಷ್ಟ ಹೇಳತೀರದಾಗಿದೆ. ಹೌದು, ಕೊರೋನಾ ಸೋಂಕು ದಿನೇ ದಿನೇ ಉಲ್ಬಣಗೊಳ್ಳುತ್ತಿರುವುದರಿಂದ ಸೋಂಕು ತಡೆಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿದೆ. ಜನತಾ ಕರ್ಫ್ಯೂನಿಂದಾಗಿ ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲನೆ ಅಲೆಯ ವೇಳೆ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಚಾಲಕರು ತೀವ್ರ ತೊಂದರೆ ಅನುಭವಿಸಿದ್ದರು. ಎರಡು ತಿಂಗಳು ಕೆಲಸ ಕಾರ್ಯವಿಲ್ಲದೆ ಮನೆ ನಿರ್ವಹಣೆ ಮಾಡಲು ಕಷ್ಟ ಅನುಭವಿಸಿದ್ದರು. ಇನ್ನೇನು ಎಲ್ಲಾ ಸುಧಾರಿಸಿತು ಎನ್ನುವಷ್ಟರಲ್ಲಿ ಎರಡನೇ ಅಲೆ ವಕ್ಕರಿಸಿದ್ದು, ಎರಡನೆಯ ಅಲೆಯ ಅಬ್ಬರಕ್ಕೆ ಬಡ ಮತ್ತು ಮಧ್ಯಮ ವರ್ಗದ ರಿಕ್ಷಾ, ಕ್ಯಾಬ್ ಚಾಲಕರಿಗೆ ದಿಕ್ಕೆ ತೋಚದಂತಾಗಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿಗಳು ರಿಕ್ಷಾ ಹಾಗೂ ಕ್ಯಾಬ್ ಚಾಲಕರಿಗೆ 5,000 ರೂ. ಘೋಷಣೆ ಮಾಡಿದ್ದರೂ ಕೆಲವರಿಗೆ ಮಾತ್ರ ಆ ಪರಿಹಾರ ಸಿಕ್ಕಿದೆ. ಈ ಬಾರಿ ಕಳೆದ ಬಾರಿಗಿಂತಲೂ ರಿಕ್ಷಾ ಚಾಲಕರ ಬದುಕು ಕಂಗೆಟ್ಟಿದ್ದು, ಸರ್ಕಾರ ನೆರವು ನೀಡಬೇಕು ಎಂದು ಆಟೋ ಚಾಲಕರು ಆಗ್ರಹಿಸುತ್ತಿದ್ದಾರೆ. ಹೇಗೋ ಪ್ರತಿದಿನ ಆಟೋ, ಕ್ಯಾಬ್ ಓಡಿಸಿ, ಸಾಲದ ಬಡ್ಡಿ ಹಾಗೂ ಜೀವನ ನಿರ್ವಹಣೆ ಮಾಡುತ್ತಿದ್ದರಿಗೆ ಕೊರೋನಾ ಎರಡನೇ ಅಲೆ ತಡೆಯೊಡ್ಡಿದೆ. ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನು ಓದಿ: ವೈದ್ಯಕೀಯ ವಿದ್ಯಾರ್ಥಿಗಳು ಟೆಲಿ ಕನ್ಸಲ್ಟೆನ್ಸಿಗೆ ಗೈರಾದರೆ ಆಯಾ ಕಾಲೇಜು ಡೀನ್ಗಳೇ ಹೊಣೆ; ಡಿಸಿಎಂ ಅಶ್ವಥ್ ನಾರಾಯಣ ಎಚ್ಚರಿಕೆ
ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುಮಾರು ಐದಾರು ಸಾವಿರ ಆಟೋಗಳಿವೆ. ಇವರ ಜೀವನ ನಿರ್ವಹಣೆ ಸಂಪೂರ್ಣ ನಿಂತು ಹೋಗಿದೆ. ರಾಜ್ಯ ಸರ್ಕಾರ ಬೆಳಗ್ಗೆ 6 ರಿಂದ 12 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದೆ. ಆದರೆ ಆ ವೇಳೆ ಆಟೋ ಚಾಲನೆ ಮಾಡಿ ಜೀವನ ನಡೆಸಲು ಪೊಲೀಸರು ಬಿಡುತ್ತಿಲ್ಲ. ಒಂದು ಕಡೆ ವಿಮಾನಗಳ ಹಾರಾಟ ನಡೆದಿದೆ. ಮತ್ತೊಂದು ಕಡೆ ರೈಲುಗಳೂ ಸಂಚರಿಸುತ್ತಿವೆ. ಆದರೆ ಯಾರಾದರೂ ಆಟೋ ರಸ್ತೆಗೆ ಇಳಿಸಿದರೆ ಆಟೋ ಸೀಜ್ ಮಾಡುತ್ತಿದ್ದಾರೆ. ದಂಡ ಹಾಕಿ ಕೇಸ್ ಮಾಡುತ್ತಿದ್ದಾರೆ. ಹೀಗಾಗಿ ಜೀವನ ನಡೆಸುವುದು ಹೇಗೆ ಎಂದು ಆಟೋ ಚಾಲಕರು ಪ್ರಶ್ನಿಸುತ್ತಿದ್ದಾರೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ