ಧಾರವಾಡ: ರೈತರಿಗೆ ಅತಿಯಾಗಿ ಮಳೆ ಬಂದರೂ ಕಷ್ಟ, ಮಳೆ ಬರದೇ ಇದ್ದರೂ ಕಷ್ಟ. ನಷ್ಟ ಆಗೋದು ಮಾತ್ರ ರೈತರ ಬೆಳೆಗಳಿಗೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸಹಾಯ ಧನ ನೀಡುವ ಉದ್ದೇಶದಿಂದಲೇ ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮೆ ಯೋಜನೆ ಜಾರಿಗೆ ತರಲಾಗಿದೆ. ರೈತರು ತಮ್ಮ ಜಮೀನನಲ್ಲಿನ ಬೆಳೆಯ ದಾಖಲೆಗಳನ್ನು ನೀಡಿ, ವಿಮೆಯ ಕಂತು ತುಂಬಿ ಈ ಯೋಜನೆಗೆ ಫಲಾನುಭವಿ ಆಗೋದು ಸಾಮಾನ್ಯ. ಆದರೆ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದ ಜಮೀನು ತಮ್ಮದೇ ಎಂದು ಹಾಗೂ ಈ ಜಮೀನಿನಲ್ಲಿ ಬೆಳೆ ಇದೆ ಎಂದು ಸುಳ್ಳು ದಾಖಲೆ ತೋರಿಸಿ, ವಿಮೆಯ ಕಂತನ್ನೂ ಕಟ್ಟಿ, ಬೆಳೆ ವಿಮೆ ಪರಿಹಾರವನ್ನೂ ಪಡೆದುಕೊಳ್ಳಲು ಕೆಲವರು ಮುಂದಾಗಿದ್ದಾರೆ. ಈ ವಿಮೆ ಗೋಲ್ಮಾಲ್ ಮಾಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇದು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಬಳಿ ಇರೋ ಸರ್ಕಾರದ ಗೋಮಾಳ ಜಾಗ. ಗ್ರಾಮದ ಕೆಲವರು ಈ ಗೋಮಾಳ ಜಾಗದಲ್ಲಿ ಭತ್ತದ ಬೆಳೆ ಇದೆ ಎಂದು ಸರಕಾರವನ್ನೇ ನಂಬಿಸಿ, ಬೆಳೆ ವಿಮೆ ಕಂತು ತುಂಬಿ, ಬೆಳೆ ಹಾನಿ ಪರಿಹಾರವನ್ನು ಪಡೆದುಕೊಂಡಿದ್ದಾರೆ. ಗ್ರಾಮದ ಸರ್ವೆ ನಂಬರ್ 48 ರಲ್ಲಿ ಇರೋದು ಸರ್ಕಾರದ ಗೋಮಾಳ ಜಾಗ. ಸಂಪೂರ್ಣವಾಗಿ ಇದು ಸರ್ಕಾರದ ಅಧೀನದಲ್ಲೇ ಇರೋ ಪ್ರದೇಶ. ಆದರೆ ಇದೇ ಸರ್ವೇ ನಂಬರ್ ನಲ್ಲಿ ತಮ್ಮ ಜಮೀನಿದ್ದು, ಅದರಲ್ಲಿ ಭತ್ತದ ಬೆಳೆ ಬೆಳೆದಿದ್ದೇವೆ ಅಂತಾ ಜಿಪಿಎಸ್ ಮೂಲಕ ತೋರಿಸಿ, ಒಟ್ಟು 13 ಜನರು ಒಟ್ಟು 61 ಎಕರೆ ಜಮೀನಿನ ಮೇಲೆ ಬೆಳೆ ವಿಮೆಯನ್ನು ತುಂಬಿದ್ದಾರೆ. ಕಳೆದ ಎರಡು ವರ್ಷಗಳಿಂದ ಹೀಗೆ ಬೆಳೆ ಪರಿಹಾರ ಪಡೆದುಕೊಳ್ಳುತ್ತಲೇ ಬಂದಿದ್ದಾರೆ. ಆದ್ರೆ ಪರಿಹಾರ ಪಡೆಯುತ್ತಿರೋ ಯಾರೂ ಕೂಡ ರೈತರಲ್ಲ. ಇಲ್ಲಿ ಅವರ ಜಮೀನು ಸಹ ಇಲ್ಲ. ಆದರೆ ಕಂಪ್ಯೂಟರ್ ಕೇಂದ್ರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರವನ್ನೇ ಯಾಮಾರಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮ ಕಟ್ಟುನಿಟ್ಟು ಜಾರಿಗೆ ಬಿಬಿಎಂಪಿ ಕಮಿಷನರ್ ಸೂಚನೆ
ಸರ್ಕಾರದ ಗೋಮಾಳ ಜಾಗವನ್ನು ತಮ್ಮ ಜಮೀನೆಂದು ನಕಲಿ ದಾಖಲೆ ಮೂಲಕ ವಿಮೆ ಪಡೆಯಲು ಮುಂದಾಗಿರೊ ಕುರಿತು ಆರ್.ಟಿ.ಐ. ಕಾರ್ಯಕರ್ತ ನಾಗರಾಜ ಅವರು ಮಾಹಿತಿ ಕಲೆಹಾಕಿ ಧಾರವಾಡ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿದ ನಾಗರಾಜ ಈ ಪ್ರಕರಣ ಕುರಿತು ಸಮಗ್ರ ತನಿಖೆ ಆಗಿ ತಪ್ಪಿತಸ್ಥರು ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ವಿಮೆಹಣ ಹಿಂಪಡೆಯಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಈ ಸಂಬಂಧ ಉಪವಿಭಾಗಾಧಿಕಾರಿ ಕಚೇರಿಗೆ ದೂರು ಬರುತ್ತಿದ್ದಂತೆ ತಕ್ಷಣವೇ ಅಧಿಕಾರಿಗಳು ತನಿಖೆಗಿಳಿದಿದ್ದಾರೆ. ಇಡೀ ಪ್ರಕರಣದ ಕೇಂದ್ರ ಬಿಂದು ಆಗಿರೋ ಸಿಎನ್ಸಿ ಕೇಂದ್ರಕ್ಕೆ ದಾಳಿ ಮಾಡಿ, ಕಂಪ್ಯೂಟರ್ ಅನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಈ ಕೇಂದ್ರ ಮಹೇಶ ಹೆಬ್ಬಾಳಗೆ ಸೇರಿದ್ದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ಮೇಲೆ ಎಫ್ಐಆರ್ ಸಹ ದಾಖಲಿಸುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದಾರೆ. ಇತ್ತ ತಹಸೀಲ್ದಾರ್ ಅವರಿಗೂ ಕೂಡ ತನಿಖೆ ಮಾಡುವಂತೆ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಸೂಚಿಸಿದ್ದಾರೆ.
ಇದನ್ನೂ ಓದಿ: Guidelines for PU Class: ಸೋಮವಾರದಿಂದ ಪಿಯು ತರಗತಿಗಳು ಶುರು: ಈ ಎಲ್ಲಾ ನಿಯಮಗಳನ್ನು ಪಾಲಿಸಲೇಬೇಕು
ಒಟ್ಟಾರೆಯಾಗಿ ಸರ್ಕಾರ ರೈತರ ಅನುಕೂಲವಾಗಲೆಂದು ಬೆಳೆ ವಿಮೆ ಯೋಜನೆ ಜಾರಿಗೆ ತಂದರೆ, ಅದರ ಮೂಲಕವೇ ಇಂಥವರು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂಥವರ ಮೇಲೆ ಕಾನೂನು ಕ್ರಮ ಜರುಗಿಸಿ, ಅಕ್ರಮಗಳನ್ನು ತಡೆಯೋ ಕಡೆಗೆ ಅಧಿಕಾರಿಗಳು ಗಮನ ಹರಿಸಬೇಕಿದೆ.
ವರದಿ: ಮಂಜುನಾಥ ಯಡಳ್ಳಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ