CM ಸಭೆಯಿಂದ ತೆರಳುತ್ತಿದ್ದಂತೆ ಬಿಜೆಪಿ MLA & MLC ಮಧ್ಯೆ ಗಲಾಟೆ; ಮೂಕ ಪ್ರೇಕ್ಷಕರಾಗಿ ನಿಂತ ಶೆಟ್ಟರ್

Hubliಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕರ ಅಸಮಾಧಾನ ಸ್ಫೋಟಗೊಂಡಿದೆ. MLC ಶಂಕರ್ ಹಾಗೂ MLA ಅರುಣಕುಮಾರ್ ನಡುವಿನ ಜಗಳ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋಗಿದ್ದು, ಗಲಾಟೆ ವೇಳೆ ಮಾಜಿ ಸಿಎಂ Jagadish Shettar ಮೂಕ ಪ್ರೇಕ್ಷಕರಂತೆ ನಿಂತಿದ್ದರು. ನಂತರ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸಾರಿಸೋ ಪ್ರಯತ್ನ ಮಾಡಿದರು.

ಶೆಟ್ಟರ್​ ಎದುರೇ ಗಲಾಟೆ

ಶೆಟ್ಟರ್​ ಎದುರೇ ಗಲಾಟೆ

  • Share this:
ಹುಬ್ಬಳ್ಳಿ:  ಬಿಜೆಪಿಯಲ್ಲಿ(BJP) ಎಲ್ಲವೂ  ಸರಿ ಇಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ವಿಧಾನ ಪರಿಷತ್ ಚುನಾವಣೆ  (MLC Election) ಹಿನ್ನೆಲೆಯಲ್ಲಿ ಗೆಲುವಿನ ರಣತಂತ್ರದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿಯೇ ಬಿಜೆಪಿ ಮುಖಂಡರು ಕೈ ಕೈ ಮಿಲಾಯಿಸಲು ಮುಂದಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಎಲ್ಲ ಮುಖಂಡರ ಜೊತೆ ಸಮಾಲೋಚನೆ ಮಾಡಿದ ಸಿಎಂ ಖಾಸಗಿ ಹೋಟೆಲ್ ನಿಂದ ತೆರಳುತ್ತಿದ್ದಂತೆಯೇ ನಾಯಕರ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಭೆಯಲ್ಲಿ ಟೇಬಲ್ ಗುದ್ದಿ ಮಾತನಾಡಿದ್ದ ನಾಯಕರು, ಹೊರಗೆ ಬಂದು ಕೈ ಕೈ ಮಿಲಾಯಿಸಿ ಪರಸ್ಪರ ಹಲ್ಲೆಗೆ ಮುಂದಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚುನಾವಣಾ ಉಸ್ತುವಾರಿ ಹಂಚಿಕೆ ವಿಚಾರವಾಗಿ ಗಲಾಟೆ: ಬಿಜೆಪಿ ಶಾಸಕ ಮತ್ತು ಎಂಎಲ್ ಸಿ ಗಳ ನಡುವೆ ಗಲಾಟೆಯಾಗಿದೆ. ರಾಣೆಬೆನ್ನೂರು ಶಾಸಕ ಅರುಣಕುಮಾರ ಹಾಗೂ ಎಂಎಲ್ ಸಿ ಆರ್.ಶಂಕರ್ ನಡುವೆ ಗಲಾಟೆ  ನಡೆದಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಗಲಾಟೆ ನಡೆದಿದೆ. ಚುನಾವಣೆಯ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಶುರುವಾದ ಗಲಾಟೆ  ಸ್ವರೂಪ ಪಡೆದುಕೊಂಡಿದೆ.

ಶೆಟ್ಟರ್​​ ಎದರೇ ಗಲಾಟೆ: ವಿಚಿತ್ರವೆಂದರೆ ಮಾಜಿ‌ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿಯೇ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದ ನಂತರ  ಶಾಸಕ ಅರುಣಕುಮಾರ್ ರಾಜೀನಾಮೆಗೆ ಮುಂದಾಗಿದ್ದಾರೆ. ನಾನು ರಾಜೀನಾಮೆ ನೀಡೋದಾಗಿ ಎಚ್ಚರಿಸಿದ್ದಾರೆ. ಶಾಸಕ ಅರುಣಕುಮಾರ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಸಮಾಧಾನ ಪಡಿಸಿದರು. ಉಭಯ ಶಾಸಕರ ಗಲಾಟೆ ತಾರಕಕ್ಕೇರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಮಾಡಿ ಹೋದ ನಂತರ ಘಟನೆ ನಡೆದಿದೆ.

ರಾಜೀನಾಮೆ ಹೈಡ್ರಾಮಾ: ಒಂದು ಕಡೆ ಅರುಣಕುಮಾರ್ ರನ್ನು ಹಾವೇರಿ ನಾಯಕರು ಸಮಾಧಾನಪಡಿಸುತ್ತಿದ್ದರೆ, ಮತ್ತೊಂದು ಕಡೆ ಆರ್.ಶಂಕರ್ ಆಕ್ರೋಶ ಭುಗಿಲು ಮುಟ್ಟುವಂತೆ ಮಾಡಿತ್ತು. ನಾನೂ ಸಹ ರಾಣೆಬೆನ್ನೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ನಾನು ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲದೇ ಇದ್ದುದರಿಂದ ಅರುಣಕುಮಾರ್ ಗೆ ಅವಕಾಶ ಸಿಕ್ಕಿದೆ. ಆದರೆ ಈಗ ನನ್ನನ್ನು ಎಲ್ಲ ವಿಷಯದಲ್ಲಿಯೂ ಕಡೆಗಣಿಸಲಾಗುತ್ತಿದೆ ಎಂದು ಶಂಕರ್ ಟೇಬಲ್ ಗುದ್ದಿ ಕಿಡಿ ಕಾರಿದ್ದಾರೆ. ಸಭೆಯಿಂದ ಅರ್ಧಕ್ಕೆ ಹೊರಟು ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಶಂಕರ್ ನಿರಾಕರಿಸಿದ್ದಾರೆ. ರಾಜೀನಾಮೆ ನೀಡ್ತಾನೆ ಅಂದಿರೋ ಅವನನ್ನೇ ಕೇಳಿ ಎಂದು ಅಮಾಧಾನದ ಮಾತುಗಳನ್ನಾಡುತ್ತಾ ಹೊರಟು ಹೋಗಿದ್ದಾನೆ. ಇನ್ನು ಶಾಸಕ ಅರುಣ ಕುಮಾರ್ ಮಾಧ್ಯಮದವರ ಕಣ್ಣಿಗೆ ಬೀಳದೆಯೇ ಹೋಟೆಲ್ ನ ಹಿಂಬಾಗಿಲಿನಿಂದ ಹೊರಟು ಹೋಗಿದ್ದಾರೆ.

ಕೈ ಕೈ ಮಿಲಾಯಿಸಿಯೇ ಇಲ್ಲವೆಂದ ಶೆಟ್ಟರ್
ವಿಧಾನ ಪರಿಷತ್ ಸದಸ್ಯ ಶಂಕರ್ ಹಾಗೂ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ನಡುವೆ ಕೈ ಕೈ ಮಿಲಾಯಿಸಿದ ಪ್ರಕರಣ ನಡೆದೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿ ಸಭೆಯಲ್ಲಿ ಯಾರೂ ಕೈ ಕೈ ಮಿಲಾಯಿಸಿಲ್ಲ, ಯಾವುದೇ ಗದ್ದಲ ನಡೆದಿಲ್ಲ. ರಾಣೆಬೆನ್ನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು ಬಿಸಿ ಬಿಸಿ ಚರ್ಚೆ ನಡೆಯಿತು.  ಹಾಗೆಂದು ಬಿಜೆಪಿ ಮುಖಂಡರಲ್ಲಿ ಯಾವುದೇ ಭಿನ್ನಮತವಿಲ್ಲ. ಶಂಕರ್ ಹಾಗೂ ಅರುಣ್ ಕುಮಾರ್ ನಡುವೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದರು.

ಮಾಜಿ ಸಿಎಂ ಸಮಜಾಯಿಷಿ: ವಿಧಾನ ಪರಿಷತ್ ಚುನಾವಣೆ ನಂತರ ಈ ಕುರಿತು ಚರ್ಚಿಸಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಗೆಹರಿಸಲಾಗುವುದು ಎಂದರು. ಧಾರವಾಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸ್ಪರ್ಧಿಸಿಲ್ಲ. ಬಿಜೆಪಿ ಎಂದು ಹೇಳಿಕೊಂಡು ಒಬ್ಬ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಆದರೆ ಆತನ ಸ್ಪರ್ಧೆಯಿಂದ ಬಿಜೆಪಿ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ  ಎಂದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದಿದ್ದ ಸಭೆಯಲ್ಲಿ ಬಿಜೆಪಿ ನಾಯಕರ ಕಿತ್ತಾಟ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಆರ್ ಶಂಕರ್ ಹಾಗೂ ಅರುಣ್ ಕುಮಾರ್ ಕೈ ಕೈ ಮಿಲಾಯಿಸುವ ವೇಳೆ ಜಗದೀಶ್ ಶೆಟ್ಟರ್ ಎದುರಿಗೇ ಇದ್ದರೂ ಮೂಕ ಪ್ರೇಕ್ಷಕರಂತೆ ನಿಂತಿದ್ದರು.

ಇದನ್ನೂ ಓದಿ: ಹಾಸನದಲ್ಲಿ ಸಚಿವರ ಎದುರೇ ಕೈ-ಕೈ ಮಿಲಾಯಿಸಿದ BJP ಕಾರ್ಯಕರ್ತರು; K Gopalaiah ಕಕ್ಕಾಬಿಕ್ಕಿ!

ಒಟ್ಟಾರೆ ಶಂಕರ್ - ಅರುಣಕುಮಾರ್ ಕಿತ್ತಾಟ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಧಾರವಾಡ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಬಂಧ ಕರೆಯಲಾಗಿದ್ದ ಸಭೆ, ಇಬ್ಬರ ಅಸಮಾಧಾನದ ಭುಗಿಲಿಗೆ ವೇದಿಕೆಯಾಗಿ ಮಾರ್ಪಟ್ಟಿತು. ಸಭೆಗೆ ಬಂದಿದ್ದ ಕಾರ್ಯಕರ್ತರು, ತಮ್ಮ ತಮ್ಮ ನಾಯಕರ ಬೆಂಬಲಕ್ಕೆ ನಿಂತು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಶಿಸ್ತಿನ ಪಕ್ಷ ಎನ್ನೋ ಬಿಜೆಪಿಯಲ್ಲಿ ಅಶಿಸ್ತು ತಾರಕಕ್ಕೇರಿದೆ ಎನ್ನೋಕೆ ಹುಬ್ಬಳ್ಳಿ ಘಟನೆ ಸಾಕ್ಷಿಯಾಗಿದೆ.
Published by:Kavya V
First published: