Christian ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ಆರೋಪ; ಪ್ರತಿಭಟನೆ ಬಳಿಕ ಓರ್ವನ ಬಂಧನ

ಕ್ರೈಸ್ತ ಧರ್ಮಕ್ಕೆ ಮತಾಂತರದ ವಿಚಾರ ರಾಜ್ಯದ ವಿವಿಧೆಡೆ ಚರ್ಚೆಗೆ ಗ್ರಾಸವಾಗಿರೋ ಸಂದರ್ಭದಲ್ಲಿಯೇ ಹುಬ್ಬಳ್ಳಿಯಲ್ಲಿ ಒತ್ತಾಯಪೂರ್ವಕ ಮತಾಂತರದ ಸುದ್ದಿ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಡಿಸಿಪಿ ವರ್ಗಾವಣೆಗೂ ಪಟ್ಟು ಹಿಡಿಯಲಾಗಿದೆ.

ಹಿಂದೂ ಸಂಘಟನೆಗಳ ಪ್ರತಿಭಟನೆ

ಹಿಂದೂ ಸಂಘಟನೆಗಳ ಪ್ರತಿಭಟನೆ

  • Share this:
ಹುಬ್ಬಳ್ಳಿ:  ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿದ್ದಾನೆಂಬ ಆರೋಪ ಮೇಲೆ ಸೋಮು ಅವರಾಧಿ ಎಂಬಾತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮು ಅವರನ್ನು ವಶಕ್ಕೆ ಪಡೆದ ನವನಗರ ಎಪಿಎಂಸಿ ಠಾಣೆ ಪೊಲೀಸರು, ನಂತರ ದೂರು ನೀಡಿದ ವಿಶ್ವನಾಥ ಬೂದೂರು ಮತ್ತಿತರರನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪಂಚನಾಮೆ ನಡೆಸಿದ್ದಾರೆ. ನವನಗರದ ಚರ್ಚ್ ನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಚರ್ಚ್ ಗೆ ತೆರಳಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರ ನೇತೃತ್ವದಲ್ಲಿ ನವನಗರದ ಬಳಿ ರಸ್ತೆ ತಡೆ ನಡೆದಿತ್ತು.

ಹಿಂದೂಪರ ಸಂಘಟನೆಗಳ ಪಟ್ಟು

ಇದಾದ ಬಳಿಕ ತಡರಾತ್ರಿಯ ತನಕ ನವನಗರದ ಎಪಿಎಂಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಶಾಸಕ ಅರವಿಂದ ಬೆಲ್ಲದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ. ಅವರಾಧಿ ಬಂಧನಕ್ಕೆ ಪಟ್ಟು ಹಿಡಿಯಲಾಗಿತ್ತು. ಪೊಲೀಸ್ ಕಮಿಷನರ್ ಲಾಬೂ ರಾಮ್ ಕಾನೂನು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು. ಇದೀಗ ಸೋಮು ಅವರಾಧಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಮತ್ತೊಂದೆಡೆ ಡಿಸಿಪಿ ರಾಮರಾಜನ್ ವರ್ಗಾವಣೆಗೂ ಹಿಂದೂಪರ ಸಂಘಟನೆಗಳ ಮುಖಂಡರು ಪಟ್ಟು ಹಿಡಿದಿದ್ದಾರೆ.

ಡಿಸಿಪಿಗೆ ಅವಾಚ್ಯ ಶಬ್ದಗಳಿಂದ ನಿಂದನೆ..! 

ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆದಿದೆ ಎಂದು ಆರೋಪಿಸಿ ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆ ಎದರು ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುವ ವೇಳೆ ಪೊಲೀಸ್ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಪ್ರತಿಭಟನೆ ವೇಳೆ ಹಿಂದೂ ಮುಖಂಡನೋರ್ವ ನಾಲಿಗೆ ಹರಿ ಬಿಟ್ಟಿದ್ದಾನೆ. ಹುಬ್ಬಳ್ಳಿ-ಧಾರವಾಡ ಡಿಸಿಪಿ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಐಪಿಎಸ್ ಅಧಿಕಾರಿಯಾಗಿರೋ ರಾಮರಾಜನ್ ವಿರುದ್ದ ಅವಾಚ್ಯ ಪದ ಬಳಕೆ ಮಾಡಲಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ್ತಿರೋ ಆರೋಪಿಗಳ ಪರವಾಗಿ ಡಿಸಿಪಿ ಇದ್ದಾರೆಂದು ಆರೋಪಿಸಿದ್ದ ಹಿಂದೂಪರ ಸಂಘಟನೆ ಮುಖಂಡ, ಭಾಷಣ ಮಾಡೋ ಭರದಲ್ಲಿ ಸರ್ಕಾರಿ ಅಧಿಕಾರಿ ವಿರುದ್ದ ಅವಾಚ್ಯ ಪದ ಬಳಕೆ‌ ಮಾಡಿದ್ದಾನೆ. ಹರಾಮ್ ಕೋರ್ ಡಿಸಿಪಿ ಅಂತ ಬೈದು ಧಮ್ಕಿ ಹಾಕಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ! 

ಮತಾಂತರ ವಿರುದ್ಧ ಹಿಂದೂ ಸಂಘಟನೆಗಳು ಹುಬ್ಬಳ್ಳಿಯಲ್ಲಿ  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹುಬ್ಬಳ್ಳಿಯ ನವನಗರ ಬಳಿ ರಸ್ತೆ ತಡೆ ನಡೆಸಿದ್ದರು. ಪೊಲೀಸರ ಮನವೊಲಿಕೆಯ ನಂತರ ಪ್ರತಿಭಟನಾಕಾರರು ಎಪಿಎಸಿ ಪೊಲೀಸ್ ಠಾಣೆ ಬಳಿ ಬಂದ ಜಮಾಯಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ್ ಬೆಲ್ಲದ್ ಹಾಗೂ ಪೊಲೀಸ್ ಆಯುಕ್ತ ಲಾಭೂ ರಾಮ್ ಜೊತೆ ಸುದೀರ್ಘ ಮಾತುಕತೆ ನಡೆಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಬಲವಂತದ ಮತಾಂತರಕ್ಕೆ ಬ್ರೇಕ್ ಹಾಕಲು ಕ್ರಮ: ಶೀಘ್ರವೇ ಕ್ರೈಸ್ತ ಮಿಷನರಿಗಳ ಸಮೀಕ್ಷೆ

ಈ ವೇಳೆ ಮಾತನಾಡಿದ ಬೆಲ್ಲದ್, ಪ್ರಕರಣದ ಕುರಿತಂತೆ ಈಗಾಗಲೇ ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ. ಮತಾಂತರಿಯನ್ನ ಬಂಧಿಸುವ ಭರವಸೆ ನೀಡಿದ್ದಾರೆ. ಅವರ ಭರವಸೆಯಂತೆ ನಾವು ಪ್ರತಿಭಟನೆಯನ್ನ ಕೈಬಿಡುತ್ತಿದ್ದೇವೆ. ಈ ಪ್ರಕರಣದ ಕುರಿತಂತೆ ರಾಜ್ಯದ ನಾಯಕರ ಗಮನಕ್ಕೂ ತಂದಿದ್ದೇವೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಆದರೂ ಒಬ್ಬ ಮತಾಂಧ ಆರೋಪಿಯನ್ನ ಬಂಧಿಸುವಂತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದ್ದು ನಮ್ಮ ದೌರ್ಭಾಗ್ಯ ಎನ್ನುವ ಮೂಲಕ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವ್ಯವಸ್ಥೆಯ ವಿರುದ್ಧ ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದರು.
 
Published by:Kavya V
First published: