4 ಎಕರೆಯಲ್ಲಿ 55 ವೆರೈಟಿ ಬೆಳೆ ತೆಗೆದ ರೈತ, ಕೊರೊನಾ ಕಾಲದಲ್ಲೂ ಲಕ್ಷಾಂತರ ರೂಪಾಯಿ ಲಾಭ !

ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಇವರು ಕೆಲಸಕ್ಕೆ ರಾಜೀನಾಂಎ ಕೊಟ್ಟು ಸ್ವ ಆಸಕ್ತಿಯಿಂದ ಕೃಷಿಕರಾಗಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು 4 ಎಕರೆ ಭೂಮಿಯಲ್ಲಿ ಇಷ್ಟೆಲ್ಲಾ ಬಗೆಯ ತರಕಾರಿ-ಸೊಪ್ಪುಗಳನ್ನು ಬೆಳೆದು ಯಾರ ಕೈಕೆಳಗೂ ಕೆಲಸ ಮಾಡದೇ ತಮ್ಮ ವಹಿವಾಟಿಗೆ ತಾವೇ ಮಾಲೀಕರಾಗಿ ಲಕ್ಷಾಂತರ ರೂಪಾಯಿ ಆದಾಯ, ಸಾವಯವ ಪದ್ಧತಿಯಿಂದ ಉತ್ತಮ ಆರೋಗ್ಯ ಎರಡನ್ನೂ ಪಡೆಯುತ್ತಿದ್ದಾರೆ.

ಪ್ರಗತಿಪರ ರೈತ ದಂಪತಿ

ಪ್ರಗತಿಪರ ರೈತ ದಂಪತಿ

  • Share this:
ಹುಬ್ಬಳ್ಳಿ: ಕೊರೋನಾ ಮೊದಲನೆಯ ಅಲೆ... ಅದರ ನಂತ್ರ ಎರಡನೆಯ ಅಲೆ... ಮುಂದೆ ಮೂರನೇ ಅಲೆಯ ಆತಂಕ. ಇದೆಲ್ಲದರ ಹೊಡೆತಕ್ಕೆ ಎಲ್ಲ ವರ್ಗದ ಜನರೂ ಹೈರಾಣ. ಹಾಕಿದ ಬೆಳೆ ಸರಿಯಾಗಿ ಬಾರದೆ, ಬಂದ ಬೆಳೆಗೆ ಸಮರ್ಪಕ ಬೆಲೆ ಸಿಗದೆ ರೈತನೂ ಕೊರೋನಾ ದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ. ಇಂತಹ ಕೊರೋನಾ ಸಂಕಷ್ಟದಲ್ಲಿಯೂ ರೈತನೋರ್ವ ಸಾವಯವ ಕೃಷಿ ಪದ್ಧತಿಯಲ್ಲಿ ಕೇವಲ ನಾಲ್ಕು ಎಕರೆ ಪ್ರದೇಶದಲ್ಲಿ 55 ವೈವಿಧ್ಯಮಯ ತರಕಾರಿ ಬೆಳೆ ಬೆಳೆದಿದ್ದಾನೆ. 40 ದೇಶಿ ಮತ್ತು 15 ವಿದೇಶಿ ತಳಿ ತರಕಾರಿ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸೋ ಮೂಲಕ ಸೈ ಎನಿಸಿಕೊಂಡಿದ್ದಾನೆ. ಸಾವಯವ ಕೃಷಿಯಲ್ಲಿ ದಂಪತಿಗಳ ಅಪಾರ ಆಸಕ್ತಿಯ ಪರಿಣಾಮ ಅಲ್ಪ ಜಾಗದಲ್ಲಿ 55 ಕ್ಕೂ ಹೆಚ್ಚು ತರಕಾರಿ ಬೆಳೆ ನಳನಳಿಸುತ್ತಿವೆ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಹುದ್ದೆ ತೊರೆದು ಕೃಷಿಯಲ್ಲಿಯೂ ಸೈ ಎನಿಸಿಕೊಂಡಿರೋ ಪ್ರೊಫೆಸರ್, ಗ್ರಾಹಕರ ಮನೆ ಬಾಗಿಲಿಗೆ ಸಾವಯವ ತರಕಾರಿ ತಲುಪಿಸೋ ಕೆಲಸ ಮಾಡ್ತಿದಾರೆ.

ಕೋವಿಡ್ ಸಂದರ್ಭದಲ್ಲಿಯೂ ಕೃಷಿಯಿಂದ ಹೇಗೆ ಲಾಭ ಮಾಡಬಹುದೂ ಅಂತ ಈ ದಂಪತಿ ತೋರಿಸಿಕೊಟ್ಟಿದ್ದಾರೆ. ಧಾರವಾಡ ಜಿಲ್ಲೆ ಕಲಘಟಕಿ ತಾಲೂಕಿನ ಹಿಂಡಸಗೇರಿ ಗ್ರಾಮದ ಪ್ರಕಾಶ ಹುಬ್ಬಳ್ಳಿ ಮತ್ತು ಕುಸುಮಾ ಹುಬ್ಬಳ್ಳಿ ಅವರ ಸಾವಯವ ಕೃಷಿ ಪದ್ಧತಿ ಗಮನ ಸೆಳೆದಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ನೆರವು ಪಡೆದು ದಂಪತಿಗಳು ಸಾವಯವ ಕೃಷಿಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ರ ಪ್ರಕಾಶ್, ನಂತರದಲ್ಲಿ ಗದುಗಿನ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ‌ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದರು. ಬೋಧನಾ ವೃತ್ತಿ ತೊರೆದ  ಪ್ರಕಾಶ್ ಅವರು ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದ 4 ಎಕರೆ ಜಮೀನು ಖರೀದಿಸಿ, ತರಕಾರಿ ಬೇಸಾಯ ಆರಂಭಿಸಿದ್ದು, ಪತ್ನಿ ಕುಸುಮಾ ಬೆಂಬಲವಾಗಿ ನಿಂತಿದ್ದಾರೆ. ತರಕಾರಿ ಬೆಳೆಯೋದೊಂದೇ ಅಲ್ಲದೆ, ತಮ್ಮದೇ ಆದ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ದಿನಕ್ಕೆ 416 ರೂ ಉಳಿತಾಯ ಮಾಡಿದ್ರೆ 10 ವರ್ಷಗಳಲ್ಲಿ ನೀವು ಕೋಟ್ಯಧಿಪತಿಯಾಗುತ್ತೀರಾ ! ಸರ್ಕಾರದ ಈ ಸೇವಿಂಗ್ ಸ್ಕೀಮ್ ಬಗ್ಗೆ ಗೊತ್ತಾ?

ಆನ್‌ಲೈನ್ ಮತ್ತು ವಾಟ್ಸ್ ಅಪ್ ಮೂಲಕ ಆರ್ಡರ್ ಪಡೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ತರಕಾರಿ ಸರಬರಾಜು ಮಾಡುತ್ತಿದ್ದಾರೆ. ಕಾಲು ಕೆ.ಜಿ. ಯಿಂದ ಹಿಡಿದು, ಹತ್ತಾರು ಕೆ.ಜಿ. ಗಳವರೆಗೂ ತರಕಾರಿ ಪೂರೈಕೆ ಮಾಡುತ್ತಿದ್ದಾರೆ. ಕೇವಲ 4 ಎಕರೆ ಪ್ರದೇಶದಲ್ಲಿ 55 ವಿವಿಧ ರೀತಿಯ ತರಕಾರಿ ಬೆಳೆ ಬೆಳೆಯಲಾಗುತ್ತಿದೆ. ಇವುಗಳ ಪೈಕಿ 40 ಬಗೆಯ ದೇಶಿ ತರಕಾರಿ ಹಾಗೂ 15 ಬಗೆಯ ವಿದೇಶಿ ತರಕಾರಿಗಳನ್ನು ಜಮೀನಿನಲ್ಲಿ ನಾಟಿ ಮಾಡಲಾಗಿದೆ. ಮೆಣಸಿನಕಾಯಿ, ಬೆಂಡೆ, ಚೌಳಿಕಾಯಿ, ಟೊಮೆಟೋ, ಹೀರೇಕಾಯಿ, ಸೌತೆಕಾಯಿ, ಹಾಗಲಕಾಯಿ, ಬದನೆಕಾಯಿ, ಅವರೇಕಾಯಿ, ಕುಂಬಳಕಾಯಿ, ಕೊತ್ತಂಬರಿ, ಪಾಲಕ್, ಕ್ಯಾರೆಟ್, ಬೀಟ್ರೋಟ್, ಮೂಲಂಗಿ, ಹೂ ಕೋಸು, ಎಲೆ ಕೋಸು ಇತ್ಯಾದಿ ದೇಸಿ ತರಕಾರಿ, ಸ್ವೀಟ್ ಕಾರ್ನ್, ಬೇಬಿ ಕಾರ್ನ್, ಚೆರ್ರಿ ಟೊಮೆಟೋ, ಲೆಟ್ಟೂಸ್, ಮುಳ್ಳು ಸೌತೆಕಾಯಿ, ರೆಡ್ ಕ್ಯಾಬೇಜ್, ರೆಡ್ ರಾಡಿಶ್, ಥೈ ಬೇಸಿಲ್, ಸೆಲರಿ ಇತ್ಯಾದಿ ವಿದೇಶಿ ತರಕಾರಿಗಳನ್ನು ಒಂದೇ ಕಡೆ ಬೆಳೆಯಲಾಗುತ್ತಿದೆ.

ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ತರಕಾರಿ ಬೆಳೆ ಬೆಳೆಯಲಾಗುತ್ತಿದೆ. ಒಂದೊಂದು ಬದುವಿನಲ್ಲಿ ನಾಲ್ಕೈದು ತರಕಾರಿ ಬೆಳೆ ಹಾಕಲಾಗಿದೆ. ಬಹು ಬೆಳೆ ಪದ್ಧತಿ ಅನುಸರಿಸಿ ಅಲ್ಪ ಜಾಗದಲ್ಲಿ ಅಧಿಕ ತಳಿಗಳನ್ನು ನಾಟಿ ಮಾಟಿ ಮಾಡಲಾಗಿದೆ. ಡ್ರಿಪ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರದಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಡ್ರಿಪ್ ಅಳವಡಿಕೆ ಮಾಡಿಕೊಂಡಿರೋ ದಂಪತಿಗಳು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿ, ವರ್ಷಪೂರ್ತಿ ತರಕಾರಿ ಬೆಳೆ ಬೆಳೆಯಲು ವ್ಯವಸ್ತೆ ಕಲ್ಪಿಸಿಕೊಂಡಿದ್ದಾರೆ. ನೇಚರ್ ಫಸ್ಟ್ ಫಾರ್ಮ್ ಮೂಲಕ ಗ್ರಾಹಕರ ಮನೆಗಳಿಗೆ ನೇರವಾಗಿ ಸರಬರಾಜು ಮಾಡುತ್ತಿದ್ದಾರೆ. ಮನೆ ಮನೆಗೆ ತರಕಾರಿ ತಲುಪಿಸುತ್ತಿರೋ ದಂಪತಿಗಳು, ವರ್ಷವಿಡೀ ಆದಾಯ ಪಡೆಯುತ್ತಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಹಲವಾರು ಜನ ಹಲವಾರು ರೀತಿಯ ಕಾಯಿಲೆಗೆ ತುತ್ತಾಗಿದ್ದನ್ನು ಗಮನಿಸಿದೆ. ಇದೆಲ್ಲಕ್ಕೂ ಮೂಲ ಕಾರಣ ಏನೆಂದು ಯೋಚಿಸಿದೆ. ವಿಷ ಆಹಾರ ಸೇವನೆಯಿಂದಲೇ ನಾನಾ ರೋಗಗಳು ಬರ್ತಿವೆ ಅಂತ ಅರಿತುಕೊಂಡೆ. ಕೊನೆಗೆ ಒಳ್ಳೆಯ ಆಹಾರ ಉತ್ಪಾದನೆ ಮಾಡಬೇಕೆಂದುಕೊಂಡು ಹೊಲ ಖರೀದಿಸಿದೆ. ಹಿಂಡಸಗೇರಿ ಬಳಿ ಜಮೀನು ಖರೀದಿಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡೆ. ಸ್ವದೇಶಿ ಮತ್ತು ವಿದೇಶಿ ತಿಳಿ ಹಾಕಿ ವರ್ಷ ಪೂರ್ತಿ ಆದಾಯ ಗಳಿಸ್ತಿದ್ದೇನೆ. ಹೊಲಕ್ಕೆ ಬಂದ ರೈತರಿಗೆ ಮಾರ್ಗದರ್ಶನವನ್ನೂ ಮಾಡ್ತಿದ್ದೇನೆ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಪ್ರಕಾಶ್ ಹುಬ್ಬಳ್ಳಿ.

ಇನ್ನು ಪ್ರಕಾಶ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ಶ್ರಮಿಸುತ್ತಿರುವ ಪತ್ನಿ ಕುಸುಮಾ, ಮಾರ್ಕೆಟಿಂಗ್ ವ್ಯವಸ್ಥೆಯನ್ನು ನೋಡಿಕೊಳ್ತಿದಾರೆ. ಒಂದೇ ಬೆಳೆ ಹಾಕೋದ್ರಿಂದ ಲಾಭ ಅಥವಾ ನಷ್ಟ ಅನ್ನೋ ಭಯ ಇರುತ್ತೆ. ಆದ್ರೆ ಬಹು ಬೆಳೆ ಹಾಕೋದ್ರಿಂದ ನಷ್ಟದ ಭಯವಿಲ್ಲ. ಒಂದರಲ್ಲಿ ಏನಾದ್ರೂ ನಷ್ಟವಾದ್ರೂ ಮತ್ತೊಂಬು ಬೆಳೆಯನ್ನು ಅದನ್ನು ಸರಿದೂಗಿಸಿಕೊಳ್ಳಬಹುದು. ನಮ್ಮದೇ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದೇವೆ. ಗ್ರಾಹಕರಿಂದಲೂ ತಮ್ಮ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕುಸುಮಾ ಹುಬ್ಬಳ್ಳಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ದಂಪತಿಗಳ ಕೃಷಿ ಕಣ್ತುಂಬಿಕೊಳ್ಳೋಕೆ ಧಾರವಾಡ ವಲ್ಲದೆ, ನೆರೆ ಜಿಲ್ಲೆಗಳ ರೈತರೂ ಹಿಂಡಸಗೇರಿಗೆ ಬರ್ತಿದ್ದಾರೆ.
Published by:Soumya KN
First published: