4 ಮಕ್ಕಳು, ವೃದ್ಧರು ಸೇರಿದಂತೆ ಒಂದೇ ಕುಟುಂಬದ 16 ಮಂದಿ ಕೊರೋನಾ ಗೆದ್ದಿರುವುದೇ ರೋಚಕ!

ಯಾವುದೇ ರೀತಿಯಲ್ಲಿಯೂ ಆತಂಕಕ್ಕೊಳಗಾಗದೇ ಆತ್ಮಸ್ಥೈರ್ಯದಿಂದಲೇ ಎದುರಿಸಿದೆವು. ಮನೆಯಲ್ಲಿದ್ದವರಿಗೆ ಧೈರ್ಯ ತುಂಬಿದೆವು. ವೈದ್ಯರ ಸಲಹೆ, ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿದೆವು ಎಂದು ಸೋಂಕು ಗೆದ್ದ ಬಗ್ಗೆ ಕುಟುಂಬಸ್ಥರು ತಿಳಿಸಿದ್ದಾರೆ.

ಕೊರೋನಾ ಗೆದ್ದ ಕುಟುಂಬ

ಕೊರೋನಾ ಗೆದ್ದ ಕುಟುಂಬ

  • Share this:
ಹುಬ್ಬಳ್ಳಿ: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರಕ್ಕೆ ಹಳ್ಳಿಯ ಜನ ತತ್ತರಗೊಂಡಿದ್ದಾರೆ. ಕುಟುಂಬ ಕುಟುಂಬಗಳನ್ನೇ ಆವರಿಸ್ತಿರೋ ಸೋಂಕು ಆತಂಕಕ್ಕೆ ದೂಡ್ತಿದೆ. ಇಂತಹ ಮಹಾ ಮಾರಿ ಎದುರು ಕುಟುಂಬವೊಂದು ಜಯಿಸಿ ಬಂದಿದೆ. ಒಂದೇ ಕುಟುಂಬದ 16 ಜನ ಕೊರೋನಾದಿಂದ ಗುಣಮುಖರಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಕುಟುಂಬವೊಂದು ಕೊರೋನಾ ವಿರುದ್ಧ ಜಯಿಸಿ ಬಂದಿದೆ. ಮೂರು ವರ್ಷದ 4 ಮಕ್ಕಳೂ ಸೇರಿ ವೃದ್ಧರವರೆಗೂ ಗುಣಮುಖರಾಗಿರೋದು ವಿಶೇಷ. ಸುಳ್ಳ ಗ್ರಾಮದ ಶಿವಳ್ಳಿ ಮಠ ಎಂಬುವರ ಕುಟುಂಬ ಸೋಂಕಿಗೆ ತುತ್ತಾಗಿತ್ತು. ಮೇ 03 ರಂದು ಕುಟುಂಬದ ಸದಸ್ಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನಂತರ ಮನೆಯ 16 ಜನರಲ್ಲಿ ಕೊರೋನಾ ದೃಢಪಟ್ಟಿತ್ತು. ಈ ಪೈಕಿ ಮೂರು ವರ್ಷದೊಳಗಿನ ನಾಲ್ಕು ಮಕ್ಕಳೂ, ನಾಲ್ವರು ವಯೋವೃದ್ಧರು ಇದ್ದಿದ್ದು ಆತಂಕ ಸೃಷ್ಟಿಸುವಂತೆ ಮಾಡಿತ್ತು.

ಕುಟುಂಬದ 19 ಸದಸ್ಯರ ಪೈಕಿ ಮೂವರಿಗೆ ಕೊರೋನಾ ನೆಗೆಟಿವ್ ವರದಿ ಬಂದಿತ್ತು. ಉಳಿದ 16 ಜನಕ್ಕೂ ಪಾಸಿಟಿವ್ ಧೃಡಪಟ್ಟಿತ್ತು. ಕೊರೋನಾ ಬಂದಿತೆಂದು ಯಾರೂ ಧೃತಿಗೆಡಲಿಲ್ಲ. ವೈದ್ಯರ ಸಲಹೆಯಂತೆ ಎಲ್ಲರೂ ಹೋಮ್ ಐಸೋಲೇಷನ್ ಮಾಡಿಕೊಂಡರು. ಕೊರೋನಾ ಪಾಸಿಟಿವ್ ಬಂದಿದೆ ಅಂತ ಭಯಭೀತಗೊಳ್ಳಲಿಲ್ಲ. ಯಾವುದೇ ರೀತಿಯಲ್ಲಿಯೂ ಆತಂಕಕ್ಕೊಳಗಾಗದೇ ಆತ್ಮಸ್ಥೈರ್ಯದಿಂದಲೇ ಎದುರಿಸಿದೆವು. ಮನೆಯಲ್ಲಿದ್ದವರಿಗೆ ಧೈರ್ಯ ತುಂಬಿದೆವು. ವೈದ್ಯರ ಸಲಹೆ, ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿದೆವು. ಸಕಾಲಕ್ಕೆ ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾದೆವು.ಕೋವಿಡ್ ಎದುರಿಸಬೇಕೆಂದ್ರೆ ಧೈರ್ಯವೇ ಮೊದಲ ಸಾಧನ. ನಂತರ ವೈದ್ಯರು ಕೊಡೋ ಚಿಕಿತ್ಸೆ ಸರಿಯಾಗಿ ಪಡೆಯಬೇಕು. ಧೈರ್ಯವಿದ್ದರೆ ಕೊರೋನಾವನ್ನು ಗೆದ್ದೇ ಗೆಲ್ಲಬಹುದು. ಹೆದರಿದರೆ ಕೊರೋನಾ ನಮ್ಮನ್ನೇ ಬಲಿ ಪಡೆಯುತ್ತೆ ಎನ್ನುತ್ತಾರೆ ಕೊರೋನಾ ಗೆದ್ದ ಕುಟುಂಬದ ಸದಸ್ಯ ಮಲ್ಲಿಕಾರ್ಜುನ.

ಕೊರೋನಾ ಬಂದಿದೆಯೆಂದು ಯಾರೂ ಧೃತಿಗೆಡದಿರುವಂತೆ ಸಲಹೆ ನೀಡುತ್ತಾರೆ. ಈಗ ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದ್ದು, ಕುಟುಂಬದ ಸದಸ್ಯರಲ್ಲಿ ಯುದ್ಧ ಗೆದ್ದ ಸಂಭ್ರಮ. ಗ್ರಾಮಸ್ಥರೂ ಸಹ ಶಿವಳ್ಳಿ ಮಠ ಅವರ ಕುಟುಂಬ ಕೊರೋನಾ ವನ್ನು ಧೈರ್ಯದಿಂದ ಎದುರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Explained: ಕೊರೋನಾದಿಂದ ಗುಣಮುಖರಾದ ಬಳಿಕ ಕಾಡುವ ಆರೋಗ್ಯ ಸಮಸ್ಯೆಗಳಿಂದ ಬಚಾವ್ ಆಗಲು ಇದೆ ಮಾರ್ಗ

ಸುಳ್ಳ ಗ್ರಾಮದ ಕುಟುಂಬ ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾದ್ರೆ, ಹುಬ್ಬಳ್ಳಿಯ ಕುಟುಂಬವೊಂದರಲ್ಲಿ ಒಬ್ಬರ ನಂತ್ರ ಮತ್ತೊಬ್ರು ಆಸ್ಪತ್ರೆ ಸೇರಿ ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಎಷ್ಟೋ ಜನ ಕೊರೋನಾ ಅಂದ ಕೂಡ್ಲೇನೇ ಹೆದರಿಕೊಂಡು ಸಾವಿಗೆ ಶರಣಾದವರಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕುಟುಂಬವೊಂದರಲ್ಲಿ ಮೂವರಿಗೆ ಕೊರೋನಾ ಸೋಂಕು ಬಂದರೂ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದು ಸಾವಿನ ಮನೆಯಿಂದ ಹೊರ ಬಂದಿದ್ದಾರೆ. ಹುಬ್ಬಳ್ಳಿಯ ಒಂದೇ ಕುಟುಂಬದಲ್ಲಿ ಒಬ್ಬರ ನಂತರ ಒಬ್ಬರಿಗೆ ಕೋವಿಡ್ ಸೋಂಕು ಹರಡಿತ್ತು. 45 ವರ್ಷದವರಿಂದ 72 ವರ್ಷದ ವೃದ್ಧೆಯವರೆಗೂ ಕೋವಿಡ್ ವ್ಯಾಪಿಸಿತ್ತು.
ಮನೆಯಲ್ಲಿದ್ದ ಆರು ಜನರ ಪೈಕಿ ಮುವ್ವರಿಗೆ ಕೋವಿಡ್ ಸೋಂಕು ತಗುಲಿತ್ತು. ಹತ್ತಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕೊನೆಗೂ ಗುಣಮುಖರಾಗಿ ಕುಟುಬಂದ ಸದಸ್ಯರು ಮನೆ ಸೇರಿದ್ದಾರೆ. ಹೀಗೆ ಕೊರೋನಾದಿಂದ ಜರ್ಝರಿತಗೊಂಡು ಚೇತರಿಕೊಳ್ತಿರೋ ಕುಟುಂಬ ಹುಬ್ಬಳ್ಳಿಯ ನಾರಾಯಣ ಜರ್ತಾರಕರ್ ಅನ್ನೋರದ್ದು. ನಾರಾಯಣ ಅವರ ಸಹೋದರನಿಗೆ ಮೊದಲು ಕೋವಿಡ್ ಕಾಣಿಸಿಕೊಂಡಿತ್ತು. ಆತನನ್ನು ಆಸ್ಪತ್ರೆಗೆ ಸೇರಿಸಿದ ಮೂರು ದಿನಗಳಲ್ಲಿಯೇ 72 ವರ್ಷದ ತಾಯಿಗೂ ಕೋವಿಡ್ ದೃಢಪಟ್ಟಿತ್ತು.

ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ ಮೂರು ದಿನಗಳ ಅಂತರದಲ್ಲಿ ನಾರಾಯಣ್ ಅವರಿಗೂ ಕೋವಿಡ್ ಬಂದಿರೋದು ಕುಟುಂಬವನ್ನು ಆತಂಕಕ್ಕೀಡು ಮಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಮುವ್ವರಿಗೆ ಚಿಕಿತ್ಸೆ ಕೊಡಿಸಲಾಯಿತು. ತೀವ್ರ ಭೀತಿಯಿದ್ದರೂ ಧೃತಿಗೆಡಗೆ ಚಿಕಿತ್ಸೆ ಪಡೆದ ಕುಟುಂಬ ಕೊನೆಗೂ ಕೊರೋನಾ ಗೆದ್ದು ಬಂದಿದೆ. ಸಾವಿನ ಮನೆಯಿಂದ ಹೊರ ಬಂದಿದ್ದೇವೆ ಎಂದು ಕುಟುಂಬದ ಸದಸ್ಯ ನಾರಾಯಣ ಜರ್ತಾರಕರ್ ಅಭಿಪ್ರಾಯಪಟ್ಟಿದ್ದಾರೆ.

ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ, ಸಕಾಲಕ್ಕೆ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಅಪಾಯ ಖಚಿತ. ಕೋವಿಡ್ ಆದಾಗ ಮೆಟ್ಟಿಲು ಹತ್ತಲೂ ಆಗಲೂ ಆಗ್ತಿರಲಿಲ್ಲ. ಲಿಫ್ಟ್ ಹತ್ತಿದರೆ ಉಸಿರುಗಟ್ಟಿದಂತಾಗಿ ಹೊರಗೆ ಓಡಿ ಬಂದಿದ್ದೆ. ತೀವ್ರ ಉಸಿರಾಟದ ತೊಂದರೆಯಾಗ್ತಿತ್ತು. ಆದ್ರೂ ಧೃತಿಗೆಡದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆವು. ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಮುವ್ವರೂ ಬದುಕಿ ಮನೆ ಸೇರಿದ್ದೇವೆ. ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೀಬೇಕು. ಹಾಗೆ ಮಾಡಿದ್ದರಿಂದಲೇ ನಮ್ಮ 72 ವರ್ಷದ ತಾಯಿ ಸೇರಿ ನಾವು ಬದುಕುಳಿದಿದ್ದೇವೆ. ಕೋವಿಡ್ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಿ ಕುಟುಂಬವನ್ನು, ನಮ್ಮ ಊರನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡೇಬೇಕು ಎಂದು ನಾರಾಯಣ ತಿಳಿಸಿದ್ದಾರೆ.
Published by:Kavya V
First published: