Hubballi: 88 ಕಿಡಿಗೇಡಿಗಳಿಗೆ 14 ದಿನ ನ್ಯಾಯಾಂಗ ಬಂಧನ; ಗಲಭೆ ಪೀಡಿತ ಪ್ರದೇಶದಲ್ಲಿ ಪೊಲೀಸರ ಮೊಕ್ಕಾಂ

ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸುತ್ತಿರುವ ಸಂದರ್ಭದಲ್ಲಿಯೇ ಮೌಲ್ವಿಯೊಬ್ಬ ಪೊಲೀಸ್ ಠಾಣೆ ಎದುರು ಕಮೀಷನರ್ ವಾಹನದ ಮೇಲೆ ಹತ್ತಿ ಭಾಷಣ ಮಾಡ್ತಿರೋ ವೀಡಿಯೋ ವೈರಲ್ ಆಗಿದೆ. ಗಲಭೆಗೆ ಸಂಬಂಧಿಸಿ 88 ಜನರನ್ನು ಬಂಧಿಸಲಾಗಿದ್ದು, 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಸಹಜ ಸ್ಥಿತಿಯತ್ತ ಹುಬ್ಬಳ್ಳಿ

ಸಹಜ ಸ್ಥಿತಿಯತ್ತ ಹುಬ್ಬಳ್ಳಿ

  • Share this:
ಹುಬ್ಬಳ್ಳಿ: ಗಲಭೆ (Riot) ಪೀಡಿತ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi) ಸಹಜ ಸ್ಥಿತಿಯತ್ತ ಮರಳಲಾರಂಭಿಸಿದೆ. ಗಲಭೆಗೆ ಸಂಬಂಧಿಸಿ ಏಳು ಪ್ರಕರಣ (Case) ದಾಖಲಿಸಿಕೊಂಡಿರೋ ಪೊಲೀಸರು (Police), ಒಟ್ಟು 88 ಜನರನ್ನು ಬಂಧಿಸಿದ್ದಾರೆ (Arrest). ಅವಹೇಳನಕಾರಿ ಪೋಸ್ಟ್ (Post) ಮಾಡಿದ ಯುವಕ ಮತ್ತು 88 ಜನರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ (Judicial Custody) ಒಪ್ಪಿಸಲಾಗಿದೆ. ಶಾಂತಿ ಸ್ಥಾಪಿಸೋ ನಿಟ್ಟಿನಲ್ಲಿ ಪೊಲೀಸರು ನಗರದಲ್ಲಿ ರೂಟ್ ಮಾರ್ಚ್ ನಡೆಸಿದರು. ಈ ನಡುವೆ ಮೌಲ್ವಿಯೋರ್ವ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ (Old Hubballi Police Station) ಎದುರು ಪೊಲೀಸ್ ಅಧಿಕಾರಿಯ ಕಾರಿನ ಮೇಲೆಯೇ ಹತ್ತಿ ಪ್ರಚೋದನಾಕಾರಿ ಭಾಷಣ ಮಾಡಿರೋ ವೀಡಿಯೋ ವೈರಲ್ (Video Viral) ಆಗಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ.

88 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಗಲಭೆಯಿಂದ ತತ್ತರಿಸಿದ್ದ ಹುಬ್ಬಳ್ಳಿ ನಗರ ಸಹಜ ಸ್ಥಿತಿಯತ್ತ ಮರಳಲಾರಂಭಿಸಿದೆ. ಗಲಭೆಗೆ ಸಂಬಂಧಿಸಿ ಏಳು ಪ್ರಕರಣ, ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದಕ್ಕೆ ಒಂದು ಪ್ರಕರಣ ಸೇರಿ ಒಟ್ಟು 8 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಲಭೆಗೆ ಸಂಬಂಧಿಸಿ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ಕೆಲವರನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು 88 ಜನರನ್ನು ಬಂಧಿಸಲಾಗಿದೆ.

ಗಲಭೆಯಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ 88 ಜನ ಕಿಡಿಗೇಡಿಗಳು ಹಾಗೂ ಪ್ರಚೋದನಾಕಾರಿ ಪೋಸ್ಟ್ ಮಾಡಿದ ಯುವಕನಿಗೆ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವಿವಾದಾತ್ಮಕ ಪೋಸ್ಟ್ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

ಪೋಸ್ಟ್ ಹಾಕಿದ ಯುವಕನನ್ನು ಇಂದು ಹುಬ್ಬಳ್ಳಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಇದೇ ವೇಳೆ ಗಲಭೆಯಲ್ಲಿ ಭಾಗಿಯಾದ ಆರೋಪ ಹೊತ್ತ ಆರೋಪಿಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಜೆಸಿ ಗೆ ಒಪ್ಪಿಸಲಾಯಿತು. ಗಲಭೆ ನಿಯಂತ್ರಣಕ್ಕೆ ಪೊಲೀಸರು ಕೈಗೊಂಡ ತುರ್ತು ಕ್ರಮಗಳ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: Mangaluru: "ಪ್ರೀತ್ಸೆ" ಅಂತ ಪ್ರಾಣ ತಿಂದ, "ನೋ" ಎಂದಿದ್ದಕ್ಕೆ ಮೊಬೈಲ್ ಟವರ್ ಹತ್ತಿದ! ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಪೊಲೀಸರೇ ಸುಸ್ತು!

ಶಾಂತಿ ಸ್ಥಾಪನೆ ಮಾಡುವುದು ನಮ್ಮ ಕರ್ತವ್ಯ

ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಲಾಭೂ ರಾಮ್, ಶಾಂತಿ ಸ್ಥಾಪನೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ ಕರ್ತವ್ಯ ಪ್ರಜ್ಞೆ ನಾವು ಮೆರೆದಿದ್ದೇವೆ. ಘಟನೆ ನಡೆದ ರಾತ್ರಿಯಿಡೀ ಎಲ್ಲಾ ಪೊಲೀಸ್ ಸಿಬ್ಬಂದಿ ನಗರದಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ಶಂಕಿತ ವ್ಯಕ್ತಿಗಳ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಇದುವರೆಗೆ 88 ಜನರನ್ನು ಬಂಧಿಸಲಾಗಿದೆ. ಕೆಲ ಅಮಾಯಕರನ್ನು ಬಿಟ್ಟು ಕಳುಹಿಸಿಕೊಡಲಾಗಿದೆ ಎಂದಿದ್ದಾರೆ.

ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ ಆಯುಕ್ತರು

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ದೊಂಭಿ ಮತ್ತಿತರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಗಲಭೆ ಎಂಬ ವಿಚಾರಆ ಘಟನೆಗೆ ನಾನು ಹೋಲಿಸೋಕೆ ಹೋಗಲ್ಲ ಎಂದಿದ್ದಾರೆ.

ಕಿಡಿಗೇಡಿಗಳು ಕಾನೂನನ್ನು ಕೈಗೆತ್ತಿಕೊಂಡು ಕ್ಷೋಬೆ ಉಂಟು ಮಾಡಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿ, ಪೊಲೀಸ್ ವಾಹನಗಳ ಅನ್ನು ಜಖಂಗೊಳಿಸಿ ಕಾನೂನನ್ನು ಕೈಗೆತ್ತಿ ಕೊಂಡಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೇ ತಪ್ಪೆಸಗಿದ್ದರೂ ಅಂಥವರನ್ನು ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ  ಎಂದು ಲಾಭೂ ರಾಮ್ ಎಚ್ಚರಿಸಿದ್ದಾರೆ.

ಶಾಂತಿ ಕಾಪಾಡುವಂತೆ ಕಾಂಗ್ರೆಸ್ ಮನವಿ

ಇದೇ ವೇಳೆ ಪೊಲೀಸ್ ಆಯುಕ್ತರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ನೇತೃತ್ವದ ನಿಯೋಗ ಕಿಡಿಗೇಡಿ ಕೃತ್ಯ ಎಸಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಆದರೆ ಕೆಲ ಅಮಾಯಕರನ್ನು ಬಂಧಿಸಲಾಗಿದ್ದು, ಅವರನ್ನು ಕೂಡಲೇ ಬಿಡಬೇಕೆಂದು ಸಲೀಂ ಅಹ್ಮದ್ ಆಗ್ರಹಿಸಿದರು.

ಮೌಲ್ವಿ ವೀಡಿಯೋ ವೈರಲ್...

ಇದೇ ವೇಳೆ ಮೌಲ್ವಿಯೋರ್ವನ ವೀಡಿಯೋ ವೈರಲ್ ಆಗಿದ್ದು, ಗಲಭೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಮೀಷನರ್ ಇನ್ನೋವಾ ಮೇಲೆ ಹತ್ತಿ ಮೌಲ್ವಿ ಪ್ರಚೋದನ ಭಾಷಣ ಮಾಡಿದ್ದಾನೆ. ಗಣೇಶ ಪೇಟೆಯ ತಬೀಬ್ ಲ್ಯಾಂಡ್ ನಿವಾಸಿ ವಾಸಿಂ ಬುಖಾರಿ ಪ್ರಚೋದನಾಕಾರಿ ಭಾಷಣ ಮಾಡಿದ ಮೌಲ್ವಿ ಎಂದು ಗುರುತಿಸಲಾಗಿದೆ. ಗಲಭೆ ನಡೆದ ರಾತ್ರಿಯಿಂದಲೂ ವಾಸಿಂ ನಾಪತ್ತೆಯಾಗಿದ್ದು, ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.

ಇದನ್ನೂ ಓದಿ: Janata Jaladhare: ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟ್ಟಿದ್ದಾರೆ; ಎಚ್​ ಡಿ ಕುಮಾರಸ್ವಾಮಿ​ ಕಿಡಿ

ಈ ವೀಡಿಯೋ ಸಿಕ್ಕ ಮೇಲೆ ಗಲಭೆ ಪ್ರಕರಣ ವ್ಯವಸ್ಥಿತ ಪಿತೂರಿಯಾಗಿತ್ತು ಅನ್ನೋ ಅಂಶ ಮೇಲ್ನೋಟಕ್ಕೆ ಕಾಣಿಸಲಾರಂಭಿಸಿದೆ. ನಗರದಲ್ಲಿ ಶಾಂತಿ ಸ್ಥಾಪಿಸೋ ನಿಟ್ಟಿನಲ್ಲಿ ಪೊಲೀಸರು ಇಂದೂ ಸಹ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ 20 ರ ಬೆಳಿಗ್ಗೆವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.
Published by:Annappa Achari
First published: