ಹುಬ್ಬಳ್ಳಿ(ಡಿ.06): ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ (Hubballi) ಬೆಚ್ಚಿ ಬೀಳಿಸಿದ್ದ ಸುಪಾರಿ ಕೊಲೆ ಪ್ರಕರಣದ ತನಿಖೆಯ ಜಾಡು ಹಿಡಿದು ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ತಂದೆಯಿಂದಲೇ ಮಗನ ಕೊಲೆಗೆ ಸುಪಾರಿ ನೀಡಿರೋ ಪ್ರಕರಣದ ಕಹಾನಿ ದೃಶ್ಯಂ ಸಿನೆಮಾವನ್ನು ಮೀರಿಸುತ್ತೆ. ನಾಪತ್ತೆ ಪ್ರಕರಣ (Missing Case) ದಾಖಲಿಸಿಕೊಂಡು, ಕೊಲೆ ಎನ್ನುವ ವಿಷಯ ಅರಿತ ಮೇಲೆ ಎರಡು ದಿನಗಳಿಂದ ತೀವ್ರ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ತಾರ್ಕಿಕ ಅಂತ್ಯ ತಲುಪಿದ್ದಾರೆ. ಕೊಲೆ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಅಖಿಲ್ ಜೈನ್ (Akhil Jain) ನನ್ನು ಹೂತಿಟ್ಟಿದ್ದಾರೆ ಎನ್ನಲಾದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದ್ರೆ ಇನ್ನು ಶವ ಹೊರತೆಗೆಯಲಾಗಿಲ್ಲ.
ತಂದೆಯಿಂದಲೇ ಮಗನ ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಯುವಕ ಅಖಿಲ್ ಜೈನ್ ಶವ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಶವ ಪತ್ತೆ ಹಚ್ಚಲಾಗಿದೆ. ಗ್ರಾಮದ ನಿರ್ಮಾಣ ಹಂತದ ಮನೆಯ ಹಿಂಭಾಗದಲ್ಲಿ ದುಷ್ಕರ್ಮಿಗಳು ಶವ ಹೂತು ಹಾಕಿರುವ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಉದ್ಯಮಿ ಭರತ್ ಜೈನ್ ಮಹಾಜನಶೆಟ್ರರಿಂದ ಕೊಲೆಗೆ ಸುಪಾರಿ ನೀಡಿದ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: Liquor Bottles: ಮದ್ಯದ ಬಾಟಲಿಯಿಂದ ಮಹಿಳೆಯರಿಗೆ ಉದ್ಯೋಗ! ಹೆಣ್ಣುಮಕ್ಕಳ ಕೈಯಲ್ಲಿ ನಳನಳಿಸಲಿವೆ ಲಿಕ್ಕರ್ ಬಾಟಲಿ
ಹಳೇ ಹುಬ್ಬಳ್ಳಿಯ ಮೂವರಿಗೆ ಸುಫಾರಿ ನೀಡಿದ್ದನೆಂಬ ಮಾಹಿತಿ ಸಿಕ್ಕಿದೆ. 10 ಲಕ್ಷ ಸುಪಾರಿ ನೀಡಿ ಸ್ವಂತ ಮಗನನ್ನ ತಂದೆ ಕೊಲೆ ಮಾಡಿಸಿದ್ದ. ಆದರೆ ಕಾಣೆಯಾಗಿದ್ದಾನೆಂದು ಭರತ್ ಜೈನ್ ತನ್ನ ಸಹೋದರನಿಂದ ದೂರು ದಾಖಲಿಸಿದ್ದ. ಅನುಮಾನದಿಂದ ಭರತ್ ಜೈನ್ ವಿಚಾರಣೆ ಮಾಡಿದಾಗ ಅಸಲಿಯತ್ತು ಬಹಿರಂಗಗೊಂಡಿದೆ. 48 ಗಂಟೆಗಳ ನಂತರ ಶವ ಸಿಕ್ಕಿದೆ. ಆರೋಪಿಗಳ ತೀವ್ರ ವಿಚಾರಣೆಯ ನಂತರ ಶವ ಹೂತಿಟ್ಟ ಸ್ಥಳದ ಮಾಹಿತಿ ಲಭ್ಯವಾಗಿದೆ. ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಶವ ಹೊರ ತೆಗೆಯಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ.
ಮ್ಯಾಜಿಸ್ಟ್ರೇಟ್ ರ ಸಮ್ಮುಖದಲ್ಲಿಯೇ ಶವ ಹೊರ ತೆಗೆಯಬೇಕಾಗಿರೋದ್ರಿಂದ ನಾಳೆ ಬೆಳಿಗ್ಗೆ ಹೊರ ತೆಗೆಯುವ ತೀರ್ಮಾನಕ್ಕೆ ಬಂದಿದ್ದಾರೆ. ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಲೆಗೆ ಸುಪಾರಿ ಕೊಡುವಷ್ಟು ಪಾಪಿಯಾಗಿದ್ನಾ ಮಗ
ಹೌದು, ಈ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ. ಹೆತ್ತವರಿಗೆ ಮಗ ಹೇಗೆಯೇ ಇದ್ದರೂ ಅದು ಸರಿನೇ ಅನ್ನಿಸಿ ಬಿಡುತ್ತದೆ. ಆದ್ರೆ ಈ ಪ್ರಕರಣದಲ್ಲಿ ಮಾತ್ರ ತದ್ವಿರುದ್ಧ. ಇದಕ್ಕೆ ಮುಖ್ಯ ಕಾರಣ ತಂದೆಯೇ ಮಗನ ಕೊಲೆಗೆ ಸುಪಾರಿ ಕೊಟ್ಟು, ಕೊನೆಗೆ ಪೊಲೀಸರ ಬಲೆಗೆ ಬಿದ್ದಿರೋದು. ಮೊದಲು ತನ್ನ ಸಹೋದರನ ಮೂಲಕ ದೂರು ಕೊಡಿಸಿದ್ದ ಭರತ್ ಜೈನ್, ತನ್ನ ಮಗನನ್ನು ಹುಡಿಕಿ ಕೊಡುವಂತೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ಮಾಡಿದ್ದ. ಆದರೆ ಆತನ ಚಲನವಲನದ ಮೇಲೆ ಅನುಮಾನ ಬಂದು ಭರತ್ ಜೈನ್ ವಿಚಾರಣೆ ನಡೆಸಿದಾಗ ಅಸಲಿಯತ್ತು ಬಹಿರಂಗಗೊಂಡಿತ್ತು.
ಕಟ್ಟಡ ಸಾಮಾಗ್ರಿ ಅಂಗಡಿ ನಿರ್ವಹಿಸುತ್ತಿದ್ದ ಅಖಿಲ್ ಜೈನ್, ದುಶ್ಚಟಗಳಿಗೆ ದಾಸನಾಗಿದ್ದ ಎನ್ನಲಾಗಿದೆ. ತಂದೆ ಮತ್ತು ಕುಟುಂಬದ ಸದಸ್ಯರಿಗೆ ಕೊಡಬಾರದ ಕಷ್ಟ ಕೊಡುತ್ತಿದ್ದ, ಉದ್ಯಮದಲ್ಲಿ ಲಾಸ್, ಮನೆಯಲ್ಲಿಯೂ ನೆಮ್ಮದಿ ಹಾಳು ಮಾಡಿ, ಇಡೀ ಕುಟುಂಬ ತಲೆ ತಗ್ಗಿಸೋ ರೀತಿಯಲ್ಲಿ ವರ್ತಿಸುತ್ತಿದ್ದುದೇ ಕೊಲೆ ಮಾಡುವ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ.
ಆ ಒಂದು ಫೋಟೋದಿಂದ ತಗ್ಲಾಕ್ಕೊಂಡ ತಂದೆ
ಮಗ ನಾಪತ್ತೆಯಾಗಿದ್ದಾನೆ ಅಂತ ಅಪ್ಪ ಅತ್ತು ಗೋಗರೆಯುವ ನಾಟಕ ಆಡಿದ್ದ. ಆದ್ರೆ ಪೊಲೀಸರು ವಿಚಾರಣೆ ಮಾಡಿ, ಮೊಬೈಲ್ ಪರಿಶೀಲಿಸಿದಾಗ ಭರತ್ ಜೈನ್ ಸಿಕ್ಕಿಹಾಕಿಕೊಂಡಿದ್ದಾನೆ. ಆತನ ಮೊಬೈಲ್ ಗೆ ಕೊಲೆಗಡುಕರಿಂದ ಫೋಟೋವೊಂದು ಬಂದಿತ್ತು. 10 ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಮೂವರು, ಅಖಿಲ್ ನನ್ನು ಕೊಲೆಗೈದು, ಕೆಲಸ ಮುಗಿದಿದೆ ಅಂತ ಮೆಸೇಜ್ ಪಾಸ್ ಮಾಡಿದ್ದರು. ಅದನ್ನು ಸಾಕ್ಷಿ ಸಮೇತ ತೋರಿಸಲು ಕೊಲೆಯಾದ ಅಖಿಲ್ ಫೋಟೋವನ್ನು ವಾಟ್ಸ್ ಆ್ಯಪ್ ಗೆ ಕಳುಹಿಸಿಕೊಟ್ಟಿದ್ದರು. ಅದೇ ಪೋಟೋ ನೋಡಿದ ಪೊಲೀಸರು ಅವಾಕ್ಕಾಗಿದ್ದಲ್ಲದೆ, ಭರತ್ ಜೈನ್ ನ ತೀವ್ರ ವಿಚಾರಣೆ ಮಾಡಿದ್ದರು.
ಇದನ್ನೂ ಓದಿ: Vande Bharat Express Train: ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಶುರು
ಕೊನೆಗೆ ಭರತ್ ಜೈನ್ ನೀಡಿದ ಮಾಹಿತಿ ಆಧರಿಸಿ ಇಬ್ಬರು ಸುಪಾರಿ ಹಂತಕರನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದರು. ಕಲಘಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತು ಹುಬ್ಬಳ್ಳಿ ತಾಲೂಕಿನ ಹಲವೆಡೆ ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಶವ ಹೂತು ಹಾಕಿರೋದು ಖಾತ್ರಿಯಾಗಿದ್ದು, ಅದನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ