ಹುಬ್ಬಳ್ಳಿ(ಜು.15): ಹುಬ್ಬಳ್ಳಿಯ (Hubballi) ತಾರಿಹಾಳ ಸ್ಪಾರ್ಕರ್ ಕ್ಯಾಂಡಲ್ ಕಾರ್ಖಾನೆ ಸ್ಫೋಟ ಪ್ರಕರಣದಲ್ಲಿ ಮತ್ತೋರ್ವ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಾಯಗೊಂಡ ಎಂಟು ಜನರ ಪೈಕಿ ಐವರು ಸಾವಿಗೀಡಾಗಿದ್ದು, ಮೂವರಿಗೆ ಚಿಕಿತ್ಸೆ (Treatment) ಮುಂದುವರೆಸಲಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿರುರೋ ಹಿನ್ನೆಲೆಯಲ್ಲಿ ಕಾರ್ಖಾನೆಯ ಮಾಲೀಕ ಅಬ್ದುಲ್ ಶೇಕ್ ಪೊಲೀಸರಿಗೆ (Police) ಶರಣಾಗಿದ್ದಾನೆ. ಹುಬ್ಬಳ್ಳಿಯ (Hubballi) ತಾರಿಹಾಳ ಕಾರ್ಖಾನೆ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೆ ಇಂದು ಓರ್ವ ಮಹಿಳೆ ಸಾವಿಗೀಡಾಗಿದ್ದು, ಮೃತ ದುರ್ದೈವಿಯನ್ನು ನಿರ್ಮಲಾ ಹುಚ್ಚಣ್ಣನವರ (29) ಎಂದು ಗುರುತಿಸಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಸ್ಫೋಟ ಪ್ರಕರಣದಲ್ಲಿ ಈ ಮುಂಚೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷ ಕಾರ್ಮಿಕರು ಸಾವನ್ನಪ್ಪಿದ್ದರು. ಇದೀಗ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಗಾಯಗೊಂಡ ಮುವ್ವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಪೈಕಿ ಒಂದಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದ್ದು, ಅವರನ್ನು ಬದುಕಿಸಿಕೊಳ್ಳೋಕೆ ವೈದ್ಯರು ಸತತ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.
ಕಾರ್ಖಾನೆಯ ಮಾಲೀಕ ಪೊಲೀಸರಿಗೆ ಶರಣಾಗತಿ
ಹುಬ್ಬಳ್ಳಿಯ ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಮತ್ತು ಸ್ಪಾರ್ಕಲ್ ಕ್ಯಾಂಡಲ್ ಕಾರ್ಖಾನೆಯ ಮಾಲೀಕ ಅಬ್ದುಲ್ ಖಾದರ ಶೇಖ್ @ ಶಿರಟ್ಟಿ ಪೊಲೀಸರಿಗೆ ಶರಣಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಆರೋಪಿ ಅಬ್ದುಲ್ ಖಾದರ್ ಶೇಖ್ ಶರಣಾಗಿದ್ದಾನೆ.
ಗದಗ ಮೂಲದ ಅಬ್ದುಲ್ ಶೇಕ್ ಮುಂಬೈ ಯಲ್ಲಿರುತ್ತಿದ್ದ. ಆಕ್ಸನಿಕ್ ಇನೋವೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ತಾರಿಹಾಳದಲ್ಲಿ ಕಾರ್ಖಾನೆ ನಡೆಸುತ್ತಿದ್ದ. ಈತನಿಗಾಗಿ ಗ್ರಾಮೀಣ ಠಾಣೆ ಪೊಲೀಸರು ಎಲ್ಲ ಕಡೆ ತಡಕಾಡಿ ಬಂದಿದ್ದರೂ, ಪೊಲೀಸರ ಬಲೆಗೆ ಬೀಳದೆ ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದ. ಪ್ರಕರಣ ವಿಕೋಪಕ್ಕೆ ಹೋಗ್ತಿರೋ ಹಿನ್ನೆಲೆಯಲ್ಲಿ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಎಂಟು ಜನ ಕಾರ್ಮಿಕರು
ಗಾಯಗೊಂಡು, ಈ ಪೈಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದರು. ಇಂದು ಮತ್ತೋರ್ವ ಕಾರ್ಮಿಕ ಮಹಿಳೆ ಸಾವಿಗೀಡಾಗಿದ್ದು, ಉಳಿದ ಮುವ್ವರು ಕಾರ್ಮಿಕರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದಯವರಿದಿದೆ. ಈ ಪೈಕಿ ಒಂದಿಬ್ಬರ ಸ್ಥಿತಿ ಈಗಲೂ ಚಿಂತಾಜನಕವಾಗಿದೆ. ವೈದ್ಯರು ಅವರ ಪ್ರಾಣ ಉಳಿಸೋಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ: Chitradurga: ನಡ್ಡಾ ನಂತರ ಮುರುಘಾ ಮಠಕ್ಕೆ ಭೇಟಿ ಕೊಟ್ಟ ಡಿಕೆಶಿ! ಕಾಂಗ್ರೆಸ್ ಕಾಡುತ್ತಿರುವ ಭಯ ಏನು?
ಯಾವುದೇ ಅನುಮತಿ ಪಡೆಯದೇ ಸ್ಫೋಟಕ ಅಂಶಗಳನ್ನೊಳಗೊಂಡ ರಸಾಯನಿಕ ಬಳಸಿ ಸ್ಪಾರ್ಕಲ್ ಕ್ಯಾಂಡಲ್ ತಯಾರು ಮಾಡಲಾಗುತ್ತಿತ್ತು. ಸ್ಪಾರ್ಕಲ್ ಕ್ಯಾಂಡಲ್ ಸ್ಫೋಟ ಪ್ರಕರಣ ಬಳಿಕ ಅಬ್ದುಲ್ ಶೇಕ್ ತಲೆಮರಿಸಿಕೊಂಡಿದ್ದ. ಮ್ಯಾನೇಜರ್ ಮಂಜುನಾಥನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಇನ್ನಿಬ್ಬರು ಪಾರ್ಟನರ್ ಗಳೂ ಇದ್ದು, ಅವರ ಬಂಧನಕ್ಕೂ ಪೊಲೀಸರು ಜಾಲ ಬೀಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುರಿ ಕಳ್ಳನನ್ನು ಅಟ್ಟಾಡಿಸಿ ಹಿಡಿದ ಪೊಲೀಸರು
ಕುರಿಗಳ ಕಳ್ಳನನ್ನು ಪೊಲೀಸರು ಅಟ್ಟಾಡಿಸಿಕೊಂಡು ಹಿಡಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಕುರಿಗಳ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಖದೀಮನನ್ನು ಅಟ್ಟಾಡಿಸಿಕೊಂಡು ಹಿಡಿದ ಪೊಲೀಸರು ನಂತರ ಅವನ ಕೈಕಾಲು ಕಟ್ಟಿ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರಿಗೆ ಸಾರ್ವಜನಿಕರ ಸಹಕಾರ ನೀಡಿದ್ದಾರೆ. ಧಾರವಾಡದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಕುರಿಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿ, ಇನ್ನೇನು ಹಿಡೀಬೇಕು ಅನ್ನುವಷ್ಟರಲ್ಲಿಯೇ ಎಸ್ಕೇಪ್ ಆಗ್ತಿದ್ದ. ಹಲವು ಬಾರಿ ಪೊಲೀಸರಗೇ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಅವರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ.
ಇದನ್ನೂ ಓದಿ: Blood Letter: ಉತ್ತರ ಕನ್ನಡದಲ್ಲಿ ಆಸ್ಪತ್ರೆಗಾಗಿ ಹೋರಾಟ, ರಕ್ತದಲ್ಲಿ ಪತ್ರ ಬರೆದು ಸರ್ಕಾರಕ್ಕೆ ಆಗ್ರಹ
ಕಳ್ಳನ ಬಗ್ಗೆ ಸಿಸಿ ಕ್ಯಾಮರಾದ ಚಲನವಲನ ಗಮನಿಸಿ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದ್ದಾರೆ. ಹುಬ್ಬಳ್ಳಿ ಪೊಲೀಸರ ಸಹಾಯದಿಂದ ದಾಳಿ ಮಾಡಿರೋ ಧಾರವಾಡ ಪೊಲೀಸರು, ಅವನನ್ನು ಅಟ್ಟಾಡಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಮ್ಮೆ ತಪ್ಪಿಸಿಕೊಂಡು ಹೋಗದಿರಲಿ ಅಂತ ಕೈಕಾಲು ಕಟ್ಟಿ ಧಾರವಾಡ ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ ಹೆಸರು ಇತ್ಯಾದಿ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ