ಹುಬ್ಬಳ್ಳಿ - ಇದನ್ನು ಜನ ಡೆಡ್ಲಿ ರೋಡ್ (Deadly Road) ಅಂತಾನೇ ಕರೀತಾರೆ. ಸಾವಿನ ರಸ್ತೆ ಅಂತ ಅಪಖ್ಯಾತಿಗೆ ಗುರಿಯಾಗಿರೋ ಈ ರಸ್ತೆ ನೂರಾರು ಜನರನ್ನು ಬಲಿ ಪಡೆದಿದೆ. ಕೆಲವೊಮ್ಮೆ ಸಾವಿನ ಸಂಖ್ಯೆ (Death Numbers) 14 ನ್ನೂ ದಾಟಿದೆ. ಕೇವಲ 26 ಕಿಲೋ ಮೀಟರ್ ಅಂತರದ ಈ ರಸ್ತೆ ಅಗಲೀಕರಣ ನಡೀತಾನೇ ಇಲ್ಲ. ಜನ ಸಾವಿನ ಮನೆ ಕದ ತಟ್ಟೋದೂ ನಿಂತಿಲ್ಲ. ಡೆಡ್ಲಿ ಗ್ಯಾಂಗ್ ಗೊತ್ತು. ಇದ್ಯಾವುದು ಡೆಡ್ಲಿ ರೋಡ್ ಅಂತೀರಾ. ಅಂಥದ್ದೊಂದು ಭಯಾನಕ ರಸ್ತೆ ಹುಬ್ಬಳ್ಳಿ – ಧಾರವಾಡ (hubballi – Dharwad) ಅವಳಿ ನಗರದ ನಡುವೆ ಇದೆ. ರಾಷ್ಟ್ರೀಯ ಹೆದ್ದಾರಿ (National Highway) ರೂಪದಲ್ಲಿರೋ ಬೈಪಾಸ್ ರಸ್ತೆ ಒಂದರ್ಥದಲ್ಲಿ ಸಾವಿನ ಮನೆಗೆ ಕರೆದೊಯ್ಯೋ ರಹದಾರಿಯಾಗಿದೆ. ಸ್ವಲ್ಪ ಯಾಮಾರಿದ್ರೂ ಯಮನ ಪಾದ ಸೇರೋದು ಗ್ಯಾರಂಟಿ.
ವರ್ಷಕ್ಕೆ ಏನಿಲ್ಲವೆಂದರೂ ಕನಿಷ್ಟ 50 ಸಾವು ಖಚಿತವಾಗಿದೆ. ಇನ್ನು ಗಾಯಾಳುಗಳ ಲೆಕ್ಕ ಹೇಳತೀರದು. ವಾಣಿಜ್ಯ ರಾಜಧಾನಿ ಅಂತಲೇ ಕರೆಸಿಕೊಂಡಿರೋ ಹುಬ್ಬಳ್ಳಿಗೆ ಹೊಂದಿಕೊಂಡಿದೆ ಈ ರಸ್ತೆ ನೂರಾರು ಜೀವಗಳನ್ನು ಬಲಿ ಪಡೆದಿದೆ.
12 ವರ್ಷದಲ್ಲಿ 390 ಬಲಿ
ಹುಬ್ಬಳ್ಳಿ – ಧಾರವಾಡ ನಡುವಿನ ಈ ರಸ್ತೆಯಲ್ಲಿ ಅದೆಷ್ಟೋ ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಕಳೆದ 12 ವರ್ಷದಲ್ಲಿ 390 ಜೀವಗಳು ಬಲಿಯಾಗಿವೆ. 2021 ರಲ್ಲಿ ನಡೆದ ಒಂದೇ ಅಪಘಾತದಲ್ಲಿ 14 ಜನ ಸಾವಿಗೀಡಾಗಿದ್ದರು. ಮೊನ್ನೆಯಷ್ಟೇ ಇಲ್ಲಿ ಎಂಟು ಜನ ಸಾವನ್ನಪ್ಪಿ, 24 ಜನ ಗಾಯಗೊಂಡಿದ್ದರು.
ಇದನ್ನೂ ಓದಿ: Hubballi Accident: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ; ಏಳು ಸಾವು, 25 ಗಾಯ
26 ಕಿಲೋ ಮೀಟರ್ ಅಂತರ
ಹೀಗೆ ಪದೇ ಪದೇ ಅಪಘಾತ ಆಗೋಕೋ ಕಾರಣ ಏನು ಅನ್ನೋ ಪ್ರಶ್ನೆ ಎದುರಾಗೋದು ಸಹಜ. ಇದು ಹೆಸರಿಗೆ ರಾಷ್ಟ್ರೀಯ ಹೆದ್ದಾರಿ. ಆದ್ರೆ ಇರೋದು ಮಾತ್ರ ರಾಜ್ಯ ಹೆದ್ದಾರಿಯಷ್ಟೇ ಅಗಲ. ಹುಬ್ಬಳ್ಳಿ – ಧಾರವಾಡ ನಡುವಿನ ಅಂತರ ಕೇವಲ 26 ಕಿಲೋಮೀಟರ್. ಆದ್ರೆ ರಸ್ತೆ ಅತ್ಯಂತ ಕಿರಿದಾಗಿರೋದ್ರಿಂದ ವಾಹನ ದಟ್ಟಣೆ ವಿಪರೀತ. ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ರಸ್ತೆಯಲ್ಲಿ ಡಿವೈಡರ್ ಇರಬೇಕು. ಆದ್ರೆ ಇಲ್ಲಿ ಇರೋದೇ ಒಂದು ರಸ್ತೆ. ಅದ್ರಲ್ಲೇ ಹೋಗುವ, ಬರುವ ವಾಹನಗಳು ಸಂಚಾರ ದಟ್ಟಣೆ ವಿಪರೀತ.
ಕಿರಿದಾದ ರಸ್ತೆ, ಅಪಘಾತ ಕಟ್ಟಿಟ್ಟಬುತ್ತಿ
ಇನ್ನು ಗೊಬ್ಬೂರು ಬೈ ಪಾಸ್ ವರೆಗೆ ಷಟ್ಪಥ ರಸ್ತೆ. ಧಾರವಾಡ ಹೊರವಲಯದವರೆಗೂ ಷಟ್ಪಥ ರಸ್ತೆ ಇದೆ. ಇವೆರಡೂ ದಾಟುತ್ತಿದ್ದಂತೆಯೇ ರಸ್ತೆ ಏಕಾಏಕಿ ಕಿರಿದಾಗುತ್ತೆ. ಷಟ್ಪಥ ರಸ್ತೆಯಲ್ಲಿ ವೇಗವಾಗಿ ಬಂದೋರು ಏಕಾಏಕಿ ವೇಗ ಕಡಿತ ಮಾಡೋಕೆ ಹೋಗಲ್ಲ. ಅದೇ ವೇಗದಲ್ಲಿ ಕಿರಿದಾದ ರಸ್ತೆಯಲ್ಲಿಯೂ ಸಂಚರಿಸಿದಾಗ ಅಪಘಾತ ಕಟ್ಟಿಟ್ಟಬುತ್ತಿ.
ವಿಚಿತ್ರವೆಂದರೆ ಇಲ್ಲಿ ಸರ್ವೀಸ್ ರಸ್ತೆಯೂ ಇಲ್ಲ. ಹೀಗಾಗಿ ಬೈಕ್ ಗಳು, ಚಕ್ಕಡಿ, ಟ್ರ್ಯಾಕ್ಟರ್ ಮತ್ತಿತರ ವಾಹನಗಳು ಇಲ್ಲಿಯೇ ಬಂದು ಹೋಗುತ್ತೆ. ಹೆದ್ದಾರಿಯಲ್ಲಿ ಹೋಗೋ ವಾಹನಗಳ ಜೊತೆಗೆ, ಸ್ಥಳೀಯರ ವಾಹನಗಳು. ವಾಹನ ದಟ್ಟಣೆ ವಿಪರೀತವಾಗಿದ್ದು, ಒಂದರ ಹಿಂದೆ ಒಂದು ವಾಹನ ಹೋಗೋ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: Accident: ಬೆಂಗಳೂರಲ್ಲಿ ವಾಟರ್ ಟ್ಯಾಂಕರ್ ಹರಿದು ಬಾಲಕಿ ಸಾವು, ಚಾಲಕ ಎಸ್ಕೇಪ್
500ಕ್ಕೂ ಹೆಚ್ಚು ಸಾವುಗಳು
ರಾತ್ರಿ ವೇಳೆಯಂತೂ ವಾಹನ ದಟ್ಟಣೆ ದುಪ್ಪಟ್ಟಾಗುತ್ತದೆ. ಅಪ್ಪಿತಪ್ಪಿ ಓವರ್ ಟೇಕ್ ಮಾಡೋಕೋ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಮೊನ್ನೆಯೂ ಓವರ್ ಟೇಕ್ ಮಾಡೋಕೆ ಹೋಗಿ ಅಪಘಾತ ಸಂಭವಿಸಿದೆ. 1999 ರಲ್ಲಿ ಆರಂಭಗೊಂಡ ಈ ರಸ್ತೆಯಲ್ಲಿ ಇದುವರೆಗೂ 500 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಸಾವಿರಾರು ಜನ ಗಾಯಗೊಂಡಿದ್ದಾರೆ.
ಈ ರಸ್ತೆಯಲ್ಲಿ ಸಾವಿನ ರುದ್ರನರ್ತನ ನಿಂತಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಇದನ್ನು ದಶ ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸೋಕೆ ಶಿಲನ್ಯಾಸ ನೆರವೇರಿಸಲಾಗಿತ್ತು.
ನಿತಿನ್ ಗಡ್ಕರಿ ಶಿಲನ್ಯಾಸ ನೆರವೇರಿಸಿದ್ದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೀತಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೆಷ್ಟು ಜೀವಗಳು ಬಲಿಯಾಗಬೇಕೆಂದು ಜನ ಪ್ರಶ್ನಿಸ್ತಿದಾರೆ. ಈಗಲಾದ್ರೂ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಿ ಅಂತ ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ ಮುಖಂಡ ಪಿ.ಎಚ್.ನೀರಲಕೇರಿ ಆಗ್ರಹಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ