Vistadome: ಪಶ್ಚಿಮಘಟ್ಟಗಳ ಸುಂದರ ಪ್ರಕೃತಿ ರಮಣೀಯ ದೃಶ್ಯಗಳನ್ನು ಸವಿಯುವ ಅವಕಾಶ ಮಂಗಳೂರು-ಬೆಂಗಳೂರು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇಂದಿನಿಂದ ಲಭ್ಯವಾಗಲಿದೆ. ಭಾರತೀಯ ರೈಲ್ವೆ ಮಂಗಳೂರು- ಬೆಂಗಳೂರಿನ ಯಶವಂತಪುರ ಮಧ್ಯೆ ಸಂಚರಿಸುವ ಹಗಲು ರೈಲಿನಲ್ಲಿ ಗಾಜಿನ ಛಾವಣಿ ಹಾಗೂ ಇತರ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸುವ ಮೂಲಕ ಪ್ರಕೃತಿ ಪ್ರಿಯರಿಗೆ ಪ್ರಕೃತಿಯ ಸವಿಯನ್ನು ಭರಪೂರವಾಗಿ ಸವಿಯುವ ವ್ಯವಸ್ಥೆಯನ್ನು ಮಾಡಿದೆ. ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಪ್ರತೀ ದಿನ ಹೊರಡುವ ಈ ರೈಲಿನಲ್ಲಿ ಒಟ್ಟು ಎರಡು ವಿಸ್ಟಾಡೋಮ್ ಬೋಗಿಗಳಿರಲಿವೆ. ಮಂಗಳೂರು ಜಂಕ್ಷನ್ ನಿಂದ ಭಾನುವಾರ ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ 11.30 ಕ್ಕೆ ಬೆಂಗಳೂರು ಹೊರಡಲಿರುವ ಈ ರೈಲು ರಾತ್ರಿ 8.20 ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣವನ್ನು ತಲುಪಲಿದೆ. ಭಾನುವಾರ ಈ ರೈಲು ಮಂಗಳೂರಿನಿಂದ ಬೆಳಿಗ್ಗೆ 9.15 ಕ್ಕೆ ಹೊರಡಲಿದ್ದು, ರಾತ್ರಿ 8.05 ಕ್ಕೆ ಬೆಂಗಳೂರು ತಲುಪಲಿದೆ.
ಅದೇ ರೀತಿ ಈ ರೈಲು ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊರಡುವ ಈ ರೈಲು ಸಂಜೆ 6 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರಿನಿಂದ ಹೊರಟ ಈ ರೈಲು ಬಿಸಿರೋಡ್, ಕಬಕ ಪುತ್ತೂರು, ಎಡಮಂಗಲ,ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ರೈಲು ನಿಲ್ದಾಣ ತಲುಪುತ್ತದೆ. ಸುಬ್ರಹ್ಮಣ್ಯ ದ ವರೆಗೆ ಊರು-ಕೇರಿಗಳನ್ನು ಕಾಣುವ ಪ್ರಯಾಣಿಕನಿಗೆ ಪ್ರಯಾಣದ ನಿಜವಾದ ಥ್ರಿಲ್ ಬರೋದು ಸುಬ್ರಹ್ಮಣ್ಯ ರೈಲು ನಿಲ್ದಾಣದ ಬಳಿಕದ ಪ್ರಯಾಣದಲ್ಲಿ.ಈ ಕಾರಣಕ್ಕಾಗಿಯೇ ರೈಲ್ವೆ ಇಲಾಖೆ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಿದ್ದು, ಸುಬ್ರಹ್ಮಣ್ಯ ದಿಂದ ದೋಣಿಗಲ್ ವರೆಗಿನ ಸುಮಾರು 60 ಕಿಲೋಮೀಟರ್ ಪ್ರಯಾಣ ಪ್ರಕೃತಿಯ ಸೌಂದರ್ಯದ ದರ್ಶನವನ್ನು ಮಾಡಿಸುತ್ತದೆ. ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ದೋಣಿಗಲ್ ನಿಲ್ದಾಣದ ತನಕ ಒಟ್ಟು 57 ಟನಲ್ ಗಳು ಬರಲಿದ್ದು, 225 ಸಣ್ಣ-ಪುಟ್ಟ ಹಾಗೂ ಉದ್ದದ ಸೇತುವೆಗಳು ಸಿಗಲಿವೆ.
ಇದನ್ನೂ ಓದಿ: Vistadome: ಬೆಂಗಳೂರು - ಮಂಗಳೂರು ನಡುವೆ ಐಶಾರಾಮಿ ರೈಲು ಪ್ರಯಾಣ ಇಂದಿನಿಂದ ಶುರು, ವಿಸ್ಟಾಡೋಮ್ ಒಳಗೆ ಏನಿದೆ ?
ಈ ಸೇತುವೆಗಳಲ್ಲಿ ಎಡಕುಮೇರಿ-ಅರೆಬೆಟ್ಟ ರಸ್ತೆಯ ಮಧ್ಯೆ ಸುಮಾರು 800 ಮೀಟರ್ ಉದ್ದದ ಸೇತುವೆ ಬರಲಿದೆ. ಈ ಸೇತುವೆಯು ಅತೀ ಎತ್ತರದ ಪ್ರದೇಶದಲ್ಲಿದ್ದು, ಈ ಸೇತುವೆ ಕೆಳಭಾಗದಲ್ಲಿ ಹಲವು ನದಿ-ತೊರೆಗಳು ಹಾದು ಹೋಗುವುದನ್ನು ಕಣ್ತುಂಬಬಹುದಾಗಿದೆ. ಸುಬ್ರಹ್ಮಣ್ಯ, ಸಿರಿಬಾಗಿಲು,ಎಡಕುಮೇರಿ,ಕಡಗರಪಳ್ಳಿ,ದೋಣಿಗಲ್ ವರೆಗೂ ಪ್ರಯಾಣಿಕನಿಗೆ ಪ್ರಕೃತಿಯ ಸವಿಯನ್ನು ಭರಪೂರ ಸವಿಯುವ ಛಾನ್ಸ್ ಈ ವಿಸ್ಟಾಡೋಮ್ ಬೋಗಿಯಿಂದ ಸಿಗಲಿದೆ. ದೋಣಿಗಲ್ ಬಳಿಕ ಹಾಸನ, ಶ್ರವಣಬೆಳಗೊಳ, ಕುಣಿಗಲ್ ಮಾರ್ಗವಾಗಿ ಈ ರೈಲು ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ.
ಈ ನೂತನ ವಿಸ್ಟಾಡೋಮ್ ಬೋಗಿಯ ದರದಲ್ಲಿ ಇತರ ಬೋಗಿಗಳನ್ನು ಹೊಲಿಸಿದರೆ ಕೊಂಚ ವೆತ್ಯಾಸವಿದ್ದು, ಪ್ರತೀ ಟಿಕೆಟ್ ದರ 1375 ರೂಪಾಯಿ ನಿಗದಿಪಡಿಸಲಾಗಿದೆ. ವಿಂಡೋ ಸೇರಿದಂತೆ ಮೇಲ್ಛಾವಣಿಯೆಲ್ಲಾ ಗಾಜಿನಿಂದಲೇ ನಿರ್ಮಿಸಲಾಗಿರುವ ಈ ಬೋಗಿಯೊಳಗೆ ಕುಳಿತ ಪ್ರಯಾಣಿಕನಿಗೆ ರೈಲು ಸಂಚರಿಸುವ ಮಾರ್ಗ ಮಧ್ಯೆ ಬರುವ ಹಸಿರನ್ನೂ ಆಸ್ವಾದಿಸಬಹುದಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ 375 ಕಿಲೋಮೀಟರ್ ದೂರದ ಹಾದಿಯಲ್ಲಿ ಒಟ್ಟು 90 ಕಿಲೋಮೀಟರ್ ಹಾದಿಯಲ್ಲಿ ಪ್ರಕೃತಿಯ ವಿವಿಧ ವೈವಿಧ್ಯಗಳನ್ನೂ ವೀಕ್ಷಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ