19 ನೇ ಶತಮಾನದ ಭಾರತದಲ್ಲಿ ಪ್ರಾಣಿ (Animal) ಸಂಗ್ರಹಾಲಯಗಳ ಅಸ್ತಿತ್ವದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಅಂದಿನ ಕಾಲದಲ್ಲಿ ಮಹಾರಾಜರು ಬೇಟೆಯಾಡಿದ ಪ್ರಾಣಿಗಳನ್ನು ತಮ್ಮ ಶಕ್ತಿ ಪ್ರದರ್ಶನ ಹಾಗೂ ಯುರೋಪಿಯನ್ ಮೂಲದ ಅತಿಥಿಗಳ ಸತ್ಕಾರಕ್ಕಾಗಿ ಪಂಜರದಲ್ಲಿರಿಸುತ್ತಿದ್ದರು ಎಂಬ ಹಿನ್ನಲೆ ಇದೆ. ನಾನಾ ಸಾಹೇಬ್ ಪೇಶ್ವೆ II, ಲಕ್ನೌನ ವಾಜಿದ್ ಆಲಿ ಶಾ ಪ್ರಾಣಿ ಸಂಗ್ರಹಾಲವನ್ನು ಹೊಂದಿದ್ದ ರಾಜರುಗಳಾಗಿದ್ದರು. ಮೈಸೂರಿನ (Mysore) ಪ್ರಾಣಿಸಂಗ್ರಹಾಲಯ ಹಾಗೂ ಉದ್ಯಾನವನ ಚಾಮರಾಜೇಂದ್ರ ಒಡೆಯರ್ X ರ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತು. ಮಹಾರಾಜರು ನಿರ್ಮಿಸಿದ ಮೃಗಾಲಯ ಶೀಘ್ರವೇ ವೀಕ್ಷಕರ ಭೇಟಿಗೆ ವೇದಿಕೆಯನ್ನೊದಗಿಸಿತು. ಇಲ್ಲಿ ಕಾಡಿನ ಪ್ರಾಣಿಗಳಲ್ಲದೆ (Forest Animal) ವಿದೇಶಿ ಪ್ರಾಣಿಗಳು ಇದ್ದವು ಎಂಬುದು ಮೈಸೂರು ಮೃಗಾಲಯದ ವಿಶೇಷವಾಗಿದೆ.
ಬೆಂಗಳೂರಿನ ಮೃಗಾಲಯದ ಬಗ್ಗೆ ಇಲ್ಲಿದೆ ಮಾಹಿತಿ
ನಮ್ಮ ಬೆಂಗಳೂರಿನಲ್ಲಿ ಕೂಡ ಮೃಗಾಲಯದ ಅಸ್ತಿತ್ವದ ಬಗ್ಗೆ ಬೆಂಗಳೂರಿಗರಿಗೆ ಕಡಿಮೆ ತಿಳಿದಿದ್ದು ಈ ಮೃಗಾಲಯ ಲಾಲ್‌ಬಾಗ್‌ನಲ್ಲಿತ್ತು ಎಂದರೆ ಆಶ್ಚರ್ಯಪಡುವವರೇ ಹೆಚ್ಚು. ಉದ್ಯಾನವು ಪ್ರಾಣಿಸಂಗ್ರಹಾಲಯ ಮತ್ತು ಪಂಜರ ಎರಡಕ್ಕೂ ನೆಲೆಯಾಗಿತ್ತು.
ಲಾಲ್‌ಬಾಗ್, ಅಥವಾ 'ಕೆಂಪು ಉದ್ಯಾನ'ವನ್ನು ಹೈದರ್ ಅಲಿ ಕಾಲದಲ್ಲಿ ಮೊದಲ ಹಣ್ಣಿನ ತೋಟವಾಗಿ ಅಭಿವೃದ್ಧಿಪಡಿಸಲಾಯಿತು. ಟಿಪ್ಪು ಸುಲ್ತಾನನ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಯಿತು. 1836 ರಲ್ಲಿ ತೋಟಗಾರಿಕಾ ಸಮಾಜವನ್ನು ಸ್ಥಾಪಿಸಲಾಯಿತು.
ಸರ್ಕಾರಿ ತೋಟಗಾರಿಕೆ ಉದ್ಯಾನವನ ಸ್ಥಾಪನೆ
ಹತ್ತು ವರ್ಷಗಳ ನಂತರ, ಜುಲೈ 1856 ರಲ್ಲಿ, ಲಾಲ್‌ಬಾಗ್‌ಗೆ ಭೇಟಿ ನೀಡಿದ ಸಸ್ಯಶಾಸ್ತ್ರ ತಜ್ಞರ ಶಿಫಾರಸಿನ ಮೇರೆಗೆ, ಸರ್ಕಾರಿ ತೋಟಗಾರಿಕೆ ಉದ್ಯಾನವನ್ನು ಸ್ಥಾಪಿಸಲಾಯಿತು. ಮೊದಲು 100 ಎಕರೆ ಇದ್ದ ತೋಟವನ್ನು ನಂತರ 250 ಎಕರೆಗೆ ವಿಸ್ತರಿಸಲಾಯಿತು.
ಸಂರಕ್ಷಣಾಲಯವನ್ನು ನಿರ್ಮಿಸಿ ಅದಕ್ಕೆ ಆಲ್ಬರ್ಟ್ ವಿಕ್ಟರ್ ಅವರ ಹೆಸರನ್ನು ಇಡಲಾಯಿತು. ಭಾರತದ ಯಾವುದೇ ಸಾರ್ವಜನಿಕ ಉದ್ಯಾನವನಗಳು ಹೊಂದಿರದ ವಿಶೇಷ ಆಕರ್ಷಣೆಯನ್ನು ಈ ಉದ್ಯಾನವನ ಹೊಂದಿತ್ತು.
ವಿದೇಶಗಳಿಂದ ಪ್ರಾಣಿಗಳ ಆಮದು
1865 ರಲ್ಲಿ, ಉದ್ಯಾನದಲ್ಲಿ ವಿದೇಶಿ ಮತ್ತು ಸ್ಥಳೀಯ ಪಕ್ಷಿಗಳ ಉತ್ತಮ ಸಂಗ್ರಹವನ್ನು ಹೊಂದಿರುವ ಪಂಜರವನ್ನು ನಿರ್ಮಿಸಲಾಯಿತು. ಲೋಕೋಪಯೋಗಿ ಇಲಾಖೆಯು ಪ್ರಾಣಿ ಸಂಗ್ರಹಾಲಯ ಕಟ್ಟಡಗಳಿಗೆ ವ್ಯಾಪಕ ಸುಧಾರಣೆಗಳನ್ನು ನಡೆಸಿದವು.
ಲಾಲ್‌ಬಾಗ್‌ನಲ್ಲಿರುವ ಪ್ರಾಣಿಸಂಗ್ರಹಾಲಯವು ಅತ್ಯುನ್ನತ ಹಾಗೂ ಖ್ಯಾತ ಪ್ರಾಣಿಗಳ ಸಂಗ್ರಹದಿಂದ ಪ್ರವಾಸಿಗರ ಕಣ್ಮನ ಸೆಳೆಯಿತು. ಈ ಮೃಗಾಲಯದಲ್ಲಿ ರಾಜ ಹುಲಿ ಹಾಗೂ ಮದ್ರಾಸ್ ಲಾಂಗೂರ್ ಕೂಡ ಇತ್ತು ಎಂಬುದು ಅತಿ ವಿಶೇಷವಾಗಿದೆ.
1893 ಮತ್ತು 1908 ರ ನಡುವೆ, ಸಿಂಹಗಳು, ಹುಲಿಗಳು, ಸಿವೆಟ್ ಬೆಕ್ಕುಗಳು, ಮಂಗಗಳು, ಜಂಜಿಬಾರ್ ಮಂಗಗಳು, ಬಬೂನ್‌ಗಳು, ಸಾರಸ್ ಕ್ರೇನ್‌ಗಳು, ಬಾತುಕೋಳಿಗಳು ಮತ್ತು ಚಿರತೆ ಬೆಕ್ಕುಗಳನ್ನು ಸಂಗ್ರಹಿಸಲಾಯಿತು. 1905 ರಲ್ಲಿ ಮೃಗಾಲಯವು ಸಸ್ಯಾಹಾರಿ ಹಾಗೂ ಮಾಂಸಾಹಾರಿ 89 ಪ್ರಾಣಿ ಪಕ್ಷಿಗಳನ್ನೊಳಗೊಂಡಿತ್ತು. 1911 ರಲ್ಲಿ, ಮೃಗಾಲಯವು ಬರೋಡಾದ ಸ್ಟೇಟ್ ಗಾರ್ಡನ್ಸ್‌ನಿಂದ ಕಾಂಗರೂ ಮತ್ತು ರಿಂಗ್-ಟೈಲ್ಡ್ ಲೆಮರ್ ಅನ್ನು ಆಮದು ಮಾಡಿಕೊಂಡಿತು.
ಮಳೆಯಿಂದಾಗಿ ಪಂಜರ ಹಾಗೂ ಉದ್ಯಾನವನದ ಹಾನಿ
ದುರಾದೃಷ್ಟವಶಾತ್ ನಂತರದ ವರ್ಷಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಸಸ್ಯಗಳು ಮರಗಳು ಜೊತೆಗೆ ಪಂಜರಗಳು ನಾಶಗೊಳ್ಳತೊಡಗಿದವು. ನರ್ಸರಿಗಳ ವಿಸ್ತರಣೆ, ಬೀಜ ಡಿಪೋ ಮತ್ತು ಬೀಜ ಪರೀಕ್ಷಾ ಪ್ರಯೋಗಾಲಯವು ಕ್ರಮೇಣ ಲಾಲ್‌ಬಾಗ್‌ನಲ್ಲಿನ ಪ್ರಾಣಿ ಸಂಗ್ರಹಾಲಯವನ್ನು ಸಂಪೂರ್ಣವಾಗಿ ಮರೆಮಾಡಿತು.
ಪ್ಲೇಗ್ ರೋಗ ಮೃಗಾಲಯದ ವಿನಾಶಕ್ಕೆ ಕಾರಣವಾಯಿತು
1899 ರಲ್ಲಿ ಕಂಡುಬಂದ ಪ್ಲೇಗ್ ರೋಗವು ಪ್ರಾಣಿ ಸಂಗ್ರಹಾಲಯ ಮತ್ತು ಪಂಜರ ಎರಡರ ಜನಪ್ರಿಯತೆಯ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಅದೇ ಅವಧಿಯಲ್ಲಿ, ಮೃಗಾಲಯವನ್ನು ಮುಚ್ಚುವ ಬಗ್ಗೆ ಕೂಡ ಪ್ರಸ್ತಾವನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಪತ್ರಾಗಾರದಲ್ಲಿ ಸಂರಕ್ಷಿಸಲಾದ ಪತ್ರ ವ್ಯವಹಾರಗಳು ಮತ್ತು ದಾಖಲೆಗಳು ಮೃಗಾಲಯ ಹೇಗೆ ಅಂತ್ಯಗೊಂಡಿತು ಮತ್ತು ಏಕೆ ಮುಚ್ಚಲಾಯಿತು ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸುತ್ತವೆ.
ಬೆಂಗಳೂರಿನ ಮೃಗಾಲಯದ ಪರಿಸ್ಥಿತಿ ಹದಗೆಟ್ಟದ್ದರಿಂದ ಪ್ರಾಣಿ-ಪಕ್ಷಿಗಳನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ