ಮಂಡ್ಯ ಸಂಸದರು ದತ್ತುಪಡೆದ ಗ್ರಾಮ ಎಷ್ಟು ಅಭಿವೃದ್ಧಿ ಆಗಿದೆ? ಇಲ್ಲಿದೆ ರಿಯಾಲಿಟಿ ಚೆಕ್

news18
Updated:September 7, 2018, 5:46 PM IST
ಮಂಡ್ಯ ಸಂಸದರು ದತ್ತುಪಡೆದ ಗ್ರಾಮ ಎಷ್ಟು ಅಭಿವೃದ್ಧಿ ಆಗಿದೆ? ಇಲ್ಲಿದೆ ರಿಯಾಲಿಟಿ ಚೆಕ್
news18
Updated: September 7, 2018, 5:46 PM IST
-ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ

ಮಂಡ್ಯ,(ಸೆ.07):  ಕಳೆದ ಬಾರಿ‌ ನಡೆದ ಲೋಕಸಭಾ ಚುನಾವಣೆ ಬಳಿಕ ಸಕ್ಕರೆ ಜಿಲ್ಲೆ‌ ಮಂಡ್ಯದ ಆ ಊರಿಗೆ ಅದೃಷ್ಟ ಖುಲಾಯಿಸಿತ್ತು. ಸಂಸದರಾಗಿ ಆಯ್ಕೆಯಾದವರು‌ ತಮ್ಮ ಜಿಲ್ಲೆಯ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮ ಮಾಡುವಂತೆ ಪ್ರಧಾನಿ ಮೋದಿ‌ ಎಲ್ಲಾ ಸಂಸದರಿಗೂ ಮನವಿ‌ ಮಾಡಿದ್ದರು. ಪ್ರಧಾನಿ‌ ಮನವಿ ಮೇರೆಗೆ ಮಂಡ್ಯ ಸಂಸದರಾಗಿದ್ದ ಪುಟ್ಟರಾಜು ತಮ್ಮ ಕ್ಷೇತ್ರದ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಅಭಿವೃದ್ದಿ ಪಡಿಸಿ ಮಾದರಿ ಗ್ರಾಮ ಮಾಡುವ ಭರವಸೆ ನೀಡಿದ್ದರು. ಆದರೆ ಆ ಭರವಸೆ ಎಷ್ಟರ ಮಟ್ಟಿಗೆ ಈಡೇರಿದೆ, ಸಂಸದರಾಗಿದ್ದವರು ಆ ಊರನ್ನು  ಅಭಿವೃದ್ಧಿ ಮಾಡಿದ್ರಾ..? ಎಂಬುದಕ್ಕೆ ಈ ವರದಿ ಓದಿ.

ಹೌದು, ಇದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ‌ ಕೆರೆತೊಣ್ಣೂರು ಗ್ರಾಮ. ಈ ಗ್ರಾಮ ಕಳೆದ ಲೋಕಸಭಾ ಚುನಾವಣೆ ಬಳಿಕ ಸಂಸದರ ದತ್ತು ಗ್ರಾಮಕ್ಕೆ ಆಯ್ಕೆಯಾಗಿದ್ದ ಗ್ರಾಮ. ದತ್ತು ತೆಗೆದುಕೊಂಡು ಮಾದರಿ ಗ್ರಾಮ ಮಾಡುವುದಾಗಿ‌ ಹೇಳಿದ್ದ ಸಂಸದರಾಗಿದ್ದ ಪುಟ್ಟರಾಜು ಈ ಗ್ರಾಮವನ್ನು ಮಾದರಿ ಗ್ರಾಮ ಮಾಡಲೇ ಇಲ್ಲ. ಸಂಸದರ ದತ್ತು ಗ್ರಾಮಕ್ಕೆ ಆಯ್ಕೆಯಾದಾಗ ಈ ಊರಿನ‌ ಜನರು ತುಂಬಾ ಸಂತಸಪಟ್ಟಿದ್ದರು. ಅಲ್ಲದೇ ತಮ್ಮದೇ ಕ್ಷೇತ್ರದ ಸಂಸದರಾಗಿರುವ ಪುಟ್ಟರಾಜು ಮೇಲೆ ಬಹಳ ಭರವಸೆ ಇಟ್ಟುಕೊಂಡು ತಮ್ಮೂರು ದತ್ತು ಗ್ರಾಮದಡಿ ಮತ್ತಷ್ಟು ಅಭಿವೃದ್ದಿಯಾಗಿ ಪ್ರವಾಸಿತಾಣವಾಗಲಿದೆ ಎಂದು ಸಂಭ್ರಮಿಸಿದರು.

ಆದರೆ ಅವರ ಆಸೆ ಯಾವುದು ಈಡೆರಲೇ ಇಲ್ಲ. ಹೀಗಲೂ ಈ ಊರಿನಲ್ಲಿ ಗುಂಡಿ ಬಿದ್ದ ರಸ್ತೆ, ಕಸ ತುಂಬಿದ ಚರಂಡಿ, ಸ್ವಚ್ಚತೆ ಇಲ್ಲದ ಅನೈರ್ಮಲ್ಯ ತುಂಬಿರುವ  ಜಾಗ, ಪ್ರಸಿದ್ದ ಪ್ರವಾಸಿ ತಾಣ ಕೆರೆ ಮತ್ತು ಪುರಾತನ ದೇವಾಲಯದ ಯಾವುದೇ ಅಭಿವೃದ್ದಿ ಕೆಲಸವಾಗದೆ ಹೇಗಿತ್ತೋ ಹಾಗೇಯೆ ಇದೆ. ಸಂಸದರ ದತ್ತು ಗ್ರಾಮವಾಗಿ‌ ಆಯ್ಕೆಯಾದ ಹೊಸದರಲ್ಲಿ‌ ಇಲ್ಲಿಗೆ ಅಧಿಕಾರಿಗಳೊಂದಿಗೆ ಸಂಸದರು ಬಂದಿದ್ದು ಬಿಟ್ಟರೆ ಇತ್ತ ತಲೆ ಹಾಕಿಲ್ಲವಂತೆ.‌ ಇದು ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸದರಾಗಿದ್ದ ಪುಟ್ಟರಾಜು ಈ ಯೋಜನೆಗೆ ಕೇಂದ್ರ ಹಣಕೊಡದ ಕಾರಣಕ್ಕೆ ನಿಲ್ಲಿಸಿದ್ದೇವೆ ಎಂದು ಗ್ರಾಮದ ಮುಖಂಡರಿಗೆ ತಿಳಿಸಿದ್ದಾರಂತೆ.

ಇನ್ನು‌ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಂಸದರಾಗಿದ್ದ ಪುಟ್ಟರಾಜು‌ ರಾಷ್ಟ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದಿದ್ದು, ರಾಜ್ಯ ವಿಧಾನಸಭೆಗೆ ಈ ಬಾರಿ ಸ್ಪರ್ಧಿಸಿ ಗೆದ್ದು ಮಂತ್ರಿಯಾದ ಮೇಲೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಈ ಗ್ರಾಮ ಸಂಸದರ ಆದರ್ಶ ಗ್ರಾಮವಾಗಿ ಇನ್ನು ಅಭಿವೃದ್ದಿಯಾಗುವುದು ಬಹುತೇಕ ಅನುಮಾನ. ಸಂಸದರ ಆದರ್ಶ ಗ್ರಾಮವಾಗಿ ಅಭಿವೃದ್ದಿಯಾಗಬೇಕಿದ್ದ ಈ ಗ್ರಾಮ ಸಂಸದನೇ ಇಲ್ಲದ ಗ್ರಾಮವಾಗಿದೆ. ಸಂಸದರಾಗಿದ್ದ ಅವಧಿಯಲ್ಲಿ ಪುಟ್ಟರಾಜು ಈ ಗ್ರಾಮಕ್ಕೆ ಯಾವುದೇ ಯೋಜನೆ ಮಾಡಕೊಡದೆ ಕೇವಲ ಭರವಸೆಯಾಗಿ ಉಳಿಸಿದ ಕೀರ್ತಿ ಮಾಜಿ ಸಂಸದ ಪುಟ್ಟರಾಜುಗೆ ಸಲ್ಲುತ್ತದೆ.

ಇನ್ನು ಸಂಸದರಾಗಿದ್ದ ಅವಧಿಯಲ್ಲಿ ದತ್ತು ಪಡೆದ ತಮ್ಮೂರಿನ‌ ಪ್ರಸ್ತುತ ಸಚಿವ ಪುಟ್ಟರಾಜು ಪ್ರತಿಕ್ರಿಯಿಸಲು ನಿರಾಕರಿಸಿದ್ದು ಮುಗಿದ ಅಧ್ಯಾಯ ಎಂದರೆ, ಜಿಲ್ಲೆಯ ಬಿಜೆಪಿ ಮುಖಂಡರು ಮಾತ್ರ ಮಾಜಿ‌ ಸಂಸದರು ಈ ಗ್ರಾಮ ಅಭಿವೃದ್ದಿಪಡಿಸಿದರೆ ಅದರ ಸಂಪೂರ್ಣ ಗೌರವ ಪ್ರಧಾನಿ‌ ಮೋದಿಗೆ ಸಲ್ಲುತ್ತೆ ಎನ್ನುವ ಕಾರಣಕ್ಕೆ ಗ್ರಾಮವನ್ನು ಅಭಿವೃದ್ದಿ ಪಡಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಕನಸಿನ‌ ಕೂಸು‌ ಸಂಸದರ ಆದರ್ಶ ದತ್ತು‌ ಗ್ರಾಮ ಮಾದರಿ ಯೋಜನೆ ಸಕ್ಕರೆ ನಾಡಿನಲ್ಲೂ ಕೂಡ ಹಳ್ಳ ಹಿಡಿದಿದೆ. ಸಂಸದರ‌ ದತ್ತು ಗ್ರಾಮ‌ ಯೋಜನೆಯಿಂದ ತಮ್ಮೂರು ಮಾದರಿ ಗ್ರಾಮವಾಗಲಿದೆ‌‌ ಅಂದುಕೊಂಡಿದ್ದ ಈಗ ಸಂಸದರೆ ಇಲ್ಲದಂತಾಗಿದ್ದು, ಯಾರನ್ನು ಪ್ರಶ್ನೆ ಮಾಡೋದು ಎನ್ನುವ ಚಿಂತೆಯಲ್ಲಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ