ಕಾಂಗ್ರೆಸ್​ನಲ್ಲಿದ್ದಾಗ ನೀವೆಷ್ಟು ಸಿ.ಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿ.ಡಿ ಇದೆ?; ಸಚಿವ ಎಸ್​.ಟಿ. ಸೋಮಶೇಖರ್​ಗೆ ಕಾಂಗ್ರೆಸ್​ ತಿರುಗೇಟು

Ramesh Jarkiholi Sex Scandal: ನಾನೂ ಕಾಂಗ್ರೆಸ್​ಲ್ಲಿದ್ದವನೇ, ಅವರ ಬುದ್ಧಿ ನನಗೆ ಗೊತ್ತಿದೆ. ರಮೇಶ್ ಜಾರಕಿಹೊಳಿ ಸಿ.ಡಿ. ಹಿಂದೆ ಕಾಂಗ್ರೆಸ್​ ಷಡ್ಯಂತ್ರವಿದೆ ಎಂದು ಆರೋಪಿಸಿದ್ದ ಸಚಿವ ಎಸ್​.ಟಿ. ಸೋಮಶೇಖರ್​ಗೆ ತಿರುಗೇಟು ನೀಡಿರು ಕಾಂಗ್ರೆಸ್​, ಹಾಗಿದ್ದರೆ ಕಾಂಗ್ರೆಸ್​ನಲ್ಲಿದ್ದಾಗ ನೀವೆಷ್ಟು ಸಿ.ಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿ.ಡಿ ಇದೆ? ಎಂದು ಪ್ರಶ್ನೆ ಮಾಡಿದೆ.

ಎಸ್.ಟಿ. ಸೋಮಶೇಖರ್

ಎಸ್.ಟಿ. ಸೋಮಶೇಖರ್

  • Share this:
ಬೆಂಗಳೂರು (ಮಾ. 10): ನಾನು 20 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಕಾಂಗ್ರೆಸ್​ನವರ ಬುದ್ಧಿ ಇಡೀ ರಾಜ್ಯಕ್ಕೇ ಗೊತ್ತಿದೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್​ನದ್ದೇ ಕೈವಾಡವಿದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಸಚಿವ ಎಸ್​.ಟಿ. ಸೋಮಶೇಖರ್ ನೇರ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಹಾಗಿದ್ದರೆ ಕಾಂಗ್ರೆಸ್​ನಲ್ಲಿದ್ದಾಗ ನೀವೆಷ್ಟು ಸಿ.ಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿ.ಡಿ ಇದೆ? ಈಗ ಕೋರ್ಟ್​ಗೆ ತಡೆಯಾಜ್ಞೆ ಸಲ್ಲಿಸಿದ್ದೇಕೆ? ಎಂದು ಪ್ರಶ್ನೆ ಮಾಡಿದೆ.

ಸಿ.ಡಿ. ಮಾಡಿದ್ದು ಕಾಂಗ್ರೆಸ್​ನವರೇ. ನಾನೂ ಕಾಂಗ್ರೆಸ್​ನಲ್ಲಿದ್ದವನೇ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದಿರುವ ಸಚಿವ ಎಸ್​.ಟಿ. ಸೋಮಶೇಖರ್ ಅವರೇ, ಕಾಂಗ್ರೆಸ್​ನಲ್ಲಿದ್ದಾಗ ನೀವೆಷ್ಟು ಸಿ.ಡಿ. ಮಾಡಿದ್ದೀರಿ? ನಿಮ್ಮದೆಷ್ಟು ಸಿ.ಡಿಗಳಿವೆ? ಅದಕ್ಕೆಷ್ಟು ಹಣ ಖರ್ಚು ಮಾಡಿದ್ದೀರಿ? ಬಾಂಬೆಯ ಹೋಟೆಲ್​ನಲ್ಲಿ ಕ್ವಾರಂಟೈನ್ ಆಗಿದ್ದಿರಲ್ಲ ಆಗ ನಿಮ್ಮ ಸಿ.ಡಿ. ಯಾರು ಮಾಡಿದ್ದು? ಈಗ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದೇಕೆ? ಎಂದು ಕಾಂಗ್ರೆಸ್​ ಟ್ವಿಟ್ಟರ್​ನಲ್ಲಿ ಪ್ರಶ್ನೆ ಮಾಡಿದೆ.ಕಾಂಗ್ರೆಸ್​ ಮೇಲೆ ಆರೋಪ ಮಾಡಿರುವ ಎಸ್​.ಟಿ. ಸೋಮಶೇಖರ್ ಅವರೇ ನಿಮ್ಮ ಕಳ್ಳ ಮನಸ್ಸೇಕೆ ಹುಳ್ಳುಳ್ಳಗೆ ಆಡುತ್ತಿದೆ? ಹೆಗಲು ಮುಟ್ಟಿ ನೋಡಿಕೊಂಡವರಂತೆ ಓಡಿ ಹೋಗಿ ತಡೆಯಾಜ್ಞೆ ಸಲ್ಲಿಸಿದ್ದೇಕೆ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋ ಹಗರಣದ ಕುರಿತು ಇಂದು ಮಾತನಾಡಿದ್ದ ಸಚಿವ ಎಸ್​.ಟಿ. ಸೋಮಶೇಖರ್, ಜಾರಕಿಹೊಳಿ ಅವರ ತೇಜೋವಧೆಗೆ ಕಾಂಗ್ರೆಸ್​ನವರೇ ಸಿ.ಡಿ ಮಾಡಿಸಿದ್ದಾರೆ. ನೂರಕ್ಕೆ ನೂರರಷ್ಟು ಇದರ ಹಿಂದೆ ಕಾಂಗ್ರೆಸ್​ನವರದ್ದೇ ಕೈವಾಡವಿದೆ. ಇನ್ಯಾರು ಈ ರೀತಿ ಮಾಡಲು ಸಾಧ್ಯ? ಇಂತಹ ಮನೆಹಾಳು ತೇಜೋವಧೆ ಕೆಲಸವನ್ನು ಅವರೇ ಮಾಡೋದು. ವಿಧಾನಸಭೆಯಲ್ಲಿ ನಮ್ಮ ಬಗ್ಗೆ ಕಾಂಗ್ರೆಸ್​ನವರು ಏನೆಲ್ಲ ಮಾತಾಡಿದರು ಎಂಬುದು ಗೊತ್ತಿದೆ. ಈಗ ರಮೇಶ್ ಜಾರಕಿಹೊಳೆ ಅವರ ಮಾನ ಹೋಯ್ತಲ್ಲ ಕಾಂಗ್ರೆಸ್​ನವರ ಕೈಯಲ್ಲಿ ಅದನ್ನು ಸರಿಪಡಿಸೋಕೆ ಆಗುತ್ತಾ?ಯಾವುದೇ ಸವಾಲಿದ್ರು ಎದುರಿಸುವ ಶಕ್ತಿ ಭಗವಂತ ನಮಗೆ ಶಕ್ತಿ ಕೊಟ್ಟಿದ್ದಾನೆ ಎಂದಿದ್ದರು.

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ. ಅವರು ಏನೇನು ಮಾಡುತ್ತಾರೆಂದು ನನಗೆ ಗೊತ್ತಿದೆ. ಸಿ.ಡಿ ಪ್ರಕರಣವನ್ನು ಸಿಬಿಐಗೆ ಕೊಡಲಿ ಎಂಬುದು ನಮ್ಮ ಒತ್ತಾಯ. ಸಿಬಿಐ‌ ತನಿಖೆಯಿಂದ ಎಲ್ಲವೂ ಬಯಲಾಗುತ್ತದೆ. ರಾಜಕೀಯವಾಗಿ ಸವಾಲು ಹಾಕಲಿ, ನಾವು ಅದನ್ನು ಎದುರಿಸುತ್ತೇವೆ. ಕಾಂಗ್ರೆಸ್​ನವರಿಗೆ ತಾಕತ್ತಿದ್ದರೆ ನನ್ನ ವಿರುದ್ಧ, ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸ್ಪರ್ಧಿಸಲಿ. ನಮ್ಮ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲಲಿ. ಅದನ್ನು ಬಿಟ್ಟು ಸಿ.ಡಿ ರಾಜಕಾರಣ ಮಾಡೋದು ಸರಿಯಲ್ಲ. ನಾವು ಕೋರ್ಟ್​ಗೆ ಹೋಗಿದ್ದೇ ಕಾಂಗ್ರೆಸ್​ನವರು ನನ್ನ ವಿರುದ್ಧ ತೇಜೋವಧೆ ಮಾಡುತ್ತಾರೆ ಅಂತ. ತೇಜೋವಧೆ ಬೇರೆ ಏನಾದರೂ ಇದ್ದರೆ ನಾವು ಎದುರಿಸ್ತೇವೆ. ಆದರೆ, ಕಾಂಗ್ರೆಸ್​ನವರಿಗೆ ನೈತಿಕತೆ ಇಲ್ಲ. ಅಂಥದ್ದರಲ್ಲಿ ಅವರು ನಮ್ಮನ್ನೇನು ಕೇಳೋದು ಎಂದು ಸಚಿವ ಎಸ್​.ಟಿ. ಸೋಮಶೇಖರ್ ಕಿಡಿ ಕಾರಿದ್ದರು.

ಕಾಂಗ್ರೆಸ್​ನವರು ಬಾಂಬೆ ಟೀಂನವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತ್ತು. ಕಾಂಗ್ರೆಸ್​ನವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಆದರೂ ನಮ್ಮ ತಟ್ಟೆಯಲ್ಲೇನು ಬಿದ್ದಿದೆ ಎಂದು ನೋಡೋಕೆ ಬರ್ತಾರೆ. ನಾವು ಕೋರ್ಟ್ ಗೆ ಹೋದರೆ ಅಪರಾಧಿಗಳಾಗಿ ಬಿಟ್ಟೆವಾ? ಕೋರ್ಟ್ ಗೆ ಹೋಗೋದು ಅಪರಾಧಾನಾ? ನಮ್ಮನ್ನು ಡ್ಯಾಮೇಜ್ ಮಾಡಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಬೇಕು ಅಂತ ಕಾಂಗ್ರೆಸ್​ನಿಂದ ಸಂಚು ನಡೆದಿದೆ. ಅದಕ್ಕಾಗಿ ನಾವು ‌ಕೋರ್ಟ್ ಗೆ ಹೋದೆವೇ ವಿನಃ ನಮ್ಮ ವಿರುದ್ಧವೂ ಸಿ.ಡಿ ಬರುತ್ತದೆ ಅಂತ ನಾವು ಕೋರ್ಟಿಗೆ ಹೋಗಲಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದರು.
Published by:Sushma Chakre
First published: