• Home
 • »
 • News
 • »
 • state
 • »
 • Hindi Imposition: ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ಹೇಗೆ? ಸಂವಿಧಾನದಲ್ಲಿ ಏನು ಹೇಳಲಾಗಿದೆ?

Hindi Imposition: ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ಹೇಗೆ? ಸಂವಿಧಾನದಲ್ಲಿ ಏನು ಹೇಳಲಾಗಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ ಹಿಂದಿ ಹೇರಿಕೆ ಹೇಗೆಲ್ಲಾ ಆಗುತ್ತದೆ, ಹಿಂದಿ ದಿವಸ್ ಪಾತ್ರವೇನು, ಸಂವಿಧಾನದಲ್ಲಿ ಹಿಂದೆ ಯಾವ ಬಲ ಇದೆ ಎಂಬುದನ್ನು ಬೃಂದಾ ಪ್ರಸಾದ್ ಅವರು ಈ ಲೇಖನದಲ್ಲಿ ವಿವರಿಸಿದ್ದಾರೆ.

 • Share this:

  ಪ್ರತಿ ವರ್ಷದಂತೆ ಇಂದು ಅಂದರೆ ಸೆಪ್ಟೆಂಬರ್ 14 ರಂದು ಒಕ್ಕೂಟ ಸರ್ಕಾರ ಹಿಂದಿ ದಿವಸವನ್ನು ಆಚರಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದಿಯೇತರ ರಾಜ್ಯಗಳಿಂದ ದೊಡ್ಡ ಮಟ್ಟದಲ್ಲಿ ವಿರೋಧವೂ ವ್ಯಕ್ತವಾಗಿದೆ. 'ಹಿಂದಿ ಬರಲ್ಲ ಹೋಗೋ' ಎನ್ನುವ ಟಿ ಶರ್ಟ್​ಗಳು ಟ್ರೆಂಡ್​ನಲ್ಲಿವೆ. ಕನ್ನಡದ ನಟರಾದ ಶಿವರಾಜ್ ಕುಮಾರ್, ಧನಂಜಯ ಅವರು ಹಿಂದಿ ಹೇರಿಕೆಯ ವಿರುದ್ಧ ಹಾಗೂ ಕನ್ನಡಿಗರ ಪರವಾಗಿ ನಿಂತಿದ್ದಾರೆ. ಕಳೆದ ಮೂರುದಿನಗಳಿಂದ #ServeInMyLanguage #StopHindiImposition ಟಾಪ್ ಟ್ರೆಂಡಿಗ್​ನಲ್ಲಿವೆ. ಹಿಂದಿಯೇತರ ರಾಜ್ಯಗಳಿಂದ ಹಲವು ವರ್ಷಗಳಿಂದ ವಿರೋಧವಿದ್ದರೂ ಒಕ್ಕೂಟ ಸರ್ಕಾರದ ಈ ನಡೆಗೆ ಕಾರಣಗಳೇನು? ಸರ್ಕಾರ ಯಾವುದೋ ಒಂದು ದಿನ ಹಿಂದಿ ದಿವಸ ಆಚರಣೆ ಮಾಡಿದರೆ ನಾವ್ಯಾಕೆ ವಿರೋಧ ಮಾಡಬೇಕು?


  ಭಾರತ ಅನ್ನೋ ದೇಶ ಅಲ್ಲ ಒಕ್ಕೂಟ ರೂಪುಗೊಂಡಿದ್ದೇ ಜನರು ಆಡುವ ನುಡಿಗಳ ಮೇಲೆ. ತೆಲುಗು ಮಾತನಾಡುವ ಪ್ರದೇಶವನ್ನು ಆಂಧ್ರ ಪ್ರದೇಶ ಎಂದು, ಕನ್ನಡ ಮಾತಾಡುವ ಪ್ರದೇಶವನ್ನು ಕರ್ಣಾಟಕ ಎಂದು ವಿಂಗಡಿಸಿಯೇ ಭಾರತ ಅನ್ನುವ ಹಲವು ರಾಜ್ಯಗಳ ಒಕ್ಕೂಟ ರೂಪುಗೊಂಡಿದ್ದು. ಇಲ್ಲಿ ಒಂದೊಂದು ಪ್ರದೇಶದ್ದು ಒಂದೊಂದು ಭಾಷೆ. ಕರ್ನಾಟಕದಲ್ಲೇ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಬೆಂಗಳೂರಿಗರದ್ದೇ ಒಂದು ಕನ್ನಡ, ಮಂಗಳೂರು ಕಡೆ ತುಳು, ಕುಂದಾಪುರ ಕನ್ನಡ, ಕೊಡಗು ಕಡೆ ಕೊಡವ, ಕರಾವಳಿ ಕಡೆ ಕೊಂಕಣಿ, ಉತ್ತರ ಕರ್ನಾಟಕದ ಶೈಲಿ ಕನ್ನಡ ಹೀಗೆ. ಇಷ್ಟು ಭಾಷಾ ವೈವಿಧ್ಯತೆ ಇರುವ ಒಕ್ಕೂಟದಲ್ಲಿ ಹಿಂದಿ ದಿವಸವನ್ನು ಮಾತ್ರ ಯಾಕೆ ಆಚರಿಸಬೇಕು? ಅನ್ನೊ ಪ್ರಶ್ನೆ ಬಂದರೆ ಅದಕ್ಕೆ ಉತ್ತರ: ಭಾರತ ಸಂವಿಧಾನ ಹಿಂದಿ ಭಾಷೆಗಾಗಿಯೆ ಕಲ್ಪಿಸಿರುವ ವಿಶೇಷ ಸ್ಥಾನ ಆರ್ಟಿಕಲ್ 343- 351.


  ಈ ಆರ್ಟಿಕಲ್​ಗಳು ಹೇಳುವ ಪ್ರಕಾರ ಹಿಂದಿ ಭಾರತದ ಅಧಿಕೃತ ಭಾಷೆ. ಒಕ್ಕೂಟ ಸರ್ಕಾರ ಹಿಂದಿ ದಿವಸ ಆಚರಿಸುವುದು ಅಲ್ಲದೆ ಹಿಂದಿಯ ನಿರಂತರ ಬೆಳವಣಿಗೆಗಾಗಿ ರಾಜಭಾಷಾ ಆಯೋಗವನ್ನೂ ನೇಮಿಸಿದೆ. ಆಯೋಗವು 30 ಜನರನ್ನು ಹೊಂದಿದ್ದು, ಅದರಲ್ಲಿ 20 ಲೋಕಸಭೆಯ ಸದಸ್ಯರು ಮತ್ತು ಮಿಕ್ಕವರು ರಾಜ್ಯಸಭೆಯಿಂದ ಆಯ್ಕೆಯಾದವರೂ ಆಗಿರುತ್ತಾರೆ.


  ರಾಜಭಾಷೆಯ ಆಯೋಗದ ಮುಖ್ಯ ಧ್ಯೇಯಗಳು ಹೀಗಿವೆ:
  * ಹಿಂದಿಯ ಬಳಕೆಯನ್ನು ಉತ್ತೇಜಿಸುವುದು.
  * ಕಾಲ ಕ್ರಮೇಣ ಇಂಗ್ಲಿಷ್ ಭಾಷೆಯ ಬಳಕೆಯನ್ನು ಕಡಿಮೆ ಮಾಡುವುದು.
  * ಸದಸ್ಯರು ರಾಜಭಾಷೆಯ ಬಳಕೆಯ ಬಗ್ಗೆ ರಾಷ್ಟ್ರಪತಿಗಳಿಗೆ ವರದಿ ನೀಡುವುದು.
  * ಕೇಂದ್ರ ಸರ್ಕಾರ ಹಾಗು ಸರಕಾರದ ಅನುದಾನಿತ ಸಂಸ್ಥೆಗಳಿಗೆ, ಅವುಗಳು ಹಿಂದಿ ಬಳಸುವಿಕೆಗೆ ಅನುಗುಣವಾಗಿ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವುದು.


  ಇತ್ತೀಚಿಗೆ ಮರು ಪರಿಷ್ಕರಿಸಿ ಬಂದ ರಾಜಭಾಶಾ ಆಯೋಗದ ವರದಿಯಲ್ಲಿ 2020-21ನೇ ಸಾಲಿನಲ್ಲಿ ಭಾರತದಾದ್ಯಂತ ರಾಜಭಾಷೆ ಹಿಂದಿಯನ್ನು ನಾಗರೀಕ ಆಡಳಿತದಲ್ಲಿ ಹೇಗೆ ಪ್ರಚಾರ ಪಡಿಸಬೇಕು, ಹಿಂದಿ ಬಳಕೆಯನ್ನು ಹೇಗೆ ತೀವ್ರಗೊಳಿಸಬೇಕು ಎಂಬುದರ ಬಗ್ಗೆ ಉಲ್ಲೇಖಿಸಿರುವ ಕೆಲವು ಅಂಶಗಳು ಹೀಗಿವೆ:


  1) ಮೊದಲನೆಯದಾಗಿ, ರಾಜಭಾಷಾ ಆಯೋಗದಲ್ಲಿರುವ ರಾಜ್ಯಗಳ ವರ್ಗೀಕರಣ ಮುಂದುವರಿಯಲಿದೆ. ಅದರ ಪ್ರಕಾರ ಪಟ್ಟಿಗಳು ಹೀಗಿವೆ:
  A- ಬಿಹಾರ, ಛತ್ತೀಸ್​ಗಡ್, ಹಿಮಾಚಲ ಪ್ರದೇಶ, ಜಾರ್ಕಂಡ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಉತ್ತರಾಖಂಡ್, ದೆಹಲಿ, ಅಂಡಮಾನ್ ನಿಕೋಬಾರ್ ದ್ವೀಪಗಳು.
  B – ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಚಂಡೀಗಡ್, ದಾಮನ್, ಡಿಯು, ದಾದ್ರ ಮತ್ತು ನಗರ್ ಹವೇಲಿ.
  C – A ಮತ್ತು B ಪಟ್ಟಿಯಲ್ಲಿ ಕಾಣಿಸದ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು.


  2) ಭಾರತದ ಆಡಳಿತದಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚಾಗಿದ್ದರೂ, ಇನ್ನೂ ಸಾಕಷ್ಟು ಕಡೆ ಹಿಂದಿ ಜೊತೆಗೆ ಇಂಗ್ಲೀಷ್ ಬಳಕೆಯಾಗುತ್ತಿದೆ. ಆಯೋಗದ ಉದ್ದೇಶ ಆಡಳಿತದ ಪ್ರತಿಯೊಂದು ಕಡೆ ಹಿಂದಿ ಬಳಕೆಯಾಗಬೇಕು. ಜನರ ಭಾಷೆಯಲ್ಲಿ ಆಡಳಿತ ನಡೆಸುವುದರಿಂದ, ಅಭಿವೃದ್ದಿಯ ವೇಗ ಮತ್ತು ಪಾರದರ್ಶಕತೆ ಹೆಚ್ಚಾಗುತ್ತದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.


  3) ರಾಷ್ಟ್ರಪತಿಯ ಅನುಮೋದನೆ ಇರುವ ಆಡಳಿತ ಭಾಷೆಗೆ ಸಂಬಂಧಿಸಿದ 9 ಕಡತಗಳನ್ನು ಎಲ್ಲಾ ಸಚಿವರ ಕಾರ್ಯಾಲಯಗಳು, ಕಚೇರಿಗಳು & ಆಫೀಸ್​ಗಳು ಅಗತ್ಯವಾಗಿ ಬಳಸಬೇಕು.


  4) ಕಂಪ್ಯೂಟರ್, ಇಮೇಲ್, ವೆಬ್​ಸೈಟ್​ಗಳಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸಬೇಕು.


  5) ಎಲ್ಲಾ ಕೇಂದ್ರದ ಆಡಳಿತಾತ್ಮಕ ಇಲಾಖೆಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಸಂಬಂಧಿತ ಹಿಂದಿ ಬರಹಗಳನ್ನು ಬರೆಸಬೇಕು.


  6) 2025 ರ ಹೊತ್ತಿಗೆ ಹಿಂದಿ ತರಬೇತಿ ಕಾರ್ಯಕ್ರಮ ಕೊನೆಗೊಳ್ಳುವುದರಿಂದ, ಆ ಹೊತ್ತಿಗೆ ಕೇಂದ್ರ ಕಚೇರಿಗಳಲ್ಲಿ ಹಿಂದಿ, ಹಿಂದಿ ಟೈಪಿಂಗ್ / ಶೀಘ್ರಲಿಪಿ ಕಲಿಕೆಯನ್ನು ಪೂರ್ಣಗೊಳಿಸತಕ್ಕದ್ದು.


  7) ಎಲ್ಲಾ ಸಚಿವಾಲಯಗಳು, ಕೇಂದ್ರದ ಇಲಾಖೆಗಳು, ಕಚೇರಿಗಳು, ತಮ್ಮಲ್ಲಿರುವ ಕಂಪ್ಯೂಟರ್ ವ್ಯವಸ್ಥೆಯನ್ನು ಲಿಲಾ ಹಿಂದಿ ಪ್ರಬೊದ್, ಪ್ರವೀಣ್ ಪ್ರಗ್ಯಾ ಎಂಬ ತಂತ್ರಾಂಶದ ಮುಖೇನ ನೌಕರರಿಗೆ ಹಿಂದಿ ಕಲಿಕೆಗೆ ಅನುವು ಮಾಡಿಕೊಡಬೇಕು.


  8) ಎಲ್ಲಾ ಸಚಿವಾಲಯಗಳು, ಇಲಾಖೆಗಳು ನೌಕರರಿಗೆ ತಮ್ಮ ತಮ್ಮ ತರಬೇತಿ ಕೇಂದ್ರಗಳನ್ನು ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಅಕಾಡೆಮಿಯಂತೆ ಹಿಂದಿ ಕಲಿಕೆಗೆ ಯೋಗ್ಯಗೊಳಿಸಬೇಕು.


  9) ಎಲ್ಲಾ ಕೇಂದ್ರದ ಸಚಿವಾಲಯಗಳು, ಇಲಾಖೆಗಳು, ಕಚೇರಿಗಳು ಹಿಂದಿಯಲ್ಲಿ ಸೆಮಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.


  10) ಕೇಂದ್ರದ ಮತ್ತು ಕೇಂದ್ರಸ್ವಾಮ್ಯದ ಕಚೇರಿಗಳಲ್ಲಿ, ಆಡಳಿತ ಭಾಷೆಯ ಅನುಷ್ಠಾನದ ಬಗ್ಗೆ ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು.


  11) ಪ್ರತಿಯೊಂದು ಕೇಂದ್ರದ ಮತ್ತು ಕೇಂದ್ರಸ್ವಾಮ್ಯದ ಆಫೀಸ್, ಕಚೇರಿಗಳು ವರ್ಶಕ್ಕೆ ಐದು ಬಾರಿ (ಮೂರು ತಿಂಗಳಿಗೊಮ್ಮೆ+ ವರ್ಷದ ಕೊನೆಗೆ) ಅಧಿಕೃತ ಭಾಷೆಯ ಅನುಷ್ಠಾನ ಪ್ರಗತಿಯ ಬಗೆಗಿನ ವರದಿಯನ್ನು ರಾಜಭಾಷಾ ಆಯೋಗಕ್ಕೆ ಸಲ್ಲಿಸಬೇಕು.


  12) ಕೇಂದ್ರ ಸ್ವಾಮ್ಯದ ಕಚೇರಿಗಳಿಗಾಗಿ, ಬ್ಯಾಂಕ್ ಹಾಗೂ ಇನ್ನಿತರ ಯಾವುದೇ ಕೇಂದ್ರ ಸರಕಾರದ ನೇಮಕಾತಿಯಲ್ಲಿ ಇಂಗ್ಲೀಷ್ ಭಾಷೆಯ ವಿಷಯ ಒಂದನ್ನು ಬಿಟ್ಟು ಬೇರೆಲ್ಲಾ ಪರೀಕ್ಷೆಗಳಲ್ಲಿ ಅಭ್ಯರ್ಥಿ/ವಿದ್ಯಾರ್ಥಿಗೆ ಹಿಂದಿಯಲ್ಲಿ ಉತ್ತರಿಸಲು ಅವಕಾಶ ಇರಬೇಕು. ಪ್ರತಿಯೊಂದು ಪ್ರಶ್ನೆಪತ್ರಿಕೆ ಹಿಂದಿ ಮತ್ತು ಇಂಗ್ಲೀಷ್​ನಲ್ಲಿರತಕ್ಕದ್ದು. ಮೌಖಿಕ ಪರೀಕ್ಷೆಯಲ್ಲಿ ಅಭ್ಯರ್ಥಿಗೆ ಹಿಂದಿಯಲ್ಲಿ ಉತ್ತರಿಸಲು ಅವಕಾಶ ಇರಬೇಕು.


  13) ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ವಿಜ್ಞಾನಿಗಳಿಗೆ ಹಿಂದಿಯಲ್ಲೇ ಸೆಮಿನಾರ್ ಕೊಡಲು ಉತ್ತೇಜಿಸಬೇಕು.


  14) A ಮತ್ತು B ರಾಜ್ಯಗಳಲ್ಲಿ ಎಲ್ಲಾ ತರಬೇತಿಗಳು ಹಿಂದಿಯಲ್ಲೇ ನಡೆಯಬೇಕು. C ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲೀಶ್ ಭಾಷೆಯಲ್ಲಿ ತರಬೇತಿಗೆ ಅವಕಾಶ ಇರಬೇಕು.


  15) ಕೇಂದ್ರ ಕಚೇರಿಗಳಲ್ಲಿ ಎಲ್ಲಿಯ ತನಕ ಹಿಂದಿ ಟೈಪಿಸ್ಟ್​ಗಳ ಸಂಖ್ಯೆ ಗುರಿ(4೦%) ಮುಟ್ಟುವುದಿಲ್ಲವೋ ಅಲ್ಲಿಯ ತನಕ ಹಿಂದಿ ಟೈಪಿಸ್ಟ್​ಗಳನ್ನು ಮಾತ್ರ ನೇಮಿಸುತ್ತಾ ಇರಬೇಕು.


  16) ಪ್ರತಿಯೊಂದು ಅಂತಾರಾಷ್ಟ್ರೀಯ ಕರಾರು ಒಪ್ಪಂದಗಳು ಹಿಂದಿ ಮತ್ತು ಇಂಗ್ಲೀಷ್​ನಲ್ಲಿರಬೇಕು.


  17) ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಪ್ರತಿಯೊಂದು ಬೋರ್ಡ್, ನಾಮಫಲಕಗಳು, ನೋಟಿಸ್ ಬೋರ್ಡ್, ಸ್ಟ್ಯಾಂಪ್​ಗಳು, ಆಹ್ವಾನ ಕರೆಯೋಲೆಗಳು – ರಾಜ್ಯ ಭಾಷೆ, ಹಿಂದಿ ಹಾಗೂ ಇಂಗ್ಲೀಷ್​ನಲ್ಲಿರಬೇಕು (ಇದೇ ಕ್ರಮದಲ್ಲಿ).


  18) A ರಾಜ್ಯಗಳು C ರಾಜ್ಯಗಳಿಗೆ ಯಾವುದೇ ರೀತಿಯ ಪತ್ರ ಅಥವಾ ಎಲೆಕ್ಟ್ರಾನಿಕ್ ಪತ್ರ ವ್ಯವಹಾರ ನಡೆಸುವಾಗ 65% ಹಿಂದಿ ಬಳಸಬೇಕು. C ರಾಜ್ಯಗಳು ತಮ್ಮ ತಮ್ಮಲ್ಲಿಯೇ ವ್ಯವಹರಿಸುವಾಗ 55% ರಷ್ಟು ಹಿಂದಿ ಬಳಸಬೇಕು.


  19) ಪ್ರತಿ ರಾಜ್ಯಗಳು ಹಿಂದಿಯಲ್ಲಿ ಸ್ವೀಕರಿಸಿದ ಪತ್ರಕ್ಕೆ ಹಿಂದಿಯಲ್ಲೇ ಉತ್ತರಿಸುವುದು ಕಡ್ಡಾಯ.


  20) C ರಾಜ್ಯಗಳಲ್ಲಿನ ಕೇಂದ್ರದ ಕಚೇರಿಗಳಲ್ಲಿ ನಡೆಯುವ ಒಟ್ಟು ತರಬೇತಿಗಳಲ್ಲಿ 30 ಶೇಕಡಾ ತರಬೇತಿಗಳು ಹಿಂದಿ ಮಾಧ್ಯಮದಲ್ಲಿರಬೇಕು.


  (ಮಾಹಿತಿ ಮೂಲ: https://rajbhasha.gov.in/sites/default/files/annual_programme2020-21_1.pdf?fbclid=IwAR3VSa6IVk3DY5TCYRpIy1eP9RSZPWcZzExjsuEsOkuxyvxayjS1PGxUg_4)


  ಇದೇ ರಾಜ ಭಾಷಾ ಆಯೋಗವು ಪ್ರತಿ ವರ್ಷ ಹಿಂದಿಯಲ್ಲಿ ಮಾತ್ರವೇ ಬರುವ ಅತ್ಯುತ್ತಮ ವಿಜ್ಞಾನ ಕುರಿತಾದ ಪುಸ್ತಕಗಳಿಗೆ, ಪ್ರಬಂಧಗಳಿಗೆ, ಮೂಲ ಕೃತಿಗಳಿಗೆ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ. ಒಕ್ಕೂಟ ಸರ್ಕಾರವು ಹಿಂದಿ ಬಳಕೆ ಉತ್ತೇಜನಕ್ಕಾಗಿ ಮಾತ್ರವೇ ಖರ್ಚು ಮಾಡುವ ಹಣ ರೂ ನೂರುಕೋಟಿಗಳಿಗೂ ಮೀರಿದ್ದು. (ಮಾಹಿತಿ: rajbhasha.nic.in).


  ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರ ಇವೆಲ್ಲವೂ ಹಿಂದಿ ದಿವಸ ಆಚರಣೆಯ ಹಿಂದಿನ ಉದ್ದೇಶಗಳಾಗಿವೆ. ಹಿಂದಿಯೇತರ ನುಡಿಗಳಲ್ಲಿನ ಮಾಹಿತಿ ಕೊರತೆ, ಹಿಂದಿಯೇತರ ನುಡಿಗಳ ಕಡೆಗಣನೆ ಇವೆಲ್ಲವೂ ನೇರವಾಗಿ ಹಿಂದಿ ಮಾತನಾಡದ ಜನರ ಜೀವನದ ಮೇಲೆ ಪರಿಣಾಮ ಬೀರಿವೆ. ಒಂದು ಬ್ಯಾಂಕ್​ಗೆ ಹೋದರೆ ಕನ್ನಡ ಮಾತನಾಡುವ ಸಿಬ್ಬಂದಿಗಳಿಲ್ಲ, ಕನ್ನಡದಲ್ಲಿ ಚಲನ್​ಗಳಿಲ್ಲ, ಕನ್ನಡದಲ್ಲಿ ಮಾಹಿತಿಯಿಲ್ಲ.


  ಇನ್ನು ಒಕ್ಕೂಟ ಸರ್ಕಾರದ ಶೇ.90 ಮಿಂದಾಣಗಳು ಹಿಂದಿ,ಇಂಗ್ಲಿಶ್ ಬಿಟ್ಟು ಇತರ ನುಡಿಗಳಲ್ಲಿ ಇಲ್ಲ. ನಾವು ಓಡಾಡುವ ರಸ್ತೆಯಲ್ಲಿ ಸೂಚನೆಗಳು ನಮಗೆ ಅರ್ಥವಾಗುವ ನುಡಿಯಲ್ಲಿಲ್ಲ.ಒಕ್ಕೂಟ ಸರ್ಕಾರ ನಡೆಸುವ ಪರೀಕ್ಷೆಗಳು ಹಿಂದಿಯೇತರ ನುಡಿಗಳಲ್ಲಿ ನಡೆಯುವುದಿಲ್ಲ.


  ಒಕ್ಕೂಟ ಸರ್ಕಾರದ ಪ್ರಾಯೋಜಿತ ಹಿಂದಿ ಹೇರಿಕೆಯ ಪರಿಣಾಮ, ಹಿಂದಿ ಬಾರದವರನ್ನು ಭಾರತೀಯರೇ ಅಲ್ಲ ಎನ್ನುವಂತೆ ಕಾಣಲಾಗುತ್ತಿದೆ. ಭಾರತ ರೂಪುಗೊಂಡ ರೀತಿ ಮರೆತು ಇಲ್ಲಿಯವರೆಗೂ ಇದ್ದ ಒಕ್ಕೂಟ ಸರಕಾರಗಳು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಲೇ ಬಂದಿದೆ. ಇದು ಕೊನೆಗೊಳ್ಳಬೇಕಾದರೆ ಸಂವಿಧಾನದಲ್ಲಿ ಹಿಂದಿ ಭಾಷೆಗೆ ವಿಶೇಷ ಸ್ಥಾನ ನೀಡಿರುವ ಆರ್ಟಿಕಲ್ 343-351 ತಿದ್ದುಪಡಿಗೊಳ್ಳಬೇಕು.


  ಲೇಖಕರು: ಬೃಂದಾ ಪ್ರಸಾದ್

  Published by:Vijayasarthy SN
  First published: