Cooking Oil: ನಾವು ಬಳಸುತ್ತಿರುವ ಅಡುಗೆ ಎಣ್ಣೆ ಎಷ್ಟು ಪರಿಶುದ್ಧವಾಗಿದೆ?; ಸಪ್ತಮ್ ಗಾಣದ ಎಣ್ಣೆ ಸಂಸ್ಥಾಪಕ ಮನೋಹರ್ ಹೇಳುವುದೇನು?

ಇದು ಎಲ್ಲಿಯ ಹಣ್ಣು ಎಂದು ನೋಡಿದರೆ ಅದು ನಮ್ಮ ಭಾರತದಿಂದ ಅಮೆರಿಕಾಗೆ ರಫ್ತಾದ ಹಣ್ಣು.  ಆದರೆ, ನಾವು ಭಾರತದಲ್ಲಿ ಇಂತಹ ಹಣ್ಣನ್ನು ತಿನ್ನುವುದೇ ಇಲ್ಲ. ಏಕೆಂದರೆ ನಮ್ಮಲ್ಲಿ ಉತ್ಪಾದನೆಯಾದ ಶ್ರೇಷ್ಠ ದರ್ಜೆಯ ಪದಾರ್ಥಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿವೆ. ಕೆಳ ದರ್ಜೆಯ, ಕಡಿಮೆ ಗುಣಮಟ್ಟದ ಪದಾರ್ಥಗಳನ್ನು ನಾವು ಬಳಸುತ್ತಿದ್ದೇವೆ.

ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶಿಕ್ಷಣ ಪ್ರವಾಸಕ್ಕೂ ಮುನ್ನ ಸಪ್ತಮ್ ತೈಲ ಮಳಿಗೆ ಮುಂದೆ ನಿಂತಿರುವ ವಿದ್ಯಾರ್ಥಿಗಳು ಹಾಗೂ ಮನೋಹರ್ ಅಯ್ಯರ್.

ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶಿಕ್ಷಣ ಪ್ರವಾಸಕ್ಕೂ ಮುನ್ನ ಸಪ್ತಮ್ ತೈಲ ಮಳಿಗೆ ಮುಂದೆ ನಿಂತಿರುವ ವಿದ್ಯಾರ್ಥಿಗಳು ಹಾಗೂ ಮನೋಹರ್ ಅಯ್ಯರ್.

  • Share this:
ಒಂದು ಲೀಟರ್ ಕಡಲೆಕಾಯಿ ಎಣ್ಣೆ (Groundnut Oil) ತಯಾರಿಸಲು ಮೂರು ಕೆಜಿ ಕಡಲೆಕಾಯಿ ಬೀಜ ಬೇಕಾಗುತ್ತದೆ. ಒಂದು ಕೆಜಿ ಕಡಲೆಕಾಯಿ ಬೀಜದ ಬೆಲೆ 100 ರೂಪಾಯಿ. ಅಂದರೆ 3 ಕೆಜಿ ಕಡಲೆಕಾಯಿಗೆ 300 ರೂಪಾಯಿ ಆಗುತ್ತದೆ. ಇನ್ನು ಎಣ್ಣೆ ತಯಾರಿಸುವಿಕೆ ಎಲ್ಲ ಸೇರಿ ಸರಿಸುಮಾರು ಒಂದು ಲೀಟರ್ ಕಡಲೆಕಾಯಿ ಎಣ್ಣೆಗೆ 350 ಖರ್ಚು ತಗುಲುತ್ತದೆ. ಹೀಗಿರುವಾಗ 150 ರೂಪಾಯಿ ಕೊಟ್ಟು ನಾವು ಖರೀದಿಸುತ್ತಿರುವ ಪ್ಯಾಕೆಟ್ ಆಯಿಲ್ (Pocket Oil) ಎಷ್ಟು ಪರಿಶುದ್ಧವಾಗಿದೆ? ಎಂಬುದನ್ನು ನೀವೇ ಯೋಚನೆ ಮಾಡಿ… ಹೀಗೆ ನಾವು ಪ್ರತಿನಿತ್ಯ ಸೇವಿಸುತ್ತಿರುವ ಅಡುಗೆ ಎಣ್ಣೆ (Cocking  Oil) ಎಷ್ಟು ವಿಷಕಾರಿಯಾಗಿದೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದವರು ಸಪ್ತಮ್ ತೈಲ ಗಾಣದ ಎಣ್ಣೆ (Saptham Oil) ಸಂಸ್ಥೆ ಸಂಸ್ಥಾಪಕರಾದ ಮನೋಹರ್ ಅಯ್ಯರ್ (Manohar Iyar)

ಮನೋಹರ್ ಅಯ್ಯರ್ ಅವರು ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್. ಐಟಿ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಅವರ 22 ವರ್ಷಗಳ ಐಟಿ ಕ್ಷೇತ್ರದ ಜರ್ನಿಯಲ್ಲಿ ಹಲವು ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಆ ವೃತ್ತಿಗೆ ಗುಡ್​ ಬಾಯ್ ಹೇಳಿ ಇದೀಗ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿ ಗಾಣದ ಎಣ್ಣೆ ತಯಾರಿಕಾ ಘಟಕ ತೆರೆದಿದ್ದಾರೆ. ಈ ಘಟಕ ಆರಂಭಿಸಿದ ಮರುವರ್ಷವೇ ಬನಶಂಕರಿ 6ನೇ ಹಂತ ಗುಬ್ಬಾಳದಲ್ಲಿ ಮತ್ತೊಂದು ಘಟಕ ಆರಂಭಿಸಿದ್ದಾರೆ. ಬೆಂಗಳೂರು ಸುತ್ತ ಒಟ್ಟು 16 ಗಾಣದ ಎಣ್ಣೆ ಕಾರ್ಖಾನೆ ಆರಂಭಿಸಬೇಕು ಎಂಬುದು ಇವರ ಆಶಯ. ಇವರೊಂದಿಗೆ ನ್ಯೂಸ್ 18 ಕನ್ನಡ ನಡೆಸಿದ ಸಂದರ್ಶನ ಇಲ್ಲಿದೆ.

  • ಸಪ್ತಮ್ ತೈಲ ಉದ್ಯಮ ಆರಂಭಿಸಲು ಕಾರಣ?


ನಾನು ಆಗ ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಭಾರತಕ್ಕೆ ಬಂದು ಪುನಃ ಮಲೇಷಿಯಾಗೆ ಹೋಗುವಾಗ ಇಲ್ಲಿಂದಲೇ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯುತ್ತಿದ್ದೆ. ಒಮ್ಮೆ ವಿಮಾನ ನಿಲ್ದಾಣದಲ್ಲಿ ಅಡುಗೆ ಎಣ್ಣೆ, ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಿದೆ. ಹೀಗೆ ಪದಾರ್ಥಗಳ ದರ ಪಟ್ಟಿ ನೋಡುವಾಗ ಕಡಲೆಕಾಯಿ ಬೀಜದ ಬೆಲೆ ಗಮನಿಸಿದೆ. ಕೆಜಿಗೆ 100 ರೂಪಾಯಿ ಇತ್ತು. 1 ಲೀಟರ್ ಕಡಲೆಕಾಯಿ ಎಣ್ಣೆ 150 ರೂಪಾಯಿ… ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಶುರುವಾಯಿತು. ಅಲ್ಲಿಂದ ಶುರುವಾದ ಪ್ರಶ್ನೆಗೆ ಉತ್ತರವೇ ಸಪ್ತಮ್ ತೈಲ…

  • ಪ್ಯಾಕೆಟ್ ಎಣ್ಣೆ ಬೆಲೆಗೂ ಗಾಣದ ಎಣ್ಣೆ ಬೆಲೆಯ ನಡುವೆ ತುಂಬಾ ವ್ಯತ್ಯಾಸವಿದೆ. ಜನರು ಯಾಕೆ ಇಷ್ಟು ಹಣ ಕೊಟ್ಟು ಗಾಣದ ಎಣ್ಣೆ ಖರೀದಿಸಬೇಕು?


ಈ ಹಿಂದೆ ಅಂದರೆ ಕೇವಲ 30, 40 ವರ್ಷಗಳ ಹಿಂದೆ ನಮಗೆ ಬಿಪಿ, ಶುಗರ್, ಹೃದಯ ಸಮಸ್ಯೆ, ಅಂದರೆ ಏನು ಎಂಬುದೇ ಗೊತ್ತಿರಲಿಲ್ಲ. ಆಗ ಅವುಗಳು ಶ್ರೀಮಂತರ ಕಾಯಿಲೆಗಳಾಗಿದ್ದವು. ಬಿಪಿ, ಶುಗರ್ ಬಂದವರು ಈ ಸಮಸ್ಯೆ ಇದೆ ಎಂದು ಹೇಳಿಕೊಳ್ಳಲು ಅಂಜುತ್ತಿದ್ದರು. ಆದರೆ, ಈಗ ಪ್ರತಿಯೊಬ್ಬರ ಮನೆಯಲ್ಲಿ ಬಿಪಿ, ಶುಗರ್ ಮಾತ್ರೆಗಳಿವೆ. ಮಧ್ಯ ವಯಸ್ಸಿನ ಜನರು ಹೃದ್ರೋಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಗೆಲ್ಲ ಮುಖ್ಯ ಕಾರಣ ನಾವು ಸೇವಿಸುವ ಆಹಾರ. ಅದರಲ್ಲೂ ಮುಖ್ಯವಾಗಿ ನಾವು ಬಳಸುತ್ತಿರುವ ಶುದ್ಧ ಕಲಬೆರಕೆ ಅಡುಗೆ ಎಣ್ಣೆ. ಕಡಿಮೆ ಬೆಲೆಗೆ ಅಡುಗೆ ಎಣ್ಣೆ ಸಿಗುತ್ತಿದೆ ಎಂದು ನಾವು ಗಾಣದ ಎಣ್ಣೆ ಬಳಸುವುದನ್ನು ನಿಲ್ಲಿಸಿದೆವು. ಅದರ ಪರಿಣಾಮವೇ ಇದೀಗ ನಾವು ತಿಂಗಳಿಗೆ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಮಾತ್ರೆಗಳಿಗೆ  ಖರ್ಚು ಮಾಡುತ್ತಿದ್ದೇವೆ. ರೀಫೈನ್ಡ್​ ಆಯಿಲ್ ಎಂದು ಕಡಿಮೆ ಬೆಲೆಗೆ ಚೆಂದದ ಪ್ಯಾಕೆಟ್​ಗಳಲ್ಲಿ ಮಾರುತ್ತಿರುವ ಎಣ್ಣೆ ಸ್ಲೋ ಪಾಯಿಸನ್. ಇದು ಹಂತಹಂತವಾಗಿ ಜನರ ಆರೋಗ್ಯವನ್ನೇ ಹಾಳು ಮಾಡುತ್ತಿದೆ. ಇದೇ ಕಾರಣಕ್ಕಾಗಿ ನಾವು ನಮ್ಮ ಸಾಂಪ್ರದಾಯಿಕ ಗಾಣದ ಎಣ್ಣೆ ಸ್ವಲ್ಪ ದುಬಾರಿಯಾದರೂ ಖರೀದಿಸಬೇಕು. ಮತ್ತು ಈ ಎಣ್ಣೆಯಲ್ಲಿ  ಒಳ್ಳೆಯ ಕೊಬ್ಬಿನಾಂಶ ಹೆಚ್ಚಿರುವುದರಿಂದ ಸಾಮಾನ್ಯ ಎಣ್ಣೆ ಬಳಸುವುದಕ್ಕಿಂತ ಕಡಿಮೆ ಪ್ರಮಾಣದ ಎಣ್ಣೆ ಬಳಸಿದರೂ ಅಡುಗೆ ರುಚಿಗೆ ಹಾಗೂ ದೇಹಕ್ಕೆ ಬೇಕಿರುವ ಅಗತ್ಯ ಪ್ರಮಾಣದ ವಿಟಮಿನ್​ಗಳನ್ನು ಒದಗಿಸುತ್ತದೆ.

ಮನೋಹರ್ ಅಯ್ಯರ್.


  • ಒಂದು ವೇಳೆ ಜನರು ಮತ್ತೆ ಸಂಪೂರ್ಣವಾಗಿ ಗಾಣದ ಎಣ್ಣೆಯನ್ನೇ ಬಳಸಿದರೆ ದಿನನತ್ಯದ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವುದಿಲ್ಲವೇ?


ಅಡುಗೆ ಎಣ್ಣೆಯ ದಿನನಿತ್ಯದ ಬಳಕೆ ನೋಡುವುದಾದರೆ ಒಂದು ಕುಟುಂಬದಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸೇರಿ ಒಂದು ದಿನಕ್ಕೆ 100ರಿಂದ 150 ಗ್ರಾಂ ಎಣ್ಣೆ ಬಳಸುತ್ತಾರೆ. ಅಲ್ಲಿಗೆ ಒಂದು ಲೀಟರ್ ಎಣ್ಣೆಯನ್ನು 10 ದಿನ ಬಳಸಬಹುದು. 4 ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 2ರಿಂದ 3 ಲೀಟರ್ ಎಣ್ಣೆ ಸಾಕಾಗುತ್ತದೆ. ಅಲ್ಲಿಗೆ ಅವರು ಈಗ ಅಡುಗೆ ಎಣ್ಣೆಗೆ ಕೊಡುತ್ತಿರುವ ದರಕ್ಕಿಂತ ಹೆಚ್ಚುವರಿಯಾಗಿ ತಿಂಗಳಿಗೆ 500ರಿಂದ 700 ರೂಪಾಯಿ ಖರ್ಚು ಮಾಡಿದರೆ ಪರಿಶುದ್ಧವಾದ ಗಾಣದ ಎಣ್ಣೆ ಬಳಸಬಹುದು. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ, ಸಾಂಪ್ರದಾಯಿಕ ಗಾಣದ ಉದ್ಯಮವೂ ಮತ್ತೆ ತಲೆ ಎತ್ತುತ್ತದೆ. ಸಮಾಜವೂ ಆರೋಗ್ಯಕರವಾಗಿರುತ್ತದೆ. ಇನ್ನು ಹೋಟೆಲ್​ಗಳಲ್ಲೂ ಊಟ- ತಿಂಡಿ ಬೆಲೆ ಸ್ವಲ್ಪ ವ್ಯತ್ಯಯವಾಗಬಹುದು. ನಿಮಗೆ ಗುಣಮಟ್ಟದ, ಆರೋಗ್ಯಪೂರ್ಣ ಆಹಾರ ಸಿಗುತ್ತದೆ ಎಂದಾದರೆ ಹತ್ತು ರೂಪಾಯಿ ಹೆಚ್ಚಿಗೆ ಕೊಟ್ಟು ಊಟ ಮಾಡಿದರೆ ಅದರಿಂದ ಯಾರಿಗೂ ನಷ್ಟವಾಗುವುದಿಲ್ಲ. ದುಬಾರಿ ರೆಸ್ಟೋರೆಂಟ್​ಗಳಲ್ಲಿ, ಫಿಜಾ, ಬರ್ಗರ್​ಗಳಿಗೆ ಸಾವಿರಾರು ಖರ್ಚು ಮಾಡುವ ಬದಲು ಗುಣಮಟ್ಟದ ಆಹಾರವನ್ನು ಜನರು ಸೇವಿಸಬೇಕು. ಮುಂದಿನ ದಿನಗಳಲ್ಲಿ ಇದೇ ಗಾಣದ ಎಣ್ಣೆಯಿಂದ ಆಹಾರ ತಯಾರಿಸುವ ಹೋಟೆಲ್​ ಆರಂಭಿಸುವ ಉದ್ದೇಶ ಸಹ ಇದೆ.

  • ನಮ್ಮಲ್ಲಿ ಮತ್ತೆ ಗಾಣದ ಉದ್ಯಮ ತಲೆ ಎತ್ತಲಿದೆಯಾ?


ನಾವು ಸಪ್ತಮ್ ತೈಲ ಆರಂಭಿಸಿ ಮೂರು ವರ್ಷಗಳಾಗಿವೆ. ಇದೀಗ ಸರಿಸುಮಾರು 20ರಿಂದ 25 ಸಾವಿರ ಕುಟುಂಬಗಳು ನಮ್ಮಿಂದ ಗಾಣದ ಎಣ್ಣೆ ಖರೀದಿಸುತ್ತಿವೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗ ಬೆಂಗಳೂರಿನಲ್ಲಿ ಮೂರನೇ ಘಟಕ ಆರಂಭಿಸುತ್ತಿದ್ದೇವೆ. ಇದನ್ನು ನೋಡಿದಾಗ ಜನರು ನಮ್ಮ ಸಾಂಪ್ರದಾಯಿಕ ಗಾಣದ ಎಣ್ಣೆ ಬಳಕೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬುದು ಮನದಟ್ಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ, ಮುತುವರ್ಜಿ ವಹಿಸುತ್ತಿದ್ದಾರೆ. ಸಿರಿಧಾನ್ಯ, ಸಾವಯವ ಕೃಷಿ ಉತ್ಪನ್ನ, ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಮುಖ ಮಾಡುತ್ತಿದ್ದಾರೆ. ಇದನ್ನು ಗಮನಿಸಿದಾಗ ನಮ್ಮಲ್ಲಿ ಮತ್ತೆ ಗಾಣದ ಉದ್ಯಮ ತಲೆ ಎತ್ತುವ ಸೂಚನೆಗಳು ಢಾಳಾಗಿ ಕಾಣಿಸುತ್ತಿದೆ.

  • ಹೊಸದಾಗಿ ಗಾಣದ ಉದ್ಯಮ ಆರಂಭಿಸುವವರಿಗೆ ನಿಮ್ಮ ಸಲಹೆ?


ಯಾರೂ ಬೇಕಾದರೂ ಈ ಉದ್ಯಮ ಆರಂಭಿಸಬಹುದು. ಅದಕ್ಕೆ ವಿಶೇಷವಾದ ತರಬೇತಿ ಅಗತ್ಯವೇನಿಲ್ಲ. ಗಾಣದ ಮಿಷನ್ ಕಂಪನಿಯವರೇ ಬಂದು ತರಬೇತಿ ಕೊಡುತ್ತಾರೆ. ಈ ಉದ್ಯಮ ಸಂಬಂಧ ನಾನು ಸಾಕಷ್ಟು ವಿಡಿಯೋಗಳನ್ನು ಮಾಡಿ ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದೇನೆ. ನನಗೆ ವೈಯಕ್ತಿಕವಾಗಿ ಕರೆ ಮಾಡಿದವರಿಗೆ ಅಗತ್ಯ ಸಲಹೆ ಸೂಚನೆ ಕೊಟ್ಟಿದ್ದೇನೆ ಹಾಗೂ ಕೊಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಉದ್ದಿಮೆ ಸಂಬಂಧ ಕಾರ್ಯಾಗಾರಗಳನ್ನು ಆಯೋಜಿಸಬೇಕು, ಗಾಣ ಉದ್ದಿಮೆ ತರಬೇತಿ ಸಂಸ್ಥೆ ಆರಂಭಿಸಬೇಕು ಎಂಬ ಉದ್ದೇಶವಿದೆ.

  • ನಿಮ್ಮ ಸಪ್ತಮ್ ತೈಲದ ವಿಶೇಷ?


ಗುಣಮಟ್ಟ, ಶುಚಿತ್ವ, ಪಾರದರ್ಶಕತೆ… ಇವೇ ನಮ್ಮ ಸಪ್ತಮ್ ತೈಲದ ವಿಶೇಷ. ನಾವು ಸುಮಾರು 14 ವಿಧದ ಎಣ್ಣೆ ತಯಾರಿಸುತ್ತೇವೆ. ಇದಕ್ಕೆ ಬೇಕಾದ ಕಚ್ಚಾ ಪದಾರ್ಥಗಳನ್ನು ನಾವು ನೇರವಾಗಿ ರೈತರಿಂದಲೇ ಖರೀದಿಸುತ್ತೇವೆ. ಅದರಲ್ಲೂ ಗುಣಮಟ್ಟದ ಕಚ್ಚಾ ಪದಾರ್ಥಗಳನ್ನು ಖರೀದಿ ಮಾಡುತ್ತೇವೆ. ಅದಾದ ಬಳಿಕವೂ ಆ ಪದಾರ್ಥಗಳನ್ನು ಶುಚಿಗೊಳಿಸುತ್ತೇವೆ. ಹುಳುಕು ಇದ್ದಂತಹ ಕಾಳುಗಳನ್ನು ಹೆಕ್ಕೆ ತೆಗೆಯುತ್ತೇವೆ. ಆ  ಬಳಿಕ ಗಾಣಕ್ಕೆ ಹಾಕಿ ಎಣ್ಣೆ ತೆಗೆದು, ಅದನ್ನು ಸ್ಟೈನ್​ಲೆಸ್ ಸ್ಟೀಲ್ ಹಂಡೆಗಳಲ್ಲಿ ತುಂಬುತ್ತೇವೆ. ಅದನ್ನು ನೇರವಾಗಿ ಗ್ರಾಹಕರಿಗೆ ಕೊಡುತ್ತೇವೆ. ಕೆಲವು ಗ್ರಾಹಕರು ಅವರೇ ಡಬ್ಬಿಗಳನ್ನು ತಂದು ಎಣ್ಣೆ ತುಂಬಿಸಿಕೊಂಡು ಹೋಗುತ್ತಾರೆ. ಮತ್ತು ನಾವು ನಮ್ಮ ಸಪ್ತಮ್ ತೈಲ ಘಟಕದಲ್ಲಿ ಕಾಪಾಡಿಕೊಂಡಿರುವ ಶುಚಿತ್ವ. ನಮ್ಮ ಗಾಣದ ಘಟಕವನ್ನು ಯಾರೂ ಬೇಕಾದರೂ ಬಂದು ನೋಡಬಹುದು, ಪರಿಶೀಲಿಸಬಹುದು. ಪ್ರತಿಯೊಂದನ್ನು ನಾವು ಪಾರದರ್ಶಕವಾಗಿಯೇ ಮಾಡುತ್ತಿದ್ದೇವೆ.  • ಗಾಣದ ಎಣ್ಣೆ ಮತ್ತೆ ಮಾರುಕಟ್ಟೆಗೆ ಬಂದರೆ ಸ್ಥಳೀಯರಿಗೆ ಮತ್ತು ರೈತರಿಗೆ ಆಗುವ ಪ್ರಯೋಜನಗಳೇನು?


ಗಾಣದ ಉದ್ಯಮ ಹೆಚ್ಚಾದರೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಎಣ್ಣೆ ಕಾಳುಗಳಿಗೆ ಬೇಡಿಕೆ ಬರುತ್ತದೆ. ಆಗ ರೈತರು ಈ ಪದಾರ್ಥಗಳನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಬೆಳೆಯಲು ಆರಂಭಿಸುತ್ತಾರೆ. ಇದರಿಂದ ಅವರು ಬೆಳೆದ ಬೆಳೆಗೂ ಬೆಲೆ ಸಿಗುತ್ತದೆ.

ಮನೋಹರ್ ಅಯ್ಯರ್.


  • ಭಾರತದ ಉತ್ಪಾದನೆ ಮತ್ತು ಮಾರುಕಟ್ಟೆ ಬಗ್ಗೆ ನಿಮ್ಮ ಅಭಿಪ್ರಾಯ?


ಒಮ್ಮೆ ನಾನು ಅಮೆರಿಕದಲ್ಲಿ ಒಂದು ಮಾವಿನ ಹಣ್ಣನ್ನು ತಿಂದೆ. ಅದು ಎಷ್ಟು ರುಚಿಕರವಾಗಿತ್ತು ಅಂದರೆ ಅದರ ರುಚಿ, ಅದರ ಬಣ್ಣಕ್ಕೆ ನಾನು ಮಾರುಹೋಗಿದ್ದೆ. ಹಣ್ಣಿನ ಮೇಲೆ ಒಂದೇ ಒಂದು ಕಪ್ಪು ಚುಕ್ಕಿ ಸಹ ಇರಲಿಲ್ಲ. ಅಷ್ಟು ಸುಂದರವಾಗಿತ್ತು ಆ ಹಣ್ಣು. ಇದು ಎಲ್ಲಿಯ ಹಣ್ಣು ಎಂದು ನೋಡಿದರೆ ಅದು ನಮ್ಮ ಭಾರತದಿಂದ ಅಮೆರಿಕಾಗೆ ರಫ್ತಾದ ಹಣ್ಣು.  ಆದರೆ, ನಾವು ಭಾರತದಲ್ಲಿ ಇಂತಹ ಹಣ್ಣನ್ನು ತಿನ್ನುವುದೇ ಇಲ್ಲ. ಏಕೆಂದರೆ ನಮ್ಮಲ್ಲಿ ಉತ್ಪಾದನೆಯಾದ ಶ್ರೇಷ್ಠ ದರ್ಜೆಯ ಪದಾರ್ಥಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿವೆ. ಕೆಳ ದರ್ಜೆಯ, ಕಡಿಮೆ ಗುಣಮಟ್ಟದ ಪದಾರ್ಥಗಳನ್ನು ನಾವು ಬಳಸುತ್ತಿದ್ದೇವೆ. ಇದು ಬ್ರಿಟಿಷರು ನಮಗೆ ಬಿಟ್ಟು ಹೋದ ಬಳುವಳಿ. ಇದನ್ನು ನಾವು ಈಗಲೂ ಅನುಸರಿಸಿಕೊಂಡು ಹೋಗುತ್ತಿದ್ದೇವೆ. ನನ್ನ ಉದ್ದೇಶ ನಮ್ಮಲ್ಲಿ ಉತ್ಪಾದನೆಯಾಗುವ ಶ್ರೇಷ್ಠ ಪದಾರ್ಥಗಳನ್ನು ನಾವೇ ಬಳಸುವಂತಾಗಬೇಕು ಎಂಬುದು.

ಸಪ್ತಮ್ ತೈಲ ಸಂಪರ್ಕ ಸಂಖ್ಯೆ: 9606983384/ 9606983385

  • ಸಂದರ್ಶನ: ರಮೇಶ್ ಹಂಡ್ರಂಗಿ

Published by:HR Ramesh
First published: