ಸಂಬಳ ಕಡಿತ ಮಾಡಿದರೆ ಯುಗಾದಿ ಹಬ್ಬ ಮಾಡೋದು ಹೇಗೆ ಸ್ವಾಮಿ?; ಬಿಎಸ್​ವೈಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ

ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ದ ಬಿಎಂಟಿಸಿ ಶಿಸ್ತು ಕ್ರಮ ಕೈಗೊಂಡಿದೆ. ಕೆಲಸಕ್ಕೆ ಹಾಜರಾಗದ 96 ಟ್ರೈನಿ ನೌಕರರನ್ನು ವಜಾಗೊಳಿಸಿದ ನಿಗಮ‌ ತರಬೇತಿ ಆಯ್ಕೆ ಪಟ್ಟಿಯಿಂದ ನೌಕರರ ಹೆಸರು ಕೈಬಿಟ್ಟಿದೆ.

ಕೋಡಿಹಳ್ಳಿ ಚಂದ್ರಶೇಖರ್- ಬಿ.ಎಸ್.​ ಯಡಿಯೂರಪ್ಪ.

ಕೋಡಿಹಳ್ಳಿ ಚಂದ್ರಶೇಖರ್- ಬಿ.ಎಸ್.​ ಯಡಿಯೂರಪ್ಪ.

 • Share this:
  ಬೆಂಗಳೂರು: ಈವರೆಗೆ ಸಾರಿಗೆ‌‌ ಸಚಿವರಿಂದ ಪತ್ರ ಬಂದಿಲ್ಲ. ಸಿಎಂ ಕೂಡ ಕರೆದು ಮಾತನಾಡಿಲ್ಲ. ಒಬ್ಬರಿಗೆ ಒಂದು ರೀತಿಯ ವೇತನ ನೀತಿ‌ ಮಾಡಿದೆ. ಒಳಚರಂಡಿ ನಿಗಮದ ಕೆಲಸಗಾರಿಗೆ ಸಂಬಳದ ಮೇಲೆ ಬೋನಸ್ ಕೊಡುತ್ತಾರೆ. ಆದರೆ ಸರ್ಕಾರ ಸಾರಿಗೆ ನೌಕರಿಗೆ ಇನ್ನು ಸಂಬಳ ಸಹ‌ ನೀಡಿಲ್ಲ. ನಮ್ಮಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೇವೆ. ಕಳೆದ ಮಾರ್ಚ್ 16 ರಂದು ಸರ್ಕಾರಕ್ಕೆ ನೋಟೀಸ್ ನೀಡಿದ್ದೆವು. ನಮಗೆ ಇರುವ ಸಮಸ್ಯೆ ಇತ್ಯರ್ಥವಾಗಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ನಮ್ಮ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದುವರೆಗೂ ನಮ್ಮನ್ನು‌ ಕರೆದು ಮಾತಾಡಲಿಲ್ಲ ಎಂದು ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

  ಗಾಂಧಿನಗರದ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಕೇವಲ ಮನೆಯಲ್ಲಿ ಕುಳಿತು ಶೇ. 8 ವೇತನ ಹೆಚ್ಚಳದ ಬಗ್ಗೆ ಮಾತಾಡ್ತಾರೆ. ತಾರತಮ್ಯ ನೀತಿಗಳು ಮುಂದುವರೆಯಬಾರದು. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು. ಸರ್ಕಾರದ ಅಧೀನದಲ್ಲಿ ಇರುವ ಮಂಡಳಿಗಳಲ್ಲಿ ನೌಕರರಿಗೆ ವಿಶೇಷ ಭತ್ಯೆ ನೀಡುತ್ತಿದೆ. ಆದರೆ ಸಾರಿಗೆ ನಿಮಗಮಗಳಲ್ಲಿ ಸರಿಯಾದ ಸಂಬಳವೇ ಇಲ್ಲ.  ಸಾರಿಗೆ ನೌಕರರಿಗೆ ಮಾರ್ಚ್ ತಿಂಗಳ ಸಂಬಳ‌ ಕಡಿತ ಮಾಡಿದ್ದಾರೆ. ಸಂಬಳ ಕಡಿತ ಮಾಡಿದರೆ ಯುಗಾದಿ ಹಬ್ಬ ಮಾಡೋದು ಹೇಗೆ ಸ್ವಾಮಿ..? ಎಂದು ಪ್ರಶ್ನಿಸಿದರು.

  ಸಾರಿಗೆ ನಿಗಮಗಳಲ್ಲಿ ಬೇಸಿಕ್ ಸ್ಯಾಲರಿ 12100 ರೂ. ಇದೆ. ಈ ಪದ್ದತಿ ಬಹಳ ಹಿಂದಿನಿಂದಲೂ ಇದೆ. ಸಾರಿಗೆ ಇಲಾಖೆ ಹೊರತುಪಡಿಸಿ ಬೇರೆ ಎಲ್ಲಾ ನಿಗಮಗಳಲ್ಲಿ ಹೆಚ್ಚಿನ ರೀತಿಯ ಬೇಸಿಕ್ ಸ್ಯಾಲರಿ ಇದೆ. ಇದು ಮುಂದುವರೆಯಬಾರದು ಮಿಸ್ಟರ್ ಯಡಿಯೂರಪ್ಪ ಎಂದು ಸಿಎಂಗೆ ಸಾರಿಗೆ ನೌಕರರ ಸಂಬಳದ ಬಗ್ಗೆ ನೇರವಾಗಿ ಪ್ರಶ್ನೆ ಮಾಡಿದರು.

  ಇದನ್ನು ಓದಿ: ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ‌ ಶಿಫಾರಸ್ಸು ಸಾಧ್ಯವಿಲ್ಲ, ಬೇಕಿದ್ದರೆ ಶೇ.10 ವೇತನ ಪರಿಷ್ಕರಣೆಗೆ ಸಿದ್ಧ; ಅಂಜುಂ ಫರ್ವೇಜ್

  ಕೆಲಸಕ್ಕೆ ಹಾಜರಾಗದ ಸಾರಿಗೆ ನೌಕರರ ಮನೆ ಖಾಲಿ‌ ಮಾಡುವಂತೆ ನೋಟೀಸ್ ಜಾರಿ ಮಾಡಿರುವುದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲರಾದರು. ಸರ್ಕಾರಿ ಸೇವೆ ಮಾಡಿದವರಿಗೆ ಮನೆ ಖಾಲಿ ಮಾಡಿಸುವ ಕೆಲಸ ಸರಿ ಅಲ್ಲ. ಇದು ಸರಿಯಾದ ಕ್ರಮ‌ ಅಲ್ಲ.  ನೀವು ಕೊಡುತ್ತಿರುವುದು ಅರ್ಧ ಸಂಬಳ. ನೌಕರರಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಉದ್ದೇಶ ಪೂರ್ವಕವಾಗಿ ಸರ್ಕಾರ ಹೀಗೆ ಮಾಡುತ್ತಿದೆ. ಈ ಮಲತಾಯಿ ಧೋರಣೆ ಕೆಲಸ ಮಾಡೋದು ಸರಿ ಅಲ್ಲ. ನಮ್ಮ ಬೇಡಿಕೆ ಇರೋದು ಒಂದೇ ಅದು ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಜಾರಿ ಮಾಡುವುದು. ಇದನ್ನು ಮಾಡೋದು ಬಿಟ್ಟು ಸರ್ಕಾರ ಮನೆ ಖಾಲಿ ಮಾಡಿಸುವ ಅಸ್ತ್ರ ಉಪಯೋಗಿಸಿದೆ ಎಂದು ವಾಗ್ದಾಳಿ ನಡೆಸಿದರು.

  96 ನೌಕರರನ್ನು ವಜಾಗೊಳಿಸಿದ ಬಿಎಂಟಿಸಿ

  ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ದ ಬಿಎಂಟಿಸಿ ಶಿಸ್ತು ಕ್ರಮ ಕೈಗೊಂಡಿದೆ. ಕೆಲಸಕ್ಕೆ ಹಾಜರಾಗದ 96 ಟ್ರೈನಿ ನೌಕರರನ್ನು ವಜಾಗೊಳಿಸಿದ ನಿಗಮ‌ ತರಬೇತಿ ಆಯ್ಕೆ ಪಟ್ಟಿಯಿಂದ ನೌಕರರ ಹೆಸರು ಕೈಬಿಟ್ಟಿದೆ.
  Published by:HR Ramesh
  First published: