ಯಡಿಯೂರಪ್ಪರನ್ನ ಹೈಕಮಾಂಡ್ ಹೀಗೆ ನಡೆಸಿಕೊಂಡಿದ್ದು ಸರಿಯೇ? ಕಾಂಗ್ರೆಸ್ ಶೈಲಿಯನ್ನೇ ಅನುಸರಿಸಿತಾ ಬಿಜೆಪಿ?

BS Yediyurappa Resignation: ಹೈಕಮಾಂಡ್ ಖುದ್ದಾಗಿ ಜನನಾಯಕ ಯಡಿಯೂರಪ್ಪ ಅವರನ್ನು ಅಪೋಶನ ತೆಗೆದುಕೊಂಡಿದೆ. ಈಗ ರಾಜ್ಯದ ನಾಯಕರಿಗೆ ಕಿಂಚಿತ್ತು ಸುಳಿವು ನೀಡದೆ ಹೊಸ ಮುಖ್ಯಮಂತ್ರಿ ಆಯ್ಕೆ ಮಾಡಿರುವುದು ಹೈಕಮಾಂಡ್ ಸಂಸ್ಕೃತಿ ಪರಾಕಾಷ್ಠೆ ತಲುಪಿರುವುದಕ್ಕೆ ಉದಾಹರಣೆಯಾಗಿದೆ.

ಶಿಕಾರಿಯಾದ್ರಾ ಬಿಎಸ್​ವೈ?

ಶಿಕಾರಿಯಾದ್ರಾ ಬಿಎಸ್​ವೈ?

  • Share this:
ನವದೆಹಲಿ: ಒಂದು ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯನ್ನು ಬಿಜೆಪಿ ಕಟುವಾಗಿ ವಿರೋಧಿಸಿತ್ತು. ಲಕೋಟೆ ಸಂಸ್ಕೃತಿ ಎಂದು ಮೂದಲಿಸಿತ್ತು. ಜನಪ್ರತಿನಿಧಿಗಳ ಹಕ್ಕನ್ನು ಕಸಿಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕುಹಕವಾಡಿತ್ತು. ಈಗ ಅದೇ ಕಾಂಗ್ರೆಸ್ ಪಕ್ಷವನ್ನೂ ಮೀರಿಸುವ ರೀತಿಯಲ್ಲಿ ಹೈಕಮಾಂಡ್ ಸಂಸ್ಕೃತಿಗೆ, ಅಥವಾ ಲಕೋಟೆ ಸಂಸ್ಕೃತಿಗೆ ಶಿಸ್ತಿನ ಪಕ್ಷದ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದ ಬಿಜೆಪಿ ಸಂಪೂರ್ಣ ಶರಣಾಗಿದೆ‌. ಈ ಮೂಲಕ ತನ್ನದೂ ಅಷ್ಟೇ, ಅಧಿಕಾರ ಮತ್ತು ಅವಕಾಶವಾದಿತನದ ಪಕ್ಷ ಎಂಬುದನ್ನು ಸಾಬೀತು ಪಡಿಸಿದೆ‌.

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಕಾಂಗ್ರೆಸ್ ಪಕ್ಷದ ಒಲವು ನಿಲುವುಗಳನ್ನು ವಿರೋಧಿಸಿ. ತಾನು ಕಾಂಗ್ರೆಸಿಗಿಂತ ಭಿನ್ನ ಎಂದು ಜನರನ್ನು ನಂಬಿಸಿ. ಆದರೆ ಕ್ರಮೇಣ ಅದು ಕಾಂಗ್ರೆಸ್ ಪಕ್ಷದ  ಗುಣಗಳನ್ನು ಅವಗಾಹಿಸಿಕೊಳ್ಳತೊಡಗಿತು. ಸದ್ಯ ನಡೆಯುತ್ತಿರುವುದು ಹೈಕಮಾಂಡ್ ಸಂಸ್ಕೃತಿಯ ಪರಾಕಾಷ್ಠೆ.

ರಾಜ್ಯದ ಮಟ್ಟಿಗೆ ಹೈಕಮಾಂಡ್ ಸಂಸ್ಕೃತಿ ಬಗ್ಗೆ ಮಾತನಾಡುವುದಾದರೆ ಮೊದಲ ಬಾರಿಗೆ ಅಂದರೆ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವರೆಗೆ ರಾಜ್ಯದ ನಾಯಕರ ತೀರ್ಮಾನವೇ ಅಂತಿಮ ತೀರ್ಮಾನ ಆಗಿರುತ್ತಿತ್ತು. 2006ರಲ್ಲಿ ಇದೇ ಯಡಿಯೂರಪ್ಪ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಲು ಹೈಕಮಾಂಡ್ ಕೇಳಿ ನಿರ್ಧರಿಸಿರಲಿಲ್ಲ. ತಾವು ನಿರ್ಧರಿಸಿ ನಂತರ ಹೈಕಮಾಂಡಿಗೆ ತಿಳಿಸಿದ್ದರು. 2008ರಲ್ಲಿ 110 ಸೀಟನ್ನು ಗೆದ್ದಿದ್ದಾಗ ಆಪರೇಷನ್ ಕಮಲ ಮಾಡಲು ಹೈಕಮಾಂಡ್ ನಿರ್ದೇಶನ ಕೇಳಿರಲಿಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರ ಉಳಿಸಿಕೊಂಡದ್ದು ಯಡಿಯೂರಪ್ಪ ಅವರ ಸ್ವಯಂ ನಿರ್ಧಾರ. ಹೈಕಮಾಂಡ್ ಮತ್ತು ಜನಾರ್ಧನ ರೆಡ್ಡಿ - ಶ್ರೀರಾಮುಲು ಹಸ್ತಕ್ಷೇಪ ಶುರುವಾದ ಮೇಲೆಯೇ  ಯಡಿಯೂರಪ್ಪ ಅವರ ಪತನದ ಹಾದಿ ಶುರುವಾಗಿದ್ದು.ಇದು ಮೊದರ್ಧ. 2019ರ ಮೇಲೆ ನಡೆದ ಬೆಳವಣಿಗೆಗಳು ಉಳಿದರ್ಧ.

ಇದನ್ನೂ ಓದಿ: Karnataka New CM: ಸಿಎಂ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಫೈನಲ್? ಸುಳಿವು ನೀಡಿದ ವಿಡಿಯೋ..!

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಹೈಕಮಾಂಡ್ ಮರೆತು ಕೂತಿತ್ತು. ಮತ್ತೆ ಅಧಿಕಾರಕ್ಕೆ ಬರಬೇಕೆಂದು ಪ್ರಯತ್ನಿಸಿದವರು ಯಡಿಯೂರಪ್ಪ. ಮತ್ತೆ ಆಪರೇಷನ್ ಕಮಲ ಮಾಡಿದವರು ಯಡಿಯೂರಪ್ಪ. ಕಡೆಗೆ ಮತ್ತೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಸಫಲರಾದವರು ಯಡಿಯೂರಪ್ಪ. ಆದರೆ ಸರ್ಕಾರ ರಚನೆ ಆದ ಮೇಲೆ ಹೈಕಮಾಂಡ್ ಹಸ್ತಕ್ಷೇಪ ಶುರುಮಾಡಿತು. ಯಡಿಯೂರಪ್ಪ ಪದಗ್ರಹಣ ಸಮಾರಂಭಕ್ಕೆ ಹಸಿರು ನಿಶಾನೆ ತೋರಲು ಮೀನಾ ಮೇಷ ಎಣಿಸುವುದರಿಂದ ಹಿಡಿದು ಪ್ರವಾಹದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ಸರ್ಕಾರ ರಚನೆ ಮಾಡಲು ಅವಕಾಶ ನೀಡಲಿಲ್ಲ.
ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ ಕ್ಷಣದಿಂದಲೇ ಯಡಿಯೂರಪ್ಪ ಅವರನ್ನು ನಿಯಂತ್ರಣ ಮಾಡುವ ಮೂಲಕ ಹೈಕಮಾಂಡ್ ಮೇಲುಗೈ ಸಾಧಿಸಿತು.

ಇದರಿಂದ ಯಡಿಯೂರಪ್ಪಗೆ ಹಿನ್ನಡೆ ಆಯಿತು. ಇದೇ ಅವಕಾಶವನ್ನು ಬಳಸಿಕೊಂಡು ಯಡಿಯೂರಪ್ಪ ವಿರೋಧಿಗಳು ಅನಿಶ್ಚಿತತೆಯನ್ನು ಜೀವಂತವಾಗಿ ಇಟ್ಟರು. ಈ ಅನಿಶ್ಚಿತತೆಯೇ ಈಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ಈ ಮೂಲಕ ಹೈಕಮಾಂಡ್ ಖುದ್ದಾಗಿ ಜನನಾಯಕ ಯಡಿಯೂರಪ್ಪ ಅವರನ್ನು ಅಪೋಶನ ತೆಗೆದುಕೊಂಡಿದೆ. ಈಗ ರಾಜ್ಯದ ನಾಯಕರಿಗೆ ಕಿಂಚಿತ್ತು ಸುಳಿವು ನೀಡದೆ ಹೊಸ ಮುಖ್ಯಮಂತ್ರಿ ಆಯ್ಕೆ ಮಾಡಿರುವುದು ಹೈಕಮಾಂಡ್ ಸಂಸ್ಕೃತಿ ಪರಾಕಾಷ್ಠೆ ತಲುಪಿರುವುದಕ್ಕೆ ಉದಾಹರಣೆಯಾಗಿದೆ.
Published by:Kavya V
First published: