news18-kannada Updated:October 20, 2020, 12:22 PM IST
ಮಳೆ ಸೃಷ್ಟಿಸಿದ ಅವಾಂತರ
ಕಲಬುರ್ಗಿ(ಅ.20): ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಮುಂದುವರೆದಿದೆ. ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಮನೆಗಳ ಹಾನಿಯ ಜೊತೆ ಅಂಗಡಿಗಳಲ್ಲಿಯೂ ಅಪಾರ ಹಾನಿ ಸಂಭವಿಸಿದೆ. ಭೀಮಾ ನದಿ ಪ್ರವಾಹಕ್ಕೆ ಕಲಬುರ್ಗಿ ಜಿಲ್ಲೆ ಜನತೆ ತತ್ತರಿಸಿ ಹೋಗಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಒಂದಷ್ಟು ಇಳಿಮುಖವಾಗಿದೆ. ಆದರೆ ಕಲಬುರ್ಗಿ, ಜೇವರ್ಗಿ, ಶಹಾಬಾದ್ ಹಾಗು ಚಿತ್ತಾಪುರ ತಾಲೂಕುಗಳಲ್ಲಿ ಪ್ರವಾಹ ಮುಂದುವರಿದಿದೆ. ಭಾರಿ ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಕಲಬುರ್ಗಿ ತಾಲೂಕಿನ ಸರಡಗಿ ಗ್ರಾಮದಲ್ಲಿ ನೂರಾರು ಮನೆಗಳು ಮುಳುಗಡೆಯಾಗಿವೆ. ಮನೆಗಳ ಜೊತೆ ಅಂಗಡಿಗಳೂ ಜಲಾವೃತಗೊಂಡಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿ ಸಂಭವಿಸಿದೆ. ಸುಮಾರು 200 ಮನೆಗಳ ಮುಳುಗಡೆಯಾಗಿವೆ. ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿವೆ. ಅಂಗಡಿಯಲ್ಲಿದ್ದ ಸಾಮಾನು ಸರಂಜಾಮುಗಳು ಮುಳುಗಡೆಯಾಗಿವೆ.
ಭಾರಿ ಪ್ರವಾಹದಿಂದಾಗಿ ಏಕಾಏಕಿ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಇಷ್ಟು ಪ್ರವಾಹ ಎಂದೂ ಬಂದಿರಲಿಲ್ಲ. ರಾತ್ರಿ ಅಂಗಡಿಗೆ ನೀರು ನುಗ್ಗುತ್ತಿದ್ದಂತೆಯೇ ಎದ್ದು ಓಡಿ ಹೋಗಿದ್ದೇವೆ. ಈಗ ಬಂದು ನೋಡಿದರೆ ಎಲ್ಲ ಸಾಮಾನುಗಳೂ ನೀರಿನಲ್ಲಿ ಮುಳುಗಿ ಹೋಗಿವೆ. ಪ್ರವಾಹದಲ್ಲಿ ನಾವೇ ಕೊಚ್ಚಿ ಹೋಗಿದ್ದರೂ ಪರವಾಗಿರಲಿಲ್ಲ. ಆದ್ರೆ ನಮ್ಮ ಬದುಕೇ ಪ್ರವಾಹಕ್ಕೆ ಕೊಚ್ಚಿ ಹೋಗಿದೆಯೆಂದು ಜನ ಕಣ್ಣೀರು ಹಾಕಿದ್ದಾರೆ.
ನವರಾತ್ರಿಗೆ ಬನಶಂಕರಿ ದೇವಿಯ ದರ್ಶನ ಗೇಟಿನ ಹೊರಗೆ; ಭಕ್ತರಿಗೆ ದೇವಾಲಯದೊಳಗೆ ನೋ ಎಂಟ್ರಿ
ಭೀಮಾ ನದಿಯಲ್ಲಿ ಪ್ರವಾಹ ಅಲ್ಪ ಇಳಿಮುಖವಾಗಿದೆ. ಒಂದು ಅಡಿಯಷ್ಟು ನೀರು ಇಳಿಮುಖವಾಗಿದ್ದರೂ ಜನರ ಆತಂಕ ಮುಂದುವರಿದಿದೆ. ಕಲಬುರ್ಗಿ ತಾಲೂಕಿನ ಸರಡಗಿ(ಬಿ) ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳ ಮುಳುಗಡೆಯಾಗುವೆ. ಕೃಷಿ ಯಂತ್ರೋಪಕರಣಗಳು, ದವಸ, ಧಾನ್ಯ ಮತ್ತಿತರ ವಸ್ತುಗಳ ಮುಳುಗಡೆಯಾಗಿವೆ. ಸರಡಗಿ ಗ್ರಾಮದ ಹೊಸ ಊರಿನಲ್ಲಿ ಹೆಚ್ಚಿನ ಹಾನಿಯಾಗಿದೆ. ಪ್ರವಾಹ ಮತ್ತಷ್ಟು ಹೆಚ್ಚಾಗಬಹುದೆಂದು ಜನ ಇಂದೂ ಸಹ ಗ್ರಾಮ ತೊರೆಯುತ್ತಿದ್ದಾರೆ.
ಸರಡಗಿ ಹಳೆ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆದಿರೋದ್ರಿಂದ ಯಾವುದೇ ಪ್ರಯೋಜನವಾಗ್ತಿಲ್ಲ. ನೀರು ದಾಟಿ ಕಾಳಜಿ ಕೇಂದ್ರಕ್ಕೆ ಹೋಗಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಪ್ರವಾಹ ಹಿಂದೆ ಬಂದಿರಲಿಲ್ಲವೆಂದು ಜನರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರವಾಹ ಭೀತಿಯಲ್ಲಿಯೇ ಸರಡಗಿ ಗ್ರಾಮಸ್ತರು ಜೀವನ ಸಾಗಿಸ್ತಿದಾರೆ.
ಭೀಮಾನದಿ ಪ್ರವಾಹದ ಏರಿಳಿತದಿಂದ ಪದೇ ಪದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈಗ ಭೀಮಾನದಿ ಮತ್ತೆ ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು ಈಗ ನದಿ ತೀರದಲ್ಲಿ ಬೆಳೆದ ಭತ್ತ ಸಂಪೂರ್ಣ ಜಲಾವೃತವಾಗಿದೆ. ಅದೆ ರೀತಿ ರೈತರ ಜಮೀನು, ಮನೆಗಳು ಮುಳುಗಡೆಯಾಗಿವೆ. ಕೃಷಿ ಸಲಕರಣೆಗಳು, ವಿದ್ಯುತ್ ಕಂಬ, ಪಂಪ್ ಸೆಟ್, ಪೈಪ್ ಗಳು ಈಗ ಪ್ರವಾಹದಿಂದ ಜಲಾವೃತವಾಗಿವೆ.
ಯಾದಗಿರಿ ಜಿಲ್ಲೆಯ ಭೀಮಾನದಿ ತೀರದ ನಾಯ್ಕಲ್, ಗುರುಸಣಗಿ, ಬಿರನಾಳ, ಬಬಲಾದ, ಜೋಳದಡಗಿ, ಶಿವನೂರ, ತಂಗಡಗಿ ಮೊದಲಾದ ಗ್ರಾಮದಲ್ಲಿ ಬೆಳೆದ ಭತ್ತದ ಬೆಳೆ ಈಗ ಸಂಪೂರ್ಣ ಜಲಾವೃತವಾಗಿ ಜಮೀನುಗಳು ಸಮುದ್ರದಂತೆ ಕಾಣುತ್ತಿವೆ. ಒಟ್ಟಾರೆ ಭಾರೀ ಪ್ರವಾಹಕ್ಕೆ ತತ್ತರಿಸಿದ್ದಾರೆ. ಪ್ರವಾಹ ಸಂಪೂರ್ಣ ಇಳಿಮುಖವಾಗುವತ್ತಾ ಎಂದು ಸಂತ್ರಸ್ತರು ಎದುರು ನೋಡ್ತಿದಾರೆ.
Published by:
Latha CG
First published:
October 20, 2020, 12:15 PM IST