ಬೆಂಗಳೂರು: ಕೌಟುಂಬಿಕ ಕಲಹ (Family Dispute) ಹಿನ್ನಲೆಯಲ್ಲಿ ಬೆಂಗಳೂರಿನ ದ್ವಾರಕಾನಗರದ ಕೃಷ್ಣ ಟೆಂಬಪ್ ಬಳಿ ಗೃಹಿಣಿ ಆತ್ಮಹತ್ಯೆಗೆ (House Wife Committed Suicide) ಶರಣಾಗಿದ್ದಾರೆ. ನಿತ್ಯಶ್ರೀ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮನೆಯ ಫ್ಯಾನಿಗೆ ನೇಣು ಬಿಗಿದು ನಿತ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದವರಾದ ನಿತ್ಯಶ್ರೀಗೆ ಎರಡು ವರ್ಷಗಳ ಹಿಂದೆ ರಾಜೇಶ್ ಎಂಬಾತನ ಜೊತೆ ಮದುವೆಯಾಗಿತ್ತು. ದಂಪತಿಗೆ ಒಂದು ವರ್ಷದ ಮಗು ಇದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಗಿರಿನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದ್ವಾರಕಾನಗರದ ಮನೆಯ ಬಳಿ ನಿತ್ಯಶ್ರೀ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಗೆ ಚಿತ್ರಹಿಂದೆ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮದುವೆ ಆದಾಗಿನಿಂದಲೂ ಕಿರುಕುಳ ಕೊಡ್ತಾ ಇದ್ರು. ಗಂಡ ಹಾಗೂ ಅತ್ತೆ ಪ್ರತಿನಿತ್ಯವೂ ಕಿರುಕುಳ ನೀಡ್ತಾ ಇದ್ರು. ಒಂದು ವರ್ಷದ ಮಗು ಇದ್ರೂ ಕಿರುಕುಳ ನೀಡ್ತಾ ಇದ್ರು ಎಂದು ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
20 ಲಕ್ಷ ಸಾಲ ಮಾಡಿ ಮಗಳ ಮದುವೆ ಮಾಡಲಾಗಿತ್ತು. ಎಲ್ಲರೂ ಸೇರಿ ಮಗಳಿಗೆ ಕಿರುಕುಳ ನೀಡಿದ್ದಾರೆ. ಗಂಡನಿಗೆ ಬೇರೆಯವರ ಜೊತೆ ಸಂಬಂಧ ಇದೆ. ಒಂದು ವರ್ಷದ ಮಗುವಿಗೂ ತೊಂದರೆ ಕೊಡ್ತಾ ಇದ್ರು. ಕುಟುಂಬಸ್ಥರು ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ ಪೋಷಕರು ಆರೋಪಿಸಿದ್ದಾರೆ. ಮೃತ ನಿತ್ಯಶ್ರೀ ಬಿಎಸ್ಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳೋ ಹುಡುಗಿ ಅಲ್ಲ ಎಂದು ಮೃತ ನಿತ್ಯಶ್ರೀ ಚಿಕ್ಕಮ್ಮ ಶೋಭಾ ಹೇಳಿದ್ದಾರೆ.
ಮಗಳ ಸಾವಿಗೆ ಗಂಡ ಹಾಗೂ ಅತ್ತೆಯೇ ಕಾರಣ ಎಂದು ಹೇಳಿ ಮೃತ ನಿತ್ಯಶ್ರೀ ಕುಟುಂಬಸ್ಥರು ದ್ವಾರಕಾನಗರದ ಮನೆಯ ಮುಂದೆ ಕೂತು ಪ್ರತಿಭಟನೆ ಸಹ ಮಾಡಿದರು. ನಿತ್ಯಶ್ರೀ ಗಂಡ ರಾಜೇಶ್ ಹಾಗೂ ಅತ್ತೆಯನ್ನು ಕೂಡಲೇ ಬಂಧಿಸಬೇಕು. ಬಂಧಿಸದಿದ್ದರೆ ಶವವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಬಳಿಕ ಪೊಲೀಸರು ಸೂಕ್ತ ಕ್ರಮದ ಭರವಸೆ ನೀಡಿ, ಮುಂದಿನ ಕ್ರಿಯೆ ಮುಗಿಸಿದರು.
ಇದನ್ನು ಓದಿ: BS Yediyurappa: ನಮ್ಮ ತಾತ ತರಕಾರಿ ಮಾರುತ್ತಿದ್ದರು, ನಾನು ಮಂಡ್ಯದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದೆ; ಬಿಎಸ್ ಯಡಿಯೂರಪ್ಪ!
ಬೆಂಗಳೂರು ಹೊರವಲಯದಲ್ಲಿ ಜೋಡಿಕೊಲೆ
ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ಸ್ನೇಹಿತರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆನೇಕಲ್ ತಾಲ್ಲೂಕಿನ ಮಾಯಸಂದ್ರ ನಿವಾಸಿ ಭಾಸ್ಕರ್, ಹಾಗೂ ಕೋರಮಂಗಲದ ದೀಪಕ್ ಕೊಲೆಯಾದ ನತದೃಷ್ಟರು. ಅತ್ತಿಬೆಲೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಟಿವಿಎಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯರು ಹೊಲದ ಬಳಿ ಬಂದಾಗ ಮೃತ ದೇಹಗಳು ಪತ್ತೆಯಾಗಿವೆ. ಸಮೀಪದಲ್ಲಿಯೇ ಉರುಳಿ ಬಿದ್ದ ಸ್ಥಿತಿಯಲ್ಲಿ ಪಲ್ಸರ್ ಬೈಕ್ ಪತ್ತೆಯಾಗಿದ್ದು, ಮತ್ತೊಂದು ಹೊಂಡಾ ಎಕ್ಸ್ಟ್ರೀಮ್ ಬೈಕ್ ಸಹ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಹಾಕಿ, ಮದ್ಯದ ಬಾಟಲಿಗಳಿಂದ ಚುಚ್ಚಿ ಇಬ್ಬರನ್ನು ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ 7 ರಿಂದ 8 ಗಂಟೆ ಸುಮಾರಿನಲ್ಲಿ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ವಸಂತ್ ತಿಳಿಸಿದ್ದಾರೆ.
ನಿನ್ನೆ ದೀಪಕ್ ಮತ್ತು ಭಾಸ್ಕರ್ ಎಂದಿನಂತೆ ಫೈನಾನ್ಸ್ ವಸೂಲಿಗೆ ಅರುಣ್ ಮತ್ತು ದೊರೆ ಬಳಿ ಹೋಗಿದ್ದಾರೆ. ಮತ್ತದೆ ಸಬೂಬು ಹೇಳಿದ್ದರಿಂದ ಕೋಪಗೊಂಡ ದೀಪಕ್ ಮತ್ತ ಭಾಸ್ಕರ್ ಅರುಣ್ ಬಳಿ ಇದ್ದ ಹೊಂಡಾ ಎಕ್ಸ್ಟ್ರೀಮ್ ಬೈಕ್ ಕಸಿದುಕೊಂಡು ಬಂದಿದ್ದಾರೆ. ಸಂಜೆ ಹೊತ್ತಿಗೆ ಫೋನ್ ಮೂಲಕ ದೀಪಕ್ ಮತ್ತು ಭಾಸ್ಕರ್ ನನ್ನು ಸಂಪರ್ಕಿಸಿದ ದೊರೆ ಮತ್ತು ಅರುಣ್ ಸೆಟ್ಲಮೆಂಟ್ ಮಾಡಿಕೊಳ್ಳುವುದಾಗಿ ಕರೆದಿದ್ದಾರೆ ಎನ್ನಲಾಗಿದೆ. ಇವರ ಮಾತು ನಂಬಿ ಸ್ಥಳಕ್ಕೆ ಬಂದ ದೀಪಕ್ ಮತ್ತು ಭಾಸ್ಕರ್ ಮೇಲೆ ಮೊದಲೇ ಪ್ಲಾನ್ ಮಾಡಿದಂತೆ ಭೀಕರವಾಗಿ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಕೆ ವಂಶಿಕೃಷ್ಣ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ