HOME » NEWS » State » HOTEL FOOD RATES LIKELY TO BE INCREASED BY APRIL SKTV SNVS

Hotels - ಏಪ್ರಿಲ್ ವೇಳೆಗೆ ಹೋಟೆಲ್ ಊಟ ದುಬಾರಿ; ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು

ಇಂಧನ ಬೆಲೆ ಏರಿಕೆ ಪರಿಣಾಮ ದಿನಬಳಕೆ ವಸ್ತುಗಳ ದರ ಏರಿಕೆಯಾಗುತ್ತಿದೆ. ತತ್ ಪರಿಣಾಮವಾಗಿ ಹೋಟೆಲ್​ಗಳ ನಿರ್ವಹಣೆ ದೃಷ್ಟಿಯಿಂದ ತಿಂಡಿತಿನಿಸುಗಳ ದರ ಹೆಚ್ಚಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಏಪ್ರಿಲ್ ವೇಳೆಗೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

news18-kannada
Updated:March 6, 2021, 3:25 PM IST
Hotels - ಏಪ್ರಿಲ್ ವೇಳೆಗೆ ಹೋಟೆಲ್ ಊಟ ದುಬಾರಿ; ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು
ಸಾಂದರ್ಭಿಕ ಚಿತ್ರ
  • Share this:
ಒಂದೆಡೆ ಇಂಧನದ ಬೆಲೆ ಹೆಚ್ಚಿದೆ ಎಂದು ಲಾರಿ ಮಾಲೀಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಇದೇ ಇಂಧನ ಬೆಲೆಯೇರಿಕೆಯಿಂದ ದಿನಬಳಕೆಯ ಸಾಮಗ್ರಿಗಳ ಬೆಲೆಯೂ ಸದ್ದಿಲ್ಲದೇ ಆಗಸಕ್ಕೇರಿದೆ. ಇವೆರಡರ ಪರಿಣಾಮವಾಗಿ ಹೋಟೆಲುಗಳಲ್ಲೂ ಇನ್ನೊಂದು ತಿಂಗಳೊಳಗೆ ಎಲ್ಲಾ ತಿಂಡಿ ತಿನಿಸುಗಳು ತುಟ್ಟಿಯಾಗಲಿವೆ.

ಇದೊಂಥರಾ ಚೈನ್ ರಿಯಾಕ್ಷನ್. ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಆಯ್ತು ಅಂದ್ರೆ ಲಾರಿ ಬಾಡಿಗೆ ಹೆಚ್ಚಾಗುತ್ತೆ. ಬಾಡಿಗೆ ಹೆಚ್ಚು ಕೊಡಬೇಕಾದಾಗ ರೈತ ಬೆಳೆದ ಬೆಳೆಗಳಿಗೆ ಅಷ್ಟೊಂದು ಬೆಲೆ ಸಿಗದೇ ಇರದಿದ್ದರೂ ಸಾಗಾಣಿಕೆ ದರ ಹೆಚ್ಚಾದಾಗ ಸಹಜವಾಗೇ ಗ್ರಾಹಕರ ಕೈಗೆ ಆ ವಸ್ತುಗಳು ಬಂದಾಗ ತುಟ್ಟಿಯಾಗುತ್ತವೆ. ಎಷ್ಟರಮಟ್ಟಿಗೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆಗಳು ಹೆಚ್ಚಿವೆ ಅಂದ್ರೆ ಅಂದಿನ ಬದುಕು ಅಂದಿಗೆ ನೋಡಿಕೊಂಡರೆ ಸಾಕು ಎನ್ನುವಂಥಾ ಪರಿಸ್ಥಿತಿ ವ್ಯಾಪಾರಿಗಳಿಗೂ ಉಂಟಾಗಿದೆ.
ವಸ್ತು ಹಿಂದಿನ ಬೆಲೆಈಗಿನ ಬೆಲೆ
ಅಡುಗೆ ಎಣ್ಣೆ 110 ರೂ/ಲೀ 155ರೂ/ಲೀ
ಶೇಂಗಾ  120/ಕೆಜಿ 175/ಕೆಜಿ
ತೊಗರಿ ಬೇಳೆ 110/ಕೆಜಿ 145/ ಕೆಜಿ
ಬ್ಯಾಡಗಿ ಮೆಣಸು 300/ಕೆಜಿ 600/ಕೆಜಿ

ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾದಾಗ ಸಾಮಾನ್ಯ ಜನರ ಜೊತೆಗೆ ದೊಡ್ಡ ಹೊಡೆತ ಬೀಳೋದು ಹೋಟೆಲ್ ಉದ್ಯಮಕ್ಕೆ. ಈಗಾಗಲೇ ದುಬಾರಿ ಎನಿಸೋ ಹೋಟೆಲಿನ ತಿನಿಸುಗಳು ಬಹುತೇಕ ಏಪ್ರಿಲ್ ತಿಂಗಳಿಂದ ಮತ್ತಷ್ಟು ಬೆಲೆಯೇರಿಕೆ ಕಾಣುವ ಸಾಧ್ಯತೆ ಇದೆ. ಹೋಟೆಲುಗಳ ನಿರ್ವಹಣೆಗೆ ಈ ಬೆಲೆಯೇರಿಕೆ ಅನಿವಾರ್ಯ ಎನ್ನುತ್ತಾರೆ ಮಾಲೀಕರು.

ಇದನ್ನೂ ಓದಿ: Wistron – ಕೋಲಾರದಲ್ಲಿ ವಿಸ್ಟ್ರಾನ್ ಘಟಕ ಪುನಾರಂಭಕ್ಕೆ ಸಿದ್ಧತೆ; ನೌಕರರಿಗೆ ಕೌಶಲ್ಯಾಧಾರಿತವಾಗಿ ವೇತನಕ್ಕೆ ನಿರ್ಧಾರ

ಈಗಷ್ಟೇ ಕೋವಿಡ್ ಮೇಲಿನ ಭಯ ಜನರಿಂದ ದೂರವಾಗಿದೆ. ಕುಟುಂಬವೆಲ್ಲಾ ಒಟ್ಟಾಗಿ ಅಪರೂಪಕ್ಕಾದ್ರೂ ಹೋಟೆಲಿಗೆ ಹೋಗಿ ಒಂದಷ್ಟು ತಿಂಡಿ- ತಿನಿಸು, ಡಿನ್ನರ್, ಸೆಲಬ್ರೇಶನ್ ಅಂತ ಜನ ಖುಷಿಯಾಗಿ ಓಡಾಡ್ತಿದಾರೆ. ಅದೇ ರೀತಿ ಬಹುತೇಕ ಒಂದಿಡೀ ವರ್ಷ ವ್ಯಾಪಾರವೇ ಇಲ್ಲದೆ ಹೋಟೆಲ್ ಉದ್ಯಮ ಕೂಡಾ ತತ್ತರಿಸಿ ಹೋಗಿತ್ತು. ಅವರೂ ಈಗೀಗ ಸುಧಾರಿಸಿಕೊಳ್ತಿದ್ದಾರೆ. ಇದರ ನಡುವೆ ದಿನಸಿ, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರೋದು, ಹೋಟೆಲ್ ಕೆಲಸಕ್ಕೆ ಜನ ಸಿಗದೆ ಪರದಾಟ, ಎಷ್ಟೇ ಮನವಿ ಮಾಡಿಕೊಂಡರೂ ಒಂಚೂರೂ ಬಾಡಿಗೆ ಇಳಿಸದ ಕಟ್ಟಡ ಮಾಲೀಕ. ಹೀಗೆ ನಾನಾ ಸಮಸ್ಯೆಗಳ ನಡುವೆಯೇ ಬದುಕು ಕಟ್ಟಿಕೊಳ್ಳೋಕೆ ಅವರೂ ಹೆಣಗಾಡುತ್ತಿದ್ದಾರೆ. ಇದೆಲ್ಲದರಿಂದಾಗಿ ಇಂದಲ್ಲಾ ನಾಳೆ ಹೋಟೆಲಿನ ತಿಂಡಿ ತಿನಿಸುಗಳ ಬೆಲೆ ಹೆಚ್ಚಾದರೆ ಆಶ್ಚರ್ಯವಿಲ್ಲ. ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳುವ ಪ್ರಕಾರ ಏಪ್ರಿಲ್ ತಿಂಗಳ ವೇಳೆಗೆ ಅನಿವಾರ್ಯವಾಗಿ ಹೋಟೆಲುಗಳಲ್ಲಿ ಎಲ್ಲಾ ವಸ್ತುಗಳ ಬೆಲೆಯೇರಿಕೆ ಆಗಲಿದೆ.

ಒಟ್ನಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ ಸಾಮಗ್ರಿ ಹೀಗೆ ಎಲ್ಲಾ ವಸ್ತುಗಳೂ ಹೀಗೆ ತಮ್ಮ ಧಾರಣೆ ಹೆಚ್ಚಿಸಿಕೊಳ್ತಲೇ ಇವೆ. ಜನಸಾಮಾನ್ಯರು ಬದುಕು ನಡೆಸೋಕೆ ನಿರಂತರ ಹೋರಾಟ ನಡೆಸುವಂತಾಗಿದೆ. ಸಂಬಂಧಪಟ್ಟ ಅಧಿಕಾರವರ್ಗ ಇನ್ನಾದರೂ ಗಮನ ಹರಿಸುತ್ತಾ ಕಾದು ನೋಡಬೇಕಿದೆ.

ವರದಿ: ಸೌಮ್ಯಾ ಕಳಸ
Published by: Vijayasarthy SN
First published: March 6, 2021, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories