ಮೈಸೂರು (ಅ.23): ವಿಶ್ವವಿಖ್ಯಾತ ದಸರಾ ಸಂಭ್ರಮ ಸಾಂಸ್ಕೃತಿಕ ನಗರದ ಶ್ರೀಮಂತಿಕೆಯನ್ನು ತೋರಿಸುವ ಜೊತೆಗೆ ಈ ಸಂದರ್ಭದಲ್ಲಿ ನಗರದ ವ್ಯಾಪಾರಿಗಳ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿತ್ತು. ಆದರೆ, ಈ ಬಾರಿ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ದಸರಾ ಸಂಭ್ರಮದಲ್ಲಿ ಜನರಿಂದ ಕಿಕ್ಕಿರಿದು ತುಂಬುತ್ತಿದ್ದ ಹೊಟೇಲ್ಗಳು ಖಾಲಿ ಹೊಡೆಯುತ್ತಿವೆ. ತಿಂಗಳುಗಳ ಮುಂಚೆ ಕಾದಿರಿಸಲಾಗುತ್ತಿದ್ದ ಬಾಡಿಗೆ ರೂಂಗಳಿಗೆ ಕೇಳುವವರೆ ಇಲ್ಲದಂತೆ ಆಗಿದೆ. ಇದರ ಪರಿಣಾಮ ನಗರದ ಹೋಟೆಲ್ ಮಾಲೀಕರು 100 ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ ಎಂದು ನಗರದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿದ್ದ ನಮಗೆ ಸರಳ ದಸರಾ ಮತ್ತಷ್ಟು ಪೆಟ್ಟು ನೀಡಿದೆ. ಈ ಹಿನ್ನಲೆ ಸರ್ಕಾರ ಹೊಟೇಲ್ ಉದ್ಯಮಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ದಸರಾ ಎಂಬುದು ಮೈಸೂರಿನ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ವ್ಯಾಪಾರದ ಹಬ್ಬವಿದ್ದಂತೆ. ದಸರಾ ಸಂಭ್ರಮಕ್ಕಾಗಿ ದೇಶ-ವಿದೇಶದಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಆಗಮಿಸುವ ಹಿನ್ನಲೆ ಹೊಟೇಲ್ಗಳಲ್ಲಿ ಜನಜಂಗುಳಿ ಕಂಡು ಬರುತ್ತಿದ್ದವು. ಆದರೆ, ಈ ಬಾರಿ ಜನರೆ ಇಲ್ಲದೇ ದಸರಾ ಬಣಗುಡುತ್ತಿದೆ. ಪ್ರತಿ ಬಾರಿ ಶೇ 90 ರಷ್ಟು ಆಗುತ್ತಿದ್ದ ಹೋಟೆಲ್ ಬುಕ್ಕಿಂಗ್ ಈ ಬಾರಿ ಶೇ 40 ರಷ್ಟು ಆಗಿಲ್ಲ. ಅಲ್ಲದೇ ರೆಸ್ಟೋರೆಂಟ್ ಉದ್ಯಮ ಕೂಡ ಕುಗ್ಗಿ ಹೋಗಿದೆ ಎಂಬುದು ಹೋಟೆಲ್ ಮಾಲೀಕರ ಅಳಲಾಗಿದೆ.
ಇದನ್ನು ಓದಿ: ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ ಸೋಂಕು: ಹೇಳಿದಂತೆ ಮಾಡಿಬಿಟ್ಟರಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಇಲ್ಲಿನ ಹೊಟೇಲ್ ಮಾಲೀಕರಿಗೆ ದಸರಾ ಸಂಭ್ರಮವೇ ಸುಗ್ಗಿ ಕಾಲ. ಆದರೆ, ಈ ಬಾರಿ ಕೊರೋನಾ ಹಿನ್ನಲೆ ಸರ್ಕಾರ ಸರಳಾ ದಸರಾ ಆಚರಣೆಗೆ ಮುಂದಾಗಿದೆ. ಇದರಿಂದಾಗಿ ಸಂಪೂರ್ಣವಾಗಿ ಉದ್ಯಮ ಕುಗ್ಗಿದೆ. ಈ ಹಿನ್ನಲೆ ಸರ್ಕಾರವೇ ನಮ್ಮ ಸಹಾಯಕ್ಕೆ ಆಗಮಿಸಬೇಕು ಎಂದು ಮಾಲೀಕರು ಕೋರಿದ್ದಾರೆ.
ಹೋಟೆಲ್ ಉದ್ಯಮಕ್ಕೆ ತೆರಿಗೆ ರಿಯಾಯಿತಿ ಹಾಗೂ ಪರವಾನಗಿಯ ಹಣದಲ್ಲಿ ರಿಯಾಯಿತಿ ಕೊಡಲಿ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕುವ ನಮಗೆ ಸಹಾಯವಾಗಲಿದೆ. ಇದನ್ನೇ ನಾವು ಸಿಎಂ ಅವರಿಗೆ ಮನವಿ ಮಾಡುತ್ತೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ