ಬೆಂಗಳೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ (Heavy Rain) ಹೊಸೂರು ಹೆದ್ದಾರಿ (Hosur Highway) ಸಂಪೂರ್ಣ ಜಲಾವೃತವಾಗಿತ್ತು. ಕೆರೆಯಂತಾದ ಹೆದ್ದಾರಿಯಲ್ಲಿ ವಾಹನ ಸವಾರರು ಸಂಚಾರ ಪರದಾಡಿದರು. ಬೆಂಗಳೂರಿನಲ್ಲಿ (Bengaluru) ಸಂಜೆ ಆಗುತ್ತಿದ್ದಂತೆ ಮಳೆರಾಯ ಅಬ್ಬರಿಸ್ತಿದ್ದು, ನಿನ್ನೆ ಸುರಿದ ಭಾರೀ ಮಳೆಯಿಂದ ಹೊಸೂರು ಮುಖ್ಯರಸ್ತೆ ಜಲಾವೃತ ಆಗಿತ್ತು. ಎಲೆಕ್ಟ್ರಾನಿಕ್ ಸಿಟಿ (Electronic City) ಸಮೀಪದ ವೀರಸಂದ್ರ ಸಿಗ್ನಲ್ ಬಳಿ ರಾತ್ರಿ ಸುರಿದ ಮಳೆಯಿಂದಾಗಿ ಸುಮಾರು ಐದಾರು ಅಡಿ ಮಳೆ ನೀರು ಪ್ರವಾಹ ಸೃಷ್ಟಿಸಿತ್ತು. ಬೆಳ್ಳಂಬೆಳಗ್ಗೆ ಬೆಂಗಳೂರು (Bengaluru) ಕಡೆ ಬರುತ್ತಿದ್ದ ಸಾವಿರಾರು ವಾಹನ ಸವಾರರು ಮುಂದೆ ಸಾಗಲಾಗದೆ ಟ್ರಾಫಿಕ್ ಜಾಮ್ (Traffic Jam) ಸೃಷ್ಟಿಯಾಗಿತ್ತು. ಬೊಮ್ಮಸಂದ್ರ ಫ್ಲೈ ಓವರ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ತನಕ ಸುಮಾರು ಐದಾರು ಕಿಲೋಮೀಟರ್ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕೆರೆ ಕೋಡಿ ಬಳಿ ಅವೈಜ್ಞಾನಿಕವಾಗಿ ಮೆಟ್ರೋ ಸ್ಟೇಷನ್ ನಿರ್ಮಾಣ
ಪ್ರತಿ ಬಾರಿ ಮಳೆ ಬಂದಾಗಲೂ ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ ಆಗುತ್ತದೆ. ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗುತ್ತೆ. ವೀರಸಂದ್ರ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಮಳೆ ನೀರು ಸಿಗ್ನಲ್ ಕಡೆ ನುಗ್ಗುತ್ತದೆ. ವೀರಸಂದ್ರ ಕೆರೆಯತ್ತ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.
ಕೆರೆ ಕೋಡಿ ಬಳಿ ಅವೈಜ್ಞಾನಿಕವಾಗಿ ಮೆಟ್ರೋ ಸ್ಟೇಷನ್ ನಿರ್ಮಾಣ ಮಾಡಿರುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದೆ ಅನ್ನುವ ಆರೋಪವೂ ಇದೆ. ಬೆಳ್ಳಂಬೆಳಗ್ಗೆ ತುರ್ತು ಕೆಲಸಕ್ಕೆ ಹೋಗುತ್ತಿದ್ದ ಜನ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಡುವಂತಾಯ್ತು.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಬೆಳಗ್ಗೆ ಜನರು ಪರದಾಡುವಂತಾಗಿತ್ತು. ಆ ಬಳಿಕ ಸ್ವಚ್ಛತಾ ಸಿಬ್ಬಂದಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿದ್ದರು. ಆದರೆ ಕಳೆದ ವರ್ಷ ಮಳೆ ಸಮಸ್ಯೆಯಿಂದ ಎಚ್ಚೆತ್ತಿದ್ದ ಬಿಬಿಎಂಪಿ ಅಕ್ರಮ ಒತ್ತುವರಿ ತೆರವು ಮಾಡದೆ ಡ್ರಾಮಾ ಮಾಡಿದ್ದು, ಈ ವರ್ಷ ಕೂಡ ಮಳೆಯಲ್ಲಿ ಸಂಕಷ್ಟ ಅನುಭವಿಸುವಂತಾಗಿದೆ.
ಮಾನ್ಸೂನ್ಗೂ ಮೊದಲು ಸುರಿಯುತ್ತಿರುವ ಮಳೆಗೆ ಹೆದ್ದಾರಿ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ಸಿಂಗಸಂದ್ರ ಕೆರೆಗೆ ಹರಿಯಬೇಕಿದ್ದ ಮಳೆ ನೀರಿಗೆ ಸೂಕ್ತ ಸಂಪರ್ಕ ಕಾಲುವೆಗಳೇ ಇಲ್ಲದಿರುವುದು ಈ ಪ್ರವಾಹ ಪರಿಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರ, ಬೆಂಗಳೂರು ಮೆಟ್ರೋ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮಳೆ ನೀರು ಸಾರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ. (ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ