ಸಾಮಾನ್ಯವಾಗಿ ಕಾಡಿನಲ್ಲಿರುವ (Forest) ಪ್ರಾಣಿಯಾಗಲಿ (Animal), ಪಕ್ಷಿಯಾಗಲಿ (Birds) ನಾಡಿನತ್ತ ಹೆಚ್ಚಾಗಿ ಬರುವುದಿಲ್ಲ. ನಾಡಿನಲ್ಲಿ ಕಾಣಸಿಗದ ವೈವಿಧ್ಯಮಯ ನಾನಾ ತರಹದ ಪ್ರಾಣಿ, ಪಕ್ಷಿಗಳು ಕಾಡಿನಲ್ಲಿ ನೋಡಬಹುದಾಗಿದೆ. ಹೀಗಾಗಿ ಅನೇಕ ಪಕ್ಷಿಧಾಮ (Bird Sanctuary), ಪ್ರಾಣಿ ಸಂಗ್ರಹಾಲಯಗಳನ್ನು(Zoo) ನಿರ್ಮಿಸಲಾಗಿದೆ. ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಪ್ರೀತಿ ಹೊಂದಿರುವವರು ಅವುಗಳನ್ನು ವೀಕ್ಷಿಸಲೆಂದೇ ಸಫಾರಿಗೆ ಹೋಗುತ್ತಾರೆ. ಆದರೆ ಎಲ್ಲೂ ಕಾಣಸಿಗದ, ಬಲು ಅಪರೂಪವಾದ ಕಾಡು ಪಕ್ಷಿ ಹಾರ್ನ್‌ಬಿಲ್ (Hornbill) ವ್ಯಕ್ತಿಯೊಬ್ಬರ ಮನೆಗೆ ಪ್ರತಿದಿನ ಅತಿಥಿಯಂತೆ ಹಾಜರಾಗಿ ತಿಂಡಿ ತಿಂದು ಹೋಗುತ್ತದೆ. ಈ ದೃಶ್ಯ ನೋಡಿದ ಪ್ರತಿಯೊಬ್ಬರಿಗೂ ಈ ಪಕ್ಷಿಗೂ, ವ್ಯಕ್ತಿಗೂ ಯಾವುದೋ ಜನ್ಮ-ಜನ್ಮಾಂತರದ ಅವಿನಾಭಾವ ಸಂಬಂಧ ಇದೆಯೇನೋ ಅಂತನಿಸುತ್ತದೆ.
ಹೌದು, ಕಾನೂನಿನ ಪ್ರಕಾರ ಕೆಲವೊಂದಷ್ಟು ಪ್ರಾಣಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ. ಆದರೆ ಪಕ್ಷಿಗಳನ್ನು ಸಾಕಲು ಅನುಮತಿ ನೀಡಲಾಗಿದೆ. ಹೀಗಾಗಿ ಅನೇಕ ಪಕ್ಷಿ ಪ್ರಿಯರು ತಮ್ಮ ಮನೆಯಲ್ಲಿಯೇ ಪಕ್ಷಿಗಳನ್ನು ಸಾಕುತ್ತಾರೆ. ಆದರೆ ಎಲ್ಲೂ ಕಾಣ ಸಿಗದ, ಬಲು ಅಪರೂಪವಾದ ಕಾಡಿಗೆ ಅಂಟಿಕೊಂಡಿರುತ್ತಿದ್ದ ಹಾರ್ನ್ ಬಿಲ್ ಪಕ್ಷಿ, ಈಗ ಮನೆಯ ಬಾಗಿಲಿಗೆ ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಗೋಪಾಲ್ ಎಂಬವರ ಕುಟುಂಬದೊಂದಿಗೆ ಹಾರ್ನ್ ಬಿಲ್ ಪಕ್ಷಿ ಬಹಳ ಪ್ರೀತಿಯಿಂದ ಅನೋನ್ಯವಾಗಿದೆ. ದಿನಕ್ಕೆ ಒಂದೆರಡು ಬಾರಿ ಬರುವ ಈ ಹಾರ್ನ್ ಬಿಲ್ ಆಹಾರ ಸೇವಿಸಿ ನಂತರ ಅಲ್ಲಿಂದ ಕಾಡಿಗೆ ತೆರಳುತ್ತದೆ.
ಕನ್ನಡದಲ್ಲಿ ಮಂಗಟ್ಟೆ ಪಕ್ಷಿ ಎಂದು ಕರೆಯಲಾಗುವ ಹಾರ್ನ್‌ಬಿಲ್
ಕನ್ನಡದಲ್ಲಿ ಹಾರ್ನ್‌ಬಿಲ್ ಪಕ್ಷಿಯನ್ನು ಮಂಗಟ್ಟೆ ಪಕ್ಷಿ ಎಂದು ಕರೆಯಲಾಗುತ್ತದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಈ ಪಕ್ಷಿಗಳು ಇಲ್ಲಿನ ದಾಂಡೇಲಿ ಭಾಗಗಳಲ್ಲಿ ಹೇರಳವಾಗಿವೆ. ಜಿಲ್ಲೆಯ ವಿವಿಧೆಡೆಯೂ ಅಪರೂಪಕ್ಕೆ ಒಂದೊಂದು ಗೋಚರವಾಗುತ್ತದೆ. ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯುವ ಈ ಪಕ್ಷಿಗಳು ಹೆಚ್ಚು ನಾಚಿಕೆ ಸ್ವಭಾವದ್ದು ಎಂದು ಹೇಳಲಾಗುತ್ತದೆ. ಇಂತಹ ಪಕ್ಷಿಯೊಂದು ಇದೀಗ ಕುಟುಂಬವೊಂದರ ಜೊತೆಗೆ ಆತ್ಮೀಯ ಒಡನಾಟ ಬೆಳಸಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
ಗ್ರೇಟ್ ಹಾರ್ನ್ ಪ್ರಬೇಧಕ್ಕೆ ಸೇರಿದ ಈ ಪಕ್ಷಿ, ಗೋಪಾಲ್ ಮನೆಯಲ್ಲಿ ಊಟ ಮತ್ತು ತಿಂಡಿ ಸಮಯಕ್ಕೆ ಬಂದು ಆಹಾರ ಸೇವಿಸಿ ಹೋಗುತ್ತದೆ. ಇನ್ನೂ ಗೋಪಾಲ್ ಮನೆಯಲ್ಲೂ ಹಾರ್ನ್ ಬಿಲ್ ಪಕ್ಷಿ ಬರುವುದನ್ನು ನೋಡಿ ಎಲ್ಲರೂ ಖುಷಿಪಡುತ್ತಾರೆ. ಈ ಮನೆಯವರೊಂದಿಗೆ ಹಾರ್ನ್‌ಬಿಲ್ ಉತ್ತಮ ಒಡನಾಟ ಬೆಳೆಸಿಕೊಂಡಿದೆ. ಮನುಷ್ಯರಿಂದ ದೂರ ಇರುವ ಹಾರ್ನ್‌ಬಿಲ್ ಇದೀಗ ಈ ಮನೆಯವರೊಂದಿಗೆ ಆತ್ಮೀಯತೆ ಬೆಳಸಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೇ ಈ ವಿಚಾರ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಹಾರ್ನ್ ಬಿಲ್ ಪಕ್ಷಿ ಮಾನವನ ಜೊತೆ ಅನೋನ್ಯವಾಗಿ ಇರುವುದೇ ಇಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಕ್ಕಪಕ್ಕದ ಯಾರ ಮನೆಗೂ ಹೋಗದೇ, ಗೋಪಾಲ್ ಮನೆಗೆ ಮಾತ್ರ ಬರೋ ಹಾರ್ನ್ ಬಿಲ್
ಗೋಪಾಲ್ ಕುಟುಂಬದವರೊಂದಿಗೆ ಹಾರ್ನ್ ಬಿಲ್ ಅನೋನ್ಯವಾಗಿರುವುದು ತಜ್ಞರಿಗೂ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಕಾಡಿಗೆ ಅಂಟಿಕೊಂಡಿರುವ ಈ ಪಕ್ಷಿ ಈಗ ಜನವಸತಿ ಪ್ರದೇಶದಲ್ಲಿ ಮಾನವನ ಪ್ರೀತಿ ಗಳಿಸುತ್ತಿದೆ. ಹಾರ್ನ್ ಪಕ್ಷಿಗೆ ಗೋಪಾಲ್ ಮನೆಯವರೂ ಉತ್ತಮ ಪ್ರೀತಿ ತೋರುತ್ತಿದ್ದಾರೆ. ವಿಶೇಷವೆಂದರೆ, ಅಕ್ಕಪಕ್ಕದ ಯಾರ ಮನೆಗೂ ಹೋಗದ ಹಾರ್ನ್ ಬಿಲ್, ನೇರವಾಗಿ ಗೋಪಾಲ್ ಮನೆಗೆ ಮಾತ್ರ ಬಂದು ಆಹಾರ ಸೇವಿಸಿ ಹೋಗುತ್ತದೆ.
ಎಷ್ಟು ತಿಂಗಳಿಂದ ಬರುತ್ತಿದೆ?
ಕಳೆದ ಮೂರ್ನಾಲ್ಕು ತಿಂಗಳಿಂದ ಗೋಪಾಲ್ ಮನೆಗೆ ಬರುವ ಹಾರ್ನ್ ಬಿಲ್. ಆರಂಭದಲ್ಲಿ ಮನೆಯ ಅವರಣದ ಗಿಡ ಮರದ ಮೇಲೆ ಮಾತ್ರ ಕುಳಿತಿರುತ್ತಿರುತ್ತಿತ್ತು. ದಿನ ಕಳೆದಂತೆ ಮನೆಯ ಕಟ್ಟಡದ ಒಂದು ಭಾಗದಲ್ಲಿ ಕುಳಿತುಕೊಳ್ಳಲು ಶುರುಮಾಡಿದ ಹಾರ್ನ್ ಬಿಲ್, ನಂತರ ಮನೆಯ ಒಳಗಡೆಗೆ ಹೋಗಿಬರಲು ಶುರು ಮಾಡಿತು. ಅಲ್ಲದೇ ದಿನಕಳೆದಂತೆ ಮನೆಯವರು ಕೊಟ್ಟ ತಿಂಡಿ ತಿನಿಸು ತಿನ್ನಲು ಶುರು ಮಾಡಿತು. ಈಗ ಆಗಾಗ ಬಂದು ತಿಂಡಿ ತಿಂದು ಹೋಗುತ್ತಿದೆ. ಹಾರ್ನ್ ಬಿಲ್ ಬಂದ ಸಂದರ್ಭದಲ್ಲಿ ಮನೆಯ ಸದಸ್ಯರು ಸಹ ಸಖತ್ ಎಂಜಾಯ್ ಮಾಡುತ್ತಾರೆ.
ಪಕ್ಷಿ ಪ್ರಪಂಚದ ರಾಮಸೀತೆ ಎಂದೇ ಪರಿಗಣಿಸಲಾಗಿರುವ ಹಾರ್ನ್‌ಬಿಲ್
ಆದರ್ಶ ದಂಪತಿ ಪಟ್ಟಿಗೆ ಸೇರಿಸಬಹುದಾದ ಹಾನ್ ಬಿರ್ಲ್ (ಮಂಗಟ್ಟೆ) ಹಕ್ಕಿಯ ಬದುಕು, ಜೀವನ ಕ್ರಮ ಅತ್ಯಾಕರ್ಷಕ. ಮನುಷ್ಯರಂತೆ ಸಂಸಾರ ನಡೆಸುವ ಈ ಹಕ್ಕಿಗಳನ್ನು ಪಕ್ಷಿ ಪ್ರಪಂಚದ ರಾಮಸೀತೆ ಎಂದೇ ಪರಿಗಣಿಸಲಾಗುತ್ತದೆ. ಹಾರ್ನ್'ಬಿಲ್ ಹಕ್ಕಿಗಳಿಗೆ ಒಂದೇ ಗಂಡ, ಒಂದೇ ಹೆಂಡತಿ. ಜೀವನ ಕ್ರಮವಂತೂ ಮನುಷ್ಯರನ್ನೂ ನಾಚುವಂತೆ ಮಾಡುತ್ತದೆ. ಇಂತಹ ಅದ್ಭುತ ವೈಶಿಷ್ಟ್ಯದ ಮಂಗಟ್ಟೆ ಹಕ್ಕಿಯ ವಿವಿಧ ಪ್ರಭೇದಗಳು ಹೆಚ್ಚಾಗಿ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮಘಟ್ಟದ ರಾಜ್ಯಗಳಲ್ಲಿ ಕಂಡು ಬರುತ್ತವೆ. ಇಲ್ಲಿನವುಗಳಿಗಿಂತ ವಿಭಿನ್ನವಾದ ನಾಲ್ಕು ಪ್ರಭೇದ ಹಾರ್ನ್'ಬಿಲ್'ಗಳು ದಾಂಡೇಲಿಯಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: Black Pigeon: 140 ವರ್ಷಗಳ ನಂತರ ಕ್ಯಾಮೆರಾದಲ್ಲಿ ಸೆರೆಸಿಕ್ಕ ಕಪ್ಪು ಬಣ್ಣದ ಪಾರಿವಾಳ!
ಗ್ರೇಟ್ ಹಾರ್ನ್‌ಬಿಲ್, ಮಲಬಾರ್ ಫೈಡ್ ಹಾರ್ನ್'ಬಿಲ್, ಮಲಬಾರ್ ಗ್ರೇ ಹಾರ್ನ್‌ಬಿಲ್, ಇಂಡಿಯನ್ ಗ್ರೇ ಹಾರ್ನ್'ಬಿಲ್ ಪ್ರಭೇದಗಳನ್ನು ದಾಂಡೇಲಿಯಲ್ಲಿ ಕಾಣಬಹುದು. ಗ್ರೇಟ್ ಹಾರ್ನ್‌ಬಿಲ್ ಭಾರತದಲ್ಲಿ ಕಂಡು ಬಂದರೆ, ಮಲಬಾರ್ ಫೈಡ್ ಹಾರ್ನ್‌ಬಿಲ್ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣಸಿಗುತ್ತದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ