ನಂಜನಗೂಡಿನ ಜ್ಯುಬಿಲಿಯಂಟ್ ಕಂಪನಿಯಲ್ಲಿ ಕೊರೋನಾ ಪ್ರಕರಣ: ಚಾಮರಾಜನಗರದ 36 ಮಂದಿಗೆ ಕ್ವಾರಂಟೈನ್

ಜ್ಯುಬಿಲಿಯಂಟ್ ಕಂಪನಿಯಲ್ಲಿ ಚಾಮರಾಜನಗರ ಜಿಲ್ಲೆಯ ಇನ್ನೂ ನಾಲ್ಕು ಮಂದಿ ಕೆಲಸ ಮಾಡುತ್ತಿರುವುದು ಗೊತ್ತಾಗಿದ್ದು, ಆ ನಾಲ್ವರನ್ನು ಸಹ ಪತ್ತೆ ಹಚ್ಚಿ ಚಾಮರಾಜನಗರಕ್ಕೆ ಕರೆತಂದು ಕ್ವಾರಂಟೈನ್ ನಲ್ಲಿ ಇಡಲು ಕ್ರಮ ಕೈಗೊಳ್ಳಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಚಾಮರಾಜನಗರ(ಮಾ. 31): ನಂಜನಗೂಡಿನ ಜ್ಯುಬಿಲಿಯಂಟ್ ಕಂಪನಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ 36 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ

  ಈ 36 ಮಂದಿಯ ಪೈಕಿ ಓರ್ವ ನೌಕರ, ಕೊರೊನಾ ಸೊಂಕಿತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದುದ್ದು ಗೊತ್ತಾಗಿ ಆತಂಕ ಉಂಟುಮಾಡಿದೆ. ಈತನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯ ಐಸೋಲೆಷನ್ ವಾರ್ಡ್ ನಲ್ಲಿ ಇಡಲಾಗಿದೆ. ಜ್ಯುಬಿಲಿಯಂಟ್ ಕಂಪನಿಯಲ್ಲಿ ಚಾಮರಾಜನಗರ ಜಿಲ್ಲೆಯ ಇನ್ನೂ ನಾಲ್ಕು ಮಂದಿ ಕೆಲಸ ಮಾಡುತ್ತಿರುವುದು ಗೊತ್ತಾಗಿದ್ದು, ಆ ನಾಲ್ವರನ್ನು ಸಹ ಪತ್ತೆ ಹಚ್ಚಿ ಚಾಮರಾಜನಗರಕ್ಕೆ ಕರೆತಂದು ಕ್ವಾರಂಟೈನ್ ನಲ್ಲಿ ಇಡಲು ಕ್ರಮ ಕೈಗೊಳ್ಳಲಾಗಿದೆ.

  ಜಿಲ್ಲೆಯಲ್ಲಿ ಈವರೆಗೆ ಆರು ಮಂದಿಯ ರಕ್ತ ಹಾಗು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಐದು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಐಸೋಲೇಷನ್ ವಾರ್ಡ್ ನಲ್ಲಿ ರುವ ಜ್ಯುಬಿಲಿಯಂಟ್ ಕಂಪನಿಯ ನೌಕರನ ಪರೀಕ್ಷಾ ವರದಿ ಮಾತ್ರ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

  ತಮಿಳುನಾಡು ಹಾಗು ಕೇರಳ ಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ತುರ್ತು ಹಾಗೂ ಅವಶ್ಯಕ ವಸ್ತುಗಳ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಹೊರ ಜಿಲ್ಲೆಯ 80 ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಅವರಿಗೆ ಜಿಲ್ಲೆಯ ನಾಲ್ಕು ಕಡೆ ಆಶ್ರಯ ನೀಡಲಾಗಿದ್ದು, ಅವರ ಊಟ ತಿಂಡಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

  ಇದನ್ನೂ ಓದಿ : ಕೊರೋನಾ ಭೀತಿ; ತವರಿಗೆ ಸೇರುವ ತವಕದಲ್ಲಿ ನಡೆದುಕೊಂಡೇ ಹುಟ್ಟೂರಿಗೆ ತೆರಳುತ್ತಿರುವ ಕಾರ್ಮಿಕರು

  ಈಗಾಗಲೇ ಜಿಲ್ಲೆಯ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಮಾರ್ಚ್ ತಿಂಗಳ ಪಡಿತರವನ್ನು ಸಂಪೂರ್ಣವಾಗಿ ವಿತರಿಸಲಾಗಿದೆ. ಏಪ್ರಿಲ್ ಹಾಗು ಮೇ ತಿಂಗಳ ಪಡಿತರವನ್ನು ಎಪ್ರಿಲ್ ಮೊದಲ ವಾರದಲ್ಲಿ ಮುಂಗಡವಾಗಿ ವಿತರಣೆ ಮಾಡಲಾಗುವುದು. ಇದಕ್ಕಾಗಿ 60 ಸಾವಿರ ಕ್ವಿಂಟಾಲ್ ಅಕ್ಕಿ ಅಗತ್ಯವಿದ್ದು ಈಗಾಗಲೇ 20 ಸಾವಿರ ಕ್ವಿಂಟಾಲ್ ಅಕ್ಕಿ ಹಾಗು ಗೋದಿ ಬಂದಿದೆ. ಉಳಿದ ಅಕ್ಕಿ ಗೋದಿ ಶೀಘ್ರದಲ್ಲೇ ಬರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
  First published: