ಬೆಂಗಳೂರು (ಮಾ. 10): ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ತನಿಖೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಯಿ, ಸಿಡಿ ಪ್ರಕರಣದಿಂದಾಗಿ ರಮೇಶ್ ಜಾರಕಿಹೊಳಿ ಮಾನಹಾನಿಯಾಗಿದ್ದು, ತನಿಖೆಗೆ ಒಳಪಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆ ಈ ಪ್ರಕರಣದ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಮುಖ್ಉಮಂತ್ರಿಗಳ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಸುಮೇಂದ್ರ ಮುಖರ್ಜಿ ನೇತೃತ್ವದಲ್ಲಿ ತಂಡ ತನಿಖೆ ನಡೆಸಲಿದ್ದು, ಸತ್ಯಾಂಶ ಹೊರ ಬರಲಿದೆ. ಈ ಮೂಲಕ ಸಿಡಿ ಪ್ರಕರಣದ ಹಿಂದೆ ಯಾರಿದ್ದಾರೆ? ಯಾರೆಲ್ಲಾ ಷಡ್ಯಂತ್ರ ಮಾಡಿದ್ದಾರೆ ಎಂಬುದು ಹೊರ ಬರಲಿದೆ ಎಂದು ಅವರು ತಿಳಿಸಿದರು.
ಹೇಗಿರಲಿದೆ ತನಿಖೆ
ಎಸ್ಐಟಿ ರಚನೆಯಾಗುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಒಂದು ತನಿಖಾ ತಂಡ ರಚನೆ ಮಾಡುತ್ತಾರೆ. ಅವರಿಗೆ ನಂಬಿಕಸ್ಥ ಅಧಿಕಾರಿಗಳನ್ನು ತಂಡದಲ್ಲಿ ನೇಮಕ ಮಾಡಿಕೊಳುತ್ತಾರೆ. ದೂರುದಾರರಿಂದ ಮೊದಲು ದೂರು ಸ್ವೀಕಾರ ಮಾಡಲಾಗುತ್ತದೆ. ಯಾವುದೇ ಠಾಣೆಯಲ್ಲಿ ದೂರಿನನ್ವಯ ಎಫ್ ಐ ಆರ್ ದಾಖಲಾಗುತ್ತದೆ. ಒಂದು ವೇಳೆ ದೂರು ಕೊಟ್ಟಿಲ್ಲ ಎಂದರೆ ಕಬ್ಬನ್ ಪಾರ್ಕ್ ಠಾಣೆಯ ದೂರಿನನ್ವಯ ತನಿಖೆ ನಡೆಸಲಾಗುವುದು. ದೂರು ಕೊಟ್ಟರೇ ಕೂಡಲೇ ಎಫ್ ಐ ಆರ್ ಮಾಡಿ ಎಸ್ ಐ ಟಿಗೆ ವರ್ಗಾವಣೆ. ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸರ ಪ್ರಾಥಮಿಕ ತನಿಖಾ ವರದಿ ಮಾಡಲಾಗುವುದು.
ಪ್ರಾಥಮಿಕ ವರದಿಯಲ್ಲಿ ಏನೆಲ್ಲಾ ಅಂಶಗಳಿದೆ ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಕೇಸ್ ಸಂಬಂಧ ಯಾರೆಲ್ಲಾ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ ಅವರಿಗೆ ಮತ್ತೆ ಎಸ್ ಐ ಟಿ ಇಂದ ನೊಟೀಸ್ ಜಾರಿಯಾಗುತ್ತದೆ. ಈ ಹಿನ್ನಲೆ ದಿನೇಶ್ ಕಲ್ಲಹಳ್ಳಿ ಗೆ ಮತ್ತೊಮ್ಮೆ ನೊಟೀಸ್ ಕೊಟ್ಟು ಎಸ್ಐಟಿ ವಿಚಾರಣೆಗೆ ಕರೆಯಲಿದೆ. ಜೊತೆಗೆ ದೂರಿನನ್ವಯ ಎಫ್ ಐ ಆರ್ ನಲ್ಲಿ ಇರುವ ಹೆಸರಿನವರಿಗೂ ನೊಟೀಸ್ ಕೊಡಲಾಗುವುದು. ನೊಟೀಸ್ ಕೊಟ್ಟ ಬಳಿಕ ಇಂತಹ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗುವುದು. ನೊಟೀಸ್ ಜೊತೆಗೆ ಕೆಲ ದಾಖಲಾತಿಗಳ ಅವಶ್ಯಕತೆ ಇದ್ದರೆ ತರಲು ಸೂಚನೆ ನೀಡಲಾಗುವುದು. ನಂತರ ಯಾವ ರೀತಿ ಬೆಳವಣಿಗೆ ಆಗುತ್ತದೆ ಅದರಂತೆ ತನಿಖೆ ಮಾಡಿ, ಪ್ರಕರಣದ ಮುಕ್ತಾಯದ ಬಳಿಕ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಸರ್ಕಾರ ಕೂಡ ಸಾಕಷ್ಟು ಮುಜುಗರಕ್ಕೆ ಸಿಲುಕಿತ್ತು. ಇದರಿಂದಾಗಿ ಈ ಪ್ರಕರಣದ ಗಂಭೀರ ತನಿಖೆಗೆ ಹಲವು ಸಚಿವರು ಆಗ್ರಹಿಸಿದ್ದರು. ಅಲ್ಲದೇ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, ಈ ಸಿಡಿ ನಕಲಿಯಾಗಿದ್ದು, ತನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಈ ಸಿಡಿ ಹಿಂದೆ 2+3+4 ಮಂದಿ ಇದ್ದಾರೆ ಎಂದು ಆರೋಪಿಸಿದ್ದರು. ತಾನು ನಿರಪರಾಧಿಯಾಗಿದ್ದೇನೆ. ತನಗೆ ಕುಟುಂಬದ ಗೌರವ ಅತಿಮುಖ್ಯವಾಗಿದ್ದು, ತಾನು ರಾಜಕೀಯಕ್ಕೆ ಮರಳುತ್ತೇನೋ ಇಲ್ಲವೋ ಆದರೆ, ಈ ಷಡ್ಯಂತ್ರ ನಡೆಸಿದವರನ್ನ ಜೈಲಿಗೆ ಹಾಕಿಸುವವರೆಗೂ ಸುಮ್ಮನಿರಲ್ಲ ಎಂದು ಗುಡುಗಿದ್ದಾರೆ.
ಇದನ್ನು ಓದಿ: ಸಿಡಿ ಫೇಕ್ ಆದ್ರೆ ತನಿಖೆ ಯಾಕೆ? ನೀವು ಸರಿಯಿದ್ದರೆ ಯಾಕೆ ಸಿಕ್ಕಿ ಹಾಕಿಸ್ತಾರೆ; ಡಿಕೆ ಶಿವಕುಮಾರ್
ರಮೇಶ್ ಜಾರಕಿಹೊಳಿ ಹಾಗೂ ಇತರ ಆರು ಸಚಿವರು ಈ ಪ್ರಕರಣವನ್ನ ತನಿಖೆಗೆ ವಹಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಉನ್ನತಮಟ್ಟದ ತನಿಖೆಗೆ ಸಿದ್ಧತೆ ನಡೆಸಿರುವ ಸರ್ಕಾರಕ್ಕೆ ತಾಂತ್ರಿಕವಾಗಿ ತೊಡರಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಅರ್ಜಿಯನ್ನು ಅವರೇ ವಾಪಸ್ ಪಡೆದಿದ್ದರು. ಕಬ್ಬನ್ ಪಾರ್ಕ್ ಪೊಲೀಸರು ಕೆಲವಷ್ಟು ಮಾಹಿತಿ ಕಲೆಹಾಕಿ ಸುಮ್ಮನಾಗಿದ್ದರು. ಇನ್ನೂ ಕೂಡ ಜಾರಕಿಹೊಳಿ ಸಿಡಿ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ.
(ವರದಿ: ದಶರಥ್ ಸಾವೂರು) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ