ಮೇಟಿ ಪ್ರಕರಣದಲ್ಲಿ ಏನಾಯಿತು ಆತ್ಮಾವಲೋಕನವಾಗಲಿ: ಕಾಂಗ್ರೆಸ್ಸಿಗರನ್ನು ಕುಟುಕಿದ ಬೊಮ್ಮಾಯಿ

ಕಾಂಗ್ರೆಸ್ ಸರ್ಕಾರ ಇದ್ದಾಗ ಹೆಚ್.ವೈ. ಮೇಟಿ ವಿರುದ್ಧ ಲೈಂಗಿಕ ಪ್ರಕರಣ ಬಂದಾಗ ಎಫ್ಐಆರ್ ದಾಖಲಾಗಲಿಲ್ಲ. ವಿಚಾರಣೆ ಕೂಡ ಮಾಡದೇ ಕ್ಲೀನ್ ಚಿಟ್ ಕೊಡಿಸಲಾಯಿತು ಎಂದು ಗೃಹ ಸಚಿವ ಬೊಮ್ಮಾಯಿ ಗುಡುಗಿದ್ದಾರೆ.

ಸಚಿವ ಬಸವರಾಜ್​ ಬೊಮ್ಮಾಯಿ

ಸಚಿವ ಬಸವರಾಜ್​ ಬೊಮ್ಮಾಯಿ

 • Share this:
  ಬೆಂಗಳೂರು(ಮಾ. 31): ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್​ಐಟಿ ಬಗ್ಗೆ ಕಾಂಗ್ರೆಸ್ ಪಕ್ಷ ಅನುಮಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್​ಐಟಿ ತಂಡವನ್ನು ಸಮರ್ಥಿಸಿಕೊಂಡರು. ಎಸ್​ಐಟಿಗೆ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಆ ತಂಡ ತನ್ನ ಕಾರ್ಯವನ್ನು ಸಮರ್ಥವಾಗಿ, ಕ್ರಮಬದ್ಧವಾಗಿ, ಕಾನೂನಾತ್ಮಕವಾಗಿ ಮಾಡುತ್ತಿದೆ. ಎಸ್​ಐಟಿ ತನಿಖೆಯಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಪಪಡಿಸಿದರು.

  ಈ ಪ್ರಕರಣದಲ್ಲಿ ಎಲ್ಲಾ ಆಯಾಮಗಳಲ್ಲಿ ಕ್ರಮಬದ್ಧವಾಗಿ ತನಿಖೆ ಮಾಡಬೇಕಾಗುತ್ತದೆ. ತನಿಖೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ಇದೆ. ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾರಿಗೂ ಇಲ್ಲ. ಎಸ್​ಐಟಿ ತನ್ನ ಕಾರ್ಯವನ್ನು ಬಹಳ ಸಮರ್ಥವಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಇನ್ನೂ ಯಾಕೆ ಬಂಧಿಸಿಲ್ಲ ಎಂದು ಕಾಂಗ್ರೆಸ್ ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜು ಬೊಮ್ಮಾಯಿ, ಕಾಂಗ್ರೆಸ್​ನ ನೈತಿಕತೆಯನ್ನು ಬಲವಾಗಿ ಪ್ರಶ್ನಿಸಿದರು.

  ಇದನ್ನೂ ಓದಿ: Ramesh Jarkiholi CD Case: ಇಂದು ಮತ್ತೆ ಎಸ್​ಐಟಿಯಿಂದ ಸಿಡಿ ಯುವತಿ ವಿಚಾರಣೆ; ರಮೇಶ್ ಜಾರಕಿಹೊಳಿಗೆ ಬಂಧನ ಭೀತಿ

  ಜಾರಕಿಹೊಳಿ ಅವರನ್ನ ಬಂಧನ ಮಾಡಿ ಅಂತ ಕೇಳುವ ಯಾವ ನೈತಿಕತೆಯೂ ಕಾಂಗ್ರೆಸ್​ಗೆ ಇಲ್ಲ. ಮೇಟಿ ಕೇಸ್​ನಲ್ಲಿ ಕಾಂಗ್ರೆಸ್​ನವರು ಏನು ಮಾಡಿದರು ಎಂಬುದು ಗೊತ್ತಿದೆ. ಮೇಟಿ ಕೇಸ್​ನಲ್ಲಿ ಕಾಂಗ್ರೆಸ್ ಸರ್ಕಾರ ಎಫ್​ಐಆರ್ ಕೂಡ ಹಾಕಿರಲಿಲ್ಲ. ವಿಚಾರಣೆ ಕೂಡ ಮಾಡಲಿಲ್ಲ. ಸಿಐಡಿಗೆ ಕೊಟ್ಟು ಏನೂ ಮಾಡದೇ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡಲಾಯಿತು. ಸಿಡಿ ಮಾಡಿದವರು ಯಾರು ಎಂದು ಕಂಡು ಹಿಡಿಯುವ ಕೆಲಸವನ್ನೂ ಮಾಡಲಿಲ್ಲ. ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ ಎಂದು ತಿರುಗಿ ನೋಡಲಿ ಎಂದು ಕಾಂಗ್ರೆಸ್ಸಿಗರನ್ನು ಕುಟುಕಿದ ಬೊಮ್ಮಾಯಿ, ತಮ್ಮ ಸರ್ಕಾರ ಬಹಳ ನಿಷ್ಪಕ್ಷಪಾತವಾಗಿ ತನಿಖೆಗೆ ಅನುವು ಮಾಡಿಕೊಟ್ಟಿದೆ ಎಂದರು.

  ಇನ್ನು, ರಮೇಶ್ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಎಸ್​ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಅವರಿಗೆ ನಾವು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಬಂಧನದ ಬಗ್ಗೆ ನಾನೇನು ಮಾತಾಡುವುದಿಲ್ಲ. ಎಸ್​ಐಟಿ ತಂಡವೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

  ಇದೇ ವೇಳೆ, ಗೃಹ ಸಚಿವರು ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿದ್ದಾರೆ. ಸಿಡಿ ಪ್ರಕರಣದ ತನಿಖೆ ಮತ್ತು ಎಸ್​ಐಟಿಯಿಂದ ಯುವತಿಯ ವಿಚಾರಣೆ ನಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿಗೆ ಅವರು ಮಾಹಿತಿ ನೀಡಿದ್ದಾರೆ.

  ವರದಿ: ಕೃಷ್ಣ ಜಿ.ವಿ.
  Published by:Vijayasarthy SN
  First published: