PSI ಹುದ್ದೆಗಳ ಅಕ್ರಮ ನೇಮಕಾತಿ (PSI Recruitment Scam) ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು (CID Police), ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Congress MLA Priyank Kharge) ಅವರಿಗೆ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ತಮ್ಮ ಬಳಿ ಅಕ್ರಮಕ್ಕೆ, ಸಂಬಂಧಿಸಿದಂತೆ, ತಮಗೆ ಸಲ್ಲಿಕೆಯಾಗಿದೆ, ಎನ್ನಲಾದ ಒಂದು ಆಡಿಯೋ ರೆಕಾರ್ಡ್ ಅನ್ನು, ಖರ್ಗೆಯವರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ (Exams) ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ, ನ್ಯಾಯ ಒದಗಿಸಲು, ಸಿಐಡಿ ತನಿಖೆಗೆ (CID Investigation) ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ, ತನಿಖೆಗೆ ಆದೇಶ ನೀಡಿದ್ದೆ. ಇಂಥ ಕೃತ್ಯಗಳಿಂದ ಬಡ ಕುಟುಂಬದಿಂದ ಬಂದಂಥ ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿಗಳು, ಮೂಲೆ ಗುಂಪಾದರೆ, ಸಮಾಜಕ್ಕೆ ಆಗುವ ನಷ್ಟ ಅಪಾರ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಮಾನ್ಯ ಶಾಸಕ ಪ್ರಿಯಾಂಕ್ ಖರ್ಗೆ ಯವರಿಗೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಸಿಐಡಿ ತನಿಖೆಗೆ ಸಹಾಯವಾಗುವಂತೆ ಸಿಐಡಿ ಪೊಲೀಸರಿಗೆ, ತಮ್ಮ ಬಳಿ ಇರಬಹುದಾದ ಸಾಕ್ಷ್ಯಗಳನ್ನು ಒದಗಿಸಿ, ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ವಿನಂತಿಸಿದ್ದೆ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ತಮ್ಮ ಬಳಿಯಲ್ಲಿರೋ ದಾಖಲೆ ಹಂಚಿಕೊಳ್ಳಬೇಕು
ಈಗಲಾದರೂ, ಖರ್ಗೆಯವರು, ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳಿಗೆ, ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಕು. ಹಾಗೂ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲು ಸಹಕರಿಸಬೇಕು.
ಇದನ್ನೂ ಓದಿ: PSI ಬಳಿಕ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಅಕ್ರಮ; ಎಫ್ಐಆರ್ ದಾಖಲು
ಆರಗ ಜ್ಞಾನೇಂದ್ರ ಮನವಿ
ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. ಯಾವುದೇ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸದೆ, ಅಕ್ರಮ ಎಸಗಿದವರನ್ನು, ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ
ಇಂದು ಬೆಳಗ್ಗೆ 11 ಗಂಟೆಗೆ ಪ್ರಿಯಾಂಕ್ ಖರ್ಗೆ ಸಿಐಡಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆಗಳಿವೆ. ಅರಮನೆ ರಸ್ತೆಯ ಸಿಐಡಿ ಕಚೇರಿಯಲ್ಲಿ ಡಿವೈಎಸ್ಪಿ ನರಸಿಂಹಮೂರ್ತಿಯವರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ್ಯಾಕೆ?
PSI ಅಕ್ರಮ ಸಂಬಂಧ ಪ್ರಿಯಾಂಕ್ ಖರ್ಗೆ ಅವರು ಎರಡು ಬಾರಿ ಸುದ್ದಿಗೋಷ್ಟಿ ನಡೆಸಿದ್ದರು. PSI ನೇಮಕಾತಿ ಕೆಲ ಆಡಿಯೋವನ್ನ ಬಿಡುಗಡೆ ಮಾಡಿದ್ದರು. PSI ಹುದ್ದೆ ನೇಮಕಾತಿ ಅಕ್ರಮದ ಬಗ್ಗೆ ತನ್ನ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದರು. ಹಾಗಾಗಿ ತಮ್ಮ ಬಳಿಯಿರುವ ಸಾಕ್ಷಿ ಮತ್ತು ದಾಖಲೆಗಳನ್ನ ಒದಗಿಸುವಂತೆ ಸಿಐಡಿ ನೋಟಿಸ್ ನೀಡಿದೆ.
ಇದನ್ನೂ ಓದಿ: Operation Lotus: ರಾಜ್ಯದಲ್ಲಿ ಆಪರೇಷನ್ ಕಮಲದ ಸುಳಿವು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ Nalin Kumar Kateel
ಸಚಿವ ಸುನಿಲ್ ಕುಮಾರ್ ಆರೋಪ
ಪಿಎಸ್ಐ ನೇಮಕದಲ್ಲಿ ನಡೆದಿದೆ ಎಂದು ಹೇಳಲಾದ ಅಕ್ರಮದಲ್ಲಿ ಕಾಂಗ್ರೆಸ್ ನಾಯಕರು " ತಾನು ಕಳ್ಳ ಪರರ ನಂಬೆ" ಎಂಬಂತೆ ವರ್ತಿಸುತ್ತಿದ್ದಾರೆ. ಇದೀಗ ಹೊರ ಬೀಳುತ್ತಿರುವ ದಾಖಲೆಗಳು, ಶಾಮೀಲಾದ ವ್ಯಕ್ತಿಗಳು, ಬಂಧನಕ್ಕೆ ಒಳಗಾದ ವ್ಯಕ್ತಿಗಳ ಹಿನ್ನೆಲೆಯೆಲ್ಲವೂ ಕಾಂಗ್ರೆಸ್ ಮಯವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಮುಖಂಡರೇ (Congress Leaders) ಈ ಜಾಲದಲ್ಲಿ ಸಕ್ರಿಯವಾಗಿರುವುದನ್ನು ನೋಡಿದರೆ ಇದರಲ್ಲಿ ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರು ಭಾಗಿಯಾಗಿರಬಹುದು ಎಂಬ ಅನುಮಾನ ದಟ್ಟವಾಗುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ