HR RameshHR Ramesh
|
news18-kannada Updated:January 18, 2020, 6:42 PM IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಹುಬ್ಬಳ್ಳಿ: 70 ವರ್ಷಗಳಿಂದ ಕಾಂಗ್ರೆಸ್ ಈ ದೇಶದಲ್ಲಿ ಧರ್ಮದ ಮೇಲೆ ರಾಜಕಾರಣ ಮಾಡಿದೆ. ಅವರು ದೇಶವನ್ನು ತುಂಡು ತುಂಡು ಮಾಡಿ ಅಧಿಕಾರ ನಡೆಸಿದರು. ದೇಶದ ಎಲ್ಲಾ ನಾಗರಿಕರಿಗೂ ಪೌರತ್ವ ನೀಡುವುದು ನಮ್ಮ ಉದ್ದೇಶ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರಿಸಿದರು.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಆಯೋಜಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ನೆಹರು ಅವರು ಭಾರತ ಮತ್ತು ಪಾಕಿಸ್ತಾನವನ್ನು ಉದ್ದೇಶಿಸಿ, ಅಲ್ಲಿಂದ ಇಲ್ಲಿಗೆ ಬರುವ ಮತ್ತು ಇಲ್ಲಿಂದ ಅಲ್ಲಿಗೆ ಹೋಗುವ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ನೆಲೆ ಒದಗಿಸುವುದು ಎರಡೂ ದೇಶಗಳ ಸರ್ಕಾರದ ಕರ್ತವ್ಯ ಎಂದು ಹೇಳಿದ್ದರು. ಭಾರತ ಆ ಕರ್ತವ್ಯವನ್ನು ನಿಭಾಯಿಸಿದೆ ಎಂದು ಹೇಳಿದರು.
ಭಾರತದ ನೆರೆ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವವರು ಅಲ್ಲಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿರುವವರಿಗೆ ಪೌರತ್ವ ನೀಡುವುದಕ್ಕಾಗಿಯೇ ಈ ಕಾಯ್ದೆಯನ್ನು ತರಲಾಗಿದೆ. ವಿರೋಧ ಪಕ್ಷದವರು ತಪ್ಪು ಮಾಹಿತಿಯನ್ನು ಜನರಲ್ಲಿ ಬಿತ್ತುವ ಮೂಲಕ ವೋಟ್ ಬ್ಯಾಂಕ್ ರಾಜನೀತಿ ಮಾಡುತ್ತಿದೆ. ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಸ್ವಾತಂತ್ರ್ಯಕ್ಕೂ ಮುನ್ನ ಇದ್ದ ದೇಶದ ಸ್ಥಿತಿ ಈಗಿಲ್ಲ. ದೇಶದಲ್ಲಿದ್ದ ನಿರಾಶ್ರಿತರೆಲ್ಲರೂ ಎಲ್ಲಿ ಹೋದರು? ನಿರಾಶ್ರಿತರೆಲ್ಲರನ್ನೂ ಮತಾಂತರ ಮಾಡಿಬಿಟ್ಟರಾ? ಪ್ರತಿ ಚುನಾವಣೆಯಲ್ಲೂ ಸ್ವಾರ್ಥ ರಾಜಕಾರಣ ಆಯ್ತು. ನಾವು ಸಿಎಎ ಮೂಲಕ ಎಲ್ಲರಿಗೂ ನಾಗರಿಕತ್ವ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಪಾಕಿಸ್ತಾನದ ಭಯೋತ್ಪಾದಕರು ದೇಶದೊಳಗೆ ಬಂದು ನಮ್ಮ ಸೈನಿಕರನ್ನು ಹತ್ಯೆ ಮಾಡುತ್ತಿದ್ದರು. ಆಗ ಮೌನಿ ಬಾಬಾ ಮನಮೋಹನ್ ಸಿಂಗ್ ಏನು ಮಾಡಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನದೊಳಗೆ ಹೋಗಿ ಅಲ್ಲಿನ ಭಯೋತ್ಪಾದಕರ ಹೆಡೆಮುರಿಕಟ್ಟಲು ಆದೇಶ ನೀಡಿದರು ಎಂದು ಏರ್ಸ್ಟ್ರೈಕ್ ಬಗ್ಗೆ ಹೇಳಿದರು.
ಮೋದಿ ಪ್ರಧಾನಿ ಆದ ಮೇಲೆ ದೇಶದ ಅಭಿವೃದ್ಧಿ ಆಗಿದೆ. 70 ವರ್ಷ ಸುಧಾರಿಸಲಾಗದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಪೌರತ್ವ ಕಾಯ್ದೆಯಿಂದ ಶತ್ರುರಾಷ್ಟ್ರಗಳಲ್ಲೂ ನಡುಕ ಉಂಟಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಪೌರತ್ವ ನೀಡೋದು ನಮ್ಮ ಉದ್ದೇಶ. ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲ. ರಾಹುಲ್, ಮಮತಾ, ಕೇಜ್ರಿವಾಲ್ ಈ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸಿಎಎ ವಿರೋಧ ಮಾಡುತ್ತಿದ್ದಾರೆ. ನಮ್ಮ ಪಕ್ಷದ ನಾಯಕರು ನಾಗರಿಕತ್ವ ನೀಡುವ ವಚನ ನೀಡಿದ್ದರು. ಅದರಂತೆ ನರೇಂದ್ರ ಮೋದಿ ಕಾರ್ಯ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಕೂಡ ಪ್ರಾರ್ಥನಾ ಸಭೆಯಲ್ಲಿ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳು ಅಲ್ಲಿ ಜೀವಿಸಲು ಇಷ್ಟವಿಲ್ಲ ಎಂದರೇ ಅವರಿಗೆ ನೌಕರಿ, ನಾಗರಿಕತ್ವ ನೀಡುವುದು ನಮ್ಮ ಕರ್ತವ್ಯ ಎಂದಿದ್ದರು. ಅದರಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಮಹಾತ್ಮ ಗಾಂಧಿ ಹೇಳಿದಂತೆ ನಾವು ನಡೆಯುತ್ತಿದ್ದೇವೆ ಎಂದರು.
ಪಾಕಿಸ್ತಾನ ಬಾಂಗ್ಲಾ ದೇಶದ ದಲಿತರಿಗೆ ನಾಗರಿಕತ್ವ ನೀಡಲು ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ. ಅವರಿಗೆ ಪೌರತ್ವ ನೀಡಲು ವಿರೋಧಿಸುತ್ತಿರುವವರು ದಲಿತ ವಿರೋಧಿಗಳು. ನಿಮ್ಮ ಮಾನವ ಕಹಕ್ಕುಗಳು ಎಲ್ಲಿ ಹೋದವು. 70 ವರ್ಷಗಳ ಕಾಲ ನರಕದ ಜೀವನ ವ್ಯವಸ್ಥೆ ಮಾಡಿದ್ದಾರೆ. ಯಾವುದೇ ಸೌಲಭ್ಯವನ್ನು ನೀಡದವರು ಈಗ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಕ್ಕಿನ ಬಗ್ಗೆ ಮಾತನಾಡುವ ಮೊದಲು ಅವರ ಜೀವನ ನೋಡಲಿ ಎಂದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಿಸಿದರು, ಸರ್ಕಾರ ಬಂದಿದೆ. ಆ ಜನರಿಗೂ ನಾಗರಿಕತ್ವವನ್ನು ನಾವು ಕೊಟ್ಟಿದ್ದೀವಿ. ಇದು ರಾಹುಲ್ ಬಾಬಾಗೆ ಏಕೆ ಗೊತ್ತಾಗ್ತಿಲ್ಲ. ಅವರಿಗೆ ಓಟ್ ಬ್ಯಾಂಕ್ ಕೈ ಬಿಟ್ಟು ಹೋಗುತ್ತದೆ ಎಂಬ ಹೆದರಿಕೆ ಇದೆ. ಇದೇ ಕಾರಣಕ್ಕೆ ಅವರು ಸಿಎಎ ವಿರೋಧ ಮಾಡುತ್ತಿದ್ದಾರೆ. ಸಿಎಎ ಜಾರಿಯಾಗುತ್ತಿದ್ದಂತೆ ಅವರು ಮುಸಲ್ಮಾನರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ಕಾಯ್ದೆಯನ್ನು ಪೂರ್ಣವಾಗಿ ಓದಿ. ಆಗ ನಿಮಗೆ ತಿಳಿಯುತ್ತದೆ. ಸಂಸತ್ನಲ್ಲಿ ಚರ್ಚೆ ಮಾಡೋದಾದರೆ ನಾವು ಸಿದ್ಧ. ಯಾವುದೇ ಭೇದಭಾವ, ಧರ್ಮಭೇದ ನಾವು ಮಾಡುತ್ತಿಲ್ಲ. ನಿಮ್ಮ ನಾಗರಿಕತ್ವವನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ., ನಿಮಗೆ ಏನು ಆಗುವುದಿಲ್ಲ. ಮುಸ್ಲಿಮರ ನಾಗರಿಕತ್ವವನ್ನು ಕಿತ್ತುಕೊಳ್ಳುವ ಯಾವುದೇ ಪ್ರಸ್ತಾವವನ್ನು ಕಾಯ್ದೆ ಮಾಡಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.ಕಾಂಗ್ರೆಸ್ ಪಕ್ಷ ಸಿಎಎಗೆ ಮಾತ್ರವಲ್ಲ ಎಲ್ಲದಕ್ಕೂ ವಿರೋಧ ಮಾಡುತ್ತದೆ. ನೆಹರು ಮಾಡಿದ ತಪ್ಪನ್ನು ಮೋದಿ ಸರಿಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ನಮ್ಮ ಗುರಿ. ಇಡೀ ದೇಶದ ಜನ ಒಮ್ಮತದಿಂದ ಕೇಳುತ್ತಿರುವುದು ಕೂಡ ಇದನ್ನೆ. ಅಯೋಧ್ಯೆಯಲ್ಲೇ ವಿಶ್ವವೇ ವಿಸ್ಮಯದಿಂದ ನೋಡುವಂತಹ ಮಂದಿರ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಇದನ್ನು ಓದಿ: ಮಕ್ಕಳ ಶ್ಲೋಕ ಉಚ್ಛಾರಣೆಯಿಂದ ಮನಸು ಹಗುರವಾಯಿತು; ವಿವೇಕದೀಪಿನಿಯಲ್ಲಿ ಅಮಿತ್ ಶಾ ಹರ್ಷ
ಏರ್ ಸ್ಟ್ರೈಕ್ ನಡೆದಾಗ ಸಾಕ್ಷಿ ಕೊಡಿ ಎಂದು ರಾಹುಲ್ ಗಾಂಧಿ ಕೂಡ ಕೇಳುತ್ತಾರೆ. ಕಿಮ್ರಾನ್ ಖಾನ್ ಕೂಡ ಸಾಕ್ಷಿ ಕೇಳುತ್ತಾರೆ. ಇಮ್ರಾನ್ ಕೇಳಿದಂತೆ ರಾಹುಲ್ ಗಾಂಧಿ ಸಾಕ್ಷಿ ಕೇಳುತ್ತಾರೆ. ಇವರ ಮಧ್ಯೆ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿಗೆ ಎಷ್ಟು ಬೈಯ್ಯಬೇಕೊ ಅಷ್ಟೂ ಬೈಯಿರಿ ಎಂದು ನೆರೆದಿದ್ದ ಜನರಿಗೆ ಹೇಳಿದ ಅಮಿತ್ ಶಾ, ಭಾರತೀಯ ಜನತಾ ಪಾರ್ಟಿಯ ಪ್ರತಿಯೊಬ್ಬ ಕಾರ್ಯಕರ್ತರು ದೇಶದ ಪ್ರತಿ ಮನೆಗೆ ತೆರಳಿ ಸಿಎಎ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಈ ಕಾಯ್ದೆ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು.
ಇನ್ನು ಸಮಾವೇಶದಲ್ಲಿ ಇದೇ ವೇಳೆ ಮೊಬೈಲ್ ನಂಬರ್ಗೆ ಮಿಸ್ ಕಾಲ್ ನೀಡುವ ಮೂಲಕ 88662-88662 ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮೋದಿ ಪರ ನಿಲ್ಲಿ ಎಂದು ಶಾ ಕರೆ ನೀಡಿದರು.
First published:
January 18, 2020, 6:19 PM IST