HOME » NEWS » State » HOLI 2021 HOLI CELEBRATION AT KARAWAR IN MIDST OF RULES AND REGULATIONS DKK LG

Holi 2021: ಕಾರವಾರದಲ್ಲಿ ನಿರ್ಬಂಧಗಳ ನಡುವೆಯೂ ಅದ್ದೂರಿಯಾಗಿ ನಡೆದ ಹೋಳಿ ಹಬ್ಬ

ಹೋಳಿ ನಿಮಿತ್ತ ಕಾರವಾರದಲ್ಲಿ ಮುಂಜಾನೆಯಿಂದಲೇ ಯುವಕರ ಗುಂಪುಗಳು ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು.

news18-kannada
Updated:March 29, 2021, 6:29 PM IST
Holi 2021: ಕಾರವಾರದಲ್ಲಿ ನಿರ್ಬಂಧಗಳ ನಡುವೆಯೂ ಅದ್ದೂರಿಯಾಗಿ ನಡೆದ ಹೋಳಿ ಹಬ್ಬ
ಹೋಳಿ
  • Share this:
ಕಾರವಾರ(ಮಾ.29): ರಂಗು ರಂಗಿನ ಹೋಳಿ ಹಬ್ಬವನ್ನು ಕಾರವಾರದಲ್ಲಿ ಸೋಮವಾರ ಕೊರೋನಾ ನಿರ್ಬಂಧಗಳ ನಡುವೆಯೂ ಸಂಭ್ರಮ– ಸಡಗರದಿಂದ ಆಚರಿಸಲಾಯಿತು. ಆದರೆ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಓಕುಳಿಯಾಟ ಮಂದಗತಿಯಲ್ಲಿದ್ದು, ಹೆಚ್ಚು ಜನರ ಗುಂಪು ಸೇರದೇ ಅಲ್ಲಲ್ಲಿ ಮನೆಗಳಲ್ಲಿ ಬಣ್ಣದಾಟವಾಡಿದ್ದಾರೆ.

ಹೇಗಿತ್ತು ಸಂಭ್ರಮ?

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹೋಳಿ ಸಂಭ್ರಮ ನಡೆಯಿತು. ಕೊರೋನಾ ಎರಡನೆ ಅಲೆಯ ಆತಂಕದ ಮಧ್ಯೆ ಸಮುದ್ರ ಸ್ನಾನಕ್ಕೆ ಅವಕಾಶ ನೀಡದ ಹಿನ್ನಲೆಯಲ್ಲಿ ರವೀಂದ್ರನಾಥ ಕಡಲತೀರ ಕಾಲಿ ಕಾಲಿ ಆಗಿ ಕಾಣುತ್ತಿತ್ತು. ಆದ್ರೆ ಮನೆ ಮನೆ ಗಲ್ಲಿ ಗಲ್ಲಿಯಲ್ಲಿ ಹೋಳಿ ಸಂಭ್ರಮ ಮನೆ ಮಾಡಿತ್ತು.

ಹೋಳಿ ಹೋಳಿ ಅಂತಾ ಕಾರವಾರದ ಗಲ್ಲಿ ಗಲ್ಲಿ ಜನ ಬಣ್ಣ ಹಚ್ಚಿ ಸಂಭ್ರಮಿಸಿದ್ರು. ಆಯಾ ಏರಿಯಾದಲ್ಲಿ ಜನರು ನೃತ್ಯ ಮಾಡಿ ಹೋಳಿ ಹಬ್ಬದ ಸಂಭ್ರಮ ಮಾಡಿದ್ರು. ಸಮುದ್ರ ಸ್ನಾನಕ್ಕೆ ಅವಕಾಶ ನಿರಾಕರಿಸಿದ ಹಿನ್ನಲೆಯಲ್ಲಿ ಜನ್ರು ಆಯಾ ಗಲ್ಲಿಯಲ್ಲಿ, ಆಯಾ ಏರಿಯಾದ ಜನರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ರು. ಎಲ್ಲಾ ರಸ್ತೆಯಲ್ಲಿ ಪಡ್ಡೆ ಹುಡುಗ್ರು ತಮ್ಮ ತಮ್ಮ ಬೈಕ್ ನಲ್ಲಿ ಸಂಚರಿಸುತ್ತಾ ಹೋಳಿ ಹೋಳಿ ಎಂದು ಘೋಷಣೆ ಕೂಗುತ್ತಾ ಹಬ್ಬವನ್ನ ಸಂಭ್ರಮಿಸಿದ್ರು. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಕರಾವಳಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಹೋಳಿ ನಿಮಿತ್ತ ಕಾರವಾರದಲ್ಲಿ ಮುಂಜಾನೆಯಿಂದಲೇ ಯುವಕರ ಗುಂಪುಗಳು ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು. ಈ ಬಾರಿ ಕೊರೋನಾದಿಂದಾಗಿ ಹಿರಿಯರು ಅಷ್ಟೊಂದು ಸಂಖ್ಯೆಯಲ್ಲಿ ಕಂಡುಬಂದಿಲ್ಲ. ಯುವಕರು, ಯುವತಿಯರು, ಪುರುಷರು- ಮಹಿಳೆಯರು ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.

ಏಪ್ರಿಲ್‌ 2ರಿಂದ 3.20 ಲಕ್ಷ ಅನಕ್ಷರಸ್ಥರನ್ನ ಸಾಕ್ಷರರನ್ನಾಗಿಸುವ ಓದು-ಬರಹ ಅಭಿಯಾನ: ಸಚಿವ ಸುರೇಶ್‌ ಕುಮಾರ್‌

ಕೆಲವರು ಬೈಕ್ ಮೇಲೆ ಸವಾರಿ ಹೊರಟು ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಾ ಗೆಳೆಯ– ಗೆಳತಿಯರಿಗೆ ಪರಸ್ಪರ ಬಣ್ಣ ಹಾಕಿ ಶುಭಾಶಯ ಕೋರಿದರು. ಮತ್ತೆ ಕೆಲವರು ರಸ್ತೆ ಬದಿಯಲ್ಲಿ ನಿಂತು ಬಣ್ಣದ ನೀರು ಎರಚುತ್ತಿದ್ದರು. ಕೆಲವರು ನೀರನ್ನಷ್ಟೇ ಜನರ ಮೇಲೆ ಹಾರಿಸಿ ಸಡಗರಪಟ್ಟರು. ಮಕ್ಕಳು ಪಿಚ್ಕಾರಿಗಳಲ್ಲಿ ಬಣ್ಣದ ನೀರು ಹಾರಿಸಿ ಖುಷಿ ಪಟ್ಟರು. ಒಂದು ವಾರದಿಂದ ಸುಗ್ಗಿ ಮೇಳ ಕಟ್ಟಿ ತಿರುಗಾಟ ನಡೆಸಿದವರು ಹೋಳಿ ಹಬ್ಬದ ದಿನ ವರ್ಷದ ಸುಗ್ಗಿಯ ಸಡಗರಕ್ಕೆ ವಿದಾಯ ಹೇಳಿದರು.ಹಬ್ಬುವಾಡ, ಅಂಬೇಡ್ಕರ್ ವೃತ್ತ, ಗೀತಾಂಜಲಿ ಚಿತ್ರಮಂದಿರದ ಬಳಿ ಬಣ್ಣ ಹಚ್ಚಲೆಂದೇ ಯುವಕರ ತಂಡ ನೆರೆದಿತ್ತು. ಕುಂಠಿ ಮಹಾಮಾಯಿ ದೇವಸ್ಥಾನ, ಕಾಜುಬಾಗ ಮತ್ತಿತರ ಕಡೆಗಳಲ್ಲಿ ಯುವಕ, ಯುವತಿಯರು ಸಿನಿಮಾ ಹಾಡುಗಳಿಗೆ ಹಜ್ಜೆ ಹಾಕುತ್ತ ಓಕುಳಿ ಆಡಿದರು.

ಇನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಓಕುಳಿಯಾಡಿದ ಜನರು ದಿವೇಕರ ಕಾಲೇಜಿನ ಹಿಂಭಾಗ, ಅಲಿಗದ್ದಾ ಕಡಲತೀರಗಳಿಗೆ ತೆರಳಿ ಸಮುದ್ರ ಸ್ನಾನ ಮಾಡಿದರು. ಸಮುದ್ರಸ್ನಾನ ನಿರ್ಬಂಧಿಸಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದ ಕಾರಣ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಹೆಚ್ಚಿನ ಜನರು ಭೇಟಿ ನೀಡಲಿಲ್ಲ. ಅಲ್ಲದೇ ಪೊಲೀಸರು ಕೂಡ ಕಾವಲಿದ್ದಿದ್ದರಿಂದ ಜನರು ಟ್ಯಾಗೋರ್ ತೀರದಲ್ಲಿ ಸ್ನಾನಕ್ಕೆ ಹಿಂದೇಟು ಹಾಕಿದರು. ಆದರೆ, ಉಳಿದ ಕಡೆಗಳಲ್ಲಿ ಸಮುದ್ರದಲ್ಲಿ ಮುಳುಗಿ ಸ್ನಾನ ಮಾಡಿದರು.

ಹೋಳಿ ಹಬ್ಬದ ನಿಮಿತ್ತ ಬೆಳಿಗ್ಗೆಯಿಂದಲೇ ಕಾರವಾರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಅಘೋಷಿತ ಬಂದ್ ಮಾಡಲಾಗಿತ್ತು. ಇದರಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪಮಟ್ಟಿನ ಅಸ್ತವ್ಯಸ್ತ ಉಂಟಾಯಿತು. ಪ್ರಮುಖ ಬೀದಿಗಳಲ್ಲಿ ಓಕುಳಿಯಾಟದಲ್ಲಿ ತೊಡಗಿದ್ದ ಹುಡುಗರ ಗುಂಪು ಬಿಟ್ಟರೆ ಜನಸಂಚಾರವೂ ವಿರಳವಾಗಿತ್ತು. ಸಂಜೆಯ ನಂತರ ಕೆಲವು ಹೋಟೆಲ್, ಮಳಿಗೆಗಳು ತೆರೆದು ವ್ಯಾಪಾರ ನಡೆಸಿದವು.

ಇನ್ನು ಪ್ರತಿವರ್ಷ ಕಾರವಾರದ ವಿವಿಧೆಡೆಗಳಲ್ಲಿ ಗುಜರಾತಿಗಳು ಹೋಳಿಯನ್ನು ಸಾಮೂಹಿಕವಾಗಿ ವಿಶೇಷವಾಗಿ ಆಚರಿಸುತ್ತಿದ್ದರು. ಎಲ್ಲರೂ ಒಂದೆಡೆ ಸೇರಿ ವಿಶೇಷ ಪಾಯಸ ಸವಿದು ಮೈಮರೆತು ಕುಣಿದು ಕುಪ್ಪಳಿಸುತ್ತಿದ್ದರು. ನೂರಾರು ಜನರು ತಂಡ ತಂಡವಾಗಿ ಗುಜರಾತಿಗಳ ಮನೆಗಳಲ್ಲಿ ಸೇರಿ, ಓಕುಳಿಯಾಟ ಆಡುತ್ತಿದ್ದರು. ಆದರೆ, ಕೊರೋನಾ ಎರಡನೇ ಅಲೆ ಆತಂಕ ಇರುವುದರಿಂದ ಈ ಬಾರಿ ಈ ರೀತಿಯ ಸಮೂಹ ಆಚರಣೆ ಸ್ವಲ್ಪ ಕಡಿಮೆಯಾಗಿತ್ತು. ಬಹುತೇಕರು ಕೂಡ ಇಂಥ ಆಚರಣೆಯಿಂದ ದೂರ ಕಾಯ್ದುಕೊಂಡರು.
Published by: Latha CG
First published: March 29, 2021, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories