Hockey Stadium: ಸೋಮವಾರಪೇಟೆ ಹಾಕಿ ಮೈದಾನದ ಟರ್ಫ್ ಕಾಮಗಾರಿಗೆ ಗ್ರಹಣ, 9 ವರ್ಷವಾದರೂ ಅಪೂರ್ಣ

ಪೊನ್ನಂಪೇಟೆಯಲ್ಲಿ ಆರಂಭವಾದ ಹಾಕಿ ಟರ್ಫ್ ಕಾಮಗಾರಿ ಪೂರ್ಣಗೊಂಡು ಕ್ರೀಡಾಪಡುಗಳು ಅದರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಸೋಮವಾರಪೇಟೆಯ ಹಾಕಿ ಟರ್ಫ್ ಕಾಮಗಾರಿಯ ಟೆಂಡರ್ ಪಡೆದಿರುವ ಕಂಪೆನಿಯ ಇಂಜಿನಿಯರ್ ಮತ್ತು ಗುತ್ತಿಗೆದಾರರು ಕಳೆದ  4 ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

  • Share this:
ಕೊಡಗು: ಈ ಜಿಲ್ಲೆ ಹಾಕಿಯ (Hockey) ತವರೂರು. ಕೊಡಗು ಜಿಲ್ಲೆ ಅಂತರರಾಷ್ಟ್ರೀಯ (International) ಹಾಕಿ ಆಟಗಾರರಾದ (Players) ಎಸ್.ವಿ. ಸುನಿಲ್, ಅರ್ಜುನ್ ಹಾಲಪ್ಪ, ವಿಕ್ರಾಂತ್, ಬಿ.ಪಿ.ಗೋವಿಂದರಂತಹ ಹಲವು ಅಂತರಾಷ್ಟ್ರೀಯ ಹಾಕಿ ಆಟಗಾರರನ್ನು ನೀಡಿದೆ. ಅದರಲ್ಲೂ ಈ ಎಲ್ಲಾ ಆಟಗಾರರು ಸೋಮವಾರಪೇಟೆ ನಗರದಲ್ಲಿರುವ ಸರ್ಕಾರಿ ಕಾಲೇಜು ಮೈದಾನದಲ್ಲಿ (Ground) ಆಡಿ ತರಬೇತಿ ಪಡೆದವರು ಎನ್ನೋದು ವಿಶೇಷ. ಹೀಗಾಗಿಯೇ ಈ ಹಾಕಿ ಮೈದಾನಕ್ಕೆ ಟರ್ಫ್ (Turf) ಅಳವಡಿಸಿ ಇಂತಹ ನೂರಾರು ಆಟಗಾರರಿಗೆ ಪ್ರೋತ್ಸಾಹ ನೀಡಬೇಕು ಎನ್ನೋ ಆಶಯದಿಂದಲೇ 9 ವರ್ಷಗಳ ಹಿಂದೆ, ಅಂದರೆ 2013 ರಲ್ಲಿ ಟರ್ಫ್ ಅಳವಡಿಸಲು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅಂದು ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾಗಿದ್ದ ಎಂ. ಪಿ ಅಪ್ಪಚ್ಚು ರಂಜನ್ (Appachu Ranjan) ಅವರು ಈ ಮೈದಾನದ ಕಾಮಗಾರಿಗೆ ಮೂರುವರೆ ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದರು. ವಿಪರ್ಯಾಸವೆಂದರೆ ಒಂಭತ್ತು ವರ್ಷಗಳು ಕಳೆದರೂ ಇಂದಿಗೂ ಈ ಮೈದಾನ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿಲ್ಲ.

ಅಲ್ಲಿ ಉದ್ಘಾಟನೆ ಆಯ್ತು, ಇಲ್ಲಿ ಆಗಿಯೇ ಇಲ್ಲ

ಇದೇ ಸಂದರ್ಭದಲ್ಲಿ ಪೊನ್ನಂಪೇಟೆಯಲ್ಲಿ ಆರಂಭವಾದ ಹಾಕಿ ಟರ್ಫ್ ಕಾಮಗಾರಿ ಪೂರ್ಣಗೊಂಡು ಕ್ರೀಡಾಪಡುಗಳು ಅದರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಸೋಮವಾರಪೇಟೆಯ ಹಾಕಿ ಟರ್ಫ್ ಕಾಮಗಾರಿಯ ಟೆಂಡರ್ ಪಡೆದಿರುವ ಕಂಪೆನಿಯ ಇಂಜಿನಿಯರ್ ಮತ್ತು ಗುತ್ತಿಗೆದಾರರು ಕಳೆದ  4 ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.

7 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿ

ಭೂಮಿಪೂಜೆ ನೆರವೇರಿ ಸ್ವಲ್ಪ ಕಾಮಗಾರಿ ನಡೆದ ಬಳಿಕ 7 ವರ್ಷಗಳ ಕಾಲ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಕಳೆದ 2 ವರ್ಷಗಳ ಹಿಂದಷ್ಟೇ ಕಾಮಗಾರಿಗೆ ಮರುಜೀವ ನೀಡಲಾಗಿತ್ತು. ಗ್ರೇಟ್ ಸ್ಪೋರ್ಟ್ಸ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕಾಮಗಾರಿಗೆ ಮರುಜೀವ ನೀಡಿ ತರಾತುರಿಯಲ್ಲಿ ಟರ್ಫ್ ಅಳವಡಿಸಿತ್ತು. ಆದರೆ ಉಳಿದ ಇತರ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ 3 ಕೋಟಿಯಷ್ಟು ಹಣ ಡ್ರಾ ಮಾಡಿಕೊಂಡಿದೆ ಎನ್ನೋ ಆರೋಪ ಕ್ರೀಡಾಪ್ರೇಮಿಗಳದ್ದು.

ಇದನ್ನೂ ಓದಿ: Udupi; ಬೆಳಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಮಧ್ಯಾಹ್ನದ ಬಳಿಕ ಕೂಲಿ: ಇದು ರಾಜ್ಯದ ಮಹಿಳೆಯ ಪರಿಶ್ರಮದ ಕತೆ..!

ಕಾಮಗಾರಿ ವಿಳಂಬದ ಹಿಂದಿದೆ ಹಲವು ಅನುಮಾನ

ಮತ್ತೊಂದೆಡೆ  ಸಿಂಥೆಟಿಕ್ ಮೈದಾನದ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ ಸಂಸ್ಥೆಯಿಂದ ಗುಣಮಟ್ಟ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನೂ ನೀಡಲಾಗಿದೆ ಎನ್ನಲಾಗುತ್ತಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗೆ ಅಪೂರ್ಣ ಕಾಮಗಾರಿಗೆ ಯೋಗ್ಯತಾ ಪತ್ರ ನೀಡಿರುವುದರ ಹಿಂದೆ  ಬಿಲ್ ಮಾಡಿಸಿಕೊಳ್ಳುವ ಹುನ್ನಾರ ಅಡಗಿದೆ ಎಂಬ ಸಂಶಯ ಮೂಡಿದೆ.

ಯಾವ ಕೆಲಸವೂ ಇದುವರೆಗೆ ಪೂರ್ಣಗೊಂಡಿಲ್ಲ

ಬಿಲ್ ಮಾಡಿಸುವ ಸಲುವಾಗಿ ಮೈದಾನಕ್ಕೆ ಟರ್ಫ್ ಮ್ಯಾಟ್ ಅಳವಡಿಸಿರುವುದನ್ನು ಬಿಟ್ಟರೆ ಇತರ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ವಾಟರ್ ಟ್ಯಾಂಕ್ ಮತ್ತು ಮೋಟಾರ್ ಕೊಠಡಿ, ಟರ್ಫ್ ಸುತ್ತಲೂ ಫೆನ್ಸಿಂಗ್, ವಾಕಿಂಗ್ ಪಾತ್, ಇಂಟರ್‌ಲಾಕ್, ಔಟ್‌ಲೆಟ್ ಕಾಮಗಾರಿಗಳು ಬಾಕಿ ಉಳಿದಿವೆ. ಟರ್ಫ್ ಮ್ಯಾಟ್‌ಗೆ ನೀರು ಸಿಂಪಡಿಸಲು ಸಣ್ಣ ಜೆಟ್‌ಗಳನ್ನು ಅಳವಡಿಸಿದ್ದು, ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಮೈದಾನದ ಸುತ್ತಲೂ ಇರುವ ಚರಂಡಿಗೆ ಸ್ಲ್ಯಾಬ್ ಅಳವಡಿಸಿಲ್ಲ. ಒಟ್ಟಿನಲ್ಲಿ ಶೇ 40 ರಷ್ಟು ಕಾಮಗಾರಿಗಳು ಇನ್ನೂ ಬಾಕಿ ಉಳಿದಿದ್ದರೂ ಎಫ್‌ಐಹೆಚ್‌ನಿಂದ ದೃಢೀಕರಣ ಪತ್ರ ನೀಡಿರುವುದು ಆಡಳಿತ ವರ್ಗದ ಪಾರದರ್ಶಕತೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

ಇದನ್ನೂ ಓದಿ: Honeytrap: 'ಪದ್ಮ'ನ ಹಿಂದೆ ಹೋಗಿದ್ದವ 'ಹನಿ' ಬಲೆಗೆ ಬಿದ್ದ! ಯಾರದ್ದೋ ಮನೆಗೆ ಹೋಗುವ ಮುನ್ನ ಎಚ್ಚರ

ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ

ಈ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಕೇಳಿದ್ರೆ ಮೈದಾನಕ್ಕೆ ಈಗಾಗಲೇ ಐದು ಕೋಟಿ ವೆಚ್ಚದಲ್ಲಿ ಕಮಾಗಾರಿಯ ಕೆಲಸ ಆಗಿದೆ. ಇನ್ನು ಸುಮಾರು 80 ಲಕ್ಷ ಹಣದ ಅಗತ್ಯವಿದ್ದು ಮಂಜೂರಾತಿ ಮಾಡಲಾಗಿದೆ. ಇನ್ನು ಒಂದು ತಿಂಗಳ ಅವದಧಿಯಲ್ಲಿ ಟರ್ಫ್ ಮೈದಾನದ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದಿದ್ದಾರೆ.
Published by:Annappa Achari
First published: