ವಿಶ್ವಪ್ರಸಿದ್ಧ ಹಂಪಿ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ

news18
Updated:September 6, 2018, 11:42 AM IST
ವಿಶ್ವಪ್ರಸಿದ್ಧ ಹಂಪಿ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ
news18
Updated: September 6, 2018, 11:42 AM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.06):  ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಇನ್ನುಂದೆ ಹಂಪಿ ಮಾದರಿಯಲ್ಲಿ ತನ್ನ ಗತವೈಭವವನ್ನು ಸಾರಲಿದೆ. ಇನ್ನೊಂದು ವರ್ಷದಲ್ಲಿ ತಲೆ ಎತ್ತಲಿರುವ ಹಂಪಿ ಮಾದರಿಯ ನೂತನ ಡಿಸಿ ಕಚೇರಿ.

ವಿಶ್ವಪ್ರಸಿದ್ಧ ಹಂಪಿಯ ಕೆಲ ಸ್ಮಾರಕಗಳನ್ನು ಇನ್ಮುಂದೆ ಗಣಿನಾಡು ಬಳ್ಳಾರಿ ನಗರದಲ್ಲಿಯೇ ನೋಡಬಹುದು. ಹೈಟೆಕ್ ತಂತ್ರಜ್ಞಾನ ಬಳಸಿ ಸೇಮ್ ಹಂಪಿ ಮಾದರಿಯಲ್ಲಿಯೇ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಹಂಪಿಯ ಮಾದರಿ ಈಗ ಬಳ್ಳಾರಿ ನಗರದಲ್ಲಿ ನೋಡುವ ಅವಕಾಶ ಸಿಗಲಿದೆ.

ಗಣಿನಾಡು ಬಳ್ಳಾರಿ ನಗರದ ಅನಂತರಪುರ ರಸ್ತೆಯಲ್ಲಿನ ಪ್ರವಾಸಿ ಮಂದಿರದ ಹಿಂಭಾಗದಲ್ಲಿರುವ ಸುಮಾರು 14 ಎಕರೆ ಸರಕಾರಿ ಜಮೀನಿನಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಡಿಸಿ ಕಚೇರಿಯಲ್ಲಿ ಹಂಪಿಯ ಸ್ಮಾರಕಗಳು ಕಾಣ ಸಿಗಲಿವೆ. ಸರಕಾರ ಈಗಾಗಲೇ 25 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಿದೆ. ನೀಲನಕ್ಷೆಯೂ ಸಿದ್ದವಾಗಿದ್ದು, ಜಿಲ್ಲಾಧಿಕಾರಿ ಡಾ ರಾಮಪ್ರಸಾತ್ ಮನೋಹರ್ ಸೂಚನೆ ಮೇರೆಗೆ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು, ಹಂಪಿಯ ಸ್ಮಾರಕಗಳ ಸೊಬಗು ಸಾರುವ ರೀತಿ ಕಚೇರಿಯ ಹೊರಾಂಗಣ, ಒಳಾಂಗಣ ಹಾಗೂ ಮೇಲ್ಭಾಗದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಪ್ರತಿರೂಪ ಸೃಷ್ಟಿಸುವ ನೀಲ ನಕ್ಷೆ ತಯಾರಿಸಿದ್ದಾರೆ.

ಸರಕಾರ ಹಾಗೂ ಸ್ಥಳೀಯ ಚುನಾಯಿತರ ಒಪ್ಪಿಗೆ ದೊರಕಿದೆ. ಕಾಮಗಾರಿ ಆರಂಭವಾಗುವುದಷ್ಟೇ ಬಾಕಿಯಿದೆ. ಕಾಮಗಾರಿ ಆರಂಭಿಸಲು ತಾಂತ್ರಿಕ, ಆಡಳಿತಾತ್ಮಕ ಒಪ್ಪಿಗೆಯೂ ದೊರಕಿದೆ. ಟೆಂಡರ್ ಹಂಚಿಕೆಯಾಗಿದೆ. ಅನಂತಪುರ ರಸ್ತೆಯಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿ ಹೊಸ ಕಟ್ಟಡ ತಲೆ ಎತ್ತಿದ ಬಳಿಕ ಈಗ ಇರುವ 100 ವರ್ಷಗಳ ಇತಿಹಾಸವುಳ್ಳ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿರುವ ಡಿಸಿ ಕಚೇರಿಯ ಬೃಹತ್ ಕಟ್ಟಡ ಸ್ಮಾರಕವಾಗಿ ಉಳಿಯಲಿದೆ.

ಈ ಹಳೆಯ ಕಟ್ಟಡ ಆರಂಭದಲ್ಲಿ ಬ್ರಿಟಿಷ್ ರಾಯಬಾರಿಗಳು, ಮದ್ರಾಸ್ ಪ್ರಾಂತ್ಯದ ನಿಜಾಮರ ಆಳ್ವಿಕೆಯಲ್ಲಿತ್ತು. 1956ರಲ್ಲಿ ಕರ್ನಾಟಕ ರಾಜ್ಯಕ್ಕೆ ಹಸ್ತಾಂತರವಾಗಿತ್ತು ಆಗಿನಿಂದಲೂ ಜಿಲ್ಲಾಡಳಿತ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುತ್ತಾರೆ  ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್.

ವಿಶ್ವಪರಂಪರೆ ತಾಣಗಳ ಪಟ್ಟಿಯಲ್ಲಿರುವ ಹಂಪಿ ಜಿಲ್ಲೆಗೆ ಮುಕುಟಪ್ರಾಯವಿದ್ದಂತೆ. ಇಲ್ಲಿನ ವಾಸ್ತುಶಿಲ್ಪ ಕಲೆ, ಸ್ಮಾರಕಗಳ ಸೊಬಗು, ದೇಶ-ವಿದೇಶಿಗರ ಸೆಳೆಯುತ್ತಿದೆ. ಇದೇ ಮಾದರಿಯ ಕಲೆಯನ್ನು ಜಿಲ್ಲಾ ಶಕ್ತಿ ಕೇಂದ್ರಕ್ಕೆ ನೀಡುವ ಉದ್ದೇಶದಿಂದ ಹೊಸದಾಗಿ ನೀಲನಕ್ಷೆ ತಯಾರು ಮಾಡಲಾಗಿದೆ. ನೆಲಮಹಡಿ ಸೇರಿ ಒಟ್ಟು ಮೂರು ಮಹಡಿಗಳಿದ್ದು, ಮೇಲ್ಭಾಗದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಇರುವ ಗೋಪುರದ ಮಾದರಿಗಳನ್ನು 3 ಕಡೆ ನಿರ್ಮಿಸಲಾಗುತ್ತಿದ್ದು, ನಡುವಿನ ಗೋಪುರದ ಮೇಲೆ ಸರಕಾರಿ ಲಾಂಛನ (ಮೂರು ಮುಖದ ಸಿಂಹ) ವಿರಲಿದೆ.
Loading...

ಉಳಿದ ಎರಡು ಕಡೆಯ ಗೋಪುರಗಳ ಮೇಲೆ ಕಳಸ ಇಡಲಾಗುತ್ತದೆ.  ಹೊರಾಂಗಣ ಪೂರ್ಣ ಕಮಲ್ ಮಹಲ್ ಮಾದರಿಯಲ್ಲಿರಲಿದೆ. ಮುಂಭಾಗದಲ್ಲಿ ವಿಶಾಲ ಉದ್ಯಾನ, ನೀರಿನ ಕಾರಂಜಿ, ಒಳಾಂಗಣದಲ್ಲಿ ಹಂಪಿಯ ಮತ್ತಿತರ ಸ್ಮಾರಕಗಳ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸ ರಚಿಸಲಾಗಿದೆ. ಈ ಬಗೆಯ ಕಟ್ಟಡ ನಿರ್ಮಾಣ ಜಿಲ್ಲಾ ಶಕ್ತಿ ಕೇಂದ್ರಕ್ಕೆ ವಿಶೇಷ ಕಳೆ ನೀಡಲಿದೆ.

ಜಿಲ್ಲಾಧಿಕಾರಿಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಹಂಪಿಯ ಮಾದರಿಯಲ್ಲಿಯೇ ನೀಲ ನಕ್ಷೆ ತಯಾರು ಮಾಡಲಾಗಿದೆ. ಸರಕಾರದಿಂದ ಅನುಮೋದನೆ ದೊರೆತಿದ್ದು, ಶೀಘ್ರ ಕಾಮಗಾರಿಯೂ ಆರಂಭವಾಗಲಿದೆ. ಬಳ್ಳಾರಿ ನಗರದಲ್ಲಿ ಹಂಪಿ ಮಾದರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗುತ್ತಿರುವುದಕ್ಕೆ ಕನ್ನಡಪರ ಹೋರಾಟಗಾರ ಚಂದ್ರಶೇಖರ್ ಆಚಾರ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಹಂಪಿ ದೇಶ-ವಿದೇಶದಲ್ಲಿ ವಿಶ್ವಮಾನ್ಯತೆ ಪಡೆದಿದೆ. ವಿಜಯನಗರ ಅರಸರ ಕಾಲದ ಗತವೈಭವ ಸಾರುವ ಹಂಪಿಯಲ್ಲಿನ ಸ್ಮಾರಕಗಳ ಮಾದರಿಯಲ್ಲಿಯೇ ಕಟ್ಟಡ ನಿರ್ಮಿಸಿ ವಾಸ್ತುಶಿಲ್ಪ ಕಲೆ ಸಾರಲು ನಿರ್ಧರಿಸಲಾಗಿದೆ. ಈ ಎಲ್ಲವನ್ನು ಒಳಗೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಹೊಸ ರೂಪ, ನೀಡಲಾಗುತ್ತಿದೆ. ಕಟ್ಟಡದ ವಿನ್ಯಾಸ ಎಲ್ಲರ ಮೆಚ್ಚುಗೆ ಗಳಿಸಿದೆ.

ಹೀಗಾಗಿ ಈಗ ಬಳ್ಳಾರಿ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ ಈಗ ಹಂಪಿ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ಬಳ್ಳಾರಿ ಜನರ ಸಂತಸಕ್ಕೆ ಕಾರಣವಾಗಿದೆ.

 
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ