Southadka: ಘಂಟೆಗೆ ಒಲಿಯುತ್ತಾನೆ ಈ ಗಣೇಶ! ಸೌತಡ್ಕದ ಬಯಲಲ್ಲಿ ಗಣಪ ನಿಂತ ಕಥೆಯೇ ರೋಚಕ

ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯವಾಗಿದ್ದರೆ, ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಘಂಟೆಗಳನ್ನು ಮಾತ್ರ! ಈ ಕಾರಣಕ್ಕಾಗಿಯೇ ಇಲ್ಲಿ ಘಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ.

ಸೌತಡ್ಕ ಮಹಾಗಣಪತಿ

ಸೌತಡ್ಕ ಮಹಾಗಣಪತಿ

  • Share this:
ಸೌತಡ್ಕ, ದಕ್ಷಿಣ ಕನ್ನಡ: ಅದು ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ (Ganapathi) ನೆಲೆ ನಿಂತಿರುವ ಪುಣ್ಯ ಸ್ಥಾನ. ತನ್ನ ಬೇಡುವ ಭಕ್ತರ (Devotees) ಅಭೀಷ್ಠೆಯನ್ನು ನೆರವೇರಿಸುವ, ತನ್ನನ್ನು ನಂಬಿದವರನ್ನು ಎಂದೂ ಕೈ ಬಿಡದ ಗಣೇಶನ (Ganesha) ನೆಲೇಬಿಡೇ ಸೌತಡ್ಕ (Southadka) ಮಹಾಗಣಪತಿ ಕ್ಷೇತ್ರ. ಬಯಲು ಆಲಯದಲ್ಲಿ ವಿರಾಜಮಾನನಾಗಿರುವ ಗಣಪತಿಯ ಕ್ಷೇತ್ರ ಮಹಾತ್ಮೆಯೇ ಅಪಾರ. ಪ್ರಕೃತಿಯೇ ತನ್ನದು ಎನ್ನುವ ಸಂದೇಶವನ್ನು ಸಾರುವ ಕ್ಷೇತ್ರವೂ ಇದು ಎನ್ನುವ ಕೀರ್ತಿಗೂ ಈ ಕ್ಷೇತ್ರ ಪಾತ್ರವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವ ಕೊಕ್ಕಡ ಸಮೀaಪದಲ್ಲೇ ಇರುವಂತಹ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ. ಧರ್ಮಸ್ಥಳದಿಂದ 17 ಕೀಮೀ ದೂರದಲ್ಲಿರುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಭಕ್ತರ ಪಾಲಿಗೆ ಶ್ರಧ್ಧೆಯ ಭಕ್ತಿ ಕೇಂದ್ರವೂ ಇದಾಗಿದೆ.

ಭಕ್ತರಿಗೆ ಹತ್ತಿರದಿಂದ ದರ್ಶನ ಕರುಣಿಸೋ ಮಹಾಗಣಪತಿ

ಸುತ್ತಲೂ ಘಂಟೆಗಳ ರಾಶಿ, ಪ್ರಶಾಂತವಾದ ವಾತಾವರಣ, ಪ್ರಕೃತಿಯ ಮಧ್ಯದಲ್ಲೇ ಪ್ರಥಮ ವಂದಿತ ಗಣಪತಿ ನೆಲೆ ನಿಂತಿದ್ದಾನೆ. ಭಕ್ತರನ್ನು ಹತ್ತಿರದಿಂದಲೇ ದರ್ಶನ ಭಾಗ್ಯ ನೀಡುವ ಮಹಾಗಣಪತಿ ತನ್ನ ಕಾರಣಿಕದಿಂದಲೇ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆದಿದ್ದಾನೆ. ತನ್ನೆದುರಲ್ಲಿ ನಿಂತು ತನ್ಮಯರಾಗಿ, ಭಕ್ತಿ ಭಾವದಿಂದ ಗಣಪತಿಯನ್ನು ಆರಾಧಿಸಿದ್ರೆ ಸಾಕು ಎಲ್ಲಾ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ಅಖಿಲಾಂಡ ಕೋಟಿಯ ಹೃದಯದಲ್ಲಿ ನೆಲೆಸಿರುವ ಮಹಾಗಣಪತಿ ನಂಬಿದವರ ಪಾಲಿನ ಆರಾಧ್ಯ ದೇವರಾಗಿದ್ದಾನೆ.

ಸೌತಡ್ಕ ಮಹಾಗಣಪತಿ


ಘಂಟೆಗಳ ಸದ್ದಿನಲ್ಲೇ ವಿರಾಜಮಾನನಾದ ವಿನಾಯಕ

ಅತ್ಯಂತ ಸರಳವಾಗಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಹರಕೆಯೂ ಕೂಡಾ ಅತೀ ಸರಳವಾಗಿರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯವಾಗಿದ್ದರೆ, ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಗಂಟೆಯನ್ನಷ್ಟೇ. ಈ ಕಾರಣಕ್ಕಾಗಿಯೇ ಇಲ್ಲಿ ಗಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: Ganesh Festival: ಗಣೇಶನ ದೇಹದ ಎಲ್ಲಾ ಭಾಗಕ್ಕೂ ತನ್ನದೇ ಆದ ಮಹತ್ವವಿದೆ! ಇಲ್ಲಿದೆ ಕುತೂಹಲಕಾರಿ ಮಾಹಿತಿ

ಘಂಟೆ ನೀಡಿ ಹರಕೆ ಸಲ್ಲಿಸುವ ಭಕ್ತರು

ತಾವು ಬೇಡಿಕೊಂಡ ಬೇಡಿಕೆ ಈಡೇರಿಸಿದ ಬಳಿಕ ಇಲ್ಲಿಗೆ ಭಕ್ತಾಧಿಗಳು ಘಂಟೆಯನ್ನು ಸಮರ್ಪಿಸುತ್ತಾರೆ, ದಿನವೊಂದಕ್ಕೆ ನೂರಕ್ಕಿಂತ ಅಧಿಕ ಘಂಟೆಗಳು ಕ್ಷೇತ್ರದಲ್ಲಿ ಸಮರ್ಪಿತವಾಗುತ್ತದೆ.

ಘಂಟೆ ಹರಕೆಗೆ ಒಲಿಯುವ ದೇವರು


ಪ್ರತಿ ವರ್ಷ 11 ಟನ್ ಘಂಟೆಗಳ ಹರಕೆ!

ಅತೀ ಸಣ್ಣ ಘಂಟೆಯಿಂದ ಆರಂಭಗೊಂಡು, ನೂರು ಕೆಜಿಯವರೆಗಿನ ದೊಡ್ಡ ದೊಡ್ಡ ಘಂಟೆಗಳೂ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಹರಿದು ಬರುತ್ತದೆ. ಭಕ್ತರು ತಮ್ಮ ಅಭೀಷ್ಠೆ ನೆರವೇರಿದ ಬಳಿಕ ಕ್ಷೇತ್ರಕ್ಕೆ ಬಂದು ಘಂಟೆ ಸಮರ್ಪಣೆ ಮಾಡಿ ಹೋಗುತ್ತಾರೆ. ಅಷ್ಟಕ್ಕೂ ಕಷ್ಚಗಳು ನಿವಾರಣೆಯಾದ ಬಳಿಕ ಗಂಟೆಯನ್ನು ದೇವಸ್ಥಾನದಲ್ಲಿ ಕಟ್ಟೋದು ಇಲ್ಲಿನ ಸಂಪ್ರದಾಯವಾಗಿರೋದ್ರಿಂದ ಇಲ್ಲಿ ಕಟ್ಟಿರುವ ಗಂಟೆಗಳೇ ಭಕ್ತರ ಕಷ್ಟ ದೂರವಾಗಿರೋದಕ್ಕೆ ಸಾಕ್ಷಿ ನುಡಿಯುತ್ತದೆ. ಪ್ರತಿವರ್ಶ 11 ಟನ್ ಘಂಟೆಗಳು ಕ್ಷೇತ್ರಕ್ಕೆ ಬರುತ್ತಿವೆ ಅಂದ್ರೆ ನೀವು ನಂಬಲೇ ಬೇಕು.

ಘಂಟೆ ಅರ್ಪಿಸುತ್ತಿರುವ ಭಕ್ತರು


ಗೋಪಾಲ ಬಾಲಕರಿಗೆ ಸಿಕ್ಕಿದ ಗಣೇಶ

ಬಯಲು ಆಲಯದಲ್ಲೇ ಇರುವ ಈ ಮಹಾಗಣಪತಿಯ ವಿಗ್ರಹ ಗೋವುಗಳನ್ನು ಮೇಯಿಸುತ್ತಿದ್ದ ಮಕ್ಕಳಿಗೆ ಸಿಕ್ಕಿತಂತೆ. ಆ ಮಕ್ಕಳು ಈ ಗಣಪತಿಗೆ ಸೌತೆಯಿಂದಲೇ ನೈವೇಧ್ಯ ಸಲ್ಲಿಸುತ್ತಿದ್ರು. ಕ್ರಮೇಣ ಇದರಿಂದಲೇ ಸೌತಡ್ಕ ಎಂಬ ಹೆಸರು ಬಂತೆಂದು ಪ್ರತೀತಿ. ಇನ್ನು ಈ ಗಣಪನಿಗೆ ಆಲಯವನ್ನು ನಿರ್ಮಾಣ ಮಾಡುದಾದ್ರೆ 24 ಗಂಟೆಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಕಾಣುವಷ್ಟು ಎತ್ತರದ ಆಲಯವನ್ನು ನಿರ್ಮಾಣ ಮಾಡಬೇಕಂತೆ. ಹೀಗಾಗಿ ಇಲ್ಲಿ ಬಯಲಲ್ಲೇ ಗಣಪ ನೆಲೆ ನಿಂತಿದ್ದಾನೆ.

ಭಕ್ತರಿಂದ ಪೂಜಿಲ್ಪಡುವ ದೇವರು


ಅವಲಕ್ಕಿ ಪ್ರಸಾದ ಪ್ರಿಯ ಗಣಪತಿ

ಇನ್ನು ಚೌತಿ ಸಂದರ್ಭ ವಿಶೇಷ ಪೂಜೆ ಪುನಸ್ಕಾರಗಳು ಗಣಪತಿಗೆ ಸಲ್ಲಿಕೆಯಾಗುತ್ತೆ. ಸಾವಿರಾರು ಭಕ್ತರು ಆಗಮಿಸಿ ಗಣಪನ ದರ್ಶನ ಪಡಿತಾರೆ. ಇನ್ನು ಇಲ್ಲಿ ಅವಲಕ್ಕಿ ಪ್ರಸಾದ ವಿಶೇಷ ಸೇವೆಯಾಗಿದ್ದು, ಹೆಚ್ಚಿನ ಭಕ್ತರು ಇದನ್ನು ಮಾಡಿಸುತ್ತಾರೆ. ಇದರ ಜೊತೆ ರಂಗಪೂಜೆ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಬರುವ ವಾನರಗಳಿಗೆ ಇದೇ ಪ್ರಸಾದ ಆಹಾರ ರೂಪದಲ್ಲಿ ನೀಡಲಾಗುತ್ತೆ.

ಇದನ್ನೂ ಓದಿ: Ganesh Idol: ಯಾವ ರೀತಿಯ ಗಣೇಶನ ಮೂರ್ತಿ ಮನೆಗೆ ಒಳ್ಳೆಯದು? ಈ ರೀತಿಯ ಮೂರ್ತಿ ತನ್ನಿ

ಒಟ್ಟಿನಲ್ಲಿ ಸಕಲ ಭಕ್ತರನ್ನು ಹರಸುವ, ಸಕಲ ಭಕ್ತರ ಇಷ್ಟಾರ್ಥ ನೆರವೇರಿಸುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಅತ್ಯಂತ ಪವಿತ್ರ, ಶ್ರಧ್ದಾ ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ.
Published by:Annappa Achari
First published: