news18-kannada Updated:November 11, 2020, 4:14 PM IST
ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಬೆಂಗಳೂರು; ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ಸಕಲ ಪ್ರಯತ್ನ ನಡೆಸುತ್ತಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಇಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂರ್ಣಿಮಾ ಶ್ರೀನಿವಾಸ್ ಅವರು, ಸಂಪುಟದಲ್ಲಿ ಸಚಿವರಾಗಲು ಯಾರಿಗೆ ತಾನೇ ಆಸೆ ಇರುವುದಿಲ್ಲ. ನಾನು ಆಕಾಂಕ್ಷಿ ಎನ್ನುವುದಕ್ಕಿಂತ ಹೆಚ್ಚಾಗಿ, ಪಕ್ಷ ತೀರ್ಮಾನ ಮಾಡಬೇಕು. ನಮ್ಮನ್ನು ಕ್ಯಾಬಿನೆಟ್ಗೆ ಸೇರ್ಪಡೆ ಮಾಡಿಕೊಳ್ಳುವುದು ಬಿಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಹಲವು ದಿನಗಳಿಂದ ನನ್ನ ಹೆಸರು ಕ್ಯಾಬಿನೆಟ್ ಸೇರ್ಪಡೆಗೆ ಕೇಳಿ ಬರುತ್ತಿದೆ ನಿಜ. ಪಕ್ಷ ವಿರೋಧಿ ಅಂತಹ ಚಟುವಟಿಕೆಗಳನ್ನು ನಾನು ಮಾಡುವುದಿಲ್ಲ. ಅವಕಾಶ ಕೊಟ್ಟರೇ, ಅಚ್ಚುಕಟ್ಟಾಗಿ ಅದನ್ನು ನಿಭಾಯಿಸುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ತಿಳಿಸಿದರು.
ಇದನ್ನು ಓದಿ: ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ
ಉಪಚುನಾವಣೆ ನಡೆದ ಬಳಿಕ ರಾಜ್ಯ ರಾಜಕೀಯ ವಿದ್ಯಮಾನಗಳು ಗರಿಗೆದರಿವೆ. ಹಲವು ಶಾಸಕರು ಸಚಿವರಾಗಲು ಸಕಲ ಲಾಬಿ ಆರಂಭಿಸಿದ್ದಾರೆ. ಇಂದು ಹಲವು ಶಾಸಕರು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಶಾಸಕರ ಸಭೆ ನಡೆಸಿದ್ದಾರೆ. ಅವರಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕೂಡ ಒಬ್ಬರು. ರಮೇಶ್ ಜಾರಕಿಹೊಳಿ ಜೊತೆ ಮುರಗೇಶ್ ನಿರಾಣಿ ಹಾಗೂ ಹೆಚ್ ವಿಶ್ವನಾಥ್ ಕೂಡ ಸಭೆಯಲ್ಲಿ ಹಾಜರಾಗಿದ್ದರು.
ಸಚಿವ ರಮೇಶ ಜಾರಕಿಹೊಳಿ ನಿವಾಸದಲ್ಲಿನ ಶಾಸಕರ ಸಭೆ ಮುಕ್ತಾಯದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ನಾನು ಯಾವುದೇ ಪವರ್ ಸೆಂಟರ್ ಅಲ್ಲ. ನಮ್ಮ ಜೊತೆ ಬಂದವರಿಗೆಲ್ಲ ಸಚಿವ ಸ್ಥಾನ ಸಿಗುತ್ತೆ ಅಂತಾ ಹೇಳೋಕ್ಕಾಗಲ್ಲ. ನಾನು ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಅಲ್ಲ. ಹಾಗೆಲ್ಲಾ ಹೇಳಬೇಡಿ ನೀವು. ಯಾರನ್ನು ಮಂತ್ರಿ ಮಾಡಬೇಕು ಅನ್ನೋದು ಸಿಎಂ ಯಡಿಯೂರಪ್ಪ ಹಾಗೂ ವರಿಷ್ಠರು ತೀರ್ಮಾನ ಮಾಡ್ತಾರೆ. ನಾನು ಡಿಸಿಎಂ ಆಕಾಂಕ್ಷಿ ಅಲ್ಲ. ಸಚಿವನಾಗಿದ್ದೇನೆ. ಒಳ್ಳೆಯ ಖಾತೆ ನೀಡಿದ್ದಾರೆ. ಅದರಲ್ಲಿ ಕೆಲಸ ಮಾಡ್ತಿದ್ದೇನೆ ಎಂದು ಹೇಳಿದರು.
Published by:
HR Ramesh
First published:
November 11, 2020, 4:14 PM IST