ಬೆಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಲವ್ ಜಿಹಾದ್ (Love Jihad) ತಡೆಗೆ ವಿಶೇಷ ಕಾನೂನು ರೂಪಿಸುವ ಕುರಿತು ಕೂಗು ಕೇಳಿಬಂದಿದೆ. ಪೊಲೀಸ್ ದಳ ರಚಿಸುವ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಕುರಿತು ಪರಿಶೀಲಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಅವರು ಹಿಂದು ಜನಜಾಗೃತಿ ಸಮಿತಿಗೆ ಭರವಸೆ ನೀಡಿದ್ದಾರೆ.ಜಯಮಹಲ್ ನ ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ಹಿಂದುಪರ ಸಂಘಟನೆಗಳ ನಿಯೋಗವು ಲವ್ ಜಿಹಾದ್ ಕುರಿತು ದೂರು ಸಲ್ಲಿಸಿ, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಹಿಂದು ಜನಜಾಗೃತಿ ಸಮಿತಿ ಆಗ್ರಹ
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೂ ಲವ್ ಜಿಹಾದ್ ಅವ್ಯಾಹತವಾಗಿ ಮುಂದುವರಿದಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರೋಧಿ ವಿಶೇಷ ದಳ ರಚಿಸಲು ಹಿಂದು ಜನಜಾಗೃತಿ ಸಮಿತಿ ಇನ್ನಿತರ ಸಂಘಟನೆಗಳು ಆಗ್ರಹಿಸಿದವು.
ಲವ್ ಜಿಹಾದ್ಗೆ ಮೌಲ್ವಿಗಳ ಸಾಥ್ ಆರೋಪ
ರಾಷ್ಟ್ರೀಯ ತನಿಖಾ ದಳದ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳ ಪ್ರಕಾರ ರಾಜ್ಯದ 5 ಜಿಲ್ಲೆಗಳಲ್ಲಿ ಶಾಹೀನ್ ಗ್ಯಾಂಗ್ ಸಕ್ರಿಯವಾಗಿದೆ. ಕೆಲವು ಮೌಲ್ವಿಗಳು ಹಾಗೂ ಮದರಸಾಗಳು ಲವ್ ಜಿಹಾದ್ ಗೆ ಸಾಥ್ ನೀಡಿವೆ ಎಂದು ಈ ಮನವಿಯಲ್ಲಿ ಆರೋಪಿಸಿದ್ದಾರೆ.
ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ
ಮನವಿ ಸ್ವೀಕರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಂದು ಯುವತಿಯರು, ಮಹಿಳೆಯರು ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಲು ಸೂಚಿಸುತ್ತೇನೆ. ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಪರಿಶೀಲಿಸುತ್ತೇನೆ. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಜತೆಗೆ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ
ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ಅಂತಹ ಪ್ರಕರಣಗಳು ವರದಿ ಆಗುತ್ತಲೇ ಇವೆ. ಇತ್ತೀಚೆಗೆ ಬಸ್ನಲ್ಲಿ ಅಕ್ಕ-ಪಕ್ಕ ಕುಳಿತಿದ್ದ ಪದವಿ ವಿದ್ಯಾರ್ಥಿ ಮೇಲೆ ಹಲ್ಲೆ ಆಗಿತ್ತು. ಡಿಸೆಂಬರ್ 6ರಂದು ಕಂಕನಾಡಿಯ ಸುಲ್ತಾನ್ ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ಗಿರಿ ನಡೆಸಲಾಗಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ಇಂತಹವುದೇ ಒಂದು ಪ್ರಕರಣ ಶನಿವಾರ (ಡಿಸೆಂಬರ್ 10, 2022) ನಡೆದಿದೆ. ಮಂಗಳೂರು ನಗರದ ಕೊಟ್ಟಾರ ಎಂಬಲ್ಲಿ ಈ ಘಟನೆ ನಡೆದಿದ್ದು, ಜೋಡಿಯ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ.
ಶನಿವಾರ ತಡರಾತ್ರಿ ಸುಮಾರು 12 ಗಂಟೆ ವೇಳೆ ಹೋಗುತ್ತಿದ್ದ ಜೋಡಿಯನ್ನು ಭಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ. ಯುವಕ ಮುಸ್ಲಿಂ ಸಮುದಾಯದವನಾಗಿದ್ದು, ಯುವತಿ ಹಿಂದೂ ಆಗಿದ್ದಳು. ಇದನ್ನರಿತ ಭಜರಂಗದಳದ ಕಾರ್ಯಕರ್ತರು ಜೋಡಿಯನ್ನು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಗುಂಡಿನ ದಾಳಿ ಕೇಸ್; ಆರೋಪಿಗಳು ಬಾಯ್ಬಿಟ್ಟರು ಸ್ಫೋಟಕ ಸತ್ಯ!
ವಿಚಾರಣೆ ನಡೆಸಿ ಹಲ್ಲೆಗೆ ಯತ್ನ
ಈ ವೇಲೆ ಜೋಡಿ ಊಟಕ್ಕೆ ಬಂದಿದ್ದು, ಹಿಂದಿರುಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಯಾವ ಹೋಟೆಲ್ ತೆರದಿರುತ್ತೆ ಎಂದು ಪ್ರಶ್ನಿಸಿದ ಕಾರ್ಯಕರ್ತರು ಹಲ್ಲೆಗೆ ಮುಂದಾಗಿದ್ದರು. ಈ ಸಮಯಕ್ಕೆ ಬಂದ ಪೊಲೀಸರು ಹಲ್ಲೆಯನ್ನು ತಡೆದು ಜೋಡಿಯನ್ನು ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಜೋಡಿಯನ್ನು ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ಕೆಲ ಸಮಯದ ನಂತರ ಜೋಡಿ ಠಾಣೆಯಿಂದ ತೆರಳಿದ್ದಾರೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ