ಮೈಸೂರು (ಅ. 11): ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ. ಕೆ.ಎಸ್. ಭಗವಾನ್ ಮೈಸೂರಿನಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಶ್ರೀರಾಮ ದೇವರೇ ಅಲ್ಲ, ಆತ ಒಬ್ಬ ಕೊಲೆಗಡುಕ ಎಂದು ಹೇಳಿಕೆ ನೀಡಿ ಹಿಂದೂಗಳಿಂದ ಟೀಕೆಗೆ ಒಳಗಾಗಿದ್ದ ಪ್ರೊ. ಕೆ.ಎಸ್. ಭಗವಾನ್ ಇದೀಗ ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂದಿದ್ದಾರೆ.
ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಏನೆಂದು ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದೂ ಧರ್ಮ ಎಂದರೆ ಅವರಿಗೆ ಗೊತ್ತೇ ಇಲ್ಲ. ಹೀಗಾಗಿ, ಹಿಂದೂ ಪದವನ್ನು ತೆಗೆದು ಹಾಕಬೇಕು ಎಂದು ಮೈಸೂರಿನಲ್ಲಿ ಪ್ರೊ. ಕೆ.ಎಸ್. ಭಗವಾನ್ ಹೇಳಿದ್ದಾರೆ.
ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಇಂದು ಕೂಡ ಮಳೆ ಸಾಧ್ಯತೆ; ಆರೆಂಜ್ ಅಲರ್ಟ್ ಘೋಷಣೆ
ಮುಸ್ಲಿಮರನ್ನು ಕೊಳಕು ಎನ್ನುವ ನೀವು ಅವರ ಬಾಯಿಂದ ಬಂದಿರುವ ಹಿಂದೂ ಪದವನ್ನು ನಿಮ್ಮ ಧರ್ಮಕ್ಕೆ ಇಟ್ಟಿದ್ದೀರ. ನಿಮಗೆ ಮಾನ, ಮರ್ಯಾದೆ ಇದ್ದರೆ ಹಿಂದೂ ಎಂಬ ಪದವನ್ನು ತೆಗೆದು ಹಾಕಿ. ಪರ್ಷಿಯನ್ನರು ಸಿಂಧೂ ಪದವನ್ನು ಹಿಂದೂ ಎಂದರು. ಅವರು ಬಳಸಿದ ಪದವನ್ನ ನಿಮ್ಮ ಧರ್ಮದ ಹೆಸರಿಗೆ ಬಳಸಿಕೊಂಡಿದ್ದೀರ. ಹಿಂದೂ ಎಂದರೆ ಬ್ರಾಹ್ಮಣರು, ಉಳಿದವರೆಲ್ಲಾ ಶೂದ್ರರು. ಶೂದ್ರರು ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂದು ಉಲ್ಲೇಖವಾಗಿದೆ. ಆ ಪದ ಬಿಟ್ಟು ನಿಮಗೆ ಬೇರೆ ಹುಡುಕಲು ಆಗಲಿಲ್ಲವೇ? ಎಂದು ಪ್ರೊ.ಕೆ.ಎಸ್. ಭಗವಾನ್ ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ