ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಅಮೂಲ್ಯ; ಫ್ರೀಡಂ ಪಾರ್ಕ್​ಗೆ ಗೋಮೂತ್ರ ಸಿಂಪಡಿಸಲು ಮುಂದಾದ ಹಿಂದು ಮಹಾಸಭಾ

ಅಮೂಲ್ಯ ಲಿಯೋನಾಳ 'ಪಾಕಿಸ್ತಾನ ಜಿಂದಾಬಾದ್' ಘೋಷಣೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಮೂಲ್ಯ ದೇಶದ್ರೋಹದ ಘೋಷಣೆ ಕೂಗಿದ ಫ್ರೀಡಂ ಪಾರ್ಕ್​ಗೆ ಗೋಮೂತ್ರ ಸಿಂಪಡಿಸಲು ಅಖಿಲ ಭಾರತ ಹಿಂದೂ ಮಹಾಸಭಾ ಸಿದ್ಧತೆ ನಡೆಸಿದೆ.

ಫ್ರೀಡಂಪಾರ್ಕ್​ನಲ್ಲಿ ವಿವಾದಾತ್ಮಕ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ.

ಫ್ರೀಡಂಪಾರ್ಕ್​ನಲ್ಲಿ ವಿವಾದಾತ್ಮಕ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ.

  • Share this:
ಬೆಂಗಳೂರು (ಫೆ. 21): ಸಿಎಎ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಗುರುವಾರ ನಡೆದ ಪ್ರತಿಭಟನೆ ವೇಳೆ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಯುವತಿ ಅಮೂಲ್ಯ ಲಿಯೋನ ಈಗ ಪೊಲೀಸ್ ವಶದಲ್ಲಿದ್ದಾಳೆ. ಆಕೆ ದೇಶದ್ರೋಹಿ ಹೇಳಿಕೆ ನೀಡಿರುವ ಫ್ರೀಡಂಪಾರ್ಕ್​ಗೆ ಗೋಮೂತ್ರ ಸಿಂಪಡಿಸಿ, ಶುದ್ಧಗೊಳಿಸಲು ಹಿಂದೂ ಮಹಾಸಭಾ ನಿರ್ಧರಿಸಿದೆ. 

ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರತಿಭಟನಾ ಸಭೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ಅಮೂಲ್ಯ ಇದ್ದಕ್ಕಿದ್ದ ಹಾಗೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದ್ದಳು. ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

ಅಮೂಲ್ಯಳನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಆಕೆಯನ್ನು ನಿನ್ನೆ ರಾತ್ರಿ ಕೋರಮಂಗ‌ಲದಲ್ಲಿರುವ 5ನೇ ಎಸಿಎಂಎಂ ನ್ಯಾಯಾಧೀಶೆ ಎದುರು ಹಾಜರುಪಡಿಸಿದ್ದರು. ನ್ಯಾಯಾಧೀಶೆ ಶಿರಿನ್ ಜೆ ಅನ್ಸಾರಿ, ಅಮೂಲ್ಯಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು.

ಇದನ್ನೂ ಓದಿ: ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ; ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಮನೆ ಮೇಲೆ ದಾಳಿ

ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪದ ಬಳಿಕ ಶಿವಪುರದವರಾಗಿದ್ದಾರೆ. ಮಗಳ ವರ್ತನೆ ಬಗ್ಗೆ ಆಕೆ ಅಪ್ಪ ವಾಜಿ ಕೂಡ ಆಕ್ರೋಶ ಹೊರಹಾಕಿದ್ದು, ದೇಶದ್ರೋಹದ ಹೇಳಿಕೆ ನೀಡಿರುವ ಮಗಳ ವಿರುದ್ಧ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಿ ಎಂದಿದ್ದಾರೆ.

ಈ ನಡುವೆ, ಅಮೂಲ್ಯ ಲಿಯೋನಾ ಹೇಳಿಕೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಮೂಲ್ಯ ದೇಶದ್ರೋಹದ ಘೋಷಣೆ ಕೂಗಿದ ಫ್ರೀಡಂ ಪಾರ್ಕ್​ಗೆ ಗೋಮೂತ್ರ ಸಿಂಪಡಿಸಲು ಅಖಿಲ ಭಾರತ ಹಿಂದೂ ಮಹಾಸಭಾ ಸಿದ್ಧತೆ ನಡೆಸಿದೆ. ಇದಕ್ಕೆ ಅನುಮತಿ ನೀಡುವಂತೆ ಉಪ್ಪಾರಪೇಟೆ ಠಾಣೆಯ ಪೊಲೀಸರಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಮಗಳ ಕೃತ್ಯ ಅಕ್ಷಮ್ಯ ಅಪರಾಧ, ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ; ಅಮೂಲ್ಯ ತಂದೆ

ಆಕೆ ಅಮೂಲ್ಯ ಲಿಯೋನ ಅಲ್ಲ, ಅಮೂಲ್ಯ ಕೊರೊನಾ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಎಲ್​.ಕೆ. ಸುವರ್ಣ ಟೀಕಿಸಿದ್ದಾರೆ. ಕೊರೊನಾ ವೈರಸ್​ಗೆ ಗೋಮೂತ್ರವೇ ಮದ್ದು. ಹೀಗಾಗಿ, ಅಮೂಲ್ಯ ಪಾಕಿಸ್ತಾನ ಜಿಂದಾಬಾದ್​ ಎಂದು ಘೋಷಣೆ ಕೂಗಿದ ಫ್ರೀಡಂ ಪಾರ್ಕ್​ಗೂ ಗೋಮೂತ್ರ ಸಿಂಪಡಿಸಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಕುರಿತು ಮಾತನಾಡಬಾರದು, ಮುಂದೆ ಯಾರೊಬ್ಬರೂ ದೇಶವಿರೋಧಿ ಮಾತುಗಳನ್ನು ಆಡಬಾರದು. ಪೊಲೀಸರು ಸರಿಯಾದ ಶಿಕ್ಷೆ ಕೊಡುತ್ತಾರೆಂಬ ನಂಬಿಕೆ ನಮಗಿದೆ. ಯಾರೊಬ್ಬರೂ ಅಮೂಲ್ಯ ಲಿಯೋನಾಳನ್ನು ಹಿಂಬಾಲಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
First published: