ರಾಮನಗರ (ಮಾರ್ಚ್ 3): ಯುಗಾದಿ (Ugadi) ಹಬ್ಬದ ಪ್ರಯುಕ್ತ ರಾಮನಗರದಲ್ಲಿ ಹಿಂದೂ - ಮುಸ್ಲಿಂ (Hindu-Muslim )ಸಮ್ಮಿಲನ ಕಾರ್ಯಕ್ರಮ ನಡೆಯಿತು. ಹಿಂದೂ ಹಾಗೂ ಮುಸ್ಲಿಂರ ಭಾವೈಕ್ಯತೆ ಸಾರುವ ಕಾರ್ಯಕ್ರಮ ಇದಾಗಿದ್ದು, ಯುಗಾದಿ ಹಬ್ಬದ ಪ್ರಯುಕ್ತ ಮುಸ್ಲಿಂರಿಗೆ ಭೋಜನ ಕೂಟ ಏರ್ಪಡಿಸಿದ ನಗರಸಭೆ ಸದಸ್ಯ ಕೆ. ಶೇಷಾದ್ರಿ ಈ ವಿನೂತನ ಕಾರ್ಯಕ್ರಮ ರೂಪಿಸಿದ್ದರು. ರಾಮನಗರ (Ramanagara) ದ್ಯಾವರಸೇಗೌಡನದೊಡ್ಡಿ ಗ್ರಾಮದ ರಸ್ತೆ ಯಲ್ಲಿರುವ ನಿವಾಸದ ಬಳಿ ಕಾರ್ಯಕ್ರಮ ನಡೆದಿದ್ದು, ಹೋಳಿಗೆ (Holige) ಭೋಜನದ ಊಟದಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ಹೋಳಿಗೆ ಊಟ ಸವಿದ ಮುಸ್ಲಿಂ ಬಾಂಧವರು ಮೆಚ್ಚುಗೆ ವ್ಯಕ್ತಪಡಿಸಿದರು. ಬೇಡದ ವಿಚಾರಗಳ ಹಲವು ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಇಂತಹ ಕಾರ್ಯಕ್ರಮ ನಿಜಕ್ಕೂ ಸಂತಸ ತಂದಿದೆ ಎಂದು ಹಿಂದು ಮತ್ತು ಮುಸ್ಲಿಂ ಬಾಂಧವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಹಲಾಲ್ - ಜಟ್ಕಾ ಗೊಂದಲ:
ಒಂದೇಡೆ ರಾಮನಗರದಲ್ಲಿ ಯುಗಾದಿ ಪ್ರಯುಕ್ತ ಹಿಂದು ಮತ್ತು ಮುಸ್ಲಿಂ ಬಾಂಧವರು ಒಂದೆಡೇ ಸೇರಿ ನಾವೆಲ್ಲರೂ ಭಾರತೀಯರು ಎಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಿದ್ದರೆ, ಮತ್ತೊಂದು ಕಡೆ ರಾಮನಗರದಲ್ಲಿಯೂ ಹಲಾಲ್ ಗದ್ದಲ ಪ್ರಾರಂಭವಾಗಿದೆ. ರಾಮನಗರದ ಬಿಜೆಪಿ ಮುಖಂಡ ಮಂಜು ಮನವಿ ಮಾಡಿದ್ದು ಯುಗಾದಿ ಹಬ್ಬದಲ್ಲಿ ಹಿಂದೂ ಮಟನ್ ಸ್ಟಾಲ್ ನ ಜಟ್ಕಾ ಮಟನ್ ಖರೀದಿ ಮಾಡಿ. ಹಲಾಲ್ ಮಾಡಿದ ಮಟನ್ ಖರೀದಿ ಮಾಡಬೇಡಿ.
ಮಟನ್ ಸ್ಟಾಲ್ ನಲ್ಲಿ ನಮ್ಮ ಹಿಂದೂಗಳೇ ಇರಲಿ, ಅನ್ಯಧರ್ಮೀಯರು ಇದ್ದರೆ ಖರೀದಿ ಮಾಡಬೇಡಿ. ಹಲಾಲ್ ಮಾಂಸವನ್ನ ಅವರ ದೇವರಿಗೆ ಒಪ್ಪಿಸಿರುತ್ತಾರೆ. ಅದನ್ನ ನಮ್ಮ ದೇವರಿಗೆ ಒಪ್ಪಿಸಿರುವುದಿಲ್ಲ, ಹಾಗಾಗಿ ಹಲಾಲ್ ಮಾಂಸ ಖರೀದಿ ಬೇಡ. ನಮ್ಮ ಹಿಂದೂಗಳ ಜಟ್ಕಾ ಮಟನ್ ಖರೀದಿ ಮಾಡಿ ಎಂದು ರಾಮನಗರದ ಬಿಜೆಪಿ ಮುಖಂಡ ಮಂಜು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಇದರಿಂದ ಕೆಲವರಲ್ಲಿ ಅಸಮಾಧಾನವಾಗಿದ್ದು, ರಾಮನಗರದಲ್ಲಿಯೂ ಹಲಾಲ್ ಮತ್ತು ಜಟ್ಕಾ ಗೊಂದಲ ಪ್ರಾರಂಭವಾದಂತಾಗಿದೆ.
ಜಿಲ್ಲೆಯ ಮಾಗಡಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡದಿರಲು ರಾಮನಗರದ ಹಿಂದೂ ಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಯುಗಾದಿ ಹಬ್ಬದ ಮರುದಿನದಿಂದ ಜಾತ್ರೆ ಪ್ರಾರಂಭವಾಗಲಿದೆ. ಏಪ್ರಿಲ್ 14 ಕ್ಕೆ ರಂಗನಾಥಸ್ವಾಮಿ ತೇರು ನಡೆಯಲಿದ್ದು ಈ ಹಿನ್ನೆಲೆ ಜಾತ್ರೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ಕೊಡದಿರಲು ಹಿಂದೂ ಜಾಗೃತಿ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಮನವಿ ಮಾಡಿದ್ದರು.
ಈ ಹಿನ್ನೆಲೆ ಮಾಗಡಿ ತಾಲೂಕು ಪಂಚಾಯತ್ ನಲ್ಲಿ ಸಭೆ ನಡೆಸಲಾಯಿತು. ಶಾಸಕ ಎ.ಮಂಜು, ಅಪರ ಜಿಲ್ಲಾಧಿಕಾರಿ ಜವರೇಗೌಡ ನೇತೃತ್ವದಲ್ಲಿ ಸಭೆ ನಡೆಸಿದ್ದು ಯಾವುದೇ ಕಾರಣಕ್ಕೂ ಅದಕ್ಕೆಲ್ಲ ಅವಕಾಶ ಇಲ್ಲ, ಮಾಗಡಿ ಕೆಂಪೇಗೌಡರ ಶಾಂತಿಯ ನಾಡು. ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಹಿಂದಿನಿಂದಲೂ ನಡೆದುಬಂದಿರುವ ಸಂಪ್ರದಾಯ ಮುಂದುವರೆಯಲಿದೆ. ಗೊಂದಲ ಸೃಷ್ಟಿಸಿದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುತ್ತೆ ಎಂದು ಮಾಗಡಿ ಶಾಸಕ ಎ.ಮಂಜು ಮತ್ತು ಅಪರ ಜಿಲ್ಲಾಧಿಕಾರಿ ಜವರೇಗೌಡ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಹಿಜಾಬ್ ವಿಚಾರವಾಗಿಯೂ ಸಹ ಶಾಂತಿಯಾಗಿದ್ದ ರಾಮನಗರ ಜಿಲ್ಲೆಯಲ್ಲಿ ರಾಮನಗರದ ಡಿಗ್ರಿ ಕಾಲೇಜಿನಲ್ಲಿ ಮೊದಲಿಗೆ ವಿದ್ಯಾರ್ಥಿನಿಯರು ಗದ್ದಲ ಎಬ್ಬಿಸಿದ್ದರು. ಈಗ ಮುಸ್ಲಿಂ ಸಮುದಾಯದವರಿಗೆ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಬೇಡ ಎಂಬ ವಿಚಾರವಾಗಿ ಮತ್ತೆ ಜಿಲ್ಲೆಯಲ್ಲಿ ಕೂಗು ಎದ್ದಿದೆ. ಮತ್ತೊಂದು ಕಡೆ ಹಲಾಲ್ ವಿಚಾರವಾಗಿಯೂ ಸಹ ಗದ್ದಲ ಸೃಷ್ಟಿಯಾಗಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ